ಹಲವು ಸವಾಲುಗಳು

ಕೃಷಿ ರಂಗ ಹಲವು ಬಿಕ್ಕಟ್ಟು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಆತಂಕದ ಸಂಗತಿಯೆಂದರೆ ವರ್ಷದಿಂದ ವರ್ಷಕ್ಕೆ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ ಆಹಾರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೃಷಿ ನಷ್ಟದಾಯಕವಲ್ಲ ಎಂಬ ಅರಿವು ಮೂಡಿಸಿ, ಅಂಥವರನ್ನು ಮತ್ತೆ ಕೃಷಿಯತ್ತ ಕರೆದುಕೊಂಡು ಬರುವುದು ಸುಲಭದ ಕಸರತ್ತೇನಲ್ಲ. ಅದರಲ್ಲೂ, ಯಾವುದಾದರೂ ಬೆಳೆಗೆ ಉತ್ತಮ ಬೆಲೆ ಇದೆ ಎಂದಾಕ್ಷಣ ಬಹುತೇಕ ರೈತರು ಅದನ್ನೇ ಬೆಳೆಯುತ್ತಾರೆ. ಇದರಿಂದ ಉತ್ಪಾದನೆ ಗಣನೀಯವಾಗಿ ಹೆಚ್ಚಿ ಮಾರುಕಟ್ಟೆಯಲ್ಲಿ ಬೆಲೆ ಬಿದ್ದುಹೋಗುತ್ತದೆ. ರೈತರು ಮತ್ತೆ ನಷ್ಟವನ್ನೇ ಎದುರಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಹೊಸದೊಂದು ಚಿಂತನೆ ಅನುಷ್ಠಾನ ಮಾಡಲು ಹೊರಟಿದೆ. ಅಂದರೆ ಹವಾಮಾನ ಆಧಾರಿತ ಬೆಳೆ ಪದ್ಧತಿ ಜಾರಿಗೆ ಮುಂದಾಗಿದ್ದು, ಈ ಕಾನೂನನ್ನು 2020ರ ಮುಂಗಾರು ಅವಧಿಯಲ್ಲೇ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊಸ ಪದ್ಧತಿಯನ್ವಯ ಸರ್ಕಾರ ನಿಗದಿ ಮಾಡಿದ ಬೆಳೆಗಳನ್ನೇ ರೈತರು ಬೆಳೆಯಬೇಕಾಗುತ್ತದೆ. ನಿಯಮ ಮೀರಿ ಬೆಳೆ ಬೆಳೆದಲ್ಲಿ ಅಂತಹ ರೈತರಿಗೆ ಸರ್ಕಾರದ ಸಹಾಯಧನ ದೊರೆಯುವುದಿಲ್ಲ. ರಾಜ್ಯದಲ್ಲಿ ಹತ್ತು ಕೃಷಿ ಹವಾಮಾನ ವಲಯ ಹಾಗೂ ಐದು ಬಗೆಯ ಮಣ್ಣು ಇದೆ. ಆದರೂ, ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲಾಗುತ್ತಿಲ್ಲ. ಕೃಷಿಯಲ್ಲಿ ನಷ್ಟಕ್ಕೆ ಇದುವೇ ಪ್ರಮುಖ ಕಾರಣ ಎಂಬುದು ತಜ್ಞರ ಅಂಬೋಣವಾಗಿದ್ದು, ಹವಾಮಾನಕ್ಕೆ ಹೊಂದದ ಬೆಳೆ ಬೆಳೆಯುವುದರಿಂದ ಭೂಮಿಗೂ ಹಾನಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಚಿಂತನೆಯೇನೋ ರೈತಹಿತಕ್ಕೆ ಪೂರಕವಾಗಿದೆ. ಆದರೆ, ಇದರ ಅನುಷ್ಠಾನಕ್ಕೆ ಹಲವು ಪ್ರಾಯೋಗಿಕ ಸಮಸ್ಯೆ, ಅಡೆತಡೆಗಳು ಇವೆ. ಮುಖ್ಯವಾಗಿ, ಈ ಬೆಳೆವಿಧಾನದ ಬಗ್ಗೆ ರೈತರ ಮನವೊಲಿಸುವುದು. ಹಿಂದಿನಿಂದಲೂ ರೈತರು ತಮಗೆ ಸರಿಯೆನಿಸಿದ ಬೆಳೆ ಬೆಳೆಯುತ್ತ ಬಂದಿದ್ದಾರೆ. ಈಗ ಹವಾಮಾನಕ್ಕೆ ಸೂಕ್ತವಾಗುವ ಬೆಳೆಗಳನ್ನೇ ಬೆಳೆಯಬೇಕು ಎಂಬ ನಿಯಮವನ್ನು ಅವರು ಒಪ್ಪಿಕೊಂಡು, ಅಳವಡಿಸುತ್ತಾರಾ ಎಂಬುದು ಯಕ್ಷಪ್ರಶ್ನೆ. ಅಲ್ಲದೆ, ಈ ಹಿಂದೆ ಗುಜರಾತ್​ನಲ್ಲಿ ಇದೇ ಯೋಜನೆ ಜಾರಿಗೆ ತರಲಾಗಿತ್ತಾದರೂ, ಅದು ವಿಫಲಗೊಂಡಿದ್ದರಿಂದ ಕೈಬಿಡಲಾಯಿತು. ಉತ್ತರಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಬಹುತೇಕ ರೈತರು ಮಾತ್ರ ಹವಾಮಾನ ಆಧಾರಿತ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಕೃಷಿ ರಂಗ ಮತ್ತು ರೈತರ ಸ್ಥಿತಿ ಈಗಲೇ ಚಿಂತಾಜನಕವಾಗಿದೆ. ಹಾಗಾಗಿ, ಯಾವುದೇ ಹೊಸ ನಿಯಮ, ಯೋಜನೆಗಳು ಕೃಷಿಕರ ಚಿಂತೆಯನ್ನು ಹೆಚ್ಚು ಮಾಡಬಾರದು ಎಂಬ ಕಳಕಳಿ ಇಂಥ ಹೊತ್ತಲ್ಲಿ ಅಗತ್ಯ. ರೈತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಹವಾಮಾನ ಆಧಾರಿತ ಬೆಳೆ ಬೆಳೆಯುವುದರಿಂದ ಆಗುವ ಅನುಕೂಲಗಳನ್ನು ಮನದಟ್ಟು ಮಾಡಿಕೊಟ್ಟಲ್ಲಿ, ಮುಂದಿನ ಹಾದಿ ಸುಗಮವಾಗಬಲ್ಲದು. ಮತ್ತು ಈಗಾಗಲೇ ಇರುವ ಹತ್ತಾರು ನಾಮ್ ಕೇ ವಾಸ್ತೆ ಯೋಜನೆಗಳಂತೆ ಇದೂ ಆಗದೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಕೃಷಿರಂಗ ಮತ್ತೆ ಆಕರ್ಷಣೆಯ ಕ್ಷೇತ್ರವಾಗಿ ಹೊಮ್ಮಬೇಕು.