ಕದಡಿದ ಕಾಶ್ಮೀರ

ಕಣಿವೆರಾಜ್ಯ ಕಾಶ್ಮೀರದಲ್ಲಿ ಉಗ್ರರ ನುಸುಳುವಿಕೆ ಒಂದಿಲ್ಲೊಂದು ಮಾರ್ಗದಲ್ಲಿ ಮುಂದುವರಿದೇ ಇದೆ. ಉಗ್ರರನ್ನು ಹಿಮ್ಮೆಟ್ಟಿಸಲೆಂದು ಭಾರತೀಯ ಸೇನೆ ಮತ್ತು ಭದ್ರತಾಪಡೆಗಳು ಇತ್ತೀಚಿನ ವರ್ಷಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಬಂದಿದ್ದು, 2018ರಲ್ಲಿ ಹೆಚ್ಚು ಉಗ್ರರು ಎನ್​ಕೌಂಟರ್​ನಲ್ಲಿ ಹತರಾಗಿರುವುದು ಗೊತ್ತಿರುವ ಸಂಗತಿಯೇ. ಆದರೆ ಹೀಗೆ ವಿವಿಧ ರೀತಿಯಲ್ಲಿ ಚುರುಕು ಮುಟ್ಟಿಸುತ್ತಿದ್ದರೂ, ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಕಣಿವೆರಾಜ್ಯದ ಶಾಂತಿಯನ್ನು ಕದಡಲು ಸತತವಾಗಿ ಯತ್ನಿಸುತ್ತಲೇ ಇರುವುದು ನಿಜಕ್ಕೂ ದುರ್ದೈವದ ಸಂಗತಿಯೇ ಸರಿ. ಈ ಹಿಂದೆ ಕೂಡ ಅವರು ವ್ಯವಸ್ಥೆಯ ಮೇಲೆ ಕಲ್ಲುತೂರಾಟಕ್ಕೆ ಕಾಶ್ಮೀರಿ ಯುವಕರನ್ನು ಪ್ರಚೋದಿಸಿದ್ದು ಮಾತ್ರವಲ್ಲದೆ ಸಮಾಜವಿರೋಧಿ ಕೃತ್ಯಗಳಲ್ಲಿ ಅವರು ತೊಡಗುವಂತಾಗುವುದಕ್ಕೂ ಕುಮ್ಮಕ್ಕು ನೀಡಿದ್ದರು ಎಂಬುದನ್ನು ಮರೆಯಲಾಗದು. ಕೆಲಕಾಲ ಸ್ಥಗಿತವಾದಂತಿದ್ದ ಅವರ ಈ ಚಾಳಿ ಮತ್ತೆ ಮುಂದುವರಿದಿದೆ ಎಂಬುದಕ್ಕೆ ಶನಿವಾರ ನಡೆದ ವಿದ್ಯಮಾನಗಳೇ ಸಾಕ್ಷಿ. ರಾಜ್ಯದ ಫುಲ್ವಾಮ ಜಿಲ್ಲೆಯ ಸಿರ್ನೂ ಗ್ರಾಮದಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದ ತರುವಾಯ, ಸ್ಥಳೀಯರು ಭದ್ರತಾ ಪಡೆಯ ಮೇಲೆಯೇ ಕಲ್ಲುತೂರಾಟ ನಡೆಸಿರುವುದು, ಪಡೆಯು ಇದನ್ನು ಪ್ರತಿರೋಧಿಸಿದಾಗ ನಡೆದ ಘರ್ಷಣೆಯಲ್ಲಿ 7 ನಾಗರಿಕರು ಸಾವನ್ನಪ್ಪಿರುವುದು, ‘ಸೇನಾಪಡೆಯಿಂದಲೇ ನಾಗರಿಕರ ಹತ್ಯೆ’ ಎಂಬುದಾಗಿ ಪ್ರತ್ಯೇಕತಾವಾದಿಗಳನ್ನು ಅದನ್ನು ಬಿಂಬಿಸಿ ಪ್ರತಿಭಟನೆಗೆ ಕರೆನೀಡಿರುವುದು ಈ ನಿಟ್ಟಿನಲ್ಲಿ ಪುಷ್ಟಿನೀಡುವಂಥವು. ಇಂಥ ವಿದ್ಯಮಾನಗಳು ಪ್ರತ್ಯೇಕತಾವಾದಿಗಳ ಹತಾಶೆ ಮತ್ತು ಷಡ್ಯಂತ್ರಗಳಿಗೆ ಹಿಡಿದ ಕೈಗನ್ನಡಿ ಎನ್ನದೆ ವಿಧಿಯಿಲ್ಲ. ಈ ಹಿಂದೆ ಕೂಡ, ಉಗ್ರ ಬುರ್ಹಾನ್ ವಾನಿಯ ಹತ್ಯೆಗೆ ಪ್ರತೀಕಾರವೆಂಬಂತೆ ಅವರು ಮೆರೆದ ಕಿಡಿಗೇಡಿತನದಿಂದಾಗಿ ಕಣಿವೆರಾಜ್ಯ ಕಾಶ್ಮೀರ ಹಲವು ತಿಂಗಳವರೆಗೆ ಆತಂಕದ ಛಾಯೆಯಲ್ಲೇ ಬಸವಳಿಯುವಂತಾಗಿತ್ತು, ನಿರಂತರ ಕರ್ಫ್ಯೂ ಅಲ್ಲಿ ಜಾರಿಯಲ್ಲಿತ್ತು ಎಂಬುದಿಲ್ಲಿ ಉಲ್ಲೇಖನೀಯ.

ಉಗ್ರನಿಗ್ರಹದ ಕಾರ್ಯಾಚರಣೆಗೆ ಅಡ್ಡಿಯಾಗುವಿಕೆ, ಸೈನಿಕರ ಮೇಲೆಯೇ ಕಲ್ಲು ತೂರುವಿಕೆಯಂಥ ಚಟುವಟಿಕೆಗಳು ರಾಷ್ಟ್ರವಿರೋಧಿ ಕೃತ್ಯಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಕೆಲವೊಂದು ಕುತ್ಸಿತ ಶಕ್ತಿಗಳು ಅದರಲ್ಲೇ ನಿರತವಾಗಿರುವುದು ಅಕ್ಷಮ್ಯ ಅಪರಾಧ. ಶಾಂತಿ-ನೆಮ್ಮದಿ ಕದಡಲು ಈ ಶಕ್ತಿಗಳು ಯತ್ನಿಸುತ್ತವೆಯೇ ವಿನಾ, ಕಾಶ್ಮೀರದ ಸಾಮಾನ್ಯ ಜನರ ಬಗ್ಗೆ ಅವಕ್ಕೆ ಕಾಳಜಿಯಿಲ್ಲ. ಹಿಂಸೆ, ವೈಷಮ್ಯ, ಪ್ರತೀಕಾರಭಾವಗಳಿಗೆ ಪ್ರಚೋದನೆ ನೀಡುವ ಇಂಥ ಕೃತ್ಯಗಳನ್ನು ನಮ್ಮ ಭದ್ರತಾಪಡೆಗಳು ಹತ್ತಿಕ್ಕಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ಮಾತ್ರವೇ ಅಲ್ಲ, ಪ್ರತ್ಯಕ್ಷವಾಗಿಯೇ ಆಗಲಿ, ಪರೋಕ್ಷವಾಗಿಯೇ ಆಗಲಿ ಉಗ್ರರಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ನೆರವಾಗುವುದು ರಾಷ್ಟ್ರವಿರೋಧಿ ಕೃತ್ಯವೇ ಆಗುತ್ತದೆ ಎಂಬುದನ್ನು ಕಾಶ್ಮೀರದ ನಾಗರಿಕರೂ ಅರಿಯಬೇಕು. ಭಾರತದ ಭದ್ರತೆ, ಸಮಗ್ರತೆ, ಸುರಕ್ಷತೆ ಮತ್ತು ಸಾರ್ವಭೌಮತೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಚಕಾರ ತಂದೊಡ್ಡುವುದು ಗಡಿಯಾಚೆಗಿನ ಸಂಚುಕೋರರು ದಶಕಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಪರಿಪಾಠ. ಆದರೆ ಬಾಹ್ಯಶಕ್ತಿ ಬೆಂಬಲಿತ ಉಗ್ರರು ಹಬ್ಬಿಸುವ ವದಂತಿಗಳು ಮತ್ತು ತಪು್ಪಕಲ್ಪನೆಗಳನ್ನು ನಮ್ಮವರೇ ವಿಶ್ಲೇಷಿಸದೆ ಒಪ್ಪಿಕೊಂಡು, ದೇಶ ರಕ್ಷಣೆಯಲ್ಲಿ ವ್ಯಸ್ತರಾಗಿರುವ ಸೈನಿಕರು ಮತ್ತು ಭದ್ರತಾ ಪಡೆಗಳ ಮೇಲೆಯೇ ತಿರುಗಿಬೀಳುವಂಥ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು.

Leave a Reply

Your email address will not be published. Required fields are marked *