ಹೊಸ ವೈರಸ್, ಕಾಯಿಲೆಗಳ ಸೃಷ್ಟಿ ಯಾವ ಪ್ರಮಾಣದಲ್ಲಿ ತಲ್ಲಣವನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಚೀನಾ ಮತ್ತು ಅಲ್ಲಿಂದ ಹರಡುತ್ತಿರುವ ಕರೊನಾ ವೈರಸ್ ಸಾಕ್ಷಿಯಾಗಿದೆ. ಬಹುತೇಕ ಕಾಯಿಲೆಗಳಿಗೆ ಆಹಾರಪದ್ಧತಿಯಲ್ಲಿನ ದೋಷವೇ ಕಾರಣ ಎನ್ನುತ್ತದೆ ವೈದ್ಯಕೀಯಶಾಸ್ತ್ರ. ದೇಹಪ್ರಕೃತಿಗೆ ವ್ಯತಿರಿಕ್ತವಾದ ಆಹಾರ ಸೇವನೆ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಕರೊನಾ ವೈರಸ್ ಹರಡಲು ನಿರ್ದಿಷ್ಟ ಕಾರಣ ಏನೆಂಬುದು ಇನ್ನೂ ಪತ್ತೆ ಆಗಿಲ್ಲವಾದರೂ, ಇದು ಸೃಷ್ಟಿಸಿರುವ ಆತಂಕ ಮತ್ತು ಮಾಡುತ್ತಿರುವ ಹಾನಿ ಅಷ್ಟಿಷ್ಟಲ್ಲ.
ಆರಂಭಿಕ ಕೆಲ ದಿನಗಳವರೆಗೆ ಭಾರತದಲ್ಲಿ ಕರೊನಾ ಹಾವಳಿ ಕಂಡುಬಂದಿರಲಿಲ್ಲ. ಆದರೆ, ಕೇರಳದಲ್ಲಿ ಈ ವೈರಸ್ ಹೊಂದಿರುವ ಮೂರನೇ ಪ್ರಕರಣ ಸೋಮವಾರ ಪತ್ತೆಯಾಗಿದೆ. ಈ ಮುಂಚೆ ಜನವರಿ 30ರಂದು ಮೊದಲ ಮತ್ತು ಫೆಬ್ರವರಿ 2ಕ್ಕೆ ಎರಡನೇ ಪ್ರಕರಣ ಪತ್ತೆಯಾಗಿತ್ತು. ಅಷ್ಟೇ ಅಲ್ಲ, ಕೇರಳದಲ್ಲಿ 1,793 ಜನರನ್ನು ಅವರ ಮನೆಗಳಲ್ಲೇ ನಿಗಾವ್ಯವಸ್ಥೆಯಡಿ ಇರಿಸಲಾಗಿದೆ. ಚೀನಾದಲ್ಲಂತೂ, ಕಳೆದ 24 ಗಂಟೆಗಳಲ್ಲೇ 2,100 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕರೊನಾ ವೈರಸ್ ಸೋಂಕಿತರ ಸಂಖ್ಯೆ 17,222ಕ್ಕೆ ತಲುಪಿದೆ. ಈವರೆಗೆ ಅಲ್ಲಿ 362 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚೀನಾ ಜತೆಗಿನ ಗಡಿಯನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ಹಾಂಗ್ಕಾಂಗ್ ಆಸ್ಪತ್ರೆಯ ನೂರಾರು ಸಿಬ್ಬಂದಿ ಪ್ರತಿಭಟನೆ ಆರಂಭಿಸಿದ್ದಾರೆ. ರಷ್ಯಾ ರೈಲ್ವೆ ವಿಭಾಗ ಚೀನಾಕ್ಕೆ ತೆರಳುವ ಪ್ರಯಾಣಿಕರ ರೈಲುಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಜಪಾನ್ 20, ಥೈಲ್ಯಾಂಡ್ 19, ಹಾಂಗ್ಕಾಂಗ್ 15, ದಕ್ಷಿಣ ಕೊರಿಯಾ 15, ಆಸ್ಟ್ರೇಲಿಯಾ 12, ಅಮೆರಿಕ 11, ತೈವಾನ್ 10, ಮಲೇಷ್ಯಾ 8, ಕೆನೆಡಾ 4, ಯುಎಇ 4, ಭಾರತ 3, ಬ್ರಿಟನ್ 2, ರಷ್ಯಾ 2 ಕರೊನಾ ಪ್ರಕರಣಗಳು ದಾಖಲಾಗಿವೆ. ಸೋಮವಾರ ಚೀನಾದ ಷೇರುಪೇಟೆ ಕೂಡ ಭಾರಿ ನಷ್ಟ ಅನುಭವಿಸಿದೆ. ಶೇಕಡ 8 ಕುಸಿತ ಅನುಭವಿಸಿದ ಪರಿಣಾಮ, ಒಂದೇ ದಿನದಲ್ಲಿ 32 ಲಕ್ಷ ಕೋಟಿ ರೂಪಾಯಿ ಹಾನಿ ಅನುಭವಿಸಿದೆ. ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ ಅನುಭವಿಸಿರುವ ಚೀನಾಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದೇನಿದ್ದರೂ, ಕರೊನಾ ವೈರಸ್ ಬರೀ ಚೀನಾಕ್ಕೆ ಸೀಮಿತವಾಗಿರುವ ಆತಂಕವಾಗಿ ಉಳಿದುಕೊಂಡಿಲ್ಲ. ಇದು ವೇಗವಾಗಿ ಹಬ್ಬಿದರೆ ಉಂಟುಮಾಡುವ ಪ್ರಾಣಹಾನಿ ಅಂದಾಜಿಸಲೂ ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಮತ. ಹೀಗೆ ದಿಢೀರಾಗಿ ಎದುರಾಗುವ ವೈದ್ಯಕೀಯ ಸವಾಲು ಅಥವಾ ಆಪತ್ತುಗಳಿಗೆ ಎದುರುಗೊಳ್ಳಲು ವಿಶ್ವದ ಬಹುತೇಕ ರಾಷ್ಟ್ರಗಳು ಸಿದ್ಧವಾಗಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇನ್ನು ಮುಂದೆ ಕರೊನಾ ದೊಡ್ಡಮಟ್ಟದ ಹಾನಿ ಮಾಡುವ ಮುಂಚೆಯೇ ವಿಶ್ವ ಆರೋಗ್ಯ ಸಂಸ್ಥೆ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳು ಎಚ್ಚೆತ್ತುಕೊಳ್ಳಬೇಕಿದೆ. ಪರಿಹಾರದ ಮಾರ್ಗಗಳನ್ನು ಶೋಧಿಸಿ, ಶೀಘ್ರದಲ್ಲಿ ಅನುಷ್ಠಾನಕ್ಕೆ ತರಬೇಕಿದೆ.