Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಆರೋಗ್ಯಕರ ಹೆಜ್ಜೆ

Saturday, 15.09.2018, 2:05 AM       No Comments

ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಘಟಕಾಂಶಗಳನ್ನು ಒಳಗೊಂಡಿರುವ ಸುಮಾರು 328ರಷ್ಟು ‘ಎಫ್​ಡಿಸಿ’ (Fixed-dose combination) ಔಷಧವಸ್ತುಗಳ ತಯಾರಿಕೆ, ಮಾರಾಟ ಹಾಗೂ ಬಳಕೆಯ ಮೇಲೆ ತತ್​ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರುವ ಕೇಂದ್ರ ಸರ್ಕಾರದ ಕ್ರಮಗಳ ಹಿಂದಿರುವ ಆಶಯಗಳನ್ನು ಶಂಕಿಸಲಾಗದು. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇದೊಂದು ಮಹತ್ವದ ಉಪಕ್ರಮವೇ ಸರಿ.

ಈ ಅಭಿಪ್ರಾಯಕ್ಕೆ ಕಾರಣಗಳಿವೆ. ಕೆಲವೊಂದು ಔಷಧ ತಯಾರಿಕಾ ಕಂಪನಿಗಳು ಅನುಸರಿಸುವ ಅನುಚಿತ ವ್ಯಾಪಾರ ಪರಿಪಾಠಗಳು, ಒಡ್ಡುವ ಪ್ರಲೋಭನೆಗಳು, ದೊಡ್ಡ ಮಟ್ಟದಲ್ಲಿ ನಡೆಸುವ ವಶೀಲಿಬಾಜಿಯಿಂದಾಗಿ ಶ್ರೀಸಾಮಾನ್ಯರ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಅಮಾಯಕರ ಆರೋಗ್ಯಕ್ಕೆ ಮತ್ತು ಜೇಬಿಗೆ ಸಂಚಕಾರ ಒದಗುವಂತಾಗಿದೆ. ಚಳಿ-ಜ್ವರ, ನೆಗಡಿ, ತಲೆನೋವು-ಮೈಕೈ ನೋವು ಸೇರಿದಂತೆ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಾಕ್ಷಣ ವೈದ್ಯರ ಶಿಫಾರಸು ಪಡೆಯದೆ ‘ಸ್ವಯಂವೈದ್ಯ’ಕ್ಕೆ ಮೊರೆಹೋಗುವ ಅಭ್ಯಾಸ ಬಹುತೇಕರಲ್ಲಿದೆ. ಜತೆಗೆ, ವೈದ್ಯರ ಶಿಫಾರಸು ಚೀಟಿಯ ಅಗತ್ಯವಿಲ್ಲದೆಯೇ ಸಾಕಷ್ಟು ಔಷಧ-ಮಾತ್ರೆಗಳು ಅಂಗಡಿಗಳಲ್ಲಿ ಸುಸೂತ್ರವಾಗಿ ಲಭ್ಯವಿರುವುದರಿಂದಾಗಿ, ನಿರ್ದಿಷ್ಟ ಕಾಯಿಲೆಗೆಂದು ಮನಸ್ಸಿಗೆ ಬಂದ ಯಾವುದೋ ಮಾತ್ರೆಯನ್ನು ವೈದ್ಯ-ಶಿಫಾರಸಿನ ಹಂಗಿಲ್ಲದೆ ರೋಗಿಗಳು ತಾವೇ ಅಂಗಡಿಯಿಂದ ಖರೀದಿಸಿ ಸೇವಿಸುವುದರಿಂದಾಗಿ ಮತ್ತು ಇಂಥ ಮಾತ್ರೆ/ಔಷಧಗಳು ಸದರಿ ರೋಗಪರಿಹಾರಕ್ಕೆ ಅಗತ್ಯವಿಲ್ಲದ ಅಂಶಗಳನ್ನೂ ಹೊಂದಿರುವ ಕಾರಣದಿಂದಾಗಿ, ಉದ್ದೇಶಿತ ಕಾಯಿಲೆ ಗುಣವಾಗಿ ಹೊಸತೊಂದು ಶುರುವಾಗುವ ಇಲ್ಲವೇ ಪಾರ್ಶ್ವ ಪರಿಣಾಮಗಳಿಗೆ ಕಾರಣವಾಗುವ ನಿದರ್ಶನಗಳು ಹೇರಳವಾಗಿವೆ. ಈ ಪರಿಪಾಠ ಸುದೀರ್ಘಕಾಲದವರೆಗೆ ಮುಂದುವರಿದಲ್ಲಿ, ಸೇವಿಸಿದವರು ಗಂಭೀರ ಸಮಸ್ಯೆಗೆ ಒಳಗಾಗಬಹುದು ಎಂಬ ವೈದ್ಯವಲಯದ ಎಚ್ಚರಿಕೆಯ ಹೊರತಾಗಿಯೂ ಈ ಪರಿಪಾಠ ಅಬಾಧಿತವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ‘ಎಫ್​ಡಿಸಿ’ ಔಷಧಗಳಿಗೆ ಲಗಾಮುಹಾಕುವ ಸರ್ಕಾರದ ಚಿಂತನೆ ಸಕಾಲಿಕವಾಗಿಯೂ ಸಕಾರಾತ್ಮಕವಾಗಿಯೂ ಇದೆ ಎನ್ನಲಡ್ಡಿಯಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 2000ದಷ್ಟು ಎಫ್​ಡಿಸಿ ಔಷಧಗಳಿವೆ ಎನ್ನಲಾಗುತ್ತಿದ್ದು (ಅಮೆರಿಕದಲ್ಲಿ ಇದು ಸುಮಾರು 500ರಷ್ಟಿದೆ), ಸರ್ಕಾರದ ಈ ಕ್ಷಿಪ್ರಕ್ರಮದಿಂದಾಗಿ ಔಷಧ ತಯಾರಿಕಾ ಕಂಪನಿಗಳಿಗೆ 2000 ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆಯಾದರೂ, ಸಾರ್ವಜನಿಕರ ಆರೋಗ್ಯ ರಕ್ಷಣೆಯನ್ನೇ ಆದ್ಯತೆಯಾಗಿ ಪರಿಗಣಿಸಿದಾಗ ಇದೊಂದು ಅನಿವಾರ್ಯ ಕ್ರಮವಾಗಿದೆ ಎನ್ನಲೇಬೇಕಾಗಿದೆ. ನಮ್ಮಲ್ಲಿ ಸರ್ಕಾರಗಳು ಮತ್ತು ವ್ಯವಸ್ಥೆಯೆದುರು ಇರುವ ಸವಾಲುಗಳೂ ದೊಡ್ಡದಾಗಿಯೇ ಇವೆ. ಆರೋಗ್ಯ ವಿಮೆಯಂಥ ಪರಿಕಲ್ಪನೆಗಳು ಭಾರತದಲ್ಲಿನ್ನೂ ವ್ಯಾಪಕವಾಗಿಲ್ಲ; ಕೇಂದ್ರ ಸರ್ಕಾರ ಪ್ರಣೀತ ‘ಆಯುಷ್ಮಾನ್ ಭಾರತ್’, ಕರ್ನಾಟಕ ಸರ್ಕಾರದ ಪರಿಕಲ್ಪನೆಯ ‘ಆರೋಗ್ಯ ಕರ್ನಾಟಕ’ದಂಥ ಉಪಕ್ರಮಗಳು ಇನ್ನೂ ಶೈಶವಾವಸ್ಥೆಯಲ್ಲಿದ್ದು, ಜನರು ಈ ನಿಟ್ಟಿನಲ್ಲಿ ದಟ್ಟಗ್ರಹಿಕೆ ಮೂಡಿಸಿಕೊಳ್ಳಲು ಸಾಕಷ್ಟು ಕಾಲ ಹಿಡಿಯಲಿದೆ. ಈ ಎಲ್ಲ ಕಾರಣಗಳಿಂದಾಗಿ ಜನರ ಆರೋಗ್ಯಕ್ಕೆ ಮತ್ತು ಜೇಬಿಗೆ ಒದಗುತ್ತಿರುವ ಸಂಕಷ್ಟದ ಪ್ರಮಾಣವೂ ಹೆಚ್ಚಾಗುತ್ತಲೇ ಇದೆ. ಆದ್ದರಿಂದ, ಸಾರ್ವತ್ರಿಕ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳೂ ಮತ್ತಷ್ಟು ಉಪಕ್ರಮಗಳಿಗೆ ಮುಂದಾಗಬೇಕಿದೆ. ನಮ್ಮಲ್ಲಿ ಆರೋಗ್ಯ ಸಂಬಂಧಿತ ಯೋಜನೆಗಳು/ಕಾರ್ಯಕ್ರಮಗಳಿಗೇನೂ ಕಮ್ಮಿಯಿಲ್ಲ; ಆದರೆ ಈ ನಿಟ್ಟಿನಲ್ಲಿ ಜನರನ್ನು ಮಾಹಿತಿವಂತರನ್ನಾಗಿಸುವ ಪ್ರಕ್ರಿಯೆ ಅಂದುಕೊಂಡಷ್ಟು ವೇಗವಾಗಿ, ಸಮರ್ಥ ರೀತಿಯಲ್ಲಿ ಸಾಗುತ್ತಿಲ್ಲ ಎಂಬುದು ನಿಜ. ಈ ಬಾಬತ್ತಿಗೆ ಹೆಚ್ಚಿನ ಒತ್ತು ನೀಡಿದಲ್ಲಿ, ಮಹತ್ವಾಕಾಂಕ್ಷೆಯ ಯಾವುದೇ ಕಾರ್ಯಕ್ರಮವೂ ಯಶಸ್ವಿಯಾದೀತು.

Leave a Reply

Your email address will not be published. Required fields are marked *

Back To Top