ಮಹತ್ವದ ನಿರ್ಣಯ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ಬಳಕೆಗೆ ಒತ್ತು ನೀಡಬೇಕು ಎಂಬ ಸಮಯೋಚಿತ ಆಗ್ರಹ ಬಲವಾಗಿ ಕೇಳಿಬರುತ್ತಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಎಥನಾಲ್ ನೀತಿ ಅಂಗೀಕರಿಸಿದೆ. ಈಗಾಗಲೇ ನಿಗದಿತ ಗುರಿಗಿಂತ ಹೆಚ್ಚು ಸಕ್ಕರೆಯನ್ನು ಕಾರ್ಖಾನೆಗಳು ಉತ್ಪಾದಿಸುತ್ತಿದ್ದು, ಅವುಗಳು ಎಥನಾಲ್ ಉತ್ಪಾದನೆಗೆ ಮುಂದಾಗುವಂತೆ ಪ್ರೋತ್ಸಾಹಿಸಲು ಲೀಟರ್​ಗೆ 59.19 ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಈ ದರ ಮುಂಚೆ 47.5 ರೂ. ಇತ್ತು. ‘ನಮ್ಮ ದೇಶದಲ್ಲಿರುವ ಎಥನಾಲ್ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದರೆ ಮತ್ತು ಪರ್ಯಾಯ ಇಂಧನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದರೆ ಡೀಸೆಲ್ ಬೆಲೆ ಲೀಟರ್​ಗೆ 50 ಮತ್ತು ಪೆಟ್ರೋಲ್ 55 ರೂ. ಆಗಲು ಸಾಧ್ಯವಿದೆ’ ಎಂದು ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು ಇಲ್ಲಿ ಸ್ಮರಣೀಯ.

ಈ ಕ್ರಮದಿಂದ ಎಥನಾಲ್ ಉತ್ಪಾದನೆ ಹೆಚ್ಚಿ, ಭವಿಷ್ಯದ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಆಮದು ಪ್ರಮಾಣ ಒಂದಿಷ್ಟಾದರೂ ತಗ್ಗಿಸಲು ನೆರವಾಗಲಿದೆ. 2013-14ರಲ್ಲಿ ನಮ್ಮಲ್ಲಿ 38 ಕೋಟಿ ಲೀಟರ್ ಇದ್ದ ಎಥನಾಲ್ ಉತ್ಪಾದನೆ 2017-18ರ ವೇಳೆಗೆ 140 ಕೋಟಿ ಲೀಟರ್​ಗೆ ಹೆಚ್ಚಿದೆ. ಆದರೂ, ನಮ್ಮಲ್ಲಿ ಕಬ್ಬು ಬೆಳೆಯುವ ಪ್ರಮಾಣ, ಸಕ್ಕರೆ ಕಾರ್ಖಾನೆಗಳ ಸಂಖ್ಯೆಗೆ ಹೋಲಿಸಿದರೆ ಎಥನಾಲ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಅವಕಾಶಗಳಿವೆ. ಅಲ್ಲದೆ, ಹೊಸನೀತಿಯಿಂದ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನವೂ ಸಾಧ್ಯವಾಗಲಿದೆ ಎಂಬುದು ಗಮನಾರ್ಹ. ಸಾಂಪ್ರದಾಯಿಕ ಕ್ರಮಗಳನ್ನೇ ನೆಚ್ಚಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡದೆ ನಷ್ಟದ ಸುಳಿಗೆ ಸಿಲುಕುತ್ತಿವೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದಾಗ ರೈತರಿಗೆ ಸಕಾಲಕ್ಕೆ ಕಬ್ಬಿನ ಬಿಲ್ ಪಾವತಿ ಮಾಡದೆ ಸತಾಯಿಸುವುದೂ ಇದೆ. ಎಥನಾಲ್ ಉತ್ಪಾದನೆ ಹೆಚ್ಚಿಸಿದಷ್ಟೂ ಸಕ್ಕರೆ ಕಾರ್ಖಾನೆಗಳ ಆರ್ಥಿಕತೆಯೂ ಉತ್ತಮಗೊಳ್ಳಲಿದೆ. ಆದರೆ, ಇದರ ಲಾಭವನ್ನು ಪ್ರಾಮಾಣಿಕವಾಗಿ ರೈತರಿಗೂ ತಲುಪಿಸಲು ಕಾರ್ಖಾನೆಗಳು ಬದ್ಧವಾಗಬೇಕು.

ಮತ್ತೊಂದು ಮಹತ್ವದ ನಿರ್ಧಾರದಲ್ಲಿ, ಮುಂಗಾರು ಮತ್ತು ಹಿಂಗಾರಿನ ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಲು ಮತ್ತು ಎಣ್ಣೆಕಾಳುಗಳ ಖರೀದಿಗೆ ಖಾಸಗಿಯವರಿಗೂ ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಈ ವರ್ಷದ ಜುಲೈನಲ್ಲಿ ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದ ಸರ್ಕಾರ, ಈಗ ಅದರ ಅನುಷ್ಠಾನದತ್ತ ಗಮನ ಹರಿಸಿದೆ. ಎಣ್ಣೆಕಾಳುಗಳ ಖರೀದಿಗೆ ಖಾಸಗಿಯವರಿಗೆ ಅವಕಾಶ ಮಾಡಿಕೊಡುವುದರಿಂದ, ಸಂಗ್ರಹಾಗಾರಗಳಲ್ಲಿ ಅವು ಹಾಳಾಗುವುದನ್ನು ತಡೆಗಟ್ಟಿ, ಬೆಲೆಸಮರವನ್ನೂ ನಿಯಂತ್ರಿಸಬಹುದು. ಹೊಸ ನೀತಿ ಪ್ರಕಾರ, ಮಾರುಕಟ್ಟೆ ಬೆಲೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಕುಸಿತವಾದಲ್ಲಿ ಆ ನಷ್ಟವನ್ನು ಸರ್ಕಾರವೇ ಸರಿದೂಗಿಸಿ ಕೊಡಲಿದೆ. ಈ ಕ್ರಮಗಳು ರೈತರ ಹಿತದೃಷ್ಟಿಗೆ ಪೂರಕವಾಗಿವೆ ಎನ್ನಬೇಕು. ಇವುಗಳ ಸಮರ್ಪಕ ಅನುಷ್ಠಾನದ ಆಧಾರದ ಮೇಲೆ ಹೊಸನೀತಿಗಳ ಯಶಸ್ಸು ನಿರ್ಧಾರವಾಗಲಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಆದ್ಯ ಗಮನ ನೀಡಬೇಕು.