Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಾರ್ವಕಾಲಿಕ ಸಂದೇಶ

Tuesday, 11.09.2018, 3:05 AM       No Comments

ಮೆರಿಕದ ಷಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವೀರಸಂನ್ಯಾಸಿ ವಿವೇಕಾನಂದರು ಮಾಡಿದ ಧೀರೋದಾತ್ತ ಭಾಷಣಕ್ಕೀಗ 125ರ ಹರೆಯ. ಸಹಜವಾಗೇ ಇದು ಸಂಭ್ರಮದ ಪರ್ವವೂ ಹೌದು. ಸ್ವಾಮಿ ವಿವೇಕಾನಂದರ ವಿಚಾರಧಾರೆ, ಪರಿವ್ರಾಜಕ ಜೀವನಕ್ರಮ, ಸಮಾಜ ಸುಧಾರಣೆಗೆಂದು ಅವರು ಕೈಗೊಂಡ ತಪಸ್ಸು ಈ ಎಲ್ಲವುಗಳ ಕುರಿತು ವಿಶ್ವಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಅಹರ್ನಿಶಿ ಶ್ರಮಿಸುತ್ತಿರುವ ಶ್ರೀ ರಾಮಕೃಷ್ಣ ಮಠ ಮಾತ್ರವಲ್ಲದೆ, ಹಿಂದುತ್ವದ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಲು, ಪ್ರವರ್ತಿಸಲು ಕಟಿಬದ್ಧವಾಗಿರುವ ವಿವಿಧ ಸಂಘ-ಸಂಸ್ಥೆಗಳು, ಧರ್ಮಪ್ರವರ್ತನಾ ಘಟಕಗಳು ಈ ಪರ್ವದಲ್ಲಿ ಮತ್ತಷ್ಟು ಸಕ್ರಿಯವಾಗಿವೆ. ಇದು ಹೆಮ್ಮೆಯ ವಿಷಯವೇ ಸರಿ.

ಉತ್ಕ ೃ್ಟ ಸಂಸ್ಕೃತಿ-ಪರಂಪರೆಗಳನ್ನು ಹೊಂದಿದ್ದರೂ, ಹಿಂದೂರಾಷ್ಟ್ರ ಮತ್ತು ಹಿಂದೂಧರ್ಮ ಎಂದಾಕ್ಷಣ ಕೊನೆಯ ಆದ್ಯತೆಯಾಗಿ ಪರಿಗಣಿಸುತ್ತಿದ್ದ, ನಮ್ಮ ಸನಾತನ ಮೌಲ್ಯಗಳ ಕುರಿತು ಅಸಡ್ಡೆಯ ಭಾವ ತಳೆದಿದ್ದ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಚಿಂತಕರು, ಬುದ್ಧಿಜೀವಿಗಳು ಮತ್ತು ಧರ್ಮಪ್ರಚಾರಕರ ಕಣ್ಣು ತೆರೆಸುವಲ್ಲಿ ಈ ‘ವಿವೇಕವಾಣಿ’ ಬೀರಿದ ಪಾತ್ರ ಅಷ್ಟಿಷ್ಟಲ್ಲ. ‘ಅಮೆರಿಕದ ನನ್ನ ಸೋದರ ಸೋದರಿಯರೇ…’ ಎಂಬ ಅವರ ಆರಂಭಿಕ ನುಡಿಯೇ ಭಾರತೀಯ ಸಂಸ್ಕೃತಿಯಲ್ಲಿ ಹರಳುಗಟ್ಟಿರುವ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಗೆ ಉಜ್ವಲ ಸಾಕ್ಷಿಯಾಗಿತ್ತು. ಹೀಗಾಗಿ ಸುದೀರ್ಘ ಅವಧಿಯವರೆಗೆ ಕರತಾಡನ ಪ್ರಾಪ್ತಿಯಾಗುವಂತಾಯಿತು, ಇರಲಿ.

ವಿವೇಕಾನಂದರು ಅಂದು ಮಾಡಿದ್ದು ಬರೀ ಭಾಷಣವೆಂಬ ಶಬ್ದಾಡಂಬರದ ಕಾಲಾಯಾಪನೆಯೇ? ಅಲ್ಲ; ಹಿಂದೂಧರ್ಮ ಮಾತ್ರವೇ ಶ್ರೇಷ್ಠ, ಉಳಿದವು ನಿಕೃಷ್ಟ ಎಂದು ಅವರಂದು ತುತ್ತೂರಿ ಊದಿದರೇ? ಖಂಡಿತ ಇಲ್ಲ; ‘ಎಲ್ಲರನ್ನೂ ಮತ್ತು ಎಲ್ಲವನ್ನೂ ಒಳಗೊಳ್ಳುವ ಸಮಷ್ಟಿಪ್ರಜ್ಞೆ’, ತನ್ಮೂಲಕ ಆತ್ಮೋನ್ನತಿಯನ್ನೂ, ಸ್ವಸ್ಥ ಮಾನವ ವ್ಯಕ್ತಿತ್ವವನ್ನೂ ನಿರ್ವಿುಸಬೇಕಾಗಿರುವ ಅನಿವಾರ್ಯತೆ ಅದರ ಅಂತಃಸತ್ವವಾಗಿತ್ತು. ಸಾಧು-ಸಂತರು ಎಂದಾಕ್ಷಣ, ‘ಧರ್ಮಪ್ರಸಾರ’ ಎಂಬ ಏಕೈಕ ಅಂಶವೇ ಹೆಗ್ಗುರುತಾಗಿಬಿಡುತ್ತದೆ; ಆದರೆ ವಿವೇಕಾನಂದರು ಇದನ್ನೂ ಮೀರಿದ ಕಾರ್ಯವ್ಯಾಪ್ತಿ ಮತ್ತು ಪ್ರಭಾವವಿದ್ದ ನಿಜಾರ್ಥದ ಸಂತರಾಗಿದ್ದರು, ವಿಶ್ವಮಾನವರಾಗಿದ್ದರು. ಆತ್ಮಸ್ಥೈರ್ಯದ ಜಾಗೃತಿಯೆಡೆಗೆ ಹೆಚ್ಚಿನ ಒತ್ತುಕೊಟ್ಟು, ತನ್ಮೂಲಕ ‘ಸಶಕ್ತ ಮಾನವನಿರ್ವಣ’ದ ಪರಿಕಲ್ಪನೆಯನ್ನು ಸಾಕಾರಗೊಳಿಸುವೆಡೆಗೆ ಗಮನವಿತ್ತ ಅವರು, ಈ ನಿಟ್ಟಿನಲ್ಲಿ ಬಾವಿಯೊಳಗಿನ ಕಪ್ಪೆಯಾಗದೆ ಸರ್ವಧರ್ಮಗಳಲ್ಲೂ ಸರ್ವಸಮಾಜಗಳಲ್ಲೂ ಅಂತರ್ಗತವಾಗಿರುವ ಶ್ರೇಷ್ಠ ಅಂಶಗಳನ್ನು ಮುನ್ನೆಲೆಗೆ ತರಬೇಕಾದ ಅಗತ್ಯದ ಕುರಿತು ಮನವರಿಕೆ ಮಾಡಿಕೊಟ್ಟರೆನ್ನಬೇಕು. ಹೀಗಾಗಿ, ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದ ಅನೇಕ ದೇಶಗಳಿಗೆ ಮರುಚೈತನ್ಯ ಸಿಕ್ಕಿದಂತಾಗಿ, ತಂತಮ್ಮ ಅಸ್ಮಿತೆಯನ್ನು ಅವು ಜಾಗತಿಕವಾಗಿ ಬಿಂಬಿಸುವುದಕ್ಕೆ ವಿವೇಕಾನಂದರ ಭಾಷಣ ಚೈತನ್ಯ ನೀಡಿತು ಎಂಬುದು ಒಪ್ಪಿತಸತ್ಯ. ಅವರ ಚಿಂತನಾಲಹರಿ ದೇಶ-ವಿದೇಶಗಳ ಚಿಂತಕರು, ಧರ್ಮಪ್ರಚಾರಕರನ್ನು ಅತೀವವಾಗಿ ಪ್ರಭಾವಿಸಿದ್ದು ಮಾತ್ರವಲ್ಲದೆ, ಭಾರತದ ರಾಜ-ಮಹಾರಾಜರು, ಶಿಕ್ಷಣತಜ್ಞರ ಪಾಲಿನ ಆಕರಗ್ರಂಥವೇ ಆಯಿತು ಎಂದರೆ ಅತಿಶಯೋಕ್ತಿಯಲ್ಲ. ವಿವೇಕಾನಂದರಿಂದ ಪ್ರಭಾವಿತಗೊಂಡ ಅಂದಿನ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಶಿಕ್ಷಣ, ವಾಣಿಜ್ಯ, ಕೈಗಾರಿಕೆ, ವಿಜ್ಞಾನ, ಸಮಾಜಸೇವಾಕಾರ್ಯಗಳಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗಿದ್ದು, ಬರೋಡಾದ ರಾಜ ಗಾಯಕವಾಡರು ನೂರಾರು ದಲಿತ ಮಕ್ಕಳ ಪಾಲಿನ ಆಶಾಕಿರಣವಾಗಿದ್ದು, ಅಷ್ಟೇಕೆ ‘ಪ್ರಯತ್ನವನ್ನೇ ಮಾಡದಿದ್ದರೆ ಅದು ನಾಶಕ್ಕೆ ಆಹ್ವಾನ’ ಎಂಬ ಸ್ವಾಮೀಜಿ ಮಾತನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿನುದ್ದಕ್ಕೂ ಸಾರಿದ್ದು ಇದಕ್ಕೆ ಒಂದಷ್ಟು ನಿದರ್ಶನಗಳು.

ಪ್ರಸಕ್ತ ಭಾರತಕ್ಕಂತೂ ಅವರ ಚಿಂತನೆಗಳ ಅನ್ವಯಿಕೆ ಸಮರ್ಥ ರೀತಿಯಲ್ಲಿ ಆಗಬೇಕಿದೆ. ಸಾಮಾಜಿಕವಾಗಿ ನೈತಿಕ ಮೌಲ್ಯಗಳ ಅನುಸರಣೆ ಜತೆಗೆ ಮೌಲ್ಯಗಳನ್ನು ಮೂಲೆಗೊತ್ತಿ ವ್ಯಾಪಾರೀಕರಣದ ಮಡಿಲಿಗೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿರುವ ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಹಲವು ಕಾರ್ಯಕ್ಷೇತ್ರಗಳ ಉನ್ನತೀಕರಣಕ್ಕೆ ವಿವೇಕಾನಂದರ ಚಿಂತನಧಾರೆಯ ಅಳವಡಿಕೆಯಾಗಬೇಕಿದೆ. ಹಾಗಾದಲ್ಲಿ, ನಿಜಾರ್ಥದಲ್ಲಿ ಅದೇ ಅವರ ಸ್ಮರಣೆಯಾಗುತ್ತದೆ.

(ಓದುಗರ ಗಮನಕ್ಕೆ: ವಿಶೇಷ ಪುಟದ ಕಾರಣದಿಂದ ಸಜನ್ ಪೂವಯ್ಯ ಅವರ ‘ಲಾ – ಆರ್ಡರ್’ ಅಂಕಣ ಪ್ರಕಟವಾಗಿಲ್ಲ.)

Leave a Reply

Your email address will not be published. Required fields are marked *

Back To Top