Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಕಾಲಿಕ ಚಿಂತನೆ

Monday, 10.09.2018, 3:05 AM       No Comments

ದಲಾದ ಕಾಲಘಟ್ಟಕ್ಕೆ ತಕ್ಕಂತೆ ಭಾರತೀಯ ಸೇನೆಯನ್ನು ಮರುವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಉನ್ನತಮಟ್ಟದ ಚಿಂತನೆ ನಡೆಯುತ್ತಿದ್ದು, ಮುಂದೊದಗಬಹುದಾದ ಯಾವುದೇ ಸಾಮರಿಕ ಸವಾಲನ್ನು ಆಧುನಿಕ ತಂತ್ರಜ್ಞಾನದ ಒತ್ತಾಸೆಯೊಂದಿಗೆ ಎದುರಿಸಬಲ್ಲಂಥ ಸಶಕ್ತ ಪಡೆ ರೂಪಿಸುವ ಉದ್ದೇಶ ಇದರಲ್ಲಿ ಅಂತರ್ಗತವಾಗಿದೆ ಎನ್ನಲಾಗಿದೆ. ಪ್ರಸ್ತುತ ಕಾಣಬರುತ್ತಿರುವ ಜಾಗತಿಕ ರಾಜಕೀಯ ಸನ್ನಿವೇಶ, ಉಗ್ರರು-ಪ್ರತ್ಯೇಕತಾವಾದಿಗಳು-ವಿಚ್ಛಿದ್ರಕಾರಕ ಶಕ್ತಿಗಳನ್ನು ಹಣಿಯಬೇಕಾದ ಅನಿವಾರ್ಯತೆ ಈ ಎಲ್ಲದರ ಹಿನ್ನೆಲೆಯಲ್ಲಿ ಇದೊಂದು ಸಕಾಲಿಕ ಚಿಂತನೆ ಎನ್ನಲಡ್ಡಿಯಿಲ್ಲ.

ಹಾಗೆ ನೋಡಿದರೆ, ಭಾರತವು ಸ್ವಾತಂತ್ರ್ಯ ದಕ್ಕಿಸಿಕೊಂಡು ದಶಕಗಳೇ ಆಗಿದ್ದರೂ, ಅಂಚೆ ಇಲಾಖೆ, ರೈಲ್ವೆ ಇಲಾಖೆ ಸೇರಿದಂತೆ ಕೆಲವೊಂದು ವಲಯಗಳಲ್ಲಿ ಬ್ರಿಟಿಷ್ ಭಾರತದ ಕಾಲಾವಧಿಯ ಕಾರ್ಯಶೈಲಿ ಅಥವಾ ಪ್ರಭಾವ ಇನ್ನೂ ಉಳಿದುಕೊಂಡಿದೆ ಎನ್ನಬೇಕು. ಸೇನೆ ಕೂಡ ಇದಕ್ಕೆ ಹೊರತಾಗಿಲ್ಲ. ಭೂಸೇನೆಯಲ್ಲಿನ ವಿವಿಧ ವಿಭಾಗಗಳಲ್ಲಿ ಒಂದೇ ತೆರನಾದ ಕೆಲಸದ ಪುನರಾವರ್ತನೆಯಾಗುತ್ತಿರುವುದನ್ನು ತಪ್ಪಿಸುವುದು, ಸಮರಪಟುಗಳಿಗೆ ಹೊರತಾದ ಹೆಚ್ಚುವರಿ ಪೂರಕ ಸಿಬ್ಬಂದಿ ಸಂಖ್ಯೆಯನ್ನು (ಪೊಲೀಸ್ ವ್ಯವಸ್ಥೆಯಲ್ಲಿ ಇದ್ದಂಥ ‘ಆರ್ಡರ್ಲಿ’ಗಳ ರೀತಿಯಲ್ಲೇ ಯೋಧಶೈಲಿಗೆ ಹೊರತಾದ ಕೆಲಸವನ್ನು ನಿರ್ವಹಿಸುವವರು ಅಥವಾ ಪರೋಕ್ಷವಾಗಿ ಅಂಥ ಕೆಲಸಗಳಿಗೆ ನಿಯೋಜಿಸಲ್ಪಟ್ಟವರು ಸೇನೆಯಲ್ಲೂ ಇದ್ದಾರೆ) ಗಣನೀಯವಾಗಿ ತಗ್ಗಿಸುವುದು, ಮುಂದುವರಿದ ತಂತ್ರಜ್ಞಾನದ ಕುರಿತು ಸೇನಾಸಿಬ್ಬಂದಿಗೆ ಅರಿವು/ತರಬೇತಿ ನೀಡುವ ಮೂಲಕ ಅರ್ಥಪೂರ್ಣ ವ್ಯೂಹಾತ್ಮಕ ಕಾರ್ಯತಂತ್ರಗಳನ್ನು ಹೆಣೆಯುವಂತೆ ಅವರನ್ನು ಸನ್ನದ್ಧರಾಗಿಸುವುದು- ಹೀಗೆ ಹಲವು ಆಯಾಮಗಳ ಸುಧಾರಣೆಗೆ ಚಿಂತನೆ ನಡೆದಿದೆ ಎನ್ನಲಾಗಿದ್ದು, ಇದು ಭೂಸೇನೆಯ ವಿವಿಧ ಸ್ತರಗಳಲ್ಲಿ ದಕ್ಷತೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂಬುದು ಬಲ್ಲವರ ಅಭಿಮತ.

ಅನಗತ್ಯ ಕೆಲಸ ಅಥವಾ ಹೆಚ್ಚುವರಿ ಸಿಬ್ಬಂದಿಯನ್ನು ಕಡಿತಗೊಳಿಸುವುದರಿಂದ, ಅಪ್ರಸ್ತುತವೆನಿಸಿದ ಕೆಲವೊಂದು ವಿಭಾಗಗಳನ್ನೇ ರದ್ದುಮಾಡುವುದರಿಂದ ಅಥವಾ ಮತ್ತೊಂದರಲ್ಲಿ ಅವನ್ನು ವಿಲೀನಗೊಳಿಸುವುದರಿಂದ, ಹಾಗೂ ತಂತ್ರಜ್ಞಾನ ಬೆಂಬಲಿತ ಕಾರ್ಯವ್ಯವಸ್ಥೆಗಳಿಗೆ ಉತ್ತೇಜನ ನೀಡುವುದರಿಂದ 10 ಸಿಬ್ಬಂದಿ ಇರಬೇಕಾದ ಜಾಗದಲ್ಲಿ ಒಬ್ಬಿಬ್ಬರು ಇದ್ದರೆ ಸಾಕಾಗುತ್ತದೆ. ಇಂಥ ಉಪಕ್ರಮದಿಂದಾಗಿ ಗಣನೀಯ ಪ್ರಮಾಣದಲ್ಲಿ ಹಣದ ಉಳಿತಾಯವಾಗುವುದು ಖರೆ. ಇದೇ ಹಣವನ್ನು ಅಗತ್ಯ ಶಸ್ತ್ರಾಸ್ತ್ರಗಳ ಖರೀದಿಗೆ, ಯೋಧರ ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಿ ಅರ್ಥಪೂರ್ಣವಾಗಿಸಲು ಸಾಧ್ಯವಿದೆ. ಜತೆಗೆ, ತಂತ್ರಜ್ಞಾನದ ಅರಿವು ಮತ್ತು ಅನ್ವಯಿಕೆ, ಸುಧಾರಿತ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಮತ್ತು ರೆಡಾರ್​ಗಳ ಬಳಕೆ, ವ್ಯೂಹರಚನೆಯಲ್ಲಿನ ವೃತ್ತಿಪರತೆ ಇವೇ ಮೊದಲಾದ ವಿಷಯಗಳಲ್ಲಿ ಭಯೋತ್ಪಾದಕರು ಸೇನಾ ವ್ಯವಸ್ಥೆಗಿಂತ ಸಾಕಷ್ಟು ಹೆಜ್ಜೆ ಮುಂದೆಹೋಗಿ ಯೋಚಿಸುವಷ್ಟು, ‘ರಂಗೋಲಿ ಕೆಳಗೆ ತೂರುವಷ್ಟು’ ಚಾಣಾಕ್ಷರಾಗಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ಸಮರಶೈಲಿಯೊಂದೇ ಎಲ್ಲ ಕಾಲಕ್ಕೂ ಸಾಕಾಗದು. ಪಾಕ್ ಗಡಿಭಾಗದಲ್ಲಿ ಠಿಕಾಣಿ ಹೂಡಿ ಭಾರತದ ಮೇಲೆ ಮುರಕೊಂಡು ಬೀಳುವ ಹುನ್ನಾರದಲ್ಲಿದ್ದ ಪಾಕ್-ಬೆಂಬಲಿತ ಉಗ್ರರ ಮೇಲೆ ಭಾರತ ಸರ್ಜಿಕಲ್ ದಾಳಿಯನ್ನು ನಡೆಸಬೇಕಾಗಿ ಬಂದಿದ್ದು ಇದಕ್ಕೊಂದು ಉದಾಹರಣೆ. ಇನ್ನು ಸೇನಾ ವೃತ್ತಿಪರತೆಯ ವಿಷಯದಲ್ಲೇ ಹೇಳುವುದಾದರೆ, ಸಾವಿರಾರು ಕಿ.ಮೀ. ಅಂತರದವರೆಗೆ ಭೂಮಿಯಿಂದ ಭೂಮಿಗೆ ಚಿಮ್ಮಬಲ್ಲ ಸುಧಾರಿತ ಕ್ಷಿಪಣಿಗಳನ್ನು ನೆರೆರಾಷ್ಟ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಿಟ್ಟುಕೊಂಡಿವೆ. ಇದಕ್ಕೆ ಸೂಕ್ತ ಪ್ರತ್ಯುತ್ತರ

ಹೇಳಬೇಕೆಂದರೆ, ಯೋಧರ ಸಾಮರ್ಥ್ಯ ಮತ್ತು ತಂತ್ರಜ್ಞಾನ ಪರಿಣತಿಯೂ ಅದಕ್ಕೆ ಸರಿಗಟ್ಟುವಂತಿರಬೇಕು. ಈ ಎಲ್ಲ ಆಯಾಮಗಳ ಹಿನ್ನೆಲೆಯಲ್ಲಿ, ಸೇನಾ ಪರಿಣತಿಯ ಉನ್ನತೀಕರಣದ ಚಿಂತನೆ ಸಕಾಲಿಕವಾಗಿದೆ ಎನ್ನಲಡ್ಡಿಯಿಲ್ಲ.

Leave a Reply

Your email address will not be published. Required fields are marked *

Back To Top