Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ನ್ಯಾಯದಾನ ತ್ವರಿತವಾಗಲಿ

Monday, 20.08.2018, 3:05 AM       No Comments

ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಚಾರಣೆಗೆ ಬರಲು ಸಾಕಷ್ಟು ಸಮಯ ಕಾಯಬೇಕು. ಬಳಿಕ ಆ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಅದೆಷ್ಟು ವರ್ಷಗಳು ಉರುಳಿರುತ್ತವೆಯೋ ನಿಖರವಾಗಿ ಹೇಳುವುದು ಕಷ್ಟ. ಕಕ್ಷಿದಾರರು ಇವತ್ತು ತೀರ್ಪು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲೇ ದಿನಗಳೆಯಬೇಕಾಗುತ್ತದೆ. ಕ್ಷಿಪ್ರ ನ್ಯಾಯದಾನದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಹೊಸ ವ್ಯವಸ್ಥೆ ರೂಪಿಸಿದ್ದು, ಕುತೂಹಲ ಮೂಡಿಸಿದೆ. ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಮಧ್ಯಪ್ರದೇಶ ಸರ್ಕಾರವು ನ್ಯಾಯವಾದಿಗಳಿಗೆ ಮೆಚ್ಚುಗೆಯ ಅಂಕ ನೀಡುವ ವ್ಯವಸ್ಥೆ ಆರಂಭಿಸಿದೆ. ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾದರೆ 1000, ಜೀವಿತಾವಧಿ ಶಿಕ್ಷೆಗೆ 500 ಹಾಗೂ ಗರಿಷ್ಠ ಶಿಕ್ಷೆಗೆ 100-200 ಅಂಕಗಳನ್ನು ಸರ್ಕಾರ ನೀಡುತ್ತದೆ. ಈ ಅಂಕ ಪಡೆದವರಿಗೆ ‘ತಿಂಗಳಿನ ಉತ್ತಮ ನ್ಯಾಯವಾದಿ’ ಎಂದು ಸನ್ಮಾನಿಸಲಾಗುತ್ತದೆ. ನ್ಯಾಯವಾದಿಗಳ ಸೇವಾ ವರದಿಯಲ್ಲಿ ಈ ಅಂಕ ಉಲ್ಲೇಖವಾಗಿರುವುದರಿಂದ ವ್ಯವಸ್ಥೆ ಗಂಭೀರತೆಯನ್ನು ಪಡೆದುಕೊಂಡಿದೆ. ಕಳೆದ 6 ತಿಂಗಳಲ್ಲಿ ಮಧ್ಯಪ್ರದೇಶದ ವಿವಿಧ ಅಧೀನ ನ್ಯಾಯಾಲಯಗಳು 10 ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸಿದ್ದು, ಒಂದು ಪ್ರಕರಣದಲ್ಲಿ ಹೈಕೋರ್ಟ್ ಕೂಡ ಶಿಕ್ಷೆಯನ್ನು ಕಾಯಂಗೊಳಿಸಿದೆ ಎಂಬುದು ಗಮನಾರ್ಹ.

ಅಂಕ ನೀಡಿಕೆಯ ಪ್ರಯೋಗ ಎಷ್ಟು ಯಶಸ್ವಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ತ್ವರಿತ ನ್ಯಾಯದಾನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಇದು ಸಕಾಲ. ನಮ್ಮ ದೇಶದಲ್ಲಿ ಅಧೀನ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಅಂದಾಜು 2 ಕೋಟಿ ಪ್ರಕರಣಗಳು ಬಾಕಿ ಇವೆ. ಆದರೆ, ನ್ಯಾಯಾಧೀಶರ ಕೊರತೆ, ಮೂಲ ಸೌಕರ್ಯದ ಕೊರತೆ ಸೇರಿದಂತೆ ಹಲವು ಅಪಸವ್ಯಗಳು ನ್ಯಾಯದಾನ ಪ್ರಕ್ರಿಯೆಯ ವೇಗಕ್ಕೆ ಬ್ರೇಕ್ ಹಾಕಿವೆ. ಕಾನೂನು ಸಚಿವಾಲಯವು 2017 ನವೆಂಬರ್​ನ ವರದಿಯಲ್ಲಿ ತಿಳಿಸಿರುವಂತೆ, ದೇಶದಲ್ಲಿ ಮಂಜೂರಾದ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ನ್ಯಾಯಾಧಿಕಾರಿಗಳ ಸಂಖ್ಯೆಗಿಂತ ಕೋರ್ಟ್ ಹಾಲ್​ಗಳ ಸಂಖ್ಯೆ ಕಡಿಮೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಹತ್ತುಹಲವು ಕ್ಷೇತ್ರಗಳು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಪರಿಣಾಮ, ಅವುಗಳ ಕಾರ್ಯದಕ್ಷತೆಯೂ ಹೆಚ್ಚಿ, ವೇಗ ವೃದ್ಧಿಸಿದೆ ಎಂಬುದು ಗೊತ್ತಿರುವಂಥದ್ದೇ. ನ್ಯಾಯಾಂಗವೂ ಪ್ರಕರಣಗಳ ಶೀಘ್ರ ವಿಲೇವಾರಿ, ಕಕ್ಷಿದಾರರಿಗೆ ಪ್ರಕರಣದ ಮಾಹಿತಿ ನೀಡುವಂಥ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು ತಂತ್ರಜ್ಞಾನದ ಪರಿಣಾಮಕಾರಿ ಅಳವಡಿಕೆಗೆ ಒಲವು ತೋರುವುದು ಸೂಕ್ತ. ಕಕ್ಷಿದಾರರಿಗೆ ಇ-ನೋಟಿಸ್ ಕಳಿಸುವಂಥ ಕ್ರಮ ಸುಪ್ರೀಂ ಕೋರ್ಟಿನಿಂದ ಇತ್ತೀಚೆಗೆ ಘೋಷಣೆ ಆಗಿರುವುದು ಈ ನಿಟ್ಟಿನಲ್ಲಿ ಗಮನಾರ್ಹ.

ಕೆಲ ನ್ಯಾಯಾಲಯಗಳು ಈಗಾಗಲೇ ಶೀಘ್ರ ನ್ಯಾಯದಾನಕ್ಕೆ ಮುಂದಾಗಿದ್ದು, ಪಟನಾ ಹೈಕೋರ್ಟ್ 2017ರ ನವೆಂಬರ್ 9ರಂದು ಒಂದೇ ದಿನದಲ್ಲಿ 1489 ಪ್ರಕರಣಗಳನ್ನು ಇತ್ಯರ್ಥ ಮಾಡಿತ್ತು. ಅದೇ ರೀತಿ, ಅಪಘಾತ ಪ್ರಕರಣವೊಂದರಲ್ಲಿ ವಿಚಾರಣೆ ನಡೆಸಿ ಪರಿಹಾರ ನೀಡಲು ವಿಳಂಬವಾಗಿರುವುದಕ್ಕೆ ಮದ್ರಾಸ್ ಹೈಕೋರ್ಟ್ ಸಂತ್ರಸ್ತ ಮಹಿಳೆಗೆ ವಿಷಾದ ವ್ಯಕ್ತಪಡಿಸಿದ ಅಪರೂಪದ ಪ್ರಕರಣ ಕಳೆದ ವರ್ಷದ ಆಗಸ್ಟ್​ನಲ್ಲಿ ವರದಿಯಾಯಿತು. ಪ್ರಕರಣಗಳ ಹೊರೆ ಹೆಚ್ಚುತ್ತಿದ್ದಂತೆ ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಮೇಲೂ ಒತ್ತಡ ಸೃಷ್ಟಿಯಾಗುತ್ತದೆ. ತಂತ್ರಜ್ಞಾನದ ಪರಿಣಾಮಕಾರಿ ಅಳವಡಿಕೆ, ನ್ಯಾಯಾಧೀಶರು ಮತ್ತು ನ್ಯಾಯಾಧಿಕಾರಿಗಳ ನೇಮಕ, ನ್ಯಾಯವಾದಿಗಳಿಗೆ ಪ್ರೋತ್ಸಾಹ ಸೇರಿದಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಂಡಲ್ಲಿ ಶೀಘ್ರ ನ್ಯಾಯಪ್ರಾಪ್ತಿಯ ನಿರೀಕ್ಷೆ ಈಡೇರಬಲ್ಲದು.

Leave a Reply

Your email address will not be published. Required fields are marked *

Back To Top