Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಪಟ್ಟಭದ್ರರಿಗೆ ಪಾಠವಾಗಲಿ

Saturday, 11.08.2018, 3:02 AM       No Comments

ಮಾನ್ಯತೆ ರದ್ದತಿಯಿಂದಾಗಿ 3 ವರ್ಷದಿಂದ ಗ್ರಹಣ ಹಿಡಿಸಿಕೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕೊನೆಗೂ ಮಾನ್ಯತೆಯ ಭಾಗ್ಯ ದೊರಕಿದೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ವತಿಯಿಂದ ಮುಕ್ತ ವಿವಿಯ ತಾಂತ್ರಿಕೇತರ ಕೋರ್ಸ್​ಗಳಿಗೆ ಮಾನ್ಯತೆಯ ನವೀಕರಣವಾಗಿರುವುದು ಸಂತಸದ ಸುದ್ದಿಯೇ. ಆದರೆ, ಇದು ವಿವಿಗೆ ದಕ್ಕಿರುವ ಪರಿಪೂರ್ಣ ವಿಜಯವಲ್ಲ; ಕಾರಣ, ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳ ಮರುಚಾಲನೆಗೆ ಮತ್ತು ಹೊಸ ವಿದ್ಯಾರ್ಥಿಗಳ ಪ್ರವೇಶಾತಿಗೆ ಯುಜಿಸಿ ಆದೇಶ ಅನುವು ಮಾಡಿಕೊಡುತ್ತದೆಯಾದರೂ, ಈಗಾಗಲೇ ತೇರ್ಗಡೆಯಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಉತ್ತರವಿನ್ನೂ ಹೊಮ್ಮಿಲ್ಲ ಎಂಬುದನ್ನು ಮರೆಯಲಾಗದು.

ಹಾಗೆ ನೋಡಿದರೆ, ಒಂದು ಪ್ರಾಥಮಿಕ ಶಾಲೆಯನ್ನೇ ಆಗಲೀ ಅಥವಾ ಬೇರಾವ ಸಂಸ್ಥೆಯನ್ನೇ ಆಗಲಿ ಪ್ರಾರಂಭಿಸಬೇಕೆಂದರೂ, ಅದರ ಸ್ವರೂಪ ಮತ್ತು ಕಾರ್ಯಶೈಲಿಗನು ಗುಣವಾಗಿ ‘ಮಾರ್ಗದರ್ಶಿ ಸೂತ್ರ’ ಹಣೆಪಟ್ಟಿಯ ಒಂದಷ್ಟು ಲಕ್ಷ್ಮಣರೇಖೆಗಳಿರುತ್ತವೆ ಎಂಬುದು ಗೊತ್ತಿರು ವಂಥದ್ದೇ. ಉದ್ದೇಶಿತ ಸಂಸ್ಥೆ ತನ್ನ ಪೂರ್ವನಿಗದಿತ ಗುರಿ ಮತ್ತು ವ್ಯಾಪ್ತಿಯಿಂದ ಆಚೀಚೆ ಸರಿಯಬಾರದು ಎಂಬುದು ಇಂಥ ನಿಯಮಗಳ ಹಿಂದಿನ ಮೂಲೋದ್ದೇಶ. ಅಂತೆಯೇ, ಇತಿಹಾಸ, ವಾಣಿಜ್ಯ, ಅರ್ಥಶಾಸ್ತ್ರ, ಗ್ರಂಥಾಲಯ ವಿಜ್ಞಾನ, ಪತ್ರಿಕೋದ್ಯಮದಂಥ ಸಾಂಪ್ರದಾಯಿಕ ವಿಷಯಗಳಲ್ಲಿ ಮಾತ್ರವೇ ಶಿಕ್ಷಣ ನೀಡುವುದಕ್ಕೆ ಮುಕ್ತ ವಿವಿಗಳಿಗೆ ಅನುಮತಿ ಇರುತ್ತದೆಯೇ ವಿನಾ, ಇಂಜಿನಿಯರಿಂಗ್​ನಂಥ ವೃತ್ತಿಶಿಕ್ಷಣ ನೀಡುವುದಕ್ಕೆ ಅವಕಾಶವಿರುವುದಿಲ್ಲ. ಸದರಿ ಮುಕ್ತ ವಿವಿ ವಿಷಯದಲ್ಲೂ, ರಾಜ್ಯದ ವ್ಯಾಪ್ತಿ ಯಿಂದಾಚೆಗೆ ಶೈಕ್ಷಣಿಕ ಸೇವೆ ನೀಡಬಾರದು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಬಾರದು ಎಂಬುದು ಯುಜಿಸಿ ನಿಯಮವಾಗಿತ್ತು. ವಿವಿಯಿಂದ ಈ ನಿಯಮದ ಉಲ್ಲಂಘನೆಯಾದ ಕಾರಣ, ಮಾನ್ಯತೆ ರದ್ದತಿಯ ಛಡಿಯೇಟಿಗೆ ಒಳಗಾಗಬೇಕಾಯಿತು ಎಂಬುದು ಗಮನಿಸಬೇಕಾದ ಅಂಶ. ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಭವಿಷ್ಯ ರೂಪಣೆಗಿಂತ, ವಿವಿಯ ಆರ್ಥಿಕ ತಳಹದಿಯ ಬಲವರ್ಧನೆ ಮತ್ತು ವಾಣಿಜ್ಯಿಕ ವಿಸ್ತರಣೆಯ ಹುಕಿಗೆ ಬಿದ್ದ ಪರಿಣಾಮ, ಬರೋಬ್ಬರಿ 3 ವರ್ಷಗಳ ಕಾಲ ಕಾರ್ಯಾಚರಣೆಗೇ ತತ್ವಾರ ಒದಗುವಂತಾಯಿತು. ಇದು ಸದರಿ ವಿವಿಯ ಕಾರ್ಯವ್ಯಾಪ್ತಿಗೆ ಬರುವ, ಆಡಳಿತ-ಬೋಧಕ-ಬೋಧಕೇತರ ಹೀಗೆ ವಿವಿಧ ಸ್ತರದ ಸಿಬ್ಬಂದಿಗೆ ಒಂದು ಪಾಠವಾಗಬೇಕು.

ಮುಕ್ತ ವಿವಿಗೆ ದಾಖಲಾಗುವ ವಿದ್ಯಾರ್ಥಿಗಳೆಲ್ಲ ಖೋಟಾ ಹಿತಾಸಕ್ತಿಗಳನ್ನು ಹೊಂದಿರುವವರೇ ಆಗಿರುತ್ತಾರೆ ಎಂದು ಭಾವಿಸಬೇಕಿಲ್ಲ; ಒಂದೊಮ್ಮೆ ಹಾಗಿದ್ದರೂ ಅವರ ಪ್ರಮಾಣ ಶೇ. 10ರಷ್ಟು ಇದ್ದೀತು. ಮಿಕ್ಕವರು, ಬಡತನದಿಂದಾಗಿ ಸಾಂಪ್ರದಾಯಿಕ ಶಿಕ್ಷಣಸಂಸ್ಥೆಗಳ ಶುಲ್ಕವನ್ನು ಭರಿಸಲಾಗದಿರುವುದಕ್ಕೋ, ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ನೌಕರಿಗೆ ಸೇರಬೇಕಾಗಿ ಬಂದುದಕ್ಕೋ ಮುಕ್ತ ವಿವಿಯನ್ನು ನೆಚ್ಚುವಂಥ ಅಪ್ಪಟ ವಿದ್ಯಾರ್ಥಿಗಳೇ ಆಗಿರುತ್ತಾರೆ. ವಿವಿ ನೀಡುವ ಶಿಕ್ಷಣ, ಅಂಕಪತ್ರ, ಪದವಿ ಪ್ರಮಾಣಪತ್ರಗಳು ಇಂಥವರಿಗೆ ಅನ್ನದ ದಾರಿಯೇ ಆಗಿರುತ್ತವೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ವಿವಿಯ ನೆಲೆಗಟ್ಟೇ ಕುಸಿದಲ್ಲಿ, ಅದು ಇಂಥ ವಿದ್ಯಾರ್ಥಿಗಳ ಅನ್ನದ ತಟ್ಟೆಗೆ ಬೀಳುವ ಕಲ್ಲಾಗುತ್ತದೆ ಎಂಬುದು ಕಹಿವಾಸ್ತವ. ಪ್ರಸ್ತುತ ಮಾನ್ಯತೆ ನವೀಕರಣವಾಗಿದ್ದರೂ, 3 ಲಕ್ಷದಷ್ಟು ಹಳೆಯ ವಿದ್ಯಾರ್ಥಿಗಳ ಗತಿಯೇನು? ಸ್ಪರ್ಧಾತ್ಮಕ ಪರೀಕ್ಷೆ, ಅನ್ಯಕೋರ್ಸ್​ಗಳಿಗಿರಲಿ, ಉದ್ಯೋಗಕ್ಕೂ ಅರ್ಜಿ ಸಲ್ಲಿಸಲಾಗದಂಥ ಅವರ ದುರಂತಕ್ಕೆ ಹೊಣೆಯಾರು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *

Back To Top