ಅತಿಕ್ರಮ ಪ್ರವೇಶ ಸಲ್ಲ

ಕರ್ನಾಟಕ-ಗೋವಾ ನಡುವೆ ಭುಗಿಲೆದ್ದಿರುವ ಮಹದಾಯಿ ನದಿನೀರು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಈ ತಿಂಗಳಲ್ಲೇ ತೀರ್ಪು ನೀಡಲಿರುವುದು ಗೊತ್ತಿರುವ ಸಂಗತಿಯೇ. ಆದರೆ ಕರ್ನಾಟಕದ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಣೆಯ ಕಸರತ್ತಿಗೆ ಗೋವಾ ಸರ್ಕಾರ ಮುಂದಾಗಿದೆ ಎಂಬ ಗ್ರಹಿಕೆಗೆ ಪುಷ್ಟಿ ನೀಡುವಂತೆ ಗೋವಾ ನಿಯೋಗ ಕಳೆದ ಜು. 22ರಂದು ಖಾನಾಪುರ ಬಳಿಯ ಕಳಸಾ ಯೋಜನಾ ಪ್ರದೇಶಕ್ಕೆ ತೆರಳಿ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿತ್ತು. ಇದರ ಮುಂದುವರಿದ ಭಾಗವೆಂಬಂತೆ ಬುಧವಾರ (ಆ.8) ಮತ್ತದೇ ಪ್ರದೇಶಕ್ಕೆ ಗೋವಾ ಸರ್ಕಾರದ ನೀರಾವರಿ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ಭೇಟಿ ನೀಡಿದ್ದಾರೆ. ಇಷ್ಟು ಸಾಲದೆಂಬಂತೆ, ‘ನ್ಯಾಯಾಧಿಕರಣದಿಂದ ಅಂತಿಮ ತೀರ್ಪು ಹೊಮ್ಮುವವರೆಗೂ ಮಹದಾಯಿ ನೀರನ್ನು ತಿರುಗಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಪ್ರತಿಜ್ಞಾಪತ್ರ ಸಲ್ಲಿಸಿದ್ದ ಕರ್ನಾಟಕ, ಇಂಥ ಬದ್ಧತೆ ಮೆರೆಯುವುದರ ಪ್ರತಿಯಾಗಿ ನದಿನೀರನ್ನು ತಿರುಗಿಸಿಕೊಂಡಿದೆ’ ಎಂಬರ್ಥ ಬರುವ ರೀತಿಯಲ್ಲಿ ಗೋವಾ ಸರ್ಕಾರ ಸವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆಯ ಅರ್ಜಿಯನ್ನೂ ಸಲ್ಲಿಸಿದೆ. ಉಭಯ ರಾಜ್ಯಗಳ ನಡುವಿನ ನದಿವಿವಾದ ಕ್ಷಿಪ್ರವಾಗಿ ಇತ್ಯರ್ಥಗೊಂಡು ಪರಸ್ಪರ ಸಂಬಂಧಕ್ಕೆ ಸೌಹಾರ್ದಯುತ ಆಯಾಮ ದಕ್ಕುವಂತಾಗಬೇಕು ಎಂಬ ಆಶಯವಿಟ್ಟುಕೊಂಡವರಿಗೆ ಇಂಥ ಬೆಳವಣಿಗೆಗಳು ನೋವುಂಟುಮಾಡುತ್ತವೆ ಎನ್ನಲಡ್ಡಿಯಿಲ್ಲ. ಕರ್ನಾಟಕಕ್ಕೂ ನದಿವಿವಾದಗಳಿಗೂ ಅದೇನೋ ಅವಿನಾಭಾವ ಸಂಬಂಧ. ಕಾವೇರಿ ನದಿನೀರು ಹಂಚಿಕೆ ಕುರಿತಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ, ಕೃಷ್ಣಾ ನದಿನೀರು ಹಂಚಿಕೆ ಕುರಿತಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಕಾಲಾನುಕಾಲಕ್ಕೆ ವಿವಾದಗಳು, ಘರ್ಷಣೆಗಳು ಮುನ್ನೆಲೆಗೆ ಬಂದಿವೆ. ಇಂಥ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ವಸ್ತುಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲಾಗದ್ದರ ಕಾರಣಕ್ಕೋ ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿಯೂ ಸದರಿ ವಿವಾದಗಳಿಗೆ ನಿರ್ಣಾಯಕ ಅಂತ್ಯ ಸಿಗದೆ, ‘ಬೂದಿ ಮುಚ್ಚಿದ ಕೆಂಡ’ದಂತೆ ಉಳಿದಿದ್ದು ಯಾವಾಗಲೋ ಒಮ್ಮೆ ಭುಗಿಲೇಳುವಂಥ ಸ್ಥಿತಿ ನಿರ್ವಣವಾಗಿದೆ. ಈ ಯಾದಿಗೆ ಮತ್ತೊಂದು ಸೇರ್ಪಡೆ ಕರ್ನಾಟಕ-ಗೋವಾ ನಡುವಿನ ಹಗ್ಗಜಗ್ಗಾಟ. 2,031 ಚ.ಕಿ.ಮೀ.ನಷ್ಟು ಜಲಾನಯನ ಪ್ರದೇಶವನ್ನು ಮಹದಾಯಿ ಹೊಂದಿದ್ದು, ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ.ನಷ್ಟಿದೆ. ನದಿಯಲ್ಲಿ ಲಭ್ಯವಿರುವ ಒಟ್ಟು 210 ಟಿಎಂಸಿ ನೀರಿನ ಪ್ರಮಾಣದಲ್ಲಿ ಕರ್ನಾಟಕದ ಪಾಲು 45 ಟಿಎಂಸಿ. ಈ ನದಿಯನ್ನು ಕೇಂದ್ರವಾಗಿಟ್ಟುಕೊಂಡು ಜಲವಿದ್ಯುತ್ ಅಥವಾ ಇನ್ನಾವುದೇ ಯೋಜನೆಯನ್ನು ರೂಪಿಸದ ಗೋವಾ ಸರ್ಕಾರ, ಕರ್ನಾಟಕ ತನಗೆ ನ್ಯಾಯಯುತವಾಗಿ ದಕ್ಕಬೇಕಿರುವ ಪಾಲಿನ ಮೇಲೆ ಹಕ್ಕು ಸಾಧಿಸುವುದಕ್ಕೆ ಅಥವಾ ಯೋಜನೆ ರೂಪಿಸುವುದಕ್ಕೆ ಹೊರಟರೆ ಅಡ್ಡಗಾಲು ಹಾಕುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆತರುವ ವರ್ತನೆಯಲ್ಲದೆ ಇನ್ನೇನು?

ಇಲ್ಲಿ ಒಂದು ವಿಷಯವನ್ನಂತೂ ಸಂಬಂಧಪಟ್ಟವರು ನೆನಪಿನಲ್ಲಿಟ್ಟುಕೊಳ್ಳಬೇಕು. ನದಿನೀರಿನಂಥ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಯಾವೊಂದು ರಾಜ್ಯವೂ ತನ್ನದೇ ಹಕ್ಕನ್ನು ಚಲಾಯಿಸಲಾಗದು. ಅದು ನಿಸರ್ಗನಿಯಮಕ್ಕೆ ವಿರುದ್ಧವಾದುದು ಮಾತ್ರವಲ್ಲದೆ, ಭಾಷೆ-ಬಣ್ಣ-ಆಚರಣೆಯ ವಿಷಯದಲ್ಲಿ ವೈವಿಧ್ಯವೇ ತುಂಬಿರುವ ಭಾರತದಂಥ ರಾಷ್ಟ್ರದ ಸಾಮಾಜಿಕ, ಭಾಷಿಕ ಸಾಮರಸ್ಯಕ್ಕೆ ಸಂಚಕಾರ ಒಡ್ಡುವ ಬಾಬತ್ತೂ ಹೌದು. ಆದ್ದರಿಂದ ಪರಸ್ಪರ ಸಹಕಾರ-ಸೌಹಾರ್ದ ಭಾವನೆಯೊಂದಿಗೆ ಇಂಥ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ. ಜತೆಗೆ, ಒಂದಕ್ಕಿಂತ ಹೆಚ್ಚು ರಾಜ್ಯಗಳ ನಡುವಿನ ನದಿನೀರು ಹಂಚಿಕೆಗೆ ಮತ್ತು ಜಲವಿವಾದಗಳ ಇತ್ಯರ್ಥಕ್ಕೆ ವೈಜ್ಞಾನಿಕ ದೃಷ್ಟಿಕೋನದ ಮಾನದಂಡಗಳು, ನೀತಿ-ನಿಯಮಗಳು ಮತ್ತು ಕಾಯ್ದೆ-ಕಟ್ಟಳೆಗಳು ರೂಪುಗೊಳ್ಳದ್ದರ ಪರಿಣಾಮವಾಗಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಟ್ಟಿದೆ. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಹೊಮ್ಮುವ ತನಕ ಇದು ನಿರಂತರವಾಗಿರುತ್ತದೆ ಎಂಬುದೇ ಕಹಿವಾಸ್ತವ.

Leave a Reply

Your email address will not be published. Required fields are marked *