ಉಗ್ರ ನಿಗ್ರಹದ ಅನಿವಾರ್ಯತೆ

ಒಂದಿಡೀ ವಿಶ್ವವನ್ನು ಆತಂಕದ ಕೂಪಕ್ಕೆ ತಳ್ಳಿರುವ ವಿದ್ಯಮಾನಗಳ ಪೈಕಿ ಉಗ್ರವಾದಿ ಚಟುವಟಿಕೆಗಳಿಗೆ ಅಗ್ರಸ್ಥಾನವಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಉಗ್ರರ ಕರಾಳಛಾಯೆ ಕರ್ನಾಟಕದ ಮೇಲೆ ದಟ್ಟವಾಗೇನೂ ಇಲ್ಲ ಎಂಬುದು ಒಂದು ಕಾಲದ ಗ್ರಹಿಕೆಯಾಗಿತ್ತು. ಆದರೆ ರಾಮನಗರದಲ್ಲಿ ಇತ್ತೀಚೆಗೆ ಮುನೀರ್ ಶೇಖ್ ಎಂಬ ಉಗ್ರ ಎನ್​ಐಎ ಬಲೆಗೆ ಬಿದ್ದಾಗಿನಿಂದ ಈ ಗ್ರಹಿಕೆಯ ನೆಲಗಟ್ಟು ಕುಸಿಯತೊಡಗಿದೆ. ಬಾಂಗ್ಲಾದೇಶದ ಜೆಎಂಬಿ ಉಗ್ರ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು, ಮೂರು ಕಡೆ ಬಾಂಬ್ ಸ್ಪೋಟಿಸಿ ಸೆರೆಸಿಕ್ಕಿ ಜೈಲುಪಾಲಾದ ನಂತರ ಅಲ್ಲಿಂದಲೂ ತಪ್ಪಿಸಿಕೊಂಡು ಭಾರತದೊಳಗೆ ನುಸುಳಿದ್ದ ಈತ, ತರುವಾಯದಲ್ಲಿ ಬೋಧಗಯಾ ಬುದ್ಧಮಂದಿರ ಆವರಣದಲ್ಲಿ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ಇಂಥ ಘೋರ ಇತಿಹಾಸದ ಮುನೀರ್ ಶೇಖ್ ರಾಜ್ಯದಲ್ಲೂ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚುಹೂಡಿದ್ದ ಎಂಬ ಅನುಮಾನ ಗಟ್ಟಿಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳು, ಆಯಕಟ್ಟಿನ ತಾಣಗಳು ಸೇರಿದಂತೆ, ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಈ ಗ್ರಹಿಕೆಗೆ ಕಾರಣವಾಗಿರುವುದು, ಮುನೀರ್ ಬಂಧನದ ಬೆನ್ನಲ್ಲೇ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಮತ್ತೊಬ್ಬ ಉಗ್ರ ಸೆರೆಸಿಕ್ಕಿರುವ ಘಟನೆ. ಆದ್ದರಿಂದ, ಉಗ್ರರ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರ ಹೆಡೆಮುರಿ ಕಟ್ಟಲೆಂದು ಭದ್ರತಾ ವ್ಯವಸ್ಥೆಗೆ ಮತ್ತಷ್ಟು ಬಲತುಂಬಬೇಕಾದ ಅನಿವಾರ್ಯತೆಯೀಗ ಎದುರಾಗಿದೆ. ಭಯೋತ್ಪಾದಕ ಕೃತ್ಯಗಳ ಮುನ್ಸೂಚನೆ ಸಿಕ್ಕಾಗಷ್ಟೇ ಭದ್ರತೆಯನ್ನು ಬಿಗಿಗೊಳಿಸಿ, ಮಿಕ್ಕ ವೇಳೆ ಸಡಿಲ ಬಿಡುವುದು ನಮ್ಮಲ್ಲಿ ವಾಡಿಕೆ. ಮೆಟ್ರೋ ರೈಲು/ನಿಲ್ದಾಣಗಳು, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಂಥ ಸಾರ್ವಜನಿಕರ ದಟ್ಟಣೆ ಹೆಚ್ಚಿರುವ ತಾಣಗಳಲ್ಲಿ ಮೆಟಲ್ ಡಿಟೆಕ್ಟರ್, ಸಿಸಿಟಿವಿ ಕ್ಯಾಮರಾನಂಥ ಭದ್ರತಾ ವ್ಯವಸ್ಥೆಗಳು ಕಳಪೆಯಾಗಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕೆಲ ದಿನಗಳ ಹಿಂದೆ, ಲೋಕಾಯುಕ್ತರ ಕಚೇರಿ ಪ್ರವೇಶಿಸಿದ ವ್ಯಕ್ತಿಯೊಬ್ಬ ಅವರ ಮೇಲೆ ಚಾಕುವಿನಿಂದ ಹಲ್ಲೆಮಾಡುವಷ್ಟರ ಮಟ್ಟಿಗಿನ ಧಾಷ್ಟರ್್ಯ ತೋರಿದ್ದು ಇದಕ್ಕೆ ಸಾಕ್ಷಿ. ಇದು ನಮ್ಮಲ್ಲಿನ ಭದ್ರತಾ/ಮುಂಜಾಗ್ರತಾ ವ್ಯವಸ್ಥೆಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೂ ಹೌದು. ಇನ್ನು ಭದ್ರತೆಗೆಂದು ನಿಯೋಜನೆಗೊಂಡಿರುವವರ ಬಳಿ ಸಮರ್ಪಕ ಶಸ್ತ್ರಾಸ್ತ್ರಗಳೇ ಇರುವುದಿಲ್ಲ. ಇಂಥ ನ್ಯೂನತೆಗಳು ಉಗ್ರರಿಗೆ, ವಿಧ್ವಂಸಕಾರಿ ಕೃತ್ಯಗಳನ್ನೆಸಗುವವರಿಗೆ ಕೆಂಪುಹಾಸಿನ ಸ್ವಾಗತ ನೀಡುವುದು ಖರೆ.

ಹಾಗಂತ, ಸುರಕ್ಷತೆ ಎಂಬುದು ಸರ್ಕಾರದ ಹೆಗಲಮೇಲಿನ ಹೊಣೆಯಷ್ಟೇ ಎಂದು ಸುಮ್ಮನೆ ಕೂರುವಂತಿಲ್ಲ; ಸಾರ್ವಜನಿಕರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಸ್ವಾತಂತ್ರ್ಯ ದಿನ ಸನ್ನಿಹಿತವಾಗಿರುವುದರಿಂದ, ಕುತ್ಸಿತ ಚಿಂತನೆಯ ಈಡೇರಿಕೆಗೆ ಉಗ್ರರು ಇಂಥ ಸಂದರ್ಭಗಳನ್ನೇ ಆಯ್ದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅನ್ಯರಾಜ್ಯಗಳಿಂದ ಬಂದವರಿಗೆ, ತೀರಾ ಅಪರಿಚಿತರಿಗೆ ಮನೆಯನ್ನು ಬಾಡಿಗೆಗೆ ನೀಡುವಾಗ ಆಧಾರ್​ನಂಥ ಗುರುತಿನ ಚೀಟಿಗಳನ್ನು (ಅದು ಖೋಟಾ ಅಲ್ಲ ಎಂಬುದನ್ನೂ ಖಾತ್ರಿಪಡಿಸಿಕೊಂಡು) ಕೂಲಂಕಷ ಅವಲೋಕಿಸಬೇಕಿದೆ. ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರ ಮುನೀರ್, ಬಟ್ಟೆ ವ್ಯಾಪಾರಿಯ ಸೋಗುಹಾಕಿದ್ದ ಸಂಗತಿ ಬಯಲಾಗಿದ್ದು, ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಲು ಉಗ್ರರು ಇಂಥ ಅನೇಕ ರೂಪಗಳಲ್ಲಿ ಬರುವ ಸಾಧ್ಯತೆಯಿದೆ. ಆದ್ದರಿಂದ, ಇಂಥವರ ಪೂರ್ವಾಪರ ಕಲೆಹಾಕುವ, ಮಾತು-ವರ್ತನೆ ಶಂಕಾಸ್ಪದವೆಂದು ಕಂಡುಬಂದಲ್ಲಿ ಪೊಲೀಸರಿಗೆ ಕ್ಷಿಪ್ರವಾಗಿ ತಿಳಿಸುವ ಕ್ರಮಕ್ಕೂ ಜನರು ಮುಂದಾಗಬೇಕಿದೆ.