ಶ್ಲಾಘನೀಯ ನಿರ್ಧಾರ

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳ ಪಠ್ಯದ ಹೊರೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲು, ಇದರ ಅಂಗವಾಗಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರನ್ವಯ ಪಾಠ ಕಲಿಕೆಯ ತರಗತಿಗಳಂತೆಯೇ ಆಟದ ಅವಧಿಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವರು ಹೇಳಿದ್ದಾರೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಸಮಯೋಚಿತ ಮತ್ತು ಶ್ಲಾಘನೀಯ ನಿರ್ಧಾರ ಎಂಬುದರಲ್ಲಿ ಎರಡು ಮಾತಿಲ್ಲ.

‘ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹುಟ್ಟುಹಾಕುವುದೇ ನಿಜಾರ್ಥದ ಶಿಕ್ಷಣ’ ಎಂದಿದ್ದಾನೆ ಖ್ಯಾತ ಚಿಂತಕ ಮತ್ತು ಶಿಕ್ಷಣವೇತ್ತ ಅರಿಸ್ಟಾಟಲ್. ‘ಶರೀರ ಮಾದ್ಯಂ ಖಲು ಧರ್ಮ ಸಾಧನಂ’ ಎನ್ನುತ್ತದೆ ಒಂದು ಆರ್ಯೋಕ್ತಿ. ಮನುಷ್ಯನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿಯ ಅಡಿಪಾಯವೇ ಆಗಿರುವಂಥದ್ದು ಆರೊಗ್ಯ. ಇದು ಕೈಗೂಡಬೇಕೆಂದರೆ ಶಾಲಾ ಹಂತದಿಂದಲೇ ಮಕ್ಕಳ ಮಸ್ತಕಜ್ಞಾನದ ಜತೆಜತೆಗೆ ದೇಹವೂ ಸದೃಢಗೊಳ್ಳಬೇಕು, ಆಟೋಟ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಳ್ಳುವಂತಾಗಬೇಕು. ಅದಿಲ್ಲದೆ ತರಗತಿಯೊಳಗಿನ ಕಲಿಕೆಗಷ್ಟೇ ಸೀಮಿತಗೊಂಡರೆ, ಶಾರೀರಿಕ ಕ್ಷಮತೆ ಮತ್ತು ಆರೋಗ್ಯವನ್ನು, ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವಂಥ ಕ್ರೀಡಾಮನೋಭಾವವನ್ನು ರೂಢಿಸಿಕೊಳ್ಳಲಾಗದೆ, ವ್ಯಾವಹಾರಿಕ ಪ್ರಪಂಚದಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳಿಗೆ ದಿಟ್ಟತನದಿಂದ ಎದೆಯೊಡ್ಡುವ ಜಾಣ್ಮೆಯ ಕೊರತೆಯೂ ಅವರನ್ನು ಕಾಡಬಹುದು. ಹತ್ತತ್ತಿರ ತಮ್ಮ ದೇಹತೂಕಕ್ಕೆ ಸರಿದೂಗುವಷ್ಟು ಪುಸ್ತಕಗಳ ಹೊರೆಹೊತ್ತು ಸಾಗಬೇಕಾದ ಅನಿವಾರ್ಯತೆ ಇಂದಿನ ಮಕ್ಕಳದ್ದು. ಕ್ರೀಡಾಚಟುವಟಿಕೆಗಳನ್ನು ಕಡ್ಡಾಯಗೊಳಿಸುವುದರಿಂದಾಗಿ ಅಂಥ ಒಂದಷ್ಟು ಪುಸ್ತಕಗಳ ಹೊರೆ ತಗ್ಗಿದಲ್ಲಿ ಅದು ಉತ್ತಮ ಬೆಳವಣಿಗೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಆಟದ ಅವಧಿಯನ್ನು ಕಡ್ಡಾಯಗೊಳಿಸುವ ಉಪಕ್ರಮ ಶ್ಲಾಘನೀಯ. ಇದಕ್ಕೆ ಪೂರಕವೆಂಬಂತೆ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿದೆ. ಆದರೆ, ಇದರ ಅನುಷ್ಠಾನ ಪರಿಣಾಮಕಾರಿಯಾಗಿಲ್ಲ, ಖಾಸಗಿ ಶಾಲೆಗಳು ಯೋಗ ಕಲಿಸಲು ಆಸಕ್ತಿ ತೋರುತ್ತಿಲ್ಲ. ಹಾಗಾಗಿ, ಯೋಗ ಶಿಕ್ಷಣವೂ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

ಇನ್ನು ಆಟದ ಅವಧಿ ಕಡ್ಡಾಯಕ್ಕೆ ಸೂಕ್ತವಾದ ವಾತಾವರಣ ನಮ್ಮ ಶಾಲಾ ವ್ಯವಸ್ಥೆಗಳಲ್ಲಿದೆಯೇ ಎಂಬುದು ಯೋಚಿಸಬೇಕಾದ ಸಂಗತಿ. ಮೂಲಭೂತ ಸೌಕರ್ಯಗಳು ಅದರಲ್ಲೂ ನಿರ್ದಿಷ್ಟವಾಗಿ ಆಟದ ಮೈದಾನ ಮತ್ತು ಕ್ರೀಡಾಸಲಕರಣೆಗಳ ಕೊರತೆ ನಮ್ಮ ಬಹುತೇಕ ಶಾಲೆಗಳಲ್ಲಿ ಕಣ್ಣಿಗೆ ರಾಚುವ ಕಹಿವಾಸ್ತವ. ಮುಂಜಾನೆ ಪ್ರತಿನಿತ್ಯದ ಪ್ರಾರ್ಥನೆಗೆಂದು ವಿದ್ಯಾರ್ಥಿಗಳೆಲ್ಲರೂ ಒಂದೇಕಡೆ ಜಮೆಯಾಗಲು ಸಾಧ್ಯವಾಗದೆ, ಆಯಾ ತರಗತಿಗಳಲ್ಲೇ ಅವರಿಂದ ಪ್ರಾರ್ಥನೆ/ರಾಷ್ಟ್ರಗೀತೆ ಹಾಡಿಸಬೇಕಾದ ಅನಿವಾರ್ಯತೆ ಇಂಥ ಕಡೆ ಇರುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೀಗಿರುವಾಗ, ಕ್ರೀಡಾಸಚಿವರ ಸಂಕಲ್ಪ ಅದೆಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬ ಅನುಮಾನವಂತೂ ಇದ್ದೇ ಇದೆ. ಆದರೆ ಈ ನಿಟ್ಟಿನಲ್ಲಿ ಎದುರಾಗುವ ಯಾವುದೇ ತೆರನಾದ ತೊಡಕುಗಳನ್ನು ನಿವಾರಿಸಿಕೊಂಡು ಶತಾಯಗತಾಯ ಗುರಿಸಾಧನೆ ಮಾಡಬೇಕಾದ ಅಗತ್ಯವಿದೆ. ಕಾರಣ, ದೇಶದ ಜನಸಂಖ್ಯೆ 135 ಕೋಟಿ ದಾಟಿದ್ದರೂ, ಅದಕ್ಕೆ ತಕ್ಕ ಅನುಪಾತದಲ್ಲಿ ಕ್ರೀಡಾಪಟುಗಳನ್ನು ಹುಟ್ಟುಹಾಕಲಾಗದ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಪದಕಪಟ್ಟಿಯಲ್ಲಿ ಗಮನಾರ್ಹ ಸ್ಥಾನ ದಕ್ಕಿಸಿಕೊಳ್ಳಲಾಗದ ಹತಾಶ ಸ್ಥಿತಿಯನ್ನು ಭಾರತ ಎದುರಿಸುತ್ತಲೇ ಬಂದಿದೆ. ಶಾಲಾ ಮಕ್ಕಳು ಆರಂಭಿಕ ಹಂತದಿಂದಲೇ ಆಟೋಟಗಳಲ್ಲಿ ತೊಡಗಿಸಿಕೊಳ್ಳಲಾಗದಿರುವುದು ಇದಕ್ಕಿರುವ ಮುಖ್ಯ ಕಾರಣಗಳಲ್ಲೊಂದು. ಪಠ್ಯದ ಹೊರೆ ತಗ್ಗಿಸಿ, ಆಟೋಟ ಅವಧಿಯನ್ನು ಕಡ್ಡಾಯಗೊಳಿಸುವ ಕ್ರೀಡಾಸಚಿವರ ನಿರ್ಧಾರ, ಈ ಕೊರತೆಯನ್ನು ನೀಗುವಲ್ಲಿನ ಸಮರ್ಥ ಹೆಜ್ಜೆಯಾಗಿ ಪರಿಣಮಿಸಲಿ.

Leave a Reply

Your email address will not be published. Required fields are marked *