ಅಪರಾಧಿಗಳಿಗೆ ಕಾನೂನು ಕುಣಿಕೆ

ಬಹುನಿರೀಕ್ಷಿತ ಆರ್ಥಿಕ ಅಪರಾಧ ತಡೆ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು, ಇನ್ಮುಂದೆ ಹಣಕಾಸು ಅವ್ಯವಹಾರ ಎಸಗಿ ವಿದೇಶದಲ್ಲಿ ಹೋಗಿ ನೆಲೆಸುವ ಪ್ರಯತ್ನಗಳಿಗೆ ಕಡಿವಾಣ ಬೀಳಲಿದೆ. ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಅಪರಾಧ ಎಸಗಿ ಕಾನೂನು ಕ್ರಮಗಳಿಂದ ಪಾರಾಗಲು ವಿದೇಶದಲ್ಲಿ ತಲೆ ಮರೆಸಿಕೊಳ್ಳುವುದು ಆರೋಪಿ/ಅಪರಾಧಿಗಳ ಪಾಲಿಗೆ ಈವರೆಗೆ ಸುಲಭದ ತಂತ್ರವಾಗಿತ್ತು. 9 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಸಾಲ ಮರುಪಾವತಿಸದೆ ಲಂಡನ್​ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ)ಗೆ 14,000 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಈಗ ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಪಟ್ಟಿಗೆ ಸೇರಿಸಲಾಗಿದೆ ಎಂಬುದು ಗಮನಾರ್ಹ.

ಸಾವಿರಾರು ಕೋಟಿ ರೂ. ವಂಚನೆಯ ಪ್ರಕರಣಗಳಲ್ಲಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಗ್ರಹಿಕೆ ಶ್ರೀಸಾಮಾನ್ಯರಲ್ಲಿ ನೆಲೆಸಿತ್ತು. ಪುಡಿಗಾಸಿನ ಸಾಲ ವಸೂಲಿಗೆ ಜನಸಾಮಾನ್ಯರ ಮನೆಬಾಗಿಲಿಗೇ ಬರುವ ಬ್ಯಾಂಕ್ ಅಧಿಕಾರಿಗಳು ಸಾವಿರಾರು ಕೋಟಿ ರೂ. ಬಾಕಿ ಇರಿಸಿಕೊಂಡಿರುವವರ ವಿರುದ್ಧ ಏನೂ ಮಾಡದೆ ಕೈಚೆಲ್ಲುತ್ತಾರೆ ಎನ್ನುವ ಆಕ್ಷೇಪವೂ ವ್ಯಕ್ತವಾಗಿತ್ತು. ಒಂದು ಮಟ್ಟಿಗೆ ಇದು ನಿಜವೂ ಹೌದು. ಬ್ಯಾಂಕುಗಳಿಗೆ ಹೀಗೆ ಕೋಟಿಗಟ್ಟಲೆ ಮೊತ್ತದ ವಂಚನೆಯಾದಾಗ, ಅವುಗಳ ಅನುತ್ಪಾದಕ ಸ್ವತ್ತಿನ ಪ್ರಮಾಣ ಬೃಹತ್ತಾಗಿ ಬೆಳೆದು, ಸಾಲನೀಡಿಕೆಯ ಸಾಮರ್ಥ್ಯ ಮತ್ತು ಆರ್ಥಿಕ ನೆಲೆಗಟ್ಟು ಕುಸಿಯುವುದರ ಜತೆಗೆ, ಅದರ ವ್ಯತಿರಿಕ್ತ ಪರಿಣಾಮ ಶ್ರೀಸಾಮಾನ್ಯರ ಮತ್ತು ಇನ್ನಿತರ ಸಣ್ಣಪುಟ್ಟ ವ್ಯಾಪಾರೋದ್ಯಮಗಳ ಮೇಲಾಗುತ್ತದೆ ಎಂಬುದು ಕಹಿವಾಸ್ತವ.

ಆದ್ದರಿಂದ, ಇಂಥ ಸಂಭಾವ್ಯ ವಂಚನೆಗಳಿಗೆ ಕಡಿವಾಣ ಹಾಕುವ, ‘ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು’ ಎಂಬ ಗ್ರಹಿಕೆಗೆ ಮತ್ತಷ್ಟು ಕಸುವು ತುಂಬುವ ನಿಟ್ಟಿನಲ್ಲಿ ಆರ್ಥಿಕ ಅಪರಾಧ ತಡೆ ಕಾಯ್ದೆ ಪೂರಕವಾಗಿದೆ ಎನ್ನಲಡ್ಡಿಯಿಲ್ಲ. ಆರೋಪಿಯನ್ನು ‘ತಲೆಮರೆಸಿಕೊಂಡ ಆರ್ಥಿಕ ಅಪರಾಧಿ’ ಎಂದು ಘೋಷಿಸಲು ವಿಶೇಷ ನ್ಯಾಯಾಲಯ ಸ್ಥಾಪನೆ, ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಆಸ್ತಿಗಳ ಮುಟ್ಟುಗೋಲು, ಆಸ್ತಿಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ, ಅಪರಾಧಿಯಿಂದ ಪೌರತ್ವ ಹಕ್ಕುಗಳನ್ನು ಕಿತ್ತುಕೊಳ್ಳುವುದು ಸೇರಿದಂತೆ ಹಲವು ಅಂಶಗಳು ಈ ಕಾಯ್ದೆಯ ವಿಶೇಷತೆಗಳು.

100 ಕೋಟಿ ರೂಪಾಯಿ ಅಥವಾ ಅಧಿಕ ಮೊತ್ತದ ವ್ಯವಹಾರದಲ್ಲಿ ಆರೋಪಿ/ಅಪರಾಧಿಯಾಗಿದ್ದು, ಬಂಧನ ವಾರೆಂಟ್ ಜಾರಿಯಾಗಿದ್ದರೂ ವಿದೇಶದಲ್ಲಿ ನೆಲೆಸಿದ್ದರೆ ಅಂಥವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಬಹುದಾಗಿದೆ. ಆರ್ಥಿಕ ವಂಚನೆ ಅದರಲ್ಲೂ ಬ್ಯಾಂಕಿಂಗ್ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ಭವಿಷ್ಯದಲ್ಲಿ ಇಂಥ ಪ್ರಕರಣಗಳು ಸಂಭವಿಸದಂತೆ ತಡೆಯಲು ಈ ಕಾಯ್ದೆ ಪರಿಣಾಮಕಾರಿಯಾಗಿದೆ. ಈ ವರ್ಷದ ಜುಲೈನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ವಿಧೇಯಕ ಅನುಮೋದನೆ ಪಡೆದಿತ್ತು. ಈಗ ಇದು ಕಾಯ್ದೆಯಾಗಿ ಸಮರ್ಪಕ ಅನುಷ್ಠಾನವಾಗಬೇಕಿದ್ದು, ಆರ್ಥಿಕ ಅಪರಾಧಿಗಳನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಲಿ. ಇನ್ಮುಂದೆ ಇಂಥ ಅಪರಾಧದಲ್ಲಿ ತೊಡಗುವವರಿಗೂ ಪಾಠವಾಗಲಿ.

Leave a Reply

Your email address will not be published. Required fields are marked *