ಬರೀ ದೂರುದುಮ್ಮಾನ ಏಕೆ?

ಚುನಾವಣಾ ಅಕ್ರಮಗಳನ್ನು ತಡೆಯಲೆಂದೇ ಬಂದ ಹೊಸ ವ್ಯವಸ್ಥೆ ವಿದ್ಯುನ್ಮಾನ ಮತಯಂತ್ರ (ಇವಿಎಂ). ಕಳೆದ ಲೋಕಸಭಾ ಚುನಾವಣೆಯೂ ಸೇರಿದಂತೆ ಹತ್ತುಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಈ ಯಂತ್ರದಿಂದ ನಡೆದಿವೆ. ಈ ಬಾರಿ ಹಲವು ರಾಜ್ಯಗಳಲ್ಲಿ ವಿವಿಪ್ಯಾಟ್ ಅನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿದ್ದು, ನಾವು ಹಾಕಿದ ಮತದ ದೃಢೀಕರಣ ಇದು ನೀಡುತ್ತದೆ ಎಂಬುದು ಗಮನಾರ್ಹ. ಆದರೆ, ಕಳೆದ ಕೆಲ ಸಮಯದಿಂದ ಇವಿಎಂ ಕೂಡ ‘ರಾಜಕೀಯ ವಿಷಯ’ವಾಗಿ ಮಾರ್ಪಟ್ಟಿರುವುದರಿಂದ ಹಲವು ಜಿಜ್ಞಾಸೆಗಳು ಮೂಡಿವೆ. ‘ಚುನಾವಣೆಯಲ್ಲಿ ಸೋಲಿಗೆ ಇವಿಎಂ ಕಾರಣ’ ಎಂದು ಆರೋಪಿಸಿದ್ದ ಹಲವು ಪಕ್ಷಗಳು ಈಗ 17 ಪಕ್ಷಗಳ ನಿಯೋಗವಾಗಿ ಚುನಾವಣಾ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿದ್ದು, 2019ರ ಲೋಕಸಭಾ ಚುನಾವಣೆಯನ್ನು ಇವಿಎಂ ಮೂಲಕ ನಡೆಸದೆ ಹಳೇ ಪದ್ಧತಿಯಾದ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಆಗ್ರಹಿಸಲಿವೆ.

ಇವಿಎಂ ಬಗ್ಗೆ ಅಪಸ್ವರ ಮೂಡಿರುವುದು ಇದೇ ಮೊದಲೇನಲ್ಲ. ಆದರೆ, ವಿಪರ್ಯಾಸವೆಂದರೆ ರಾಜಕೀಯ ಪಕ್ಷಗಳು ತಾವು ಗೆದ್ದಾಗ ಸುಮ್ಮನಿದ್ದು ಸೋತಾಗ ಅದರ ಹೊಣೆಯನ್ನು ಇವಿಎಂ ತಲೆಗೆ ಕಟ್ಟುತ್ತಿವೆ. ದೆಹಲಿ ಮುಖ್ಯಮಂತ್ರಿ, ಆಮ್​ದಿ್ಮ ಪಕ್ಷದ ಅರವಿಂದ್ ಕೇಜ್ರಿವಾಲ್​ರಂತೂ ಇವಿಎಂಗಳನ್ನು ಹ್ಯಾಕ್ ಮಾಡಲು ಮತ್ತು ಫಲಿತಾಂಶ ತಿರುಚಲು ಸಾಧ್ಯವಿದೆ ಎಂದು ಪತ್ರಿಕಾಗೋಷ್ಠಿಯಲ್ಲೇ ಅಬ್ಬರಿಸಿದ್ದರು. ಹಲವು ಪಕ್ಷಗಳ ನಾಯಕರು ಇದಕ್ಕೆ ದನಿಗೂಡಿಸಿದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಬಂದಿದ್ದ ಚುನಾವಣಾ ಆಯೋಗ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ‘ಇವಿಎಂ ಹ್ಯಾಕ್​ಥಾನ್’ ಸವಾಲನ್ನೇ ಇರಿಸಿತು. ಅಂದರೆ, ಯಾವುದೇ ತಂತ್ರಜ್ಞರು ಅಥವಾ ರಾಜಕೀಯ ಪಕ್ಷದವರು ಇವಿಎಂ ಹ್ಯಾಕ್ ಮಾಡಿ ಅಥವಾ ತಿರುಚಿ ತೋರಿಸಲಿ ಎಂಬುದು ಇದರ ಸಾರವಾಗಿತ್ತು. ಇದಕ್ಕಾಗಿ ಸಮಯಾವಕಾಶ ನೀಡಿ ದಿನಾಂಕವನ್ನೂ ನಿಗದಿಪಡಿಸಿತ್ತು. ಆದರೆ, ಅದನ್ನು ಹ್ಯಾಕ್ ಮಾಡಲು ಯಾರೂ ಮುಂದೆ ಬರಲಿಲ್ಲ ಎಂಬುದು ಗಮನಾರ್ಹ. ಆದ್ದರಿಂದ, ಹಲವು ಪಕ್ಷಗಳ ಆರೋಪದಲ್ಲಿ ನಿಜವಾಗಿಯೂ ಹುರುಳಿದೆಯೇ ಎಂಬ ಪ್ರಶ್ನೆ ಉದ್ಭವವಾದದ್ದು ಸುಳ್ಳಲ್ಲ. ಹಾಗೊಂದು ವೇಳೆ, ಆರೋಪಗಳ ಬಗ್ಗೆ ಗಂಭೀರವಾಗಿರುವವರು

ಆ ಬಗ್ಗೆ ಸೂಕ್ತ ಸಾಕ್ಷ್ಯ, ದಾಖಲೆಗಳನ್ನು ಒದಗಿಸಬೇಕಿತ್ತು. ಈವರೆಗೆ, ಇವಿಎಂ ಬಗ್ಗೆ ಅಪಸ್ವರ ಹಾಡಿರುವ ನಾಯಕರಾರೂ ಅದರ ನ್ಯೂನತೆಗಳ ಬಗ್ಗೆಯಾಗಲಿ, ತಾಂತ್ರಿಕ ದೋಷಗಳ ಬಗ್ಗೆಯಾಗಲಿ ಸಾಕ್ಷ್ಯಗಳನ್ನು ಮಂಡಿಸಿಲ್ಲ. ಹೀಗಿರುವಾಗ, ಹಳೇ ಪದ್ಧತಿಗೆ ಮರಳಬೇಕು ಎನ್ನುವ ಬೇಡಿಕೆ ಎಷ್ಟು ಔಚಿತ್ಯಪೂರ್ಣ?

ಇವಿಎಂ ಮೂಲಕ ಅಕ್ರಮಗಳು ನಡೆಯಲು ಸಾಧ್ಯವಿಲ್ಲ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ತಮ್ಮ ಆರೋಪಗಳಿಗೆ ಸೂಕ್ತ ವಿವರಣೆ, ಸಾಕ್ಷ್ಯ ನೀಡದೆ ಕೇವಲ ಅನುಮಾನದ ಆಧಾರದಲ್ಲಿ ಇವಿಎಂಗಳನ್ನು ದೂಷಿಸುತ್ತಿರುವ ಕೆಲ ಪಕ್ಷಗಳ ನಡೆ ವಿಚಿತ್ರ. ಪ್ರಸಕ್ತ, ಆಯೋಗವನ್ನು ಭೇಟಿ ಮಾಡಲು ಹೊರಟಿರುವ 17 ಪಕ್ಷಗಳು ಮಂಡಿಸಲು ಹೊರಟಿರುವ ನಿಲುವಾದರೂ ಏನು? ನಿಜಕ್ಕೂ ಹಳೇ ಪದ್ಧತಿಗೆ ಮರಳಿದರೆ ಎಲ್ಲ ಸುಗಮವಾಗುವುದೆ? ತಾಂತ್ರಿಕ ವ್ಯವಸ್ಥೆಯಲ್ಲಿ ದೋಷಗಳ ನಿವಾರಣೆಗೆ ಅವಕಾಶವಿದೆ. ಇವಿಎಂನಲ್ಲಿ ನ್ಯೂನತೆಗಳಿದ್ದಲ್ಲಿ ಅದನ್ನು ಪತ್ತೆ ಹಚ್ಚಿ, ಸರಿಪಡಿಸುವುದೇ ಹೆಚ್ಚು ಸೂಕ್ತವಾದೀತು.

Leave a Reply

Your email address will not be published. Required fields are marked *