ಮಹತ್ವದ ಬೆಳವಣಿಗೆ

ತೆರಿಗೆ ವಂಚನೆ ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿರುವ ವೈಯಕ್ತಿಕ ಖಾತೆದಾರರ ಬಗ್ಗೆ ಮಾಹಿತಿ ಕೇಳಿದರೆ ನೀಡಬಹುದು, ಈ ನಿಟ್ಟಿನಲ್ಲಿ ಬ್ಯಾಂಕುಗಳು ನಿರಾಕರಿಸುವಂತಿಲ್ಲ ಎಂಬ ಗಮನಾರ್ಹ ತೀರ್ಪನ್ನು ಸ್ವಿಜರ್ಲೆಂಡ್ ಸುಪ್ರೀಂ ಕೋರ್ಟ್ ನೀಡಿದೆ. 2008ರಲ್ಲಿ ಎಚ್​ಎಸ್​ಬಿಸಿ ಬ್ಯಾಂಕ್​ನ ಖಾತೆಗಳ ವಿವರಗಳು ಸೋರಿಕೆಯಾದಾಗ, ಭಾರತದ ಕೆಲ ಉದ್ಯಮಿಗಳ ಕಪು್ಪಹಣದ ಮಾಹಿತಿ ಅನಾವರಣಗೊಂಡಿತ್ತು ಮತ್ತು ಈ ಸಂಬಂಧ ಭಾರತ ಸರ್ಕಾರ ಹೂಡಿದ ಪ್ರಕರಣದಲ್ಲೀಗ ಈ ಆದೇಶ ಹೊರಬಂದಿದ್ದು, ಕಾಳಧನದ ಪಿಡುಗಿಗೆ ಕಡಿವಾಣ ಹಾಕುವಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎನ್ನಲಡ್ಡಿಯಿಲ್ಲ.

ವಿದೇಶಿ ತೆರಿಗೆಧಾಮಗಳಲ್ಲಿ ಜಮೆಯಾಗಿರುವ ಕಾಳಧನವನ್ನು ಭಾರತಕ್ಕೆ ಮರಳಿ ತರುತ್ತೇವೆಂಬ ಎನ್​ಡಿಎ ಸಂಕಲ್ಪ ಮತ್ತು ಅದರ ಸಾಧ್ಯಾಸಾಧ್ಯತೆಗಳನ್ನೇ ಅಸ್ತ್ರಮಾಡಿಕೊಂಡು ರಾಜಕೀಯ ಎದುರಾಳಿಗಳು ಹೆಣೆಯುತ್ತಿರುವ ಬಲೆಗಳ ನೆಲೆಗಟ್ಟಿನಲ್ಲಿ ಈ ಬೆಳವಣಿಗೆಯನ್ನು ವಿಶ್ಲೇಷಿಸುವ ಅಗತ್ಯವಿದೆ. 2014ರ ಲೋಕಸಭಾ ಚುನಾವಣೆ ವೇಳೆ, ‘ಕಾಳಧನ ವಾಪಸಾತಿ’ ಭರವಸೆ ಬಿಜೆಪಿ ನಾಯಕರಿಂದ ಹೊಮ್ಮಿತು. ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದೂ ದಿಟವೇ. ಆದರೆ, 2016ರ ವರ್ಷಕ್ಕೆ ಹೋಲಿಸಿದಾಗ, 2017ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಠೇವಣಿ ಪ್ರಮಾಣದಲ್ಲಿ ಶೇ. 50ರ ಏರಿಕೆಯಾಗಿ, 7 ಸಾವಿರ ಕೋಟಿ ರೂ.ಗೆ ಮುಟ್ಟಿದೆ ಎಂದು ವರದಿಯಾಗುತ್ತಿದ್ದಂತೆ, ‘ಕಪು್ಪಹಣವನ್ನು ಭಾರತಕ್ಕೆ ತಂದು, ಪ್ರತಿಯೊಬ್ಬರ ಖಾತೆಗೂ ಇಂತಿಷ್ಟು ಜಮಾ ಮಾಡುವುದಾಗಿ ಹೇಳಿದ್ದವರು, ಇದುವರೆಗೂ ಎಷ್ಟು ತಂದಿದ್ದಾರೆ?’ ಎಂಬ ಶೈಲಿಯ ರಾಜಕೀಯ ಎದುರಾಳಿಗಳ ಟೀಕೆಗಳು ಮತ್ತಷ್ಟು ತೀಕ್ಷ್ಣವಾದವು. ಕಪು್ಪಹಣ ಠೇವಣಿಯಲ್ಲಿನ ಏರಿಕೆ ಹಾಗೂ ಇಂಥ ಟೀಕೆಗಳನ್ನು ಅವಲೋಕಿಸಿದ ಶ್ರೀಸಾಮಾನ್ಯರಲ್ಲಿ, ‘ಹಾಗಾದರೆ, ಸರ್ಕಾರ ಕಪು್ಪಹಣ ವಾಪಸಾತಿಗೆ ಏನೂ ಕ್ರಮ ಕೈಗೊಳ್ಳುತ್ತಿಲ್ಲವೇ?’ ಎಂಬ ಶಂಕೆ ಮೂಡುವುದು ಸಹಜ. ಕಾಳಧನ ವಾಪಸಾತಿಯ ಕಸರತ್ತಿನ ಅಂಗವಾಗಿ, ಭಾರತ-ಸ್ವಿಜರ್ಲೆಂಡ್ ನಡುವೆ ಮಹತ್ವದ ಒಪ್ಪಂದಗಳು ಈಗಾಗಲೇ ಏರ್ಪಟ್ಟಿರುವುದು, ವಿಶೇಷ ತನಿಖಾ ತಂಡದ ರಚನೆಯೂ ಆಗಿರುವುದು ಗೊತ್ತಿರುವ ಸಂಗತಿಯೇ. ಈ ಉಪಕ್ರಮಗಳ ಅನ್ವಯ, ಸ್ವಿಸ್ ಬ್ಯಾಂಕುಗಳಲ್ಲಿ ಕಪು್ಪಹಣ ಜಮೆಮಾಡುವ ಭಾರತೀಯರ ಸಂಪೂರ್ಣ ವಿವರ, 2019ರ ವಿತ್ತವರ್ಷದ ಅಂತ್ಯಕ್ಕೆ ದೊರೆಯಲಿದೆ.

ಆದರೆ, ಅಷ್ಟರೊಳಗೆ ಮತ್ತು ಸ್ವಿಸ್ ಸುಪ್ರೀಂ ಕೋರ್ಟ್ ಈಗ ನೀಡಿರುವ ಮಹತ್ವದ ಆದೇಶದ ಹಿನ್ನೆಲೆಯಲ್ಲಿ, ಇಂಥ ಬೇರೆ ಬೇರೆ ತೆರಿಗೆಧಾಮಗಳನ್ನು ಹುಡುಕಿಕೊಳ್ಳುವಂಥ ಚಾಣಾಕ್ಷತೆಯನ್ನು ಕಾಳಧನಿಕರು ತೋರುವುದಿಲ್ಲ ಎಂಬುದಕ್ಕೇನು ಖಾತ್ರಿ? ಆದ್ದರಿಂದ, ಸರ್ಕಾರ ಇಂಥ ಸಾಧ್ಯತೆಗಳನ್ನೂ ಗಮನಿಸಿ ಸೂಕ್ತ ತಡೆಗೋಡೆಗಳನ್ನು ನಿರ್ವಿುಸಬೇಕಿದೆ. ಭಾರತೀಯ ನಾಗರಿಕರು ನ್ಯಾಯಸಮ್ಮತವಾಗಿ ಎಷ್ಟು ಬೇಕಾದರೂ ಹಣ ಗಳಿಸುವುದಕ್ಕೆ, ಅದಕ್ಕೆ ಅನ್ವಯವಾಗುವ ತೆರಿಗೆ ಪಾವತಿಸಿ ಆ ಭಂಡಾರದ ಸಂಪೂರ್ಣ ಸ್ವಾಮ್ಯ ಹೊಂದುವುದಕ್ಕೆ ಅನುವುಮಾಡಿಕೊಟ್ಟಿರುವ ದೇಶ ನಮ್ಮದು. ಇಂಥ ‘ನೇರಮಾರ್ಗ’ವಿದ್ದರೂ ‘ವಾಮಮಾರ್ಗ’ದಲ್ಲಿ ಹೆಜ್ಜೆಹಾಕಲು ಬಯಸುವವರಿಗೆ ಕಾನೂನಿನ ಚಾಟಿಯೇಟು ಅನಿವಾರ್ಯವೇ. ಇಲ್ಲಿಯವರೆಗೆ ತನ್ನ ಬ್ಯಾಂಕುಗಳಲ್ಲಿ ಠೇವಣಿಯಿರಿಸುವ ವಿದೇಶಿಗರ ಗೌಪ್ಯತೆ ಕಾಪಾಡುತ್ತಿದ್ದ ಸ್ವಿಸ್ ಸರ್ಕಾರ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಾಹಿತಿ ವಿನಿಮಯಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ‘ಕಪು್ಪಹಣ ವಾಪಸಾತಿ’ಯ ಕನಸಿನ ಸಾಕಾರದ ನಿಟ್ಟಿನಲ್ಲಿ ಭಾರತ ಈ ಬೆಳವಣಿಗೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಿ.

Leave a Reply

Your email address will not be published. Required fields are marked *