ಗೊಂದಲ ನಿವಾರಿಸಿ

ರ್ಕಾರಗಳು ಯೋಜನೆಗಳನ್ನು ಘೋಷಿಸಲು ತೋರುವ ಹುಮ್ಮಸ್ಸು, ಉತ್ಸಾಹದ ಒಂದಿಷ್ಟು ಪಾಲನ್ನಾದರೂ ಅವುಗಳ ಅನುಷ್ಠಾನದಲ್ಲಿ ತೋರಿದರೆ ಶ್ರೀಸಾಮಾನ್ಯರ ಬವಣೆ ಒಂದಿಷ್ಟಾದರೂ ತಗ್ಗುತ್ತದೆ. ಅದಿಲ್ಲವಾದರೆ ಉದ್ದೇಶ ಈಡೇರದೆ ಯೋಜನೆ ಹೆಸರಿಗೆ ಮಾತ್ರ ಸೀಮಿತವಾಗುತ್ತದೆ. ‘ಆರೋಗ್ಯ ಕರ್ನಾಟಕ’ ಯೋಜನೆಯ ಗೊಂದಲಗಳ ಹಿನ್ನೆಲೆಯಲ್ಲಿ ಈ ಮಾತು ಹೇಳಬೇಕಾಗಿ ಬಂದಿದೆ. ಈ ಮೊದಲೇ ಕೆಲ ಆರೋಗ್ಯ ಕಾರ್ಯಕ್ರಮಗಳಿದ್ದು, ಅವನ್ನು ಹೊಸ ಯೋಜನೆಯಲ್ಲಿ ಸೂಕ್ತವಾಗಿ ಮಿಳಿತಗೊಳಿಸಿ ಜಾರಿಗೆ ತರುವ ಜಾಣ್ಮೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿತ್ತು. ಆದರೆ ದುರದೃಷ್ಟವಶಾತ್, ಗೊಂದಲಗಳೇ ಅಧಿಕವಾಗಿ, ಆರೋಗ್ಯ ಕಾರ್ಡ್ ಪಡೆಯಲು ರಾತ್ರಿ ಸರದಿಯಲ್ಲಿ ನಿಲ್ಲುವಂಥ ಸ್ಥಿತಿ ಸೃಷ್ಟಿಯಾಗಿರುವುದು ಶೋಚನೀಯ. ಈವರೆಗೆ ಕೇವಲ 3 ಲಕ್ಷ ಜನರು ಹೆಲ್ತ್ ಕಾರ್ಡ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ರಾಜ್ಯದ 11 ಆಸ್ಪತ್ರೆಗಳಲ್ಲಷ್ಟೇ ವಿತರಣೆಯಾಗಿದೆ.

‘ಆರೋಗ್ಯ ಕರ್ನಾಟಕ ಯೋಜನೆಯ ಲಾಭ ಪಡೆಯುವುದಕ್ಕೆ ಹೆಲ್ತ್​ಕಾರ್ಡ್ ಕಡ್ಡಾಯ ಎಂದೇನೂ ಇಲ್ಲ. ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿದ್ದರೂ ಸಾಕು’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಆದರೆ, ಸರ್ಕಾರದ ಹೇಳಿಕೆಗೂ, ವಾಸ್ತವಕ್ಕೂ ವ್ಯತ್ಯಾಸವಿರುತ್ತದೆ. ಆರೋಗ್ಯ ಕಾರ್ಡ್ ಇಲ್ಲದ್ದರಿಂದ ಚಿಕಿತ್ಸೆ ನಿರಾಕರಿಸಿದ ಹಲವು ನಿದರ್ಶನಗಳು ವರದಿಯಾಗಿವೆ. ಯಶಸ್ವಿನಿ ಯೋಜನೆ ಮೇ 31ಕ್ಕೆ ಅಂತ್ಯಗೊಂಡಿದೆ. ಇತ್ತ ಈ ಸೌಲಭ್ಯವೂ ಇಲ್ಲ, ಅತ್ತ ಹೊಸ ಯೋಜನೆಯ ಪ್ರಯೋಜನವೂ ಸಿಗುತ್ತಿಲ್ಲ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಜನರು ಸಿಲುಕಿದ್ದಾರೆ. ಯಶಸ್ವಿನಿ ಸೇರಿದಂತೆ ಇತರ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲೇ ವಿಲೀನ ಮಾಡಲಾಗುವುದು ಎಂದು ಹೇಳಲಾಯಿತು. ಇಂಥ ಮಹತ್ವದ ಯೋಜನೆಗಳ ವಿಲೀನ, ಜಾರಿಯ ಸಂದರ್ಭದಲ್ಲಿ ಜನರಿಗೆ ಸೂಕ್ತ ಮಾಹಿತಿ ಒದಗಿಸುವುದು ಸರ್ಕಾರದ ಕರ್ತವ್ಯ. ಹೊಸ ಯೋಜನೆ ಕುರಿತಂತೆ ಸಾಕಷ್ಟು ಗೊಂದಲಗಳಿವೆ. ಅಲ್ಲದೆ, ಕೇಂದ್ರ ಸರ್ಕಾರ ಕೂಡ ‘ಮೋದಿಕೇರ್’ ಹೆಸರಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ತರಲು ಹೊರಟಿದೆ. ಹಾಗಾದರೆ, ಕೇಂದ್ರದ ಆ ಯೋಜನೆ ಅನುಷ್ಠಾನವಾದರೆ ‘ಆರೋಗ್ಯ ಕರ್ನಾಟಕ’ದ ಪಾತ್ರವೇನು? ಅಥವಾ ಕೇಂದ್ರದ ಯೋಜನೆಯ ಸೌಲಭ್ಯಗಳನ್ನೂ ಇದರಲ್ಲಿ ಸೇರ್ಪಡೆ ಮಾಡಲಾಗುತ್ತದೆಯೇ? ಆರೋಗ್ಯ ಕಾರ್ಡನ್ನು ಸುಲಭವಾಗಿ ಪಡೆದುಕೊಳ್ಳಲು ಜನರು ಏನು ಮಾಡಬೇಕು? ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಜನರಿಗೆ ನೀಡಲು ರಾಜ್ಯಾದ್ಯಂತ ಮಾಹಿತಿ ಆಂದೋಲನ ನಡೆಸುವುದು ಸೂಕ್ತವಾದೀತು.

ಆರೋಗ್ಯ ವಿಮೆ ಪರಿಕಲ್ಪನೆ ಇನ್ನೂ ಅಷ್ಟಾಗಿ ಚಾಲ್ತಿಗೆ ಬರದ ಭಾರತದಂತಹ ದೇಶದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಭಾರಿ ಮೊತ್ತವನ್ನು ವೆಚ್ಚ ಮಾಡಬೇಕಾದ ಪರಿಸ್ಥಿತಿಯಿದೆ. ಜನಸಾಮಾನ್ಯರ ಈ ಹೊರೆಯನ್ನು ತಗ್ಗಿಸುವುದು ಇಂಥ ಆರೋಗ್ಯ ಯೋಜನೆಗಳ ಆದ್ಯತೆಯಾಗಬೇಕು, ಅವುಗಳ ಸಮರ್ಪಕ ಅನುಷ್ಠಾನ ಆಗಬೇಕು. ‘ಯಶಸ್ವಿನಿ ಸೇರಿ ಇತರೆ ಆರೋಗ್ಯ ಸೇವೆಗಳಿಂದ ಹೊಸ ಯೋಜನೆಗೆ ಬದಲಾವಣೆಗೊಳ್ಳಲು ಕೆಲ ಸಮಯ ಬೇಕಾಗುತ್ತದೆ’ ಎಂದು ಆರೋಗ್ಯ ಸಚಿವರು ಹೇಳಿದ್ದು ಈ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಿ, ಆಸ್ಪತ್ರೆಗಳ ನೋಂದಣಿ ಕಾರ್ಯಕ್ಕೂ ವೇಗ ನೀಡಬೇಕು. ಆದಷ್ಟು ಬೇಗ ‘ಆರೋಗ್ಯ ಕರ್ನಾಟಕ’ ಯೋಜನೆ ಅನಾರೋಗ್ಯಮುಕ್ತವಾಗಿ ಜನರ ಪಾಲಿಗೆ ಸಂಜೀವಿನಿಯಾಗಲಿ.

Leave a Reply

Your email address will not be published. Required fields are marked *