ಗಟ್ಟಿಯಾದ ಮೈತ್ರಿಬಂಧ

ಭಾರತ-ಅಮೆರಿಕ ನಡುವೆ ಮುಂಚೆಯಿಂದ ಮೈತ್ರಿಯಿದ್ದರೂ ಕಳೆದೊಂದು ದಶಕದಿಂದ ಆ ಗೆಳೆತನ ಮತ್ತಷ್ಟು ಆಪ್ತಗೊಂಡಿದೆ. ಹಿಂದೊಮ್ಮೆ ಭಾರತವನ್ನು ಕಡೆಗಣಿಸುತ್ತಿದ್ದ, ನಮ್ಮ ದೇಶ ಅಣು ಪರೀಕ್ಷೆ ನಡೆಸಿದಾಗ ಆರ್ಥಿಕ ದಿಗ್ಭಂಧನ ಹೇರಿದ್ದ ಇದೇ ಅಮೆರಿಕ ಈಗ ಬದಲಾಗಿದೆ. ಭಾರತವು ವಾಣಿಜ್ಯ ಶಕ್ತಿಯಾಗಿ, ಆರ್ಥಿಕ ಮತ್ತು ಸಾಮರಿಕ ಶಕ್ತಿಯಾಗಿ ಬಲಗೊಳ್ಳುತ್ತಿರುವುದು ಇದಕ್ಕೆ ಕಾರಣ. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ‘ಹಮ್ ಸಾಥ್ ಸಾಥ್ ಚಲೇ’(ನಾವು ಒಟ್ಟಿಗೆ ಸಾಗೋಣ) ಎಂದು ಹೇಳುವ ಮೂಲಕ ಸ್ನೇಹಬಾಂಧವ್ಯಕ್ಕೆ ಬಲ ತುಂಬಿದ್ದು ಗೊತ್ತಿರುವಂಥದ್ದೇ. ಅಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೂ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳು ಹೊಸ ಎತ್ತರಕ್ಕೆ ತಲುಪುತ್ತಿವೆ. ಭಾರತಕ್ಕೆ ಈಗ ಅಮೆರಿಕ ನ್ಯಾಟೋ ಸ್ಥಾನಮಾನ ನೀಡಿರುವುದು ಇದಕ್ಕೆ ತಾಜಾ ನಿದರ್ಶನ ಎನ್ನಬಹುದು.

ರಾಜಧಾನಿ ದೆಹಲಿ ಮೇಲೆ ವಾಯುಮಾರ್ಗದ ಮೂಲಕ ನಡೆಯಬಹುದಾದ ಸಂಭವನೀಯ ವೈಮಾನಿಕ, ಕ್ಷಿಪಣಿ, ಡ್ರೋನ್ ದಾಳಿಯನ್ನು ಧ್ವಂಸಗೊಳಿಸುವ ಅಮೆರಿಕ ನಿರ್ವಿುತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಬೆನ್ನಿಗೆ ಭಾರತಕ್ಕೆ ಎಸ್​ಟಿಎ-1 ಸ್ಥಾನಮಾನ ದೊರಕಿರುವುದು ಮಹತ್ವದ ಬೆಳವಣಿಗೆ. ಅಮೆರಿಕ ಎಸ್​ಟಿಎ-1 ಸ್ಥಾನಮಾನವನ್ನು 36 ರಾಷ್ಟ್ರಗಳಿಗೆ ನೀಡಿದೆ. ಈ ಪೈಕಿ ಬಹುತೇಕ ನ್ಯಾಟೋ ಸದಸ್ಯ ದೇಶಗಳಿದ್ದು, ಈ ಒಕ್ಕೂಟಕ್ಕೆ ಹೊರತಾದ ಕೆಲವೇ ರಾಷ್ಟ್ರಗಳೂ ಈ ಯಾದಿಯಲ್ಲಿವೆ ಎಂಬುದು ಗಮನಾರ್ಹ. ನ್ಯಾಟೋ ಸ್ಥಾನಮಾನ ಪ್ರಾಪ್ತವಾಗಿರುವುದರಿಂದ ಭಾರತಕ್ಕೆ ರಫ್ತಾಗುವ ಅತ್ಯಾಧುನಿಕ ರಕ್ಷಣಾ, ರಕ್ಷಣೇತರ ಉತ್ಪನ್ನಗಳಿಗೆ ಹತ್ತು ಹಲವು ಪರವಾನಗಿಯನ್ನು ಪಡೆಯಬೇಕಾದ ಅಗತ್ಯ ಇರುವುದಿಲ್ಲ. ಇದರಿಂದ ವಾಣಿಜ್ಯ ವ್ಯವಹಾರ ಸುಗಮವಾಗಲಿದ್ದು, ಉಭಯ ದೇಶಗಳ ಭದ್ರತಾ ಮತ್ತು ಆರ್ಥಿಕ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಲ್ಲದೆ, ಅಮೆರಿಕದಿಂದ ಭಾರತಕ್ಕೆ ಇನ್ಮುಂದೆ ರಕ್ಷಣಾ ಮತ್ತು ರಕ್ಷಣೇತರ ಸಾಮಗ್ರಿಗಳ ಸರಬರಾಜು ನಿರಂತರವಾಗಿ ನಡೆಯಲು ಸಾಧ್ಯವಾಗಲಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ಐಎಂಎಫ್​ನಿಂದ ಸಾಲ ಮಂಜೂರಾದ ಪಕ್ಷದಲ್ಲಿ ಅದನ್ನು ಚೀನಾದ ಸಾಲ ತೀರಿಸಲು ಬಳಸುವಂತಿಲ್ಲ ಎಂದು ಅಮೆರಿಕ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಾಕೀತು ಮಾಡಿದೆ. ಈ ಹಿಂದೆ ಪಾಕಿಸ್ತಾನ ಐಎಂಎಫ್​ನಿಂದ ದೊರೆತ ನೆರವನ್ನು ಚೀನಾದ ಸಾಲ ತೀರಿಸಲು ಬಳಸಿದ ನಿದರ್ಶನಗಳಿರುವ ಈ ಹಿನ್ನೆಲೆಯಲ್ಲಿ ಈ ಬಾರಿ ಅಮೆರಿಕ ಮುಂಚಿತವಾಗಿಯೇ ಇಂಥ ಎಚ್ಚರಿಕೆ ನೀಡಿದೆ. ಅಲ್ಲದೆ, ಪಾಕಿಸ್ತಾನಕ್ಕೆ ನೀಡುತ್ತಿದ್ದ ರಕ್ಷಣಾ ನೆರವಿನಲ್ಲಿ ಕೂಡ ಅಮೆರಿಕ ಗಣನೀಯ ಕಡಿತ ಮಾಡಿರುವುದು ಮಹತ್ವದ ಬೆಳವಣಿಗೆ.

ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಮತ್ತು ತಾಲಿಬಾನ್​ಪರ ಮೃದುಧೋರಣೆ ಹೊಂದಿರುವ ಇಮ್ರಾನ್ ಖಾನ್ ಪ್ರಧಾನಿಯಾಗುವ ಮುನ್ನವೇ, ಭಾರತಕ್ಕೆ ಅನುಕೂಲಕರವಾಗಬಹುದಾದ ಈ ಎರಡು ಬೆಳವಣಿಗೆಗಳು ಸಂಭವಿಸಿರುವುದು ಕುತೂಹಲ ಮೂಡಿಸುವಂತಿದೆ. ವಿದೇಶಾಂಗ ನೀತಿಯಲ್ಲಿ ಮಹತ್ವದ ಸುಧಾರಣೆ ಹಾಗೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಬಾಂಧವ್ಯವೃದ್ಧಿಗೆ ಒತ್ತು ನೀಡಿದ ಕೇಂದ್ರ ಸರ್ಕಾರದ ಶ್ರಮವನ್ನು ಇಲ್ಲಿ ಕಾಣಬಹುದು. ಭಯೋತ್ಪಾದನೆಗೆ ನೀರೆರೆಯುವ ಕಾರಣಕ್ಕಾಗಿ ಅಂತಾರಾಷ್ಟ್ರೀಯ ವಲಯದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನ ಮುಂದುವರಿಯಬೇಕಿದ್ದು, ಆ ನಿಟ್ಟಿನಲ್ಲಿ ಈಗಿನ ಬೆಳವಣಿಗೆಗಳು ಪೂರಕವಾಗಿ ಒದಗಬಹುದಾಗಿದೆ.

Leave a Reply

Your email address will not be published. Required fields are marked *