ಡೇಟಾ ಸುರಕ್ಷೆಗೆ ಬಲ

ದೇಶಾದ್ಯಂತ ಈಗ ಖಾಸಗಿ ಮಾಹಿತಿಯ ರಕ್ಷಣೆ ಕುರಿತಾದ ಚರ್ಚೆ ಗರಿಗೆದರಿದೆ. ಆಧಾರ್ ಮಾಹಿತಿ ಸೋರಿಕೆ ವಿಷಯವಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್.ಎಸ್.ಶರ್ವ ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟರ್​ನಲ್ಲಿ ಬಹಿರಂಗ ಪಡಿಸಿ, ಇದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಕೆಲ ಹ್ಯಾಕರ್​ಗಳು ಆಧಾರ್ ಸಂಖ್ಯೆಯ ಸಹಾಯದಿಂದ ವೈಯಕ್ತಿಕ ಮಾಹಿತಿಗಳನ್ನು ಸುಲಭವಾಗಿ ಕದಿಯಬಹುದು ಎಂದು ಪ್ರತಿಪಾದಿಸಿದ್ದರೂ, ಆಧಾರ್ ಪ್ರಾಧಿಕಾರ ಅದನ್ನು ಅಲ್ಲಗಳೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಖಾಸಗಿ ಮಾಹಿತಿ ರಕ್ಷಣೆ ಕುರಿತು ಸಲಹೆ ನೀಡಲು ನೇಮಿಸಲಾಗಿದ್ದ ನ್ಯಾ.ಬಿ.ಎನ್.ಶ್ರೀಕೃಷ್ಣ ಸಮಿತಿಯು ಕೆಲ ದಿನಗಳ ಹಿಂದೆ 200 ಪುಟಗಳ ವಿವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದೆ. ಮುಖ್ಯವಾಗಿ, ‘ಗ್ರಾಹಕನೇ ಮಾಹಿತಿಯ ಒಡೆಯ’ ಎಂಬ ಸುಪ್ರೀಂ ಕೋರ್ಟ್​ನ ಆಶಯವನ್ನು ಈ ವರದಿ ಎತ್ತಿಹಿಡಿದಿದ್ದು, ವೈಯಕ್ತಿಕ ಡೇಟಾ ಸುರಕ್ಷತಾ ಮಸೂದೆಯನ್ನು ರೂಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಜನರ ಮಾಹಿತಿ ರಕ್ಷಣೆ, ಅದಕ್ಕಾಗಿ ಕಾನೂನಿನ ಬಲ ಮತ್ತು ವೈಯಕ್ತಿಕ ಮಾಹಿತಿಯನ್ನು ಮಾರಿಕೊಂಡರೆ ಅದಕ್ಕೆ ಭಾರಿ ದಂಡ ವಿಧಿಸುವ ಪ್ರಸ್ತಾವನೆಯೂ ಶ್ರೀಕೃಷ್ಣ ಸಮಿತಿ ವರದಿಯಲ್ಲಿದೆ. 13 ಅಂಶಗಳನ್ನು ಖಾಸಗಿ ಮಾಹಿತಿ ಎಂದು ಸಮಿತಿ ಗುರುತಿಸಿದೆ. ಈ ಮಾಹಿತಿಗಳನ್ನು ಮಾರಾಟ ಮಾಡಿದರೆ- 5 ಕೋಟಿ ರೂಪಾಯಿ ಅಥವಾ ಮಾರಾಟ

ಮಾಡಿದ ಸಂಸ್ಥೆಯ ಜಾಗತಿಕ ವ್ಯವಹಾರದ ಶೇಕಡ 2 ಮೌಲ್ಯವನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಪಾಸ್​ವರ್ಡ್, ಆರ್ಥಿಕ, ಆರೋಗ್ಯಕ್ಕೆ ಸಂಬಂಧಿಸಿದ ಡೇಟಾ, ಉದ್ಯೋಗ ಸಂಬಂಧಿ ಗುರುತು, ಲೈಂಗಿಕ ಜೀವನ, ಲೈಂಗಿಕ ಒಲವು, ಬಯೋಮೆಟ್ರಿಕ್ ಡೇಟಾ ಸೇರಿದಂತೆ ಹಲವು ಅಂಶಗಳು ಖಾಸಗಿ ಮಾಹಿತಿ ಎನಿಸಿಕೊಂಡಿವೆ. ಈ ವರದಿ ಸಾಮಾನ್ಯ ಜನರ ಹಿತ ಕಾಯುವಲ್ಲಿ ಪೂರಕವಾಗಿದ್ದು, ವೈಯಕ್ತಿಕ ಮಾಹಿತಿ ರಕ್ಷಣೆ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳತ್ತ ಗಮನ ಹರಿಸಿದೆ ಎನ್ನಬಹುದು.

ವೈಯಕ್ತಿಕ ಡೇಟಾ ಸುರಕ್ಷೆಗೆ ಸಂಬಂಧಿಸಿ ಕಾನೂನು ರೂಪಿಸಲು ಕೇಂದ್ರ ಸರ್ಕಾರವು ಉತ್ಸುಕವಾಗಿರುವುದು ಆಶಾದಾಯಕ ಬೆಳವಣಿಗೆ. ‘ಮಾಹಿತಿ ರಕ್ಷಣೆಗೆ ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿ ಎನ್ನುವಂತೆ ಕಾನೂನು ರಚನೆಯಾಗಲಿದೆ. ಸಂಪುಟದಲ್ಲಿ ಚರ್ಚೆಯಾದ ಬಳಿಕ ಸದನದಲ್ಲಿ ಮಂಡಿಸುತ್ತೇವೆ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿರುವುದು ಗಮನಾರ್ಹ.

ಮಾಹಿತಿ-ತಂತ್ರಜ್ಞಾನದ ಬಲದಿಂದ ಭಾರತ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ಸಾಧಿಸಬೇಕಿದೆ. ಮಾತ್ರವಲ್ಲದೆ, ಭಾರತಕ್ಕೆ ‘ಐಟಿ ಹಬ್’ ಎಂಬ ಹಿರಿಮೆಯೂ ದಕ್ಕಿದೆ. ಆದರೆ, ಜನರು ಹಂಚಿಕೊಳ್ಳುವ ಮಾಹಿತಿಗಳ, ಅವರ ವೈಯಕ್ತಿಕ ವಿವರಗಳ ರಕ್ಷಣೆ ಬಗ್ಗೆಯೇ ಪ್ರಶ್ನೆ ಮೂಡಿದಾಗ ಒಂದಷ್ಟು ಜಿಜ್ಞಾಸೆ ಕಾಡಿದ್ದುಂಟು. ಶ್ರೀಕೃಷ್ಣ ಸಮಿತಿ ವರದಿ ಈ ಎಲ್ಲ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದು, ಸಮರ್ಥ ಕಾಯ್ದೆ ರೂಪಿಸಿ, ಅನುಷ್ಠಾನಕ್ಕೆ ತರಲು ಈ ವರದಿ ದಿಕ್ಸೂಚಿಯಾಗಲಿ. ವಿದೇಶಿ ಕಂಪನಿಗಳ ಕಬಂಧಬಾಹುಗಳಿಂದ ಜನರ ಮಾಹಿತಿಗಳನ್ನು ರಕ್ಷಿಸುವುದು ಹೇಗೆ? ಅವು ಇಲ್ಲಿಯವರ ವೈಯಕ್ತಿಕ ಮಾಹಿತಿ ಕದಿಯದಂತೆ ಯಾವ ಬಗೆಯ ಕಾವಲುವ್ಯವಸ್ಥೆ ರೂಪಿಸಬಹುದು ಎಂಬ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸಲಿ.

Leave a Reply

Your email address will not be published. Required fields are marked *