Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಶ್ಲಾಘನೀಯ ಚಿಂತನೆ

Thursday, 19.07.2018, 3:02 AM       No Comments

ದೇಶದ ಯುವಪೀಳಿಗೆಯಲ್ಲಿ ಶಿಸ್ತುಬದ್ಧ ಜೀವನಕ್ರಮ ಹಾಗೂ ದೇಶಪ್ರೇಮದ ಸೆಲೆಯನ್ನು ಚಿಮ್ಮಿಸುವ ದೃಷ್ಟಿಯಿಂದ, ಪ್ರತಿವರ್ಷ 10 ಲಕ್ಷ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ‘ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ’ (National Youth Empowerment Scheme- ‘N-YES’) ಎಂಬ ಹೆಸರಿನ ಈ ಯೋಜನೆಯನ್ವಯ ತರಬೇತಿಗೆ ದಾಖಲಾಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಒಂದು ವರ್ಷದವರೆಗೆ ಪ್ರತಿತಿಂಗಳೂ ಪ್ರೋತ್ಸಾಹಧನ ದೊರೆಯಲಿದೆ. ವಿಪತ್ತು ನಿರ್ವಹಣೆ, ಐಟಿ ಮತ್ತು ವೃತ್ತಿಪರ ಕೌಶಲಗಳ ತರಬೇತಿ, ಯೋಗಕಲಿಕೆಯಂಥ ವಿಷಯಗಳೂ ಇಲ್ಲಿ ಮುನ್ನೆಲೆಗೆ ಬರಲಿವೆ ಎಂಬುದು ಗಮನಾರ್ಹ.

ದೇಶವೊಂದರ ಭವ್ಯಭವಿಷ್ಯಕ್ಕೆ ಕಾರಣವಾಗುವ ಯುವಪೀಳಿಗೆಯನ್ನು ಇಂಥದೊಂದು ಶಿಸ್ತುಬದ್ಧ ಚೌಕಟ್ಟಿಗೆ ಒಗ್ಗಿಸುವ ಚಿಂತನೆ ನಿಜಕ್ಕೂ ಶ್ಲಾಘನೀಯವೇ. ಆದರೆ, ಯುವಪೀಳಿಗೆ ಮಾತ್ರವಲ್ಲದೆ, ಸಮಾಜದ ಎಲ್ಲ ವರ್ಗ-ವಯೋಮಾನದವರಲ್ಲೂ ಇಂಥದೊಂದು ಬದ್ಧತೆಯ ಸ್ಪುರಣೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವೂ ಹಿಂದೆಂದಿಗಿಂತ ಹೆಚ್ಚಾಗಿದೆ. ಅದಕ್ಕೆ ಕಾರಣವಾಗಿರುವುದು ಪ್ರಸ್ತುತ ವಿಶ್ವದೆಲ್ಲೆಡೆ ಕಾಣಬರುತ್ತಿರುವ ಚಿತ್ರಣ. ನೆರೆರಾಷ್ಟ್ರಗಳ ಭೂರಾಜಕೀಯ ಹುಟ್ಟುಹಾಕಿರುವ ಪಲ್ಲಟಗಳು, ಆಕ್ರಮಣಶೀಲತೆ, ಕತ್ತರಿಸುತ್ತ ಹೋದಂತೆ ಮತ್ತಷ್ಟು ಚಿಗುರುತ್ತಿರುವ ಉಗ್ರವಾದಿಗಳ ಹಿಂಸಾವಿನೋದ, ಬುಲೆಟ್ ಬಿತ್ತಿ ಬಾಂಬು ಬೆಳೆಯುವಂಥ ಶಸ್ತ್ರಾಸ್ತ್ರದಾಹ- ಈ ಎಲ್ಲದರ ಪರಿಣಾಮವಾಗಿ ದೇಶದ ಭದ್ರತೆ – ಸಮಗ್ರತೆ – ಸುರಕ್ಷತೆಗೇ ಸಂಚಕಾರ ಒದಗುವಂಥ ಪರಿಸ್ಥಿತಿ ನಿರ್ವಣವಾಗಿದೆ. ಇಂಥ ಸಂದರ್ಭಕ್ಕೆ ಪರಿಣಾಮಕಾರಿ ಮದ್ದು ಅರೆಯುವುದಕ್ಕೆ ಸೇನಾ ಮತ್ತು ರಾಜತಾಂತ್ರಿಕ ಉಪಕ್ರಮಗಳಷ್ಟೇ ಸಾಕಾಗುವುದಿಲ್ಲ ಮತ್ತು ಯುವಪೀಳಿಗೆಯನ್ನಷ್ಟೇ ಸನ್ನದ್ಧಗೊಳಿಸಿದರೆ ಅದು ನೆರವೇರುವಂಥದ್ದಲ್ಲ. ಭಾರತದಂಥ ಸಾರ್ವಭೌಮ ದೇಶದ ಒಬ್ಬೊಬ್ಬ ಪ್ರಜೆಯೂ ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮದ ಸೆಲೆಗೆ ಒಡ್ಡಿಕೊಳ್ಳುವ ಅಗತ್ಯವಿದೆ. ಇಲ್ಲಿ ಮತ್ತೊಂದು ಸಂಗತಿಯನ್ನೂ ಅವಲೋಕಿಸಬೇಕು. ‘ಅನಿರೀಕ್ಷಿತ ಆಪತ್ತು/ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಾತ್ರವೇ ಭಾರತೀಯರಲ್ಲಿ ಒಗ್ಗಟ್ಟು ಕಾಣಿಸಿಕೊಳ್ಳುತ್ತದೆ; ಮಿಕ್ಕ ಸಾಮಾನ್ಯ ಸಂದರ್ಭಗಳಲ್ಲಿ ಅದನ್ನು ಬಡಿದೆಬ್ಬಿಸಬೇಕಾಗುತ್ತದೆ’ ಎಂಬುದೊಂದು ಗ್ರಹಿಕೆಯಿದೆ. ಒಂದು ಮಟ್ಟಿಗೆ ಇದು ನಿಜವೂ ಹೌದು. ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮದಂಥ ಶ್ರೇಷ್ಠ ಆಯಾಮಗಳು ಆಯಾ ಕಾಲಘಟ್ಟಕ್ಕೆ ಅಥವಾ ಅವಶ್ಯಕತೆಗೆ ತಕ್ಕಂತೆ ಹೊಮ್ಮುವಂತಾಗಬಾರದು; ಅವಕ್ಕೆ ಸ್ಥಾಯೀಭಾವವಿರಬೇಕು, ವ್ಯಕ್ತಿತ್ವದಲ್ಲೂ ಸಾಮಾಜಿಕ ವ್ಯವಸ್ಥೆಯಲ್ಲೂ ಅವು ಕೆನೆಗಟ್ಟುವಂತಾಗಬೇಕು. ಇದರಿಂದ ಸಮಾಜದ ಇನ್ನಿತರ ಅನೇಕ ಅಪಸವ್ಯಗಳಿಗೂ ತಕ್ಕಮಟ್ಟಿನ ಮದ್ದು ಅರೆಯಬಹುದಾಗಿದೆ. ಆದ್ದರಿಂದ, ಯುವಪೀಳಿಗೆಯನ್ನು ಮಾತ್ರವಲ್ಲದೆ, ದೇಶದ ಸಮಸ್ತ ಜನತೆಯನ್ನೂ ಈ ನಿಟ್ಟಿನಲ್ಲಿ ಮಾಹಿತಿವಂತರಾಗಿಸಬೇಕಾದ ಮತ್ತು ಆ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಾದ ಅಗತ್ಯವಿದೆ. ನೀತಿ-ನಿಯಮಗಳ ಅಥವಾ ಆದರ್ಶ ಸೂತ್ರಗಳ ರೂಪಣೆಯ ಜತೆಜತೆಗೆ, ಅವುಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಹೆಚ್ಚಿನ ಗಮನಹರಿಸಬೇಕಿದೆ ಮತ್ತು ಸ್ವಯಂಪ್ರೇರಿತವಾಗಿ ಇಂಥ ಗುಣ-ವಿಶೇಷಗಳನ್ನು ರೂಢಿಸಿಕೊಳ್ಳುವ ಕುರಿತೂ ಪ್ರಜ್ಞಾವಂತರು, ಸಂಘ-ಸಂಸ್ಥೆಗಳು ಆಸಕ್ತಿ ವಹಿಸಬೇಕಿದೆ.

2022ರ ವೇಳೆಗೆ ನವಭಾರತ ನಿರ್ವಿುಸುವ ಪ್ರಧಾನಮಂತ್ರಿಗಳ ಸಂಕಲ್ಪಕ್ಕೆ ಪೂರಕವಾಗಿ ಪರಿಣಮಿಸುವ ಯುವಪಡೆಯನ್ನು ಹುಟ್ಟುಹಾಕಬೇಕೆಂಬುದು ’’N-YES’ ತರಬೇತಿಯ ಉದ್ದೇಶ ಎನ್ನಲಾಗಿದೆ. ತರಬೇತಿ ಕಾರ್ಯಕ್ರಮಕ್ಕೆ ಅಲ್ಲದಿದ್ದರೂ, ನವಭಾರತ ಕಟ್ಟುವ ಮಹಾಸಂಕಲ್ಪದ ವ್ಯಾಪ್ತಿಗೆ ಇನ್ನಿತರ ವರ್ಗ-ವಯೋಮಾನದವರೂ ಸೇರಿಕೊಳ್ಳುವಂತಾದಲ್ಲಿ ಅದು ಸಮಷ್ಟಿ ಪ್ರಜ್ಞೆಗೂ ಬಲ ತುಂಬುತ್ತದೆ, ಪ್ರತ್ಯೇಕತೆಗೂ ಆಸ್ಪದವಿರುವುದಿಲ್ಲ ಎಂಬುದು ಬಲ್ಲವರ ಅಭಿಮತ. ಈ ನಿಟ್ಟಿನಲ್ಲಿ ಸಮಾಲೋಚನೆಗಳಾಗಲಿ.

Leave a Reply

Your email address will not be published. Required fields are marked *

Back To Top