Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ರಾಜಕೀಯ ಇಚ್ಛಾಶಕ್ತಿ ಬೇಕು

Tuesday, 17.07.2018, 3:02 AM       No Comments

ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವಾಗಲೇ ಮತ್ತೆ ಮಹಿಳಾ ಮೀಸಲಾತಿ ವಿಷಯ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಯೋಗಿಸಿದ ರಾಜಕೀಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಉಪಯೋಗಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಈ ಮುಂಗಾರು ಅಧಿವೇಶನದಲ್ಲಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರೆ ಕಾಂಗ್ರೆಸ್ ಬೇಷರತ್ತಾಗಿ ಬೆಂಬಲಿಸಲಿದೆ’ Qಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಮೋದಿಯವರು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಮಾತನಾಡುತ್ತ ‘ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ವಿರೋಧಿಯಾಗಿದೆ. ತ್ರಿವಳಿ ತಲಾಕ್ ನಿಷೇಧಕ್ಕೆ ಬೆಂಬಲ ನೀಡದಿರುವುದು ಅದರ ಬಣ್ಣ ಬಯಲು ಮಾಡಿದೆ’ ಎಂದಿದ್ದರು. ಕಾಂಗ್ರೆಸ್ ಜಾರಿಗೆ ತರಲು ಉದ್ದೇಶಿಸಿದ ಮಹಿಳಾ ಮೀಸಲಾತಿಯನ್ನು ಈಗಿನ ಸರ್ಕಾರ ಅನುಷ್ಠಾನಗೊಳಿಸಲಿ ಎಂದು ರಾಹುಲ್ ಹೇಳಿರುವುದು ಗಮನಾರ್ಹ.

ಮಹಿಳಾ ಮೀಸಲಾತಿ ಮಸೂದೆ (ಶಾಸನಸಭೆಗಳಲ್ಲಿ ಶೇಕಡ 33 ಮೀಸಲಾತಿ)ಯು ಆಗಿನ ಪ್ರತಿಪಕ್ಷ ಬಿಜೆಪಿಯ ಬೆಂಬಲದೊಡನೆ 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತ್ತು. ಆದರೆ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾ ದಳ ಮುಂತಾದ ಪಕ್ಷಗಳ ತೀವ್ರ ವಿರೋಧದ ಪರಿಣಾಮ ಈ ಮಸೂದೆ ಲೋಕಸಭೆಯ ಅಂಗೀಕಾರ ಪಡೆದುಕೊಳ್ಳುವಲ್ಲಿ ವಿಫಲವಾಯಿತು. 2014ರ ಲೋಕಸಭಾ ಚುನಾವಣೆ ಹೊತ್ತಲ್ಲೂ ಮಹಿಳಾ ಮೀಸಲಾತಿ ವಿಷಯವನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಕಾಂಗ್ರೆಸ್ ಈ ವಿಷಯವನ್ನು ಜನತಾ ದರ್ಬಾರ್​ಗೂ ತೆಗೆದುಕೊಂಡು ಹೋಗಿ, ಮಹಿಳಾ ಮೀಸಲಾತಿ ಪರ 32 ಲಕ್ಷ ಜನರ ಸಹಿ ಸಂಗ್ರಹಿಸಿದೆ.

ಹಿಂದಿನ ಅಂಕಿಸಂಖ್ಯೆಗಳನ್ನು ಅವಲೋಕಿಸಿದರೆ 16ನೇ ಲೋಕಸಭೆ ಅತಿ ಹೆಚ್ಚು ಮಹಿಳಾ ಸಂಸದರನ್ನು ಹೊಂದಿದೆ. ಈ ಬಾರಿ 543 ಸಂಸದರ ಪೈಕಿ 62 ಮಹಿಳೆಯರಿದ್ದು, ಕಳೆದ ಲೋಕಸಭೆಯಲ್ಲಿ ಈ ಸಂಖ್ಯೆ 58 ಇತ್ತು. ಹಾಲಿ ರಾಜ್ಯಸಭೆಯಲ್ಲಿ 27 ಮಹಿಳಾ ಸದಸ್ಯರಿದ್ದಾರೆ. ಆದರೆ, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಮಹಿಳೆಯರ ಸಬಲೀಕರಣ ಸಾಧ್ಯವಾಗಬೇಕಾದರೆ ಮತ್ತು ಎಲ್ಲ ರಂಗಗಳಲ್ಲೂ ಅವರು ಮತ್ತಷ್ಟು ಮುಂದುವರಿಯಬೇಕಾದರೆ ರಾಜಕೀಯ ಅಧಿಕಾರವೂ ಬಹುಮುಖ್ಯ. ಇತರೆಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರಾದರೂ, ರಾಜಕೀಯ ಕ್ಷೇತ್ರದಲ್ಲಿ ಅವಕಾಶವಂಚಿತರಾಗಿದ್ದಾರೆ. ರಾಜಕೀಯ ಪುರುಷಪ್ರಧಾನ ಕ್ಷೇತ್ರವಾಗಿ ಮಾರ್ಪಟ್ಟಿರುವುದೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಈ ಸಮಸ್ಯೆಗೆ ಮದ್ದರೆಯಲು ಮಹಿಳಾ ಮೀಸಲಾತಿಯೇ ಸೂಕ್ತವಾದುದು. ರಾಜಕೀಯ ಇಚ್ಛಾಶಕ್ತಿ ಪ್ರಕಟವಾದರೆ ಈ ಮಸೂದೆ ಅಂಗೀಕಾರದ ಮುದ್ರೆ ಒತ್ತಿಸಿಕೊಳ್ಳಬಹುದು.

ಕಾಂಗ್ರೆಸ್ ಮಸೂದೆಗೆ ಬೇಷರತ್ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಸಂಭಾವ್ಯ ತಡೆಯೊಂದು ದೂರವಾಗಿದೆ. ಎಸ್​ಪಿ, ಬಿಎಸ್​ಪಿಯಂಥ ಕೆಲ

ಪಕ್ಷಗಳು ಈ ಮೀಸಲಾತಿಯಿಂದ ದಲಿತರು, ಕೆಳವರ್ಗದವರಿಗೆ ಅನ್ಯಾಯವಾಗಬಹುದು ಎಂಬ ಆತಂಕ ಹೊಂದಿವೆ. ಇಂಥ ವಾದಕ್ಕೆ ಗಟ್ಟಿ ಆಧಾರಗಳೇನೂ ಇಲ್ಲ. ಹಾಗಾಗಿ, ರಾಜಕೀಯ ಐಕ್ಯತೆ ಮತ್ತು ಇಚ್ಛಾಶಕ್ತಿಗಳು ಮೇಳೈಸಿದರೆ ಈ ಮಸೂದೆ ಮೋಕ್ಷ ಪಡೆದುಕೊಳ್ಳುವ ಜತೆಗೆ, ಮುಂಬರುವ ಲೋಕಸಭಾ ಚುನಾವಣೆ ಹೊತ್ತಲ್ಲಿ ದೇಶದ ರಾಜಕೀಯ ಚಿತ್ರಣವೂ ಬದಲಾಗಲಿದೆ. ಬಹು ವರ್ಷಗಳ ನಂತರ ಮತ್ತೊಮ್ಮೆ ಈ ಮಸೂದೆಯ ಪರ ವಾತಾವರಣ ರೂಪುಗೊಂಡಿದೆ.

Leave a Reply

Your email address will not be published. Required fields are marked *

Back To Top