Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಪಾಕ್ ಕದನ ಕುತೂಹಲ

Monday, 16.07.2018, 3:02 AM       No Comments

ಅಕ್ರಮ ಆಸ್ತಿ-ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಇಂಗ್ಲೆಂಡ್​ನಿಂದ ಸ್ವದೇಶಕ್ಕೆ ಮರಳಿದ ಕ್ಷಣದಲ್ಲೇ ಬಂಧನಕ್ಕೊಳಗಾಗಿದ್ದಾರೆ. ಅವರೀಗ ಮಗಳು ಮರಿಯಂ ಜತೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ದಿನಗಳೆಯುತ್ತಿದ್ದಾರೆ. ಕ್ಯಾನ್ಸರ್​ಪೀಡಿತ ಪತ್ನಿಯನ್ನು ಲಂಡನ್ನಿನಲ್ಲೇ ಬಿಟ್ಟು ಪಾಕಿಸ್ತಾನಕ್ಕೆ ಮರಳಿರುವ ಷರೀಫ್ ನಡೆಯ ಹಿಂದೆ ರಾಜಕೀಯ ಲಾಭನಷ್ಟದ ಲೆಕ್ಕಾಚಾರಗಳೇ ಪ್ರಮುಖವಾಗಿವೆ ಎಂಬ ವಿಶ್ಲೇಷಣೆ ಈಗ ಕೇಳಿಬರುತ್ತಿದೆ. ಪಾಕ್​ಗೆ ಬಂದರೆ ಬಂಧನ ಖಾತ್ರಿ ಎಂದು ಗೊತ್ತಿದ್ದರೂ ಅವರು ಹೆಜ್ಜೆಯಿಟ್ಟಿದ್ದು ಈಗ ಭಾರಿ ಚರ್ಚೆ, ವಿಶ್ಲೇಷಣೆಗೆ ಕಾರಣವಾಗಿದೆ. ಜುಲೈ 25ಕ್ಕೆ ಪಾಕ್​ನಲ್ಲಿ ಚುನಾವಣೆ ನಡೆಯಲಿದ್ದು, ಹಿಂಸಾಕೃತ್ಯಗಳೂ ಹೆಚ್ಚಿವೆ. ಉಗ್ರರ ಕರಿನೆರಳು, ಹಿಂಸೆಯ ಭೀತಿ ಇದೆಲ್ಲದರ ನಡುವೆ ಜನರು ಹೊಸ ಸರ್ಕಾರವನ್ನು ಆಯ್ಕೆಮಾಡಲು ಅಣಿಯಾಗಬೇಕಾದ ಅನಿವಾರ್ಯತೆ ಇದೆ.

ಜನರಿಂದ ಚುನಾಯಿತವಾದ ಸರ್ಕಾರಕ್ಕಿಂತ ಹೆಚ್ಚು ಅವಧಿಗೆ ಪಾಕಿಸ್ತಾನವನ್ನು ಆಳಿದ್ದು ಸೇನಾಡಳಿತಗಳೇ. ಆಗೀಗ ಚುನಾಯಿತ ಸರ್ಕಾರಗಳು ಬಂದರೂ ಅವುಗಳ ಆಯುಷ್ಯ ಕಮ್ಮಿ. ಬೆನಜೀರ್ ಭುಟ್ಟೋ, ನವಾಜ್ ಷರೀಫ್ ಇವರೆಲ್ಲ ಚುನಾವಣೆಯಲ್ಲಿ ಗೆದ್ದುಬಂದು ಸರ್ಕಾರದ ಚುಕ್ಕಾಣಿ ಹಿಡಿದವರು. ಇವರ ಆಡಳಿತ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದು ಬೇರೆಯದೇ ಚರ್ಚಾಆಯಾಮ. ಆದರೆ, ಸೇನಾಡಳಿತಗಳ ಉಸಿರುಗಟ್ಟಿಸುವ ವಾತಾವರಣ ಹೋಗಲಾಡಿಸಿದ್ದಂತೂ ನಿಜ. ಪಾಕಿಸ್ತಾನದ ದುರದೃಷ್ಟ ಎಂದರೆ ಅಲ್ಲಿನ ಜನರ ಪಾಲಿಗೆ ಉತ್ತಮ ಆಯ್ಕೆಗಳೇ ಇಲ್ಲ. ಭ್ರಷ್ಟಾಚಾರ-ಹಗರಣಗಳ ಕಳಂಕದಿಂದ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷ ಕಳೆಗುಂದಿದೆ. ಮಗಳು ಮರಿಯಂರನ್ನು ‘ಉತ್ತರಾಧಿಕಾರಿ’ ಮಾಡಬೇಕೆಂಬ ಷರೀಫ್ ಆಸೆಯೂ ಕೈಗೂಡಿಲ್ಲ. ಹೀಗಾಗಿ ಆಡಳಿತಾರೂಢ ಪಕ್ಷ ಮತ್ತೆ ಅಧಿಕಾರಕ್ಕೆ ಮರಳುವ ಖಚಿತ ವಾತಾವರಣ ರೂಪುಗೊಂಡಿಲ್ಲ. ಮತದಾರರು ಪ್ರತಿಪಕ್ಷಗಳತ್ತ ಆಸೆಗಣ್ಣಿನಿಂದ ನೋಡಬೇಕೆಂದುಕೊಂಡರೂ ಅಲ್ಲಿಯೂ ‘ಕಳಂಕಿತ ರಾಜಕೀಯವೇ’ ಢಾಳಾಗಿ ಕಣ್ಣಿಗೆ ರಾಚುತ್ತದೆ. ಪ್ರಧಾನಿ ಹುದ್ದೆಯ ಆಕಾಂಕ್ಷಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್​ರ ಪಾಕಿಸ್ತಾನ-ತೆಹ್ರಿಕ್-ಇ-ಇನ್ಸಾಫ್ ಪಕ್ಷ ಹೇಳಿಕೊಳ್ಳುವಂಥ ಜನಬೆಂಬಲವೇನೂ ಹೊಂದಿಲ್ಲ. ಅಲ್ಲದೆ, ಇಮ್ರಾನ್ ಮಾಜಿ ಪತ್ನಿ ಚುನಾವಣೆ ಹೊತ್ತಲೇ ಇಮ್ರಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಸಂಚಲನ ಮೂಡಿಸಿದೆ. ಇನ್ನು, ಭುಟ್ಟೋ ಕುಟುಂಬದ ಜಹಗೀರಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯನ್ನು ಮುನ್ನಡೆಸುವಲ್ಲಿಯೂ ಆ ಕುಟುಂಬ ಎಡವಿದೆ. ರಾಷ್ಟ್ರಪತಿಯಾಗಿದ್ದ ಆಸೀಫ್ ಅಲಿ ಜರ್ದಾರಿ ಮೇಲೂ ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಅವರ ಪುತ್ರ ಬಿಲಾವಲ್ ರಾಜಕೀಯವಾಗಿ ಅನನುಭವಿ.

ಇಂಥ ಕ್ಲಿಷ್ಟ ವ್ಯವಸ್ಥೆಯಲ್ಲಿ ಪಾಕಿಸ್ತಾನದ ಜನತೆ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲಕರ. ಒಂದುವೇಳೆ, ಅತಂತ್ರ ಪರಿಸ್ಥಿತಿ ಸೃಷ್ಟಿಯಾದಲ್ಲಿ ಆಡಳಿತ ಸೇನೆ ತೆಕ್ಕೆಗೆ ಹೋಗುವ ಅಪಾಯ. ಹಾಗಾಗಿಬಿಟ್ಟರೆ, ಪರಿಸ್ಥಿತಿ ಮತ್ತಷ್ಟು ವಿಷಮಿಸುವುದಂತೂ ನಿಜ. ಪ್ರಜಾಪ್ರಭುತ್ವದ ಸ್ವಸ್ಥ ವಾತಾವಾರಣದಲ್ಲಿ ಜೀವಿಸಲು ಪಾಕ್ ತಹತಹಿಸುತ್ತಿದೆಯಾದರೂ ಅಲ್ಲಿನ ರಾಜಕೀಯ ಪಕ್ಷಗಳು, ಅವುಗಳನ್ನು ಸುತ್ತುಕೊಂಡಿರುವ ವ್ಯವಸ್ಥೆ ಅದಕ್ಕೆ ಆಸ್ಪದ ನೀಡುತ್ತಿಲ್ಲ. ಪಾಕ್​ನಲ್ಲಿ ಜನರು ಯಾವ ಸರ್ಕಾರ ತರಲಿದ್ದಾರೆ ಎಂಬ ಸಂಗತಿ ಭಾರತ-ಪಾಕಿಸ್ತಾನ ಸಂಬಂಧವನ್ನೂ ನಿರ್ಣಯಿಸಲಿದೆ. ಈ ಚುನಾವಣೆ ಹೊಸ ದಿಕ್ಸೂಚಿ ತೋರೀತೇ ಎಂದು ಕಾದು ನೋಡಬೇಕಷ್ಟೇ.

Leave a Reply

Your email address will not be published. Required fields are marked *

Back To Top