Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಜನರ ಭಾವನೆಗೆ ಮನ್ನಣೆ

Friday, 13.07.2018, 3:02 AM       No Comments

ಇಂಟರ್​ನೆಟ್ ವೇಗ ಮತ್ತು ಲಭ್ಯತೆಯಲ್ಲಿನ ಅಸಮಾನತೆ, ತಾರತಮ್ಯಕ್ಕೆ ಕಡೆಗೂ ತೆರೆಬಿದ್ದಿದೆ. ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ ಮತ್ತು ವಾದ-ವಿವಾದಕ್ಕೂ ಕಾರಣವಾದ ನೆಟ್ ನ್ಯೂಟ್ರಾಲಿಟಿಗೆ ಕೇಂದ್ರ ಟೆಲಿಕಾಂ ಆಯೋಗ ಬುಧವಾರ ಒಪ್ಪಿಗೆ ನೀಡಿದೆ. ಈ ಬೆಳವಣಿಗೆ ಇಂಟರ್​ನೆಟ್ ಬಳಕೆದಾರರಿಗೆ ದೊಡ್ಡ ನಿರಾಳತೆ ಒದಗಿಸುವ ಜತೆಗೆ ಸಮಾನತೆಯ ಭಾವವನ್ನೂ ಸೃಷ್ಟಿಸಿದೆ. ಟೆಲಿಕಾಂ ಕಂಪನಿಗಳ ಭಾರಿ ವಿರೋಧ, ಹಲವು ತಂತ್ರ-ಪ್ರತಿತಂತ್ರಗಳ ಹೊರತಾಗಿಯೂ ಟೆಲಿಕಾಂ ಆಯೋಗ ಇದಕ್ಕೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಮತ್ತು ಮಹತ್ವದ ಬೆಳವಣಿಗೆ.

ನೆಟ್ ನ್ಯೂಟ್ರಾಲಿಟಿ ಜಾರಿಗೆ ಬರಲಿರುವುದರಿಂದ ಇನ್ಮುಂದೆ, ಟೆಲಿಕಾಂ ಸೇವಾ ಕಂಪನಿಗಳು ಯಾವುದೇ ಆಪ್, ಬ್ರೌಸರ್ ಅಥವಾ ಸೇವೆಗಳಿಗೆ ಮಿತಿ ನಿಗದಿಪಡಿಸುವಂತಿಲ್ಲ. ಮತ್ತು ನಿರ್ದಿಷ್ಟ ಕಾರಣಗಳನ್ನು ಮುಂದೊಡ್ಡಿ ಒಂದು ಆಪ್ ಅಥವಾ ವೆಬ್​ಸೈಟ್ ಬ್ಲಾಕ್ ಮಾಡಲು ಅವಕಾಶವಿಲ್ಲ. ಮುಖ್ಯವಾಗಿ, ಸೇವಾದಾರ ಕಂಪನಿ ಇಂಟರ್​ನೆಟ್ ವೇಗದಲ್ಲಿ ಕಡಿಮೆ ಅಥವಾ ಹೆಚ್ಚು ಎಂಬ ಭೇದ ತೋರುವಂತಿಲ್ಲ.

2015ರ ಏಪ್ರಿಲ್​ನಲ್ಲಿ ಫೇಸ್​ಬುಕ್ ಸಂಸ್ಥೆ ಭಾರತದಲ್ಲಿ ‘ಫ್ರಿ ಬೇಸಿಕ್ ಪ್ರೋಗ್ರಾಂ’ ಮತ್ತು ಏರ್​ಟೆಲ್ ಕಂಪನಿ ‘ಏರ್​ಟೆಲ್ ಝೀರೋ’ ಯೋಜನೆ ಜಾರಿಗೆ ತರುವ ಘೋಷಣೆ ಮಾಡಿದ್ದವು. ಈ ಯೋಜನೆಗಳು ನೆಟ್ ನ್ಯೂಟ್ರಾಲಿಟಿಗೆ ವಿರುದ್ಧವಾಗಿವೆ ಎಂಬ ಕೂಗು ವ್ಯಾಪಕವಾಗಿದ್ದು ಆಗಲೇ. ಈ ಬೆಳವಣಿಗೆಗಳ ಗಂಭೀರತೆಯನ್ನು ಮನಗಂಡ ದೂರಸಂಪರ್ಕ ಇಲಾಖೆ 2015ರ ಜುಲೈನಲ್ಲಿ ವಿವರವಾದ ವರದಿ ನೀಡಿ ‘ಇಂಟರ್​ನೆಟ್​ನಲ್ಲಿ ಬಳಕೆದಾರರ ಹಕ್ಕುಗಳನ್ನು ಸುರಕ್ಷಿತವಾಗಿಸುವ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟಿತು. ಕಳೆದ ವರ್ಷದ ಜನವರಿಯಲ್ಲಿ ಟ್ರಾಯ್ ನೆಟ್ ನ್ಯೂಟ್ರಾಲಿಟಿ ಕುರಿತಂತೆ ಜನರಿಂದ 20 ಪ್ರಶ್ನೆಗಳಿಗೆ ಪ್ರತಿಕ್ರಿಯೆ ಕೇಳಿತು. ಆಗಲೇ ಈ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತಲ್ಲದೆ, ಸಾಮಾಜಿಕ ಮಾಧ್ಯಮಗಳ ಮುನ್ನೆಲೆಗೂ ಬಂತು. ಪರ-ವಿರೋಧ ಎರಡೂ ಗುಂಪುಗಳು ಹುಟ್ಟಿಕೊಂಡು, ಚರ್ಚೆ ಗರಿಗೆದರಿತು. ಜನರಿಂದ ಸಂಗ್ರಹಿಸಿದ ಅಭಿಪ್ರಾಯ, ತಜ್ಞರು ನೀಡಿದ ಮಾಹಿತಿಯನ್ನು ಒಳಗೊಂಡಂತೆ ಟ್ರಾಯ್ 55 ಪುಟಗಳ ಶಿಫಾರಸನ್ನು 2017ರ ನವೆಂಬರ್​ನಲ್ಲಿ ಟೆಲಿಕಾಂ ಆಯೋಗಕ್ಕೆ ಸಲ್ಲಿಸಿತು. ಇಂಟರ್​ನೆಟ್ ವೇಗದಲ್ಲಿ ಅಸಮಾನತೆ, ತಾರತಮ್ಯ ಮತ್ತು ಕೆಲ ಸೇವೆಗಳನ್ನು ನಿರಾಕರಿಸುವ ಇಲ್ಲವೆ ಬ್ಲಾಕ್ ಮಾಡುವ ಅವಕಾಶಗಳನ್ನು ವರದಿ ವಿರೋಧಿಸಿತು.

ಇಂಟರ್​ನೆಟ್ ಸೇವೆಯಲ್ಲಿ ‘ಭೇದಭಾವ’ದ ಬಗ್ಗೆ ಟ್ರಾಯ್ ಸ್ಪಷ್ಟ ವ್ಯಾಖ್ಯೆ ಕೂಡ ನೀಡಿದೆ. ಯಾವುದೇ ಸೇವೆಯನ್ನು ಬ್ಲಾಕ್ ಮಾಡುವುದು, ಕೆಲವರ ಸೇವೆಯಲ್ಲಿ ವೇಗ ತಗ್ಗಿಸಿ, ಕೆಲವರಿಗೆ ಹೆಚ್ಚಿನ ವೇಗ ನೀಡುವುದು-ಇದೆಲ್ಲವೂ ಭೇದಭಾವ ಎನಿಸಲಿದೆ. ಪ್ರಸಕ್ತ, ಟೆಲಿಕಾಂ ಆಯೋಗ ನೆಟ್ ನ್ಯೂಟ್ರಾಲಿಟಿಗೆ ಒಪ್ಪಿಗೆ ನೀಡಿರುವ ಪರಿಣಾಮ ಈ ಎಲ್ಲ ಅಪಸವ್ಯಗಳು ದೂರವಾಗಲಿದ್ದು, ಗ್ರಾಹಕರಿಗೆ ಬಹುದಿನಗಳ ಕನಸಾದ ‘ಇಂಟರ್​ನೆಟ್ ಸ್ವಾತಂತ್ರ್ಯ’ ಪ್ರಾಪ್ತವಾಗಲಿದೆ. ಆದರೆ, ಈ ವ್ಯವಸ್ಥೆಯನ್ನು ಸೂಕ್ತವಾಗಿ ಅಳವಡಿಸಿಕೊಂಡು ಜಾರಿಗೆ ತರುವ ಇಚ್ಛಾಶಕ್ತಿಯನ್ನು ದೂರಸಂಪರ್ಕ ಕಂಪನಿಗಳು, ಇಂಟರ್​ನೆಟ್ ಸೇವಾ ಕಂಪನಿಗಳು ತೋರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡ ನಿಗಾ ವ್ಯವಸ್ಥೆಯನ್ನು ಬಲಗೊಳಿಸಲಿ. ಹಾಗೇ, ಜನರು ಕೂಡ ಅಂತರ್ಜಾಲದ ಸದುಪಯೋಗಕ್ಕೆ ಹೆಚ್ಚು ಒತ್ತು ನೀಡಲಿ.

Leave a Reply

Your email address will not be published. Required fields are marked *

Back To Top