Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಮೇಕ್ ಇನ್ ಇಂಡಿಯಾಕ್ಕೆ ಶಕ್ತಿ

Wednesday, 11.07.2018, 3:02 AM       No Comments

‘ಮೇಕ್ ಇನ್ ಇಂಡಿಯಾ’ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಭಾರತ ಉತ್ಪಾದನಾ ವಲಯದ (ಮ್ಯಾನುಫ್ಯಾಕ್ಚರಿಂಗ್) ಪ್ರಮುಖ ಕೇಂದ್ರಗಳ ಪೈಕಿ ಒಂದಾಗಬೇಕು ಎಂಬ ಆಶಯ ಇದರ ಹಿಂದಿನದ್ದು. ಹಿಂದೆಲ್ಲ, ‘ಮೇಡ್ ಇನ್ ಇಂಡಿಯಾ’ ಘೋಷಣೆ ಮೊಳಗಿದ್ದರೂ, ಇತರೆ ದೇಶಗಳಿಂದ ರಫ್ತು ಮಾಡಿಕೊಂಡ ಉತ್ಪನ್ನಗಳನ್ನೇ ಸಣ್ಣಪುಟ್ಟ ಮಾರ್ಪಾಟು ಮಾಡಿ ಲೇಬಲ್ ಅಂಟಿಸುತ್ತಿದ್ದ ಸ್ಥಿತಿ ಇತ್ತು. ವಿಶ್ವದ ವಿಶಾಲ ಮಾರುಕಟ್ಟೆಗಳ ಪೈಕಿ ಪ್ರಮುಖವಾಗಿರುವ ಭಾರತ ವಾಣಿಜ್ಯ ವಹಿವಾಟಿನಲ್ಲೂ ಮಹತ್ವದ ಪಾತ್ರವಹಿಸಿದೆ. ಆದರೂ, ಉದ್ಯೋಗಸೃಷ್ಟಿಯ ವಿಷಯ ಬಂದಾಗ ಸದ್ಯದ ಸ್ಥಿತಿ ಸಮಾಧಾನಕರವಾಗಿಲ್ಲ ಎಂಬುದು ವಾಸ್ತವವೇ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಆಗಾಗ ‘ಉದ್ಯೋಗಸೃಷ್ಟಿ ಎಲ್ಲಿ ಆಗಿದೆ’ ಎಂದು ದೊಡ್ಡದನಿಯಲ್ಲಿ ಪ್ರಶ್ನಿಸುತ್ತಲೇ ಬಂದಿದೆ. ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯಂತೂ ‘ಪ್ರಧಾನಿ ಯುವಕರಿಗೆ ಸುಳ್ಳು ಭರವಸೆ ನೀಡಿದ್ದಾರೆ’ ಎಂದು ಆರೋಪಿಸಿದ್ದು ಉಂಟು.

130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೇರಳವಾಗಿದ್ದು, ‘ಮೇಕ್ ಇನ್ ಇಂಡಿಯಾ’ ಎಷ್ಟು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ನಿರೀಕ್ಷೆ ಇದ್ದೇ ಇದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ವಿಶ್ವದ ಅತ್ಯಂತ ದೊಡ್ಡ ಮೊಬೈಲ್ ತಯಾರಿಕಾ ಘಟಕಕ್ಕೆ ಚಾಲನೆ ದೊರೆತಿದೆ. ದಕ್ಷಿಣ ಕೊರಿಯಾದ ದೈತ್ಯ ಕಂಪನಿ ಸ್ಯಾಮ್ಂಗ್​ನ ಈ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ದ.ಕೊರಿಯಾ ಅಧ್ಯಕ್ಷ ಮೂನ್ ಜೆ. ಇನ್ ಚಾಲನೆ ನೀಡಿದ್ದು, 70 ಸಾವಿರ ಉದ್ಯೋಗಿಗಳನ್ನು ಇದು ಹೊಂದಿದೆ. 2014ರಲ್ಲಿ ಭಾರತ ಮೊಬೈಲ್ ತಯಾರಿಕೆಯ ಕೇವಲ ಎರಡು ಘಟಕಗಳನ್ನು ಹೊಂದಿತ್ತು. ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ 120ಕ್ಕೆ ಏರಿಕೆಯಾಗಿದ್ದು, 4 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದು ಗಮನಾರ್ಹ. ಈ ಮೂಲಕ ಭಾರತ ವಿಶ್ವದ 2ನೇ ಬೃಹತ್ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬೆಳವಣಿಗೆ ಚೀನಾಕ್ಕೆ ಸೆಡ್ಡು ಹೊಡೆಯಲೂ ಪೂರಕವಾಗಿ ಪರಿಣಮಿಸಲಿದೆ. ನಮ್ಮ ದೇಶದಲ್ಲಿ ಆಟಿಕೆಯಿಂದ ಹಿಡಿದು ಟಿ.ವಿ.ಗಳವರೆಗೆ ಚೀನಾ ಉತ್ಪನ್ನಗಳದ್ದೇ ದರ್ಬಾರು. ಸ್ಮಾರ್ಟ್​ಫೋನ್​ಗಳ ತಯಾರಿಕೆಯಲ್ಲೂ ಚೀನಾ ಮುಂಚೂಣಿ. ಈಗ, ಮೊಬೈಲ್ ತಯಾರಿಕೆಯಲ್ಲಿ ಭಾರತವು ಉತ್ಸಾಹದಿಂದ ಮುನ್ನುಗ್ಗಿ, ದೊಡ್ಡ ಘಟಕಗಳನ್ನು ಸ್ಥಾಪಿಸುತ್ತಿರುವು ದರಿಂದ ಚೀನಾದ ಅವಲಂಬನೆ ತಗ್ಗಲಿದೆ ಅಲ್ಲದೆ ಭಾರತದ ವಾಣಿಜ್ಯಿಕ ಶಕ್ತಿಯೂ ಹೆಚ್ಚಲಿದೆ.

ಮುಂಬರುವ ದಿನಗಳಲ್ಲಿ ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್ ಆಂಧ್ರಪ್ರದೇಶದಲ್ಲಿ ತನ್ನ ನೂತನ ಘಟಕ ಸ್ಥಾಪಿಸಲಿದ್ದು, ಜರ್ಮನಿಯ ಕಾರು ತಯಾರಿಕಾ ಕಂಪನಿ ಫೋಕ್ಸ್​ವ್ಯಾಗನ್ ಮಹಾರಾಷ್ಟ್ರದ ಔರಂಗಾಬಾದ್, ಪುಣೆಯಲ್ಲಿ ಸ್ಕೋಡಾ ಕಾರು ತಯಾರಿಕಾ ಘಟಕ ಆರಂಭಿಸಲಿದೆ. ಇವು ಸಕಾರಾತ್ಮಕ ಬೆಳವಣಿಗೆಗಳಾದರೂ ಭಾರತದ ಉದ್ಯೋಗಾಕಾಂಕ್ಷಿಗಳ ಪ್ರಮಾಣವನ್ನು ಗಮನಿಸಿದರೆ ಅತ್ಯಲ್ಪವೆಂದು ಹೇಳಬೇಕು. ಹಾಗಾಗಿ, ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಮೇಕ್ ಇನ್ ಇಂಡಿಯಾಕ್ಕೆ ಮತ್ತಷ್ಟು ಬಲತುಂಬಲು ಸರ್ಕಾರ ಮುಂದಾಗಬೇಕು. ಗಣನೀಯ ಪ್ರಮಾಣದಲ್ಲಿ ಉದ್ಯೋಗಸೃಷ್ಟಿಯಾದಲ್ಲಿ ಮಾತ್ರ ಯುವಸಮೂಹದ ಮನಗೆಲ್ಲಲು ಸಾಧ್ಯ ಮತ್ತು ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಪ್ರತಿಪಕ್ಷದ ವಿರುದ್ಧ ಪ್ರಬಲ ಅಸ್ತ್ರವಾಗಿ ಇದನ್ನು ಬಳಸಲು ಸಾಧ್ಯ.

Leave a Reply

Your email address will not be published. Required fields are marked *

Back To Top