Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬುಲೆಟ್​ರಹಿತ ಬಂದೂಕು!

Monday, 09.07.2018, 3:03 AM       No Comments

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ಸಮಾಜಘಾತುಕ ಶಕ್ತಿಗಳನ್ನು ಹಣಿಯುವ ಸದಾಶಯದೊಂದಿಗೆ ಪೊಲೀಸ್ ಇಲಾಖೆಗೆ ಸೇರುವ ಉತ್ಸಾಹಿಗಳಿಗೆ, ಇಂಥ ಕಾರ್ಯನಿರ್ವಹಣೆಗೆ ಅಗತ್ಯವಾದ ಪ್ರಾಯೋಗಿಕ ಅನುಭವ/ಮಾಹಿತಿ ಒದಗಿಸುವಂಥ ಬೋಧಕರು ಮತ್ತು ತರಬೇತುದಾರರು ಪೊಲೀಸ್ ಅಕಾಡೆಮಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದು ವಿಷಾದನೀಯ. ಹೀಗಾಗಿ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕಾರ್ಯನಿರ್ವಹಣೆಯಲ್ಲಿ ಎದುರಾಗಬಹುದಾದ ಹೊಸ ಸವಾಲುಗಳನ್ನು ಎದುರಿಸುವುದಕ್ಕೆ, ತನ್ಮೂಲಕ ವೃತ್ತಿಕೌಶಲ ಮೆರೆಯುವುದಕ್ಕೆ ಹೊಸಗಸುಬಿ ಆರಕ್ಷಕರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಕಹಿವಾಸ್ತವ.

ಪೊಲೀಸ್ ಕೆಲಸವೆಂದರೆ, ವಾಡಿಕೆಯ ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವಿಕೆ, ಬಂದೋಬಸ್ತ್ ಚಟುವಟಿಕೆ, ಕಳ್ಳಕಾಕರು ಮತ್ತು ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವಿಕೆ ಎಂಬ ಗ್ರಹಿಕೆಯೇ ಸ್ಥಿರವಾಗಿದ್ದ ಕಾಲವೊಂದಿತ್ತು. ಆದರೀಗ, ಈ ಎಲ್ಲ ಸಾಂಪ್ರದಾಯಿಕ ಚಟುವಟಿಕೆಗಳ ಜತೆಗೆ, ವಿವಿಧ ಆಯಾಮಗಳ ಕಡೆಗೂ ಆರಕ್ಷಕರು ಹದ್ದಿನಕಣ್ಣು ಇರಿಸಬೇಕಾದ, ತನ್ಮೂಲಕ ಕಸುಬುದಾರಿಕೆ ಮೆರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ಕಾರಣ, ಪೊಲೀಸರಿಗಿಂತ ನೂರುಹೆಜ್ಜೆ ಮುಂದೆ ಹೋಗಿ ಉಪಾಯ ಹೆಣೆಯುವಲ್ಲಿ, ತಂತ್ರಗಾರಿಕೆ ಮೆರೆಯುವಲ್ಲಿ ಸಮಾಜವಿರೋಧಿ ಶಕ್ತಿಗಳು ಪಳಗಿರುವುದು. ‘ಸೈಬರ್ ಅಪರಾಧ’ದಂಥ ವಿಷಯವನ್ನೇ ತೆಗೆದುಕೊಳ್ಳೋಣ. ಡಿಜಿಟಲ್ ವ್ಯವಹಾರಗಳಿಗೆ ದಕ್ಕಿರುವ ಒತ್ತಾಸೆ ಸೇರಿದಂತೆ, ತಂತ್ರಜ್ಞಾನದ ವೈವಿಧ್ಯಮಯ ಅನ್ವಯಗಳಿಗೆ ಜಗತ್ತು ಒಡ್ಡಿಕೊಂಡಾಗಿನಿಂದ, ಒದಗಿರುವ ಪ್ರಯೋಜನಗಳ ಜತೆಜತೆಗೇ ಸೈಬರ್ ಅಪರಾಧಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿರುವುದು ತಳ್ಳಿಹಾಕಲಾಗದ ಸಂಗತಿ. ಇಂಥ ಯಾವುದೇ ಕುಕೃತ್ಯ ಜರುಗಿದಾಗೆಲ್ಲ, ಅದರ ಹಿಂದಿರಬಹುದಾದ ಜಾಲವನ್ನು ಪತ್ತೆಮಾಡಲು ಸಾಂಪ್ರದಾಯಿಕ ಮಾಗೋಪಾಯಗಳಿಗಿಂತ ಮಿಗಿಲಾದ ತಾಂತ್ರಿಕ ಪ್ರಾವೀಣ್ಯ ಮತ್ತು ಮಾಹಿತಿವಂತಿಕೆ ಅನಿವಾರ್ಯ. ಆದರೆ ಪೊಲೀಸ್ ಇಲಾಖೆಯಲ್ಲಿ ಇಂಥ ಪರಿಣತರು ಸಾಕಷ್ಟಿದ್ದಾರೆಯೇ ಎಂದು ಪ್ರಶ್ನಿಸಿಕೊಂಡರೆ ಸಿಗುವುದು ಬಹುತೇಕ ನಿರಾಶೆಯ ಉತ್ತರವೇ. ಹೀಗಾಗಿ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಅವನ್ನು ಸಮರ್ಥವಾಗಿ ಭೇದಿಸಿದ ನಿದರ್ಶನಗಳ ಸಂಖ್ಯೆ ಸಮಾಧಾನಕರವಾಗಿಲ್ಲ ಎನ್ನಬಹುದೇನೋ.

ನಕ್ಸಲ್ ತಂಡಗಳು, ಐಸಿಸ್​ನಂಥ ಉಗ್ರಗಾಮಿ ಸಂಘಟನೆಗಳು ಮತ್ತಿತರ ಭೂಗತ ಅಸ್ತಿತ್ವಗಳೊಂದಿಗೆ ಸೆಣಸುವಾಗ, ಎಕೆ-47 ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಪೊಲೀಸರು ತರಬೇತಿ ಪಡೆಯುವ ಅಗತ್ಯವಿದೆ. ಆದರೆ ರಾಜ್ಯದಲ್ಲಿ 13 ಪೊಲೀಸ್ ಅಕಾಡೆಮಿ/ಶಾಲೆಗಳಿದ್ದು, ತರಬೇತಿ, ರಿಫ್ರೆಷರ್ ಕೋರ್ಸ್, ಅಲ್ಪಾವಧಿ ಕೋರ್ಸ್, ಸೇವಾ ತರಬೇತಿಯಂಥ ವೈವಿಧ್ಯಮಯ ಬಾಬತ್ತುಗಳಿಗೆ ಅವಕಾಶ ನೀಡಲಾಗಿದ್ದರೂ, ಬೋಧಕರು, ತರಬೇತುದಾರರು, ಅಗತ್ಯ ಶಸ್ತ್ರಾಸ್ತ್ರಗಳ ಕೊರತೆ ಕಾಡುತ್ತಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ತಜ್ಞರ ಕೊರತೆಯಿರುವುದರಿಂದ, ಸಾವಿರಾರು ಪ್ರಕರಣಗಳ ತನಿಖೆಗೆ ಅನಗತ್ಯ ವಿಳಂಬ ಒದಗುತ್ತಿದ್ದು ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ಪಾರಾಗುತ್ತಿರುವ ಆಘಾತಕಾರಿ ಅಂಶವೂ ಹೊರಬಿದ್ದಿದೆ. ವಿವಿಧ ನೆಲೆಗಟ್ಟಿನ ಸಮಾಜವಿರೋಧಿಗಳನ್ನು ಮಟ್ಟಹಾಕುವ ಉದ್ದೇಶ ವ್ಯವಸ್ಥೆಯಲ್ಲಿ ಗಟ್ಟಿಯಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವೈಫಲ್ಯ ಎದುರಾಗುತ್ತಿರುವುದೇಕೆ ಎಂಬುದನ್ನು ಇಂಥ ಇನ್ನೂ ಹಲವು ಸಂಗತಿಗಳು ಹೇಳಿಯಾವು. ಎಲ್ಲ ಸಾಹಸಕಾರ್ಯಗಳನ್ನು ನಾಯಕನಟನೇ ಮುಗಿಸಿದ ಮೇಲೆ ಕೊನೆಯಲ್ಲಿ ಪೊಲೀಸರು ಬರುವಂತಾಗುವುದು ಕೆಲವೊಂದು ಚಲನಚಿತ್ರಗಳಲ್ಲಿ ಕಂಡುಬರುವ ವಾಡಿಕೆಯ ದೃಶ್ಯ. ಹೇಳಿಕೇಳಿ ಇದು ಸಿನಿಮಾ ಎಂದು ಸಮಾಧಾನ ಮಾಡಿಕೊಂಡರೂ, ಮೇಲೆ ಉಲ್ಲೇಖಿಸಲಾಗಿರುವ ಕೊರತೆಗಳನ್ನೊಮ್ಮೆ ನೆನೆದಾಗ ಪರಿಣತಿ, ಪೂರಕ ಸೌಕರ್ಯ, ಸಂಪನ್ಮೂಲದ ಒತ್ತಾಸೆ ಇಲ್ಲದಿರುವಾಗ ಪೊಲೀಸರು ತಾನೇ ಏನು ಮಾಡಿಯಾರು? ಎಂದು ಕೇಳಿಕೊಳ್ಳುವಂತಾಗುತ್ತದೆ. ಈ ಅಸಹಾಯಕ ಪರಿಸ್ಥಿತಿ ಇನ್ನಾದರೂ ಕೊನೆಯಾಗಲಿ.

Leave a Reply

Your email address will not be published. Required fields are marked *

Back To Top