Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕಟುಸಂದೇಶ ನೀಡಬೇಕಿದೆ

Saturday, 07.07.2018, 3:05 AM       No Comments

‘ಸುದ್ದಿ’ಗಿಂತ ವೇಗವಾಗಿ ‘ಗಾಳಿಸುದ್ದಿ’ ಹರಡುತ್ತದೆ ಎಂಬುದೊಂದು ಮಾತಿದೆ. ಇದಕ್ಕೆ ಆಧುನಿಕ ತಂತ್ರಜ್ಞಾನ ಮತ್ತು ಪೂರಕ ಸಾಧನ-ಸಲಕರಣೆಗಳ ಒತ್ತಾಸೆ ಸಿಕ್ಕಿಬಿಟ್ಟರಂತೂ, ವದಂತಿ-ವೇಗ ಮತ್ತಷ್ಟು ಹೆಚ್ಚುವುದರ ಜತೆಗೆ ಅದರಿಂದೊದಗುವ ವ್ಯತಿರಿಕ್ತ ಪರಿಣಾಮವೂ ತೀವ್ರವಾಗಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಮಕ್ಕಳ ಕಳ್ಳತನ ನಡೆಯುತ್ತಿದೆ, ಅದಕ್ಕೊಂದು ಗ್ಯಾಂಗೇ ಇದೆ ಎಂಬ ಗಾಳಿಸುದ್ದಿ ಎಲ್ಲಿಂದ ಹುಟ್ಟಿತೋ, ಅದು ಹೇಗೆ ದೇಶಾದ್ಯಂತ ವ್ಯಾಪಿಸಿತೋ ಬಲ್ಲವರಿಲ್ಲ. ಇದನ್ನು ನಿಜವೆಂದೇ ನಂಬಿ ಅಮಾಯಕರು ಅಥವಾ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಸಾರ್ವಜನಿಕರು ಭೀಕರ ಹಲ್ಲೆಮಾಡಿರುವ, ಕೆಲವೊಮ್ಮೆ ಅದು ಸಾವಿನಲ್ಲೂ ಪರ್ಯವಸಾನವಾಗಿರುವ ಸಾಕಷ್ಟು ನಿದರ್ಶನಗಳಿವೆ. ಇಷ್ಟೇ ಅಲ್ಲ, ಅಸ್ಸಾಂನಲ್ಲಿ ನಡೆಯಲಿರುವ ಸಾಧುಗಳ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂನ್ಯಾಸಿಗಳನ್ನು ಮಕ್ಕಳ ಕಳ್ಳರೆಂದೇ ತಪ್ಪಾಗಿ ಗ್ರಹಿಸಿದ ಸಾರ್ವಜನಿಕರು ಹಲ್ಲೆಗೆ ಮುಂದಾದ, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸೈನಿಕರು ಅವರನ್ನು ರಕ್ಷಿಸಿ, ಮಕ್ಕಳ ಕಳ್ಳರಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಸುರಕ್ಷಿತವಾಗಿ ಕಳಿಸಿಕೊಟ್ಟ ಘಟನೆ ಗುವಾಹಟಿಯಿಂದ ವರದಿಯಾಗಿದೆ. ಗುವಾಹಟಿಗೆ ಇಂಥ ಕಳ್ಳರು ಪ್ರವೇಶಿಸಿದ್ದಾರೆ ಎಂಬ ಸುಳ್ಳು ಸಂದೇಶ ಹಬ್ಬಿದ್ದೇ ಸಾರ್ವಜನಿಕರ ಈ ದುಡುಕಿಗೆ ಕಾರಣ ಎಂದು ತಿಳಿದುಬಂದಿದೆ. ಈ ವದಂತಿ ಪ್ರಸರಣಕ್ಕೆ ಮಧ್ಯವರ್ತಿಯಾಗಿದ್ದು ‘ವಾಟ್ಸ್​ಆಪ್’ನಂಥ ವ್ಯವಸ್ಥೆ ಎಂಬುದು ವಿಷಾದನೀಯ.

ಹಣ್ಣು ಕತ್ತರಿಸಿ ಇತರರಿಗೆ ಹಂಚಲೆಂದು ಚಾಕುವನ್ನು ಬಳಸುವವರು ಇರುವಂತೆಯೇ, ಹಿಂಸಾತ್ಮಕ ಕೃತ್ಯಗಳಿಗೆ ಅದನ್ನು ಬಳಸುವವರೂ ಇದ್ದಾರೆ. ಇಲ್ಲಿ ತಪು್ಪ ಚಾಕುವಿನದಲ್ಲ, ಅದನ್ನು ಹಿಡಿದಿರುವಾತನ ಚಿತ್ತಸ್ಥಿತಿಯದ್ದು. ವಾಟ್ಸ್​ಆಪ್ ಸೇರಿದಂತೆ ಯಾವುದೇ ಆಧುನಿಕ ತಂತ್ರಜ್ಞಾನವನ್ನು ವಿಕೃತ ರೀತಿಯಲ್ಲಿ ಬಳಸಿಕೊಳ್ಳುವವರಿಗೂ ಅನ್ವಯವಾಗುವ ಮಾತಿದು. ಇಂಥವರಿಗೆ, ತಮ್ಮ ಕಿಡಿಗೇಡಿತನದಿಂದಾಗಿ ಒಂದಿಡೀ ಸಮಾಜದ ಸ್ವಾಸ್ಥ್ಯವೇ ನಶಿಸುತ್ತದೆ ಎಂಬುದಕ್ಕಿಂತ, ಹಿಂಸಾವಿನೋದ-ವಿಕೃತಿಗಳೇ ಮುಖ್ಯವಾಗುತ್ತವೆ ಎಂಬುದು ನೋವಿನ ಸಂಗತಿ. ಇಂಥವರ ಹೆಡೆಮುರಿ ಕಟ್ಟುವುದಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ. ಆದರೆ, ಇಂಥ ಜಾಲದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಲುಕಿ ಭಾಗೀದಾರರೆನಿಸಿಕೊಂಡಿರುವ ಅಮಾಯಕರಿಗೆ ಸಂಕಷ್ಟ ಒದಗದಂತೆ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಎಚ್ಚರ ವಹಿಸಬೇಕಿದೆ. ಹಾಗಾಗಿ ಇಂಥದೊಂದು ವರ್ಗೀಕರಣವು ಸರ್ಕಾರದ ಪಾಲಿಗೆ ಹಗ್ಗದ ಮೇಲಿನ ನಡಿಗೆಯೇ ಸರಿ. ಗಾಳಿಸುದ್ದಿಗಳು/ಸಂದೇಶಗಳು ಹೀಗೆ ಅನಿರ್ಬಂಧಿತವಾಗಿ ರವಾನೆಯಾಗುವದನ್ನು ತಡೆಗಟ್ಟುವುದು ಹೇಗೆಂಬುದರ ಕುರಿತು ಸಮಾಲೋಚಿಸುತ್ತಿರುವ ವಾಟ್ಸ್​ಆಪ್ ಸಂಸ್ಥೆ, ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಸಮಸ್ಯೆಗೊಂದು ನಿರ್ಣಾಯಕ ಅಂತ್ಯಹಾಡುವವರಿಗೆ 50 ಸಾವಿರ ಡಾಲರ್​ನಷ್ಟು (ಅಂದರೆ ಸುಮಾರು 34 ಲಕ್ಷ ರೂ.) ಧನಸಹಾಯ ಮಾಡುವುದಾಗಿ ಭರವಸೆ ನೀಡಿದೆ ಎಂಬುದಿಲ್ಲಿ ಉಲ್ಲೇಖನೀಯ; ಇದು ವದಂತಿ ಹರಡಿಕೆಯ ತಡೆಗೆ ಕ್ಷಿಪ್ರಕ್ರಮ ಕೈಗೊಳ್ಳುವಂತೆ ಅಮೆರಿಕ ಮೂಲದ ವಾಟ್ಸ್​ಆಪ್ ಸಂಸ್ಥೆಗೆ ಭಾರತ ಸರ್ಕಾರ ನಿರ್ದೇಶಿಸಿದ್ದರ ಫಲಶ್ರುತಿ. ಆದರೆ ಜನರು ಎಲ್ಲದಕ್ಕೂ ಕಾಯ್ದೆ-ಕಾನೂನಿನ ಅಂಕುಶವನ್ನು ನಿರೀಕ್ಷಿಸುವ ಬದಲು, ಹೊಣೆಗಾರಿಕೆಯುಳ್ಳ ನಾಗರಿಕರಾಗಿ ವಿವೇಚನೆ ಮೆರೆಯುವ ಅಗತ್ಯವಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ, ಪಾರಸ್ಪರಿಕ ಸಂಬಂಧಗಳಲ್ಲಿ ವಿಷಗಾಳಿ ಹಬ್ಬಿಸುವಂಥ ಯಾವುದೇ ಸಂದೇಶ ರವಾನೆಯಾದರೂ ಅದನ್ನು ಸುಖಾಸುಮ್ಮನೆ ಕ್ಷಿಪ್ರವಾಗಿ ಮತ್ತಷ್ಟು ಜನರಿಗೆ ರವಾನಿಸುವುದಕ್ಕೂ ಮುನ್ನ, ಅದು ಮಿಥ್ಯವೇ? ತಥ್ಯವೇ? ಎಂಬುದನ್ನು ತೂಗಿನೋಡುವಷ್ಟು ವಿವೇಕವಂತರಾಗಬೇಕಿದೆ. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು. ಕಾಯಿದೆಯ ಜತೆಗೆ ಸಾರ್ವಜನಿಕ ವಿವೇಚನೆಯೂ ಇದ್ದರೆ ಒಳಿತು.

Leave a Reply

Your email address will not be published. Required fields are marked *

Back To Top