Friday, 16th November 2018  

Vijayavani

Breaking News

ಅನಿಶ್ಚಿತತೆಗೆ ತೆರೆ

Thursday, 05.07.2018, 3:05 AM       No Comments

ದೆಹಲಿ ಸರ್ಕಾರಕ್ಕೆ ಮತ್ತು ಅಲ್ಲಿನ ಲೆಫ್ಟಿನಂಟ್ ಗವರ್ನರ್​ಗೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಮೂಲಕ ಸವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಈ ಎರಡು ಅಸ್ತಿತ್ವಗಳ ನಡುವೆ ಮೈದಳೆದಿದ್ದ ಶೀತಲಸಮರಕ್ಕೆ ತೆರೆ ಎಳೆದಿದೆ. ಲೆಫ್ಟಿನಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಸಚಿವ ಸಂಪುಟದ ಸಲಹೆ-ಸೂಚನೆ ಮೇರೆ ಕಾರ್ಯನಿರ್ವಹಿಸುವಂಥವರೇ ವಿನಾ, ಕೇಂದ್ರ ಸರ್ಕಾರದ ಕೈಗೊಂಬೆಯಲ್ಲ ಎಂದೂ ಅದು ಸ್ಪಷ್ಟಪಡಿಸಿದೆ. ಈ ಆದೇಶದಿಂದಾಗಿ ದೆಹಲಿಯಲ್ಲಿ ಕಳೆದ 3 ವರ್ಷದಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟಕ್ಕೊಂದು ರ್ತಾಕ ಅಂತ್ಯ ಸಿಕ್ಕಂತಾಗಿದೆ.

ಇತ್ತ ಒಂದು ಪರಿಪೂರ್ಣ ರಾಜ್ಯವೂ ಅಲ್ಲದ, ಅತ್ತ ಅಪ್ಪಟ ಕೇಂದ್ರಾಡಳಿತ ಪ್ರದೇಶವೂ ಅಲ್ಲದ ದೆಹಲಿಯದ್ದು ಒಂದು ವಿಶಿಷ್ಟ ಅಥವಾ ವಿಲಕ್ಷಣ ಸ್ಥಾನಮಾನ ಎನ್ನಲಡ್ಡಿಯಿಲ್ಲ. ಸಂಪೂರ್ಣ ಸ್ವಾಯತ್ತತೆ ಇಲ್ಲದ ಕಾರಣದಿಂದಾಗಿ, ದೆಹಲಿ ಸರ್ಕಾರದ ವ್ಯಾಪ್ತಿಯ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗಾವಣೆಯಂಥ ಮಹತ್ವದ ಚಟುವಟಿಕೆಗಳನ್ನು ಲೆಫ್ಟಿನಂಟ್ ಗವರ್ನರ್ ದೆಹಲಿ ಸರ್ಕಾರದೊಂದಿಗೆ ರ್ಚಚಿಸಿ ಮಾಡಬೇಕು ಎಂಬುದು ಹಿಂದಿನ ಕೇಂದ್ರ ಸರ್ಕಾರಗಳು ಹೊರಡಿಸಿದ್ದ ಆದೇಶದ ಒಂದು ಭಾಗವಾಗಿತ್ತು. ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್, ನ್ಯಾಯಾಲಯ, ಭೂಮಿಯೇ ಮೊದಲಾದ ವಲಯಗಳು ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿದ್ದುದೇ ಈ ಆದೇಶಕ್ಕೆ ಕಾರಣ. ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಜಾರಿಯಲ್ಲಿದ್ದ ಈ ನಿಯಮವನ್ನು ಕೇಜ್ರಿವಾಲ್ ಸರ್ಕಾರ ರಚನೆಯಾದ ಬಳಿಕ ಕೇಂದ್ರ ಹಿಂಪಡೆದಿತ್ತು. ತರುವಾಯ, ಭ್ರಷ್ಟಾಚಾರ ನಿಗ್ರಹ ದಳ ರಚನೆ ಸೇರಿದಂತೆ ಅನೇಕ ಸರ್ಕಾರಿ ಆಡಳಿತ ವಿಚಾರಗಳಲ್ಲಿ ಮುಖ್ಯಮಂತ್ರಿ ಹಾಗೂ ಲೆಫ್ಟಿನಂಟ್ ಗವರ್ನರ್ ಕಚೇರಿ ನಡುವೆ ಹಿತಾಸಕ್ತಿಯ ಘರ್ಷಣೆ ನಡೆಯುತ್ತಲೇ ಇದ್ದು, ಅಂತಿಮವಾಗಿ ಅದು ದೆಹಲಿ ಉಚ್ಚ ನ್ಯಾಯಾಲಯ, ನಂತರದಲ್ಲಿ ಸವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂಬುದಿಲ್ಲಿ ಸ್ಮರಣಾರ್ಹ.

ಈಗ, ಲೆಫ್ಟಿನಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ಅಧಿಕಾರವ್ಯಾಪ್ತಿಯ ಕುರಿತು ನ್ಯಾಯಾಲಯ ಸ್ಪಷ್ಟವಾಗಿ ಲಕ್ಷ್ಮಣರೇಖೆ ಎಳೆದಿರುವುದರಿಂದಾಗಿ ಗೊಂದಲಕ್ಕೆ ಆಸ್ಪದವಿಲ್ಲದಂತಾಗಿದೆ. ಇದರನ್ವಯ ಮನೆಬಾಗಿಲಿಗೆ ಪಡಿತರ ವಿತರಣೆ ವ್ಯವಸ್ಥೆಯ ಮರುಚಾಲನೆ, ಮೊಹಲ್ಲಾ ಕ್ಲಿನಿಕ್ ಸೇರಿ ರಾಜ್ಯ ಸರ್ಕಾರದ ಇತರ ಜನಪ್ರಿಯ ಯೋಜನೆಗಳ ಮುಂದುವರಿಕೆಗೆ ಆಸ್ಪದ ದೊರೆಯಲಿದೆ. ಇದೇ ರೀತಿಯಲ್ಲಿ, ಅಧಿಕಾರವ್ಯಾಪ್ತಿಯ ಗೊಂದಲದ ಕಾರಣದಿಂದಾಗಿ ಬಾಕಿ ಉಳಿದಿದ್ದ ಇತರ ಜನಕಲ್ಯಾಣ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲು ಇದು ಪೂರಕವಾಗಿ ಪರಿಣಮಿಸಲಿ ಎಂಬುದು ಜನಾಶಯ. ಕಾರಣ, ಇಂಥ ರಾಜಕೀಯ ಹಗ್ಗಜಗ್ಗಾಟಗಳ ವ್ಯತಿರಿಕ್ತ ಪರಿಣಾಮ ಅನುಭವಿಸುವುದು ಶ್ರೀಸಾಮಾನ್ಯರೇ. ಆದ್ದರಿಂದ, ಜನಹಿತವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ತೆರನಾದ ವೈಯಕ್ತಿಕ ಅಹಮಿಕೆ ಅಥವಾ ರಾಜಕೀಯ ಪ್ರತಿಷ್ಠೆಗೆ, ಅರಾಜಕತೆಗೆ (ಮಾತುಮಾತಿಗೂ ಧರಣಿ ಕೂರುವ ಮುಖ್ಯಮಂತ್ರಿ ಕೇಜ್ರಿವಾಲರಿಗೆ ‘ಪ್ರಜಾಪ್ರಭುತ್ವದಲ್ಲಿ ಅರಾಜಕತೆಗೆ ಅವಕಾಶವಿಲ್ಲ’ ಎಂಬ ನ್ಯಾಯಾಲಯದ ಎಚ್ಚರಿಕೆಯಿಲ್ಲಿ ಉಲ್ಲೇಖನೀಯ!) ಆಸ್ಪದ ನೀಡದೆ ಪರಸ್ಪರ ಸಹಕಾರ ಮನೋಭಾವದಲ್ಲಿ ಅಭಿವೃದ್ಧಿರಥವನ್ನು ಮುನ್ನಡೆಸುವ ಹೊಣೆಗಾರಿಕೆ ದೆಹಲಿ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ಅರ್ಥಾತ್ ಕೇಂದ್ರ ಸರ್ಕಾರ ಎಂಬೆರಡು ಸಾರಥಿಗಳ ಹೆಗಲೇರಿದೆ. ಸಾರ್ವಜನಿಕರ ನಿರೀಕ್ಷೆ ಮುಕ್ಕಾಗದಂತೆ ಈ ಎರಡೂ ಅಸ್ತಿತ್ವಗಳು ಬದ್ಧತೆ ಮೆರೆಯಲಿ. ದೆಹಲಿಯಲ್ಲಿನ ಬೆಳವಣಿಗೆಗಳು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತವೆಂಬುದನ್ನು ಅಧಿಕಾರಸ್ಥರು ಮರೆಯಬಾರದು.

Leave a Reply

Your email address will not be published. Required fields are marked *

Back To Top