Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಎಪಿಎಲ್ ಕಾರ್ಡ್ ರದ್ದತಿಯೇ ಪರಿಹಾರವಲ್ಲ

Wednesday, 04.07.2018, 3:04 AM       1 Comment

ಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ, ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಅನ್ನಭಾಗ್ಯ’ ಯೋಜನೆಯಡಿ ಪ್ರತಿತಿಂಗಳು ನೀಡಲಾಗುತ್ತಿದ್ದ ಪಡಿತರ ಅಕ್ಕಿ ಕಾಳಸಂತೆ ಸೇರುತ್ತಿದೆಯೆಂಬ ಮಾಹಿತಿ ಮತ್ತು ಇದಕ್ಕೆ ಎಪಿಎಲ್ ಕಾರ್ಡದಾರರ ದಿವ್ಯನಿರ್ಲಕ್ಷ್ಯವೇ ಕಾರಣ ಎಂಬ ಗ್ರಹಿಕೆ ಸರ್ಕಾರದ ಈ ತೀರ್ವನಕ್ಕೆ ಕಾರಣ ಎನ್ನಲಾಗುತ್ತಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಎಪಿಎಲ್ ಕಾರ್ಡಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯ ನೀಡಿಕೆಯಾಗುತ್ತಿರುವುದೇನೋ ದಿಟ ಮತ್ತು ಒಂದಷ್ಟು ನಿದರ್ಶನಗಳನ್ನು ಹೊರತುಪಡಿಸಿದರೆ ಈ ವರ್ಗಕ್ಕೆ ಸೇರಿದ ಬಹುತೇಕ ಗ್ರಾಹಕರು ಈ ಅಕ್ಕಿಯನ್ನು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿರುವುದೂ ನಿಜ. ಹೀಗೆ ನೀಡಲ್ಪಡುವ ಅಕ್ಕಿ ಗುಣಮಟ್ಟದ್ದಾಗಿರುವುದಿಲ್ಲ ಎಂಬ ಗ್ರಹಿಕೆಯೋ ಅಥವಾ ಪಡಿತರ ವಿತರಣೆಗೆ ನಿಗದಿಪಡಿಸಿದ ಕಾಲಾವಧಿ ತಮಗೆ ಹೊಂದಿಕೆಯಾಗುತ್ತಿಲ್ಲ ಎಂಬುದೋ ಕಾರ್ಡದಾರರ ಈ ವರ್ತನೆಗೆ ಕಾರಣವಾಗಿದ್ದಿರಬಹುದು. ಆದರೆ ಇಂಥದೊಂದು ಪರಿಸ್ಥಿತಿಯೇ ಕೆಲವೊಂದು ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಕಾಳಸಂತೆಕೋರರಿಗೆ ಬಂಡವಾಳವಾಗಿಬಿಟ್ಟಿದೆ. ವಿವಿಧ ಕಾರಣಗಳಿಗಾಗಿ ಮಾರಾಟವಾಗದೆ ಉಳಿದ ‘ಅನ್ನಭಾಗ್ಯ ಅಕ್ಕಿ’, ಪಾಲಿಷಿಂಗ್ ಸಂಸ್ಕಾರಕ್ಕೆ ಒಳಗೊಂಡು ‘ಪ್ರತಿಷ್ಠಿತ’ ಬ್ರಾ್ಯಂಡ್ ಹಣೆಪಟ್ಟಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚುವರಿ ಬೆಲೆಗೆ ಮಾರಾಟವಾಗುತ್ತದೆ. ಇಂಥ ವಿಪರ್ಯಾಸಕ್ಕೆ ಕಾರಣವಾಗಿರುವ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಮೂಲೋತ್ಪಾಟನೆ ಮಾಡುವ ಕಡೆಗೆ ಸರ್ಕಾರ ಗಮನಹರಿಸಿದರೆ ಒಳಿತು; ಆದರೆ ಇದರ ಬದಲು, ಎಪಿಎಲ್ ಕಾರ್ಡಗಳನ್ನೇ ರದ್ದುಪಡಿಸುವ ಅಥವಾ ಅದಕ್ಕೆ ಬದಲಿಯಾಗಿ ಮತ್ತಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರದ ಧೋರಣೆ ಎಷ್ಟು ಸರಿ? ಇದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂದಂತಾಗುವುದಿಲ್ಲವೇ? ಎಂಬುದು ಸಮಾಜದ ಕೆಲ ಸ್ತರದವರ ಪ್ರಶ್ನೆ ಮತ್ತು ಅಭಿಪ್ರಾಯ.

ಎಪಿಎಲ್ ಕಾರ್ಡದಾರರಲ್ಲಿ ಬಹುತೇಕರು ಪಡಿತರ ಅಕ್ಕಿ ಖರೀದಿಗೆ ನಿರಾಸಕ್ತಿ ತೋರಿಸುತ್ತಿರುವುದು ಎಷ್ಟು ನಿಜವೋ, ಅದನ್ನೇ ಅವಲಂಬಿಸಿರುವ ಕಾರ್ಡದಾರರ ಸಂಖ್ಯೆಯೂ ಸಾಕಷ್ಟಿದೆ ಎಂಬುದನ್ನು ತಳ್ಳಿಹಾಕಲಾಗದು. ಇಂಥವರ ಹಿತ ಕಾಯಲಿಕ್ಕಾದರೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಮುಚ್ಚಿ ದಕ್ಷತೆಗೆ ಇಂಬು ಕೊಡಬೇಕಿದೆ. ಅದಿಲ್ಲದೆ ಸುಖಾಸುಮ್ಮನೆ ಕಾರ್ಡ್ ರದ್ದತಿಗೆ ಮುಂದಾದಲ್ಲಿ, ನ್ಯಾಯಬೆಲೆ ಅಂಗಡಿಯವರು ಮತ್ತು ಕಾಳಸಂತೆಕೋರರ ನಡುವಿನ ಅಪವಿತ್ರ ಮೈತ್ರಿಗೆ ಮದ್ದರೆದಂತಾಗುವುದಿಲ್ಲ, ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತದೆ. ಆದ್ದರಿಂದ, ಸದರಿ ವ್ಯವಸ್ಥೆಯೊಳಗಡೆ ತೂರಿಕೊಂಡು ಅಕ್ರಮ ಚಟುವಟಿಕೆ ಎಸಗುತ್ತಿರುವವರ ಹೆಡೆಮುರಿ ಕಟ್ಟಿ ಶಿಸ್ತುಕ್ರಮ ಕೈಗೊಳ್ಳುವುದರ ಜತೆಜತೆಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಆಧುನೀಕರಣ ಮತ್ತು ವೃತ್ತಿಪರತೆಯ ಸ್ಪರ್ಶ ನೀಡಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಕೆಲವು ನ್ಯಾಯಬೆಲೆ ಅಂಗಡಿಗಳ ಆಹಾರಧಾನ್ಯ ದಾಸ್ತಾನು ಕೊಠಡಿಯನ್ನೊಮ್ಮೆ ಅವಲೋಕಿಸಿದಲ್ಲಿ ನೈರ್ಮಲ್ಯದ ಕೊರತೆ ತಾಂಡವವಾಡುತ್ತಿರುವುದು, ಅದು ಇಲಿ-ಹೆಗ್ಗಣಗಳ ಆವಾಸಸ್ಥಾನವೇ ಆಗಿಬಿಟ್ಟಿರುವುದು ಕಣ್ಣಿಗೆ ರಾಚುವಂತಿರುತ್ತದೆ. ಇದನ್ನು ಕಂಡವರು ಪಡಿತರ ಧಾನ್ಯ ಖರೀದಿಸುವ ಮನಸ್ಸು ಮಾಡುವುದಾದರೂ ಹೇಗೆ? ಆದ್ದರಿಂದ, ಶುಚಿತ್ವದ ನಿರ್ವಹಣೆ, ನಿಷ್ಕೃಷ್ಟ ಕಾರ್ಯಸೂಚಿ ಇತ್ಯಾದಿ ವಿಷಯಗಳ ಕಡೆಗೂ ಸರ್ಕಾರ ಆದ್ಯಗಮನ ಹರಿಸಬೇಕಿದೆ.

One thought on “ಎಪಿಎಲ್ ಕಾರ್ಡ್ ರದ್ದತಿಯೇ ಪರಿಹಾರವಲ್ಲ

  1. ಹಳ್ಳಿಗಳಲ್ಲೇ ಲಕ್ಷಾಧೀಶ್ವರಿರುವ ರೈತರುಗಳ ಹತ್ತಿರವೇ ಬಿ.ಪಿ.ಎಲ್ ಕಾರ್ಡುಗಳಿವೆ. ಹಿಂದೆ ಮುಂದೆ ನೋಡದೇ, ಪರಿಶೀಲಿಸದೇ ರೇಷನ್ ಕಾರ್ಡುಗಳನ್ನು ಕೊಡಲಾಗಿದೆ. ಇದು ಯಾರ ತಪ್ಪು?

Leave a Reply

Your email address will not be published. Required fields are marked *

Back To Top