Friday, 16th November 2018  

Vijayavani

Breaking News

ಸ್ವಸ್ಥ ಸಮಾಜಕ್ಕೆ ಧಕ್ಕೆಯಾಗದಿರಲಿ

Tuesday, 03.07.2018, 3:05 AM       No Comments

ಮಾದಕದ್ರವ್ಯದ ಅತಿರೇಕದ ಸೇವನೆಯಿಂದಾಗಿ ಪಂಜಾಬ್​ನಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ. ಈ ಸಂಗತಿ ಮುಂದಿಟ್ಟುಕೊಂಡು ಸಮಾಜದ ವಿವಿಧ ನೆಲೆಗಟ್ಟುಗಳಿಂದ ಟೀಕಾಪ್ರಹಾರ ಎದುರಾದ ಹಿನ್ನೆಲೆಯಲ್ಲಿ ಹಾಗೂ ಮಾದಕವಸ್ತು ವ್ಯಸನದ ವಿರುದ್ಧ ಅಲ್ಲಿನ ಕೆಲ ಹೋರಾಟಗಾರರು ಜುಲೈ 1ರಿಂದ ‘ಕರಾಳವಾರ’ ಆಚರಣೆಯಲ್ಲಿ ತೊಡಗಿರುವುದನ್ನು ಮನಗಂಡು, ಮಾದಕವಸ್ತು ಮಾರಾಟಗಾರರು ಮತ್ತು ಕಳ್ಳಸಾಗಣೆಗಾರರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.

ಮಾದಕವಸ್ತು ವ್ಯಸನದಂಥ ಪೆಡಂಭೂತದ ಮೂಲೋತ್ಪಾಟನೆ ಈ ಕ್ಷಣದ ಅನಿವಾರ್ಯತೆ; ಆದರೆ ಗಲ್ಲುಶಿಕ್ಷೆಯ ಕುರಿತಾದ ಚರ್ಚೆಯೇ ಭಾರತದಲ್ಲಿನ್ನೂ ನಿರ್ಣಾಯಕ ಘಟ್ಟವನ್ನು ಮುಟ್ಟಿಲ್ಲದ ಈ ಸಂದರ್ಭದಲ್ಲಿ, ಈ ಪಿಡುಗಿಗೆ ಅಂಥದೊಂದು ಘೋರಶಿಕ್ಷೆಯ ಶಿಫಾರಸು ಎಷ್ಟರಮಟ್ಟಿಗೆ ಫಲಪ್ರದವಾಗಬಲ್ಲದು ಎಂಬುದು ನಿರೀಕ್ಷೆ ಹುಟ್ಟುಹಾಕಿರುವ ಸಂಗತಿ. ಅಮಲುಕಾರಕ ವಸ್ತುಗಳನ್ನು ಅತಿರೇಕದ ಪ್ರಮಾಣದಲ್ಲಿ ಸೇವಿಸಿದ್ದರಿಂದಾಗಿ ಪಂಜಾಬ್​ನಲ್ಲಿ ಕಳೆದ ಜೂನ್ ತಿಂಗಳೊಂದರಲ್ಲೇ 23 ಸಾವುಗಳು ಸಂಭವಿಸಿವೆ ಎಂಬ ಮಾಹಿತಿ ಅಲ್ಲಿ ವ್ಯಾಪಕವಾಗಿರುವ ಈ ದುಶ್ಚಟದ ತೀವ್ರತೆಯನ್ನು ಹೇಳಬಲ್ಲದು. ಈ ಕುರಿತಾದ ‘ಉಡ್ತಾ ಪಂಜಾಬ್’ ಎಂಬ ಚಿತ್ರವೂ ನಿರ್ವಣಗೊಂಡು ವಿವಾದ ಹುಟ್ಟುಹಾಕಿದ್ದಿನ್ನೂ ಜನಮಾನಸದಲ್ಲಿ ಹಸಿರಾಗಿದೆ.

ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವಪೀಳಿಗೆಯೇ ಮಾದಕದ್ರವ್ಯದ ಕಬಂಧಬಾಹುವಿನ ಹಿಡಿತಕ್ಕೆ ಸಿಲುಕುವಂತಾಗುವುದು ಆಘಾತಕಾರಿ ಬೆಳವಣಿಗೆಯೇ ಸರಿ. ಇದು ಪಂಜಾಬ್ ರಾಜ್ಯವೊಂದಕ್ಕೆ ಸೀಮಿತವಾಗಿರದೆ ದೇಶದ ವಿವಿಧೆಡೆ ಗುಪ್ತಗಾಮಿನಿಯಾಗಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕರ್ನಾಟಕವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ವೈದ್ಯರ ಶಿಫಾರಸು ಚೀಟಿಯ ಹಂಗಿಲ್ಲದೆಯೇ ರಾಜ್ಯದಲ್ಲಿ ಅಮಲುಪದಾರ್ಥಗಳು ಜನರಿಗೆ ಸುಲಭವಾಗಿ ದಕ್ಕುತ್ತಿರುವ, ಈ ವಲಯದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿರುವ ಕುರಿತು ವಿಜಯವಾಣಿ ಪತ್ರಿಕೆ ಇತ್ತೀಚೆಗಷ್ಟೇ ವಿಸõತ ವರದಿ ನೀಡಿತ್ತು ಎಂಬುದಿಲ್ಲಿ ಉಲ್ಲೇಖನೀಯ. ಹೀಗಾಗಿ, ಈ ಪಿಡುಗಿನ ಮೂಲೋತ್ಪಾಟನೆಗೆ ಸಂಬಂಧಪಟ್ಟವರು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕಾದ ಅಗತ್ಯವಿದೆ. ಜತೆಗೆ, ಇಂಥ ಪದಾರ್ಥಗಳ ಮೂಲವನ್ನು ಮತ್ತು ಅದರ ಹಿಂದಿರುವ ಷಡ್ಯಂತ್ರವನ್ನು ಪತ್ತೆಹಚ್ಚಿ, ಸಂಬಂಧಿತ ದುರುಳರಿಗೆ ಅವರೆಷ್ಟೇ ಪ್ರಭಾವಿಗಳಾಗಿದ್ದರೂ ಉಗ್ರಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ.

ಅಮಲುಪದಾರ್ಥಗಳ ಸೇವನೆಗೆ ಮುಂದಾಗುವವರು ವೈಯಕ್ತಿಕ ಆರೋಗ್ಯಕ್ಕೆ ಧಕ್ಕೆ ತಂದುಕೊಳ್ಳುವುದರ ಜತೆಜತೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಕಂಟಕಪ್ರಾಯರಾಗುತ್ತಾರೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ. ಶಾಲಾ-ಕಾಲೇಜುಗಳ ಸಮೀಪ ಇಂಥ ಪದಾರ್ಥಗಳು ಸುಲಭಕ್ಕೆ ದಕ್ಕುತ್ತವೆ ಎಂಬ ಅಭಿಪ್ರಾಯಗಳಿವೆ. ಹೀಗಿರುವಾಗ, ಯಾರದೋ ಪ್ರಲೋಭನೆಗೋ ಅಥವಾ ಕೆಟ್ಟ ಕುತೂಹಲಕ್ಕೋ ಒಳಗಾಗಿ ಈ ದುರ್ವ್ಯಸನಕ್ಕೆ ಒಡ್ಡಿಕೊಳ್ಳುವ ಯುವಪೀಳಿಗೆ, ಅಲ್ಲಿಂದ ಹಿಂದಕ್ಕೆ ಮರಳಲಾಗದಷ್ಟರ ಮಟ್ಟಿಗೆ ಅದರ ಬಿಗಿಮುಷ್ಟಿಯಲ್ಲಿ ಬಂದಿಯಾಗಿಬಿಡುತ್ತದೆ. ಅಮಲಿಗೆ ಸಿಲುಕಿದ ಮನ ಕಾನೂನುಬಾಹಿರ ನಡೆ ಮತ್ತು ಹಿಂಸಾಕೃತ್ಯಗಳಿಗೆ ಸುಲಭಕ್ಕೆ ಒಡ್ಡಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಮಾದಕವಸ್ತುಗಳ ಮಾರಾಟಗಾರರು ಮತ್ತು ಕಳ್ಳಸಾಗಣೆಗಾರರಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂಬ ಶಿಫಾರಸು ಒಂದು ಕಾನೂನಾಗಿ ಪರಿವರ್ತನೆಗೊಳ್ಳುವುದರ ಸಾಧ್ಯಾಸಾಧ್ಯತೆಗಳೇನೇ ಇರಲಿ, ಅಂಥದೊಂದು ಕಟ್ಟುನಿಟ್ಟಿನ ಅನುಪಸ್ಥಿತಿಯಲ್ಲೂ ಈ ಪಿಡುಗಿಗೆ ಕಡಿವಾಣ ಹಾಕುವಂಥ ಸ್ವಯಂಶಿಸ್ತನ್ನು ಸಮಾಜ ಮತ್ತು ಅದರ ಪ್ರತಿಯೊಂದು ಘಟಕವೂ ರೂಢಿಸಿಕೊಳ್ಳಬೇಕಿದೆ. ಸ್ವಸ್ಥ ಸಮಾಜಕ್ಕೆ ಧಕ್ಕೆಯಾಗಬಾರದೆಂದರೆ ಇಂಥದೊಂದು ಸ್ವಯಂಪ್ರೇರಣೆ ಅತ್ಯಗತ್ಯ.

Leave a Reply

Your email address will not be published. Required fields are marked *

Back To Top