Friday, 16th November 2018  

Vijayavani

Breaking News

ಭರವಸೆ ಈಡೇರಿಕೆಯ ಸವಾಲು

Monday, 02.07.2018, 3:05 AM       No Comments

ರಾಜ್ಯ ವಿಧಾನಸಭಾ ಚುನಾವಣೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೆ ಅತಂತ್ರ ಫಲಿತಾಂಶವನ್ನು ಹೊಮ್ಮಿಸಿದಾಗ ಹೊಂದಾಣಿಕೆ ರಾಜಕಾರಣದ ಮತ್ತೊಂದು ರೂಪವೆಂಬಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಹೊಣೆಯ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇನೋ ಹೌದು. ಆದರೆ ನಿರ್ದಿಷ್ಟ ಖಾತೆ ತಮಗೇ ದಕ್ಕಬೇಕು ಎಂಬ ಹಗ್ಗಜಗ್ಗಾಟದಲ್ಲಿ ಬಹುದಿನಗಳವರೆಗೆ ನಿಜಾರ್ಥದ ಸರ್ಕಾರವೇ ಅಸ್ತಿತ್ವಕ್ಕೆ ಬರದಿದ್ದಾಗ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳು ವೇಗ ಕಳೆದುಕೊಂಡಿದ್ದು ದಿಟ. ಹೀಗಾಗಿ, ಸರ್ಕಾರದ ಪಾಲುದಾರರಲ್ಲಿ ತಲೆದೋರಿದ ಇಂಥ ವಿವಿಧ ನೆಲೆಗಟ್ಟಿನ ಅಪಸ್ವರ ಕೊನೆಗೊಳ್ಳುವುದೇ ಇಲ್ಲವೇನೋ ಎಂಬ ಸಾರ್ವಜನಿಕ ಗ್ರಹಿಕೆ ದಟ್ಟವಾಗತೊಡಗಿದ್ದೂ ನಿಜವೇ. ಆದರೆ ಭಾನುವಾರ (ಜು. 1) ನಡೆದ ಸಮನ್ವಯ ಸಭೆ ಈ ಎಲ್ಲ ಅಳಕು-ಶಂಕೆಗೂ ಇತಿಶ್ರೀ ಹಾಡಿದೆ ಎನ್ನಬೇಕು. ಸರ್ಕಾರ ಅಧಿಕೃತವಾಗಿ ಚಾಲನೆಗೊಳ್ಳುವುದಕ್ಕೆ ಪೂರಕವಾಗಿರುವ ಬೆಳವಣಿಗೆಯಿದು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಮತ್ತು ರೈತರ ಸಾಲಮನ್ನಾಕ್ಕೆ ಒಪ್ಪಿಗೆ, ನೀರಾವರಿಗೆ 5 ವರ್ಷಕ್ಕೆ 1 ಲಕ್ಷ 25 ಸಾವಿರ ಕೋಟಿ ರೂ. ನೀಡಿಕೆ, ವಸತಿರಹಿತರಿಗೆ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ವಣ, ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಮಾಡಿದ್ದ ಯೋಜನೆಗಳ ಮುಂದುವರಿಕೆ- ಹೀಗೆ ಮಹತ್ವದ ವಿಷಯಗಳಿಗೆ ಈ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಸಂಬಂಧದ ಹೆಚ್ಚಿನ ವಿವರಗಳನ್ನು ಮುಖ್ಯಮಂತ್ರಿಗಳು ಬಜೆಟ್ ಸನ್ನದಿನಲ್ಲಿ ನೀಡಲಿದ್ದಾರಾದರೂ, ಅಂದುಕೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಪನ್ಮೂಲ ಹೇಗೆ ಕ್ರೋಡೀಕರಣವಾಗಲಿದೆ ಎಂಬುದು ನಿರೀಕ್ಷೆ ಹುಟ್ಟುಹಾಕಿರುವ ಸಂಗತಿ.

ಈ ಅಭಿಪ್ರಾಯಕ್ಕೆ ಕಾರಣಗಳು ಇಲ್ಲದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರವೂ ನೀರಾವರಿ ವಲಯಕ್ಕೆಂದು ಭರವಸೆ ನೀಡಿದ್ದ ವಿತ್ತೀಯ ನೆರವಿನಲ್ಲಿ ಸಂಪೂರ್ಣ ಕೊಡಲು ಸಾಧ್ಯವಾಗಲಿಲ್ಲ ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬೇಕು. ಹೀಗಿರುವಾಗ, ಹಿಂದಿನ ಸರ್ಕಾರದ ಯೋಜನೆಗಳ ಮುಂದುವರಿಕೆ ಮಾತ್ರವಲ್ಲದೆ, ಅಗಾಧ ಪ್ರಮಾಣದಲ್ಲಿರುವ ರೈತರ ಸಾಲಮನ್ನಾಕ್ಕೆ ಮತ್ತು ಸಂಭಾವ್ಯ ಹೊಸ ಯೋಜನೆಗಳಿಗೆ ಘೋಷಣೆಗೆ ಸಂಪನ್ಮೂಲ ಒದಗಿಸುವುದು ಹೊಸ ಸರ್ಕಾರಕ್ಕೆ ನಿಜಕ್ಕೂ ಸವಾಲಿನ ಸಂಗತಿಯೇ ಸರಿ. ಜತೆಗೆ, ಅವುಗಳ ಪರಿಣಾಮಕಾರಿ ಅನುಷ್ಠಾನದ ಹೊಣೆಗಾರಿಕೆಯಂತೂ ಇದ್ದೇ ಇದೆ. ಏಕಪಕ್ಷದ ಸರ್ಕಾರವಾಗಿದ್ದಿದ್ದರೆ ಅದು ಬೇರೆ ಮಾತು; ಆದರೆ ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಪಕ್ಷಗಳಿಗೆ ಸೇರಿದ, ತಂತಮ್ಮ ಸಹಜ ಪ್ರಭಾವಕ್ಕೆ ಧಕ್ಕೆ ಒದಗುವುದನ್ನು ಸಹಿಸದ ಸಚಿವರು ಮತ್ತು ಶಾಸಕರು ಹೊಂದಾಣಿಕೆಯೇ ಮೂಲಾಧಾರವಾಗಿರುವ ಸರ್ಕಾರದ ಮೈತ್ರಿಧರ್ಮವನ್ನು ಪಾಲಿಸುವುದರ ಜತೆಜತೆಗೆ ಈ ಹೊಣೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಹುಟ್ಟುಹಾಕಿದೆ. ಚುನಾವಣಾ ಪ್ರಣಾಳಿಕೆಯಲ್ಲೋ ಅಥವಾ ಸರ್ಕಾರ ರಚನೆಯ ನಂತರವೋ ಜನಪ್ರಿಯತೆಯ ಹುಕಿಗೆ ಬಿದ್ದು ಘೋಷಿಸುವ ಯೋಜನೆಗಳು ರಾಜಕೀಯವಾಗಿ ಪ್ರಯೋಜನ ನೀಡಬಹುದೇ ವಿನಾ, ಸರ್ಕಾರಿ ಬೊಕ್ಕಸದ ಸುಸ್ಥಿತಿಗೆ ಅವು ಪೂರಕವಾಗುವುದು ಅಪರೂಪವೇ ಎನ್ನಬೇಕು. ಆದ್ದರಿಂದ, ಆಡಳಿತಾತ್ಮಕ ಅವ್ಯವಸ್ಥೆಗೂ ಆಸ್ಪದ ನೀಡದೆ, ಆರ್ಥಿಕ ಶಿಸ್ತಿಗೂ ಧಕ್ಕೆಯಾಗದ ರೀತಿಯಲ್ಲಿ ಈ ‘ಹಗ್ಗದ ಮೇಲಿನ ನಡಿಗೆ’ಯನ್ನು ಸರ್ಕಾರದ ಪಾಲುದಾರರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದುನೋಡುವಂತಾಗಿದೆ.

Leave a Reply

Your email address will not be published. Required fields are marked *

Back To Top