Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಜನರಿಗೆ ತೊಂದರೆಯಾಗದಿರಲಿ

Saturday, 23.06.2018, 3:02 AM       No Comments

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದು ಸಾಕಷ್ಟು ದಿನಗಳಾದರೂ, ಹೊಮ್ಮಿದ ಅತಂತ್ರ ಸ್ಥಿತಿಯಿಂದಾಗಿ ಹಾಗೂ ರಾಜಕೀಯ ಹಗ್ಗಜಗ್ಗಾಟದ ಕಾರಣದಿಂದಾಗಿ ಸರ್ಕಾರ ಮತ್ತು ಮಂತ್ರಿಮಂಡಳ ರಚನೆ ವಿಳಂಬವಾಗಿದ್ದು ಈಗಾಗಲೇ ಜಗಜ್ಜಾಹೀರು. ಇಂಥ ಬೆಳವಣಿಗೆಗಳಿಂದಾಗಿ ಜನಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಇಷ್ಟು ಸಾಲದೆಂಬಂತೆ, ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯೂ ಈಗ ಮುನ್ನೆಲೆಗೆ ಬಂದಿದ್ದು, ಇದರಿಂದಾಗಿ ಸರ್ಕಾರದ ನಿಗದಿತ ಕಾರ್ಯಗಳು ಮತ್ತು ಪ್ರಗತಿಕಾರ್ಯಗಳು ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರತಿ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ನಡೆಯುವುದು ವಾಡಿಕೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತ್ತೀಚಿಗೆ ಪ್ರಸ್ತಾವನೆ ಸಲ್ಲಿಸಿ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ರಚನೆ ಮಾಡಬೇಕಾಗಿರುವುದರಿಂದ, ವರ್ಗಾವಣೆ ಪ್ರಮಾಣ ಹಾಗೂ ಅವಧಿ ನಿಗದಿ ಮಾಡುವಂತೆ ಕೋರಿತ್ತು. ಇದರನ್ವಯ ಶುಕ್ರವಾರ (ಜೂ. 22) ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಮಾರ್ಗಸೂಚಿ ರಚನೆಯ ನಂತರ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ. ನಿರ್ದಿಷ್ಟ ಇಲಾಖೆಯ ಒಟ್ಟು ನೌಕರ ಸಂಖ್ಯೆಯ ಶೇ. 6ರಷ್ಟು ಪ್ರಮಾಣದ ವರ್ಗಾವಣೆ ಕೈಗೊಳ್ಳಬಹುದು ಎನ್ನುತ್ತದೆ 2013ರ ನಿಯಮ. ಆದರೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪರ್ವ ಎದುರಾದ ಹಿನ್ನೆಲೆಯಲ್ಲಿ, ನೀತಿಸಂಹಿತೆ ಮತ್ತಿತರ ಕಾರಣಗಳಿಂದಾಗಿ ಏಪ್ರಿಲ್-ಮೇ ಅವಧಿಯಲ್ಲಿ ವರ್ಗಾವಣೆ ನಡೆಯಲಿಲ್ಲ. ಸಂಪುಟ ಸಭೆಯಲ್ಲಿ, ಸದರಿ ವರ್ಗಾವಣೆ ಪ್ರಕ್ರಿಯೆಯನ್ನು ಜುಲೈ ಅಂತ್ಯದೊಳಗಾಗಿ ಮತ್ತು ಶೇ. 4ರ ಪ್ರಮಾಣದಲ್ಲಿ ಕೈಗೊಳ್ಳಲು ತೀರ್ವನಿಸಲಾಗಿದೆ ಎಂದು ತಿಳಿದುಬಂದಿದೆ. ಇದೇ ಈಗ ಚರ್ಚೆಗೆ ಕಾರಣವಾಗಿರುವ ಸಂಗತಿ. ಕಾರಣ, ಗಡುವಿಗೆ ಉಳಿದಿರುವುದು ಕೆಲವೇ ದಿನಗಳಾಗಿರುವುದರಿಂದ ಬಯಸಿದ ಜಾಗಕ್ಕೆ ವರ್ಗಾವಣೆ ಬಯಸಿ ಶಾಸಕರು ಮತ್ತು ಸಚಿವರನ್ನು ಎಡತಾಕುವ ಆಕಾಂಕ್ಷಿಗಳ ದಟ್ಟಣೆ ಹೆಚ್ಚುವುದರಿಂದಾಗಿ, ಆಡಳಿತಶಾಹಿಯಲ್ಲಿ ಮತ್ತೊಮ್ಮೆ ಅಸ್ತವ್ಯಸ್ತ ಸ್ಥಿತಿ ನಿರ್ವಣವಾಗಿ ಅಪೇಕ್ಷಿತ ಅಭಿವೃದ್ಧಿ ಕಾರ್ಯಗಳ ವಿಳಂಬಕ್ಕೂ ಅದು ಕಾರಣವಾಗಬಹುದು ಎಂಬುದು ಕೆಲವರ ಗ್ರಹಿಕೆ. ಅದೂ ಅಲ್ಲದೆ, ವರ್ಗಾವಣೆ ಗಡುವು ಉಲ್ಲಂಘನೆಯಾಗುವುದೂ ಈ ಹಿಂದಿನ ಅನುಭವವೇ ಆಗಿದೆ. ವರ್ಗಾವಣೆ ಪ್ರಕ್ರಿಯೆಯ ಆಚೀಚೆ ಈ ಎಲ್ಲ ಬೆಳವಣಿಗೆಗಳು ಸಾಮಾನ್ಯವಲ್ಲವೇ ಎಂಬ ಪ್ರಶ್ನೆ ಕೆಲವರಲ್ಲಿ ಉದ್ಭವಿಸಬಹುದು. ಆದರೆ ಈಗಿರುವುದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಮತ್ತು ರಾಜಕೀಯ ತತ್ತ್ವ-ಸಿದ್ಧಾಂತಗಳ ವಿಷಯದಲ್ಲಿ ಸಹಜವಾಗೇ ಅಭಿಪ್ರಾಯ ಭೇದಗಳು ಕಾಡುವ ಸಂದರ್ಭ ಇದಾಗಿರುವುದರಿಂದ, ಈಗ ಎದುರಾಗಿರುವ ಪರಿಸ್ಥಿತಿ ಕೊಂಚ ಭಿನ್ನವೇ ಎನ್ನಬೇಕು. ಏಕಪಕ್ಷದ ಸರ್ಕಾರವಾದರೆ ಸಾಮಾನ್ಯವಾಗಿ ಇಂಥ ಗೊಂದಲ ಎದುರಾಗದು. ಆದ್ದರಿಂದ ಜನಹಿತವನ್ನು ಗಮನದಲ್ಲಿಟ್ಟುಕೊಂಡು ಇಂಥ ಎಲ್ಲ ಸವಾಲುಗಳನ್ನು ನಿವಾರಿಸಿಕೊಂಡು, ಅಭಿಪ್ರಾಯ ಭೇದಗಳಿಗೆ ಅಲ್ಲಲ್ಲೇ ತಡೆಹಾಕಿ ಪ್ರಗತಿಯ ರಥಕ್ಕೆ ವೇಗ ನೀಡಬೇಕಾದ್ದು ಸರ್ಕಾರದ ಪಾಲುದಾರರ ಹೆಗಲ ಮೇಲಿನ ಹೊಣೆ. ಇನ್ನೊಂದೆಡೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ವಿಳಂಬವಾಗುತ್ತಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಅಧ್ಯಕ್ಷತೆ ವಹಿಸಬೇಕಾದ ಕೆಲ ಕಾರ್ಯಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಇಂಥ ವಿಷಯಗಳು ಆಡಳಿತಯಂತ್ರದ ಓಟಕ್ಕೆ ತಡೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಳುಗರ ಮೇಲಿದೆ.

Leave a Reply

Your email address will not be published. Required fields are marked *

Back To Top