Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕಾಶ್ಮೀರದ ಸವಾಲು

Friday, 22.06.2018, 3:02 AM       No Comments

ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಳ್ಳುವುದರೊಂದಿಗೆ ಮೈತ್ರಿ ಸರ್ಕಾರ ಪತನಗೊಂಡು, ರಾಜ್ಯಪಾಲರ ಆಳ್ವಿಕೆಗೆ ಕಣಿವೆರಾಜ್ಯ ಸಾಕ್ಷಿಯಾಗುವಂತಾಗಿದೆ. ಮೇಲ್ನೋಟಕ್ಕಿದು ರಾಜ್ಯವೊಂದರ ವಿಷಯವಾಗಿದ್ದರೂ, 2019ರ ವರ್ಷ ಲೋಕಸಭಾ ಚುನಾವಣಾ ವರ್ಷವೂ ಆಗಿರುವುದರಿಂದ ಕಾಶ್ಮೀರದ ಚರ್ಚಾವಿಷಯ, ಅದರಲ್ಲಿ ಅಂತರ್ಗತವಾಗಿರುವ ರಾಜತಾಂತ್ರಿಕ ಮತ್ತು ಸಾಮಾಜಿಕ ಸೂಕ್ಷ್ಮತೆಗಳು ದೇಶದೆಲ್ಲೆಡೆ ಬಿಂಬಿಸಲ್ಪಡುವ ಸಾಧ್ಯತೆಗಳಿರುವುದರಿಂದ, ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ಪಡಸಾಲೆಗಳಲ್ಲಿ ಸಾಕಷ್ಟು ಕುತೂಹಲ ಗರಿಗೆದರಿರುವುದಂತೂ ಖರೆ.

ಕಾಶ್ಮೀರ ಎಂದಾಕ್ಷಣ ನೆನಪಾಗುವುದು ಅಲ್ಲಿ ಹರಳುಗಟ್ಟಿರುವ ಉಗ್ರಗಾಮಿಗಳ ಹಿಂಸಾವಿನೋದ ಮತ್ತು ಪ್ರತ್ಯೇಕತಾವಾದಿಗಳ ಅಟ್ಟಹಾಸ. ಕಳೆದ ಮೂರೂವರೆ ವರ್ಷಗಳ ಕಾಲಾವಧಿಯಲ್ಲಿ ಭಯೋತ್ಪಾದಕರ ದಮನದ ಕಾರ್ಯಾಚರಣೆಗಳು ನಡೆದ ಸಂದರ್ಭಗಳಲ್ಲಿ, ಉಗ್ರರು ಮತ್ತು ಪ್ರತ್ಯೇಕತಾವಾದಿಗಳ ವಿಷಯದಲ್ಲಿ ಪಿಡಿಪಿ ನಾಯಕರು ಮೃದುಧೋರಣೆ ತಳೆಯುತ್ತಿದ್ದುದು, ಅದರಲ್ಲೂ ವಿಶೇಷವಾಗಿ ತಮ್ಮ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯ ಜಮ್ಮುವಿನ ಹಿಂದೂಗಳಲ್ಲಿ ಮತ್ತು ಲಡಾಖ್ ಭಾಗದಲ್ಲಿ ನೆಲೆಗೊಂಡಿರುವ ಬೌದ್ಧ ಬಹುಸಂಖ್ಯಾತರಲ್ಲಿ ಬೆಳೆಯುತ್ತಲೇ ಹೋದುದು ಬಿಜೆಪಿಗೆ ಸಹಜವಾಗಿಯೇ ಇರಿಸು-ಮುರಿಸಿನ ಸಂಗತಿಯಾಗಿತ್ತು. ಹೀಗೆ, ಸೈದ್ಧಾಂತಿಕವಾಗಿ ಎರಡು ಭಿನ್ನ ಕವಲುಗಳಾಗಿದ್ದರೂ, ಪ್ರಯೋಗದ ದೃಷ್ಟಿಯಿಂದ ಪರಸ್ಪರ ಕೈಕುಲುಕಿದ್ದ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳಲ್ಲಿ ಭಿನ್ನಮತದ ಗೋಡೆ ಬೆಳೆಯುತ್ತಲೇ ಹೋಯಿತೆನ್ನಬೇಕು. ಎಲ್ಲ ಬೆಳವಣಿಗೆಗೂ ಒಂದು ನಿರ್ಣಾಯಕ ಅಂತ್ಯ ಸಿಗಲೇಬೇಕು ಎಂಬ ಮಾತಿನಂತೆ, ಈ ಭಿನ್ನಮತವೀಗ ಸರ್ಕಾರದ ಪತನದಲ್ಲಿ ಪರ್ಯವಸಾನಗೊಂಡಿದೆ. ಇದು ರಾಜಕೀಯದ ಮಾತಾದರೂ, ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವ, ಉಗ್ರನಿಗ್ರಹ ಯಜ್ಞವನ್ನು ಅಬಾಧಿತವಾಗಿಸುವ ನಿಟ್ಟಿನಲ್ಲಿ ಸೇನೆ ಮತ್ತು ಪೊಲೀಸ್ ವ್ಯವಸ್ಥೆಗಳಿಗೆ ಈಗ ಭೀಮಬಲ ಬಂದಂತಾಗಿರುವುದಂತೂ ದಿಟ. ಈ ಚಟುವಟಿಕೆಗೆ ಮತ್ತಷ್ಟು ವೇಗ ದೊರೆಯಬೇಕಿದೆ. ವಿಧ್ವಂಸಕ ಮತ್ತು ಪೈಶಾಚಿಕ ಕೃತ್ಯಗಳು, ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಚಟುವಟಿಕೆಗಳು, ವ್ಯವಸ್ಥೆಯ ಮೇಲೆ ಕಲ್ಲುತೂರುವ ಚಾಳಿಗೆ ಕಾಶ್ಮೀರಿ ಯುವಪೀಳಿಗೆಯನ್ನು ಬಳಸಿಕೊಳ್ಳುವ ಕುತ್ಸಿತ ಚಿಂತನೆಗಳು ವಾಡಿಕೆಯೇ ಆಗಿಬಿಟ್ಟಿದ್ದ ಕಾಶ್ಮೀರದಲ್ಲಿ, ಬುರ್ಹಾನ್ ವಾನಿಯಂಥ ‘ಉಗ್ರಗಾಮಿಗಳ ಪೋಸ್ಟರ್ ಬಾಯ್’ ಹತ್ಯೆಯಾದ ಮೇಲೆ, ಉಗ್ರಗಾಮಿ ಸಂಘಟನೆಗಳಿಗೆ ಸ್ವಯಂಪ್ರೇರಿತವಾಗಿ ಸೇರಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಇದು ದೇಶದ ಭದ್ರತೆ-ಸಮಗ್ರತೆಗೆ ಕಂಟಕಕಾರಿಯೇ. ಆದ್ದರಿಂದ, ಅಲ್ಲೀಗ ಹಿಂದೆಂದಿಗಿಂತ ಚುರುಕಾಗಿ ಸೇನಾ ಕಾರ್ಯಚರಣೆ ನಡೆಸುವ ಮತ್ತು ವ್ಯೂಹಾತ್ಮಕ ತಂತ್ರಗಳನ್ನು ಹೆಣೆಯುವ ಅಗತ್ಯವಿದೆ. ಹೇಳಿಕೇಳಿ ಇದು ಕೇಂದ್ರ ಸರ್ಕಾರದ ಅಧ್ವರ್ಯುತನದ ಕಾರ್ಯಾಚರಣೆಯಾಗಿರುವುದರಿಂದ, ರಾಜ್ಯ ಸರ್ಕಾರವೊಂದರ ಅಸ್ತಿತ್ವದಿಂದಾಗಿ ಅದರ ವೇಗ ಒಂದಷ್ಟು ತಗ್ಗುವ ಇಲ್ಲವೇ ಪೂರಕ ವಾತಾವರಣ ಲಭ್ಯವಾಗದಿರುವ ಸಾಧ್ಯತೆಯಿತ್ತು. ಆದರೀಗ ರಾಜ್ಯಪಾಲರ ಆಡಳಿತ ಜಾರಿಯಾಗಿರುವುದರಿಂದ ಮತ್ತು ಅದು ಕೇಂದ್ರದ ಇಶಾರೆಯಂತೆಯೇ ನಡೆಯುವ ವ್ಯವಸ್ಥೆಯಾಗಿರುವುದರಿಂದ ಉಗ್ರನಿಗ್ರಹ ಯಜ್ಞಕ್ಕಿನ್ನು ಯಾವುದೇ ತಡೆಯೊದಗಲಾರದು ಎಂಬುದು ಸಹಜ ಗ್ರಹಿಕೆ.

ಜತೆಗೆ, ದೇಶದ ಗಡಿಸಂರಕ್ಷಣೆಯ ವಿಷಯ ಬಂದಾಗ ಭೌಗೋಳಿಕವಾಗಿ ನಿರ್ಣಾಯಕ ನೆಲೆಯಲ್ಲಿರುವಂಥದು ಕಣಿವೆರಾಜ್ಯ. ಕಾರಣ ಉತ್ತರಕ್ಕೆ ವ್ಯಾಪಿಸಿರುವ ಚೀನಾ ಮತ್ತು ಪಶ್ಚಿಮಕ್ಕೆ ಹಬ್ಬಿರುವ ಪಾಕಿಸ್ತಾನದಂಥ ಶತ್ರುಗಳು ಭಾರತದ ಮೇಲೆ ಮುರಕೊಂಡು ಬೀಳಲು ಹವಣಿಸುತ್ತಿವೆ ಮತ್ತು ಅದರ ಸಾಕಾರಕ್ಕೆ ಸಾಧ್ಯವಿರುವ ಎಲ್ಲ ಮಾಗೋಪಾಯಗಳನ್ನೂ ಬಳಸಿಕೊಳ್ಳಲು ಅವು ಹಿಂಜರಿಯುವುದಿಲ್ಲ ಎಂಬುದು ಸತ್ಯ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ, ಕಾಶ್ಮೀರದ ಸವಾಲನ್ನು ಕೇಂದ್ರ ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಮೂಡಿರುವುದಂತೂ ಹೌದು.

Leave a Reply

Your email address will not be published. Required fields are marked *

Back To Top