Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕಾರ್ವಿುಕಪರ ನೀತಿ

Wednesday, 06.06.2018, 3:05 AM       No Comments

ಕಾರ್ವಿುಕ ಶಕ್ತಿ ದೇಶದ ನಿಜವಾದ ಶ್ರಮಸಂಪತ್ತು. ಈ ಶಕ್ತಿಯೇ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತದೆ ಎಂಬುದೇನೋ ನಿಜ. ಆದರೆ, ಕಾರ್ವಿುಕರ ಸ್ಥಿತಿಗತಿ ಅದರಲ್ಲೂ ಅಸಂಘಟಿತ ಕಾರ್ವಿುಕರ ಸ್ಥಿತಿ ಇಂದಿಗೂ ಶೋಚನೀಯ. ಭವಿಷ್ಯದ ಬದುಕಿಗೆ ಯಾವುದೇ ಭದ್ರತೆ ಇಲ್ಲದ ಕಾರ್ವಿುಕರ ಏಳ್ಗೆಗೆ ಕೇಂದ್ರ ಸರ್ಕಾರ ಹೊಸ ಸಾಮಾಜಿಕ ಭದ್ರತಾ ಯೋಜನೆ ರೂಪಿಸಲು ಹೊರಟಿರುವುದು ಶ್ಲಾಘನೀಯ. ಈಗಾಗಲೇ ಕಾರ್ವಿುಕ ನೀತಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ 15 ಯೋಜನೆಗಳನ್ನು ಒಟ್ಟು ಮಾಡಿ, ಮೆಗಾ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಕೇಂದ್ರ ಕಾರ್ವಿುಕ ಇಲಾಖೆ ಈಗಾಗಲೇ ಪ್ರಕಟಿಸಿರುವ ‘ಸಾಮಾಜಿಕ ಭದ್ರತೆಗಾಗಿ ಕಾರ್ವಿುಕ ನೀತಿ-2018’ ಕರಡು ಪ್ರತಿಗೆ ಅಂತಿಮ ರೂಪ ದೊರೆತಿದ್ದು, ಮುಂದಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದೆ.

ದೇಶದ 50 ಕೋಟಿ ಉದ್ಯೋಗಸ್ಥರಿಗೆ ಪಿಂಚಣಿ ಯೋಜನೆ, ಜೀವವಿಮೆ, ಅಂಗವೈಕಲ್ಯ ಸವಲತ್ತು, ವೈದ್ಯಕೀಯ ಸವಲತ್ತು, ಮಾತೃತ್ವ ಯೋಜನೆ, ನಿರುದ್ಯೋಗ ಸಹಕಾರಿ ಯೋಜನೆ, ಭವಿಷ್ಯ ನಿಧಿ ಯೋಜನೆಗಳನ್ನು ಒದಗಿಸುವುದು ಹೊಸ ನೀತಿಯ ಉದ್ದೇಶವಾಗಿದ್ದು, ಮೊದಲ ಹಂತದಲ್ಲಿ ಅಸಂಘಟಿತ ಕಾರ್ವಿುಕರಿಗೆ ಇದನ್ನು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ, ಯೋಜನೆಯ ಜಾರಿ ಅಷ್ಟು ಸುಲಭವಲ್ಲ. ಕಾರಣ, ಇದಕ್ಕೆ 50 ಸಾವಿರ ಕೋಟಿ ರೂ. ವಾರ್ಷಿಕ ಅನುದಾನದ ಅಗತ್ಯವಿದೆ. ಇಷ್ಟು ಭಾರಿ ಮೊತ್ತ ಖರ್ಚು ಮಾಡುವಷ್ಟು ಆರ್ಥಿಕ ಸದೃಢತೆಯ ಸ್ಥಿತಿಯೂ ಈಗಿಲ್ಲ. ಒಂದು ವೇಳೆ ವೆಚ್ಚ ಮಾಡಿದರೂ ಅದರಿಂದ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗೇ ನೋಡಿದಲ್ಲಿ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಭಾರತ ಖರ್ಚು ಮಾಡುತ್ತಿರುವ ಪ್ರಮಾಣ ಕಡಿಮೆಯೇ. ತನ್ನ ಒಟ್ಟು ಜಿಡಿಪಿಯ ಪೈಕಿ ಚೀನಾ ಶೇ.5.4, ಥೈಲ್ಯಾಂಡ್ 3.6, ಸಿಂಗಾಪುರ 3.5, ಶ್ರೀಲಂಕಾ 3.2 ಖರ್ಚು ಮಾಡುತ್ತಿದ್ದರೆ ಭಾರತ ಕೇವಲ ಶೇ.1.7 ವೆಚ್ಚ ಮಾಡುತ್ತಿದೆ.

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದರೆ ಕಾರ್ವಿುಕ ವರ್ಗವನ್ನು ಸಶಕ್ತ, ಸಬಲಗೊಳಿಸುವುದು ಅಗತ್ಯ. ಆದರೆ, ಕಾರ್ವಿುಕ ನೀತಿಯನ್ವಯ ಈಗ ಹಲವು ಯೋಜನೆಗಳು ಜಾರಿಯಲ್ಲಿದ್ದು ಅವುಗಳ ಅನುಷ್ಠಾನದಲ್ಲಿಯೂ ಹಲವಾರು ತೊಡಕುಗಳಿವೆ. ಹಾಗಾಗಿಯೇ, ಹಲವು ಸಣ್ಣಪುಟ್ಟ ಯೋಜನೆಗಳನ್ನೆಲ್ಲ ಒಟ್ಟು ಮಾಡಿ ಸಮಗ್ರ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಕಾರ್ವಿುಕರ ಸ್ಥಿತಿ ಸುಧಾರಣೆಗೊಂಡಲ್ಲಿ ದೇಶದ ಸಾಮಾಜಿಕ ವಾತಾವರಣವೂ ನೆಮ್ಮದಿಯಿಂದ ಕೂಡಿರುತ್ತದೆ.

2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ ಎಂಬ ಮಾತು ಕೇಳಿಬರುತ್ತಿದೆಯಾದರೂ, ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ಈ ಯೋಜನೆ ಪರಿಣಾಮಕಾರಿಯಾಗಿ, ನ್ಯೂನತೆಗಳಿಲ್ಲದೆ ಜಾರಿಗೆ ಬರಲಿ ಎಂಬುದೇ ಆಶಯ. ಇನ್ನೊಂದೆಡೆ, ಕರ್ನಾಟಕದಲ್ಲಿ ಗಾರ್ವೆಂಟ್ಸ್ ನೌಕರರಿಗೂ ಕನಿಷ್ಠ ವೇತನ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು,ಈ ಬಗ್ಗೆ ಗಾರ್ವೆಂಟ್ಸ್ ಗಳಿಗೆ ಸೂಚನೆ ನೀಡಿದೆ. ಗಾರ್ವೆಂಟ್ಸ್ ವಲಯದಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ ನಿಗದಿಯಾದಲ್ಲಿ ಒಂದಿಷ್ಟು ಸಮಾಧಾನ ದೊರಕಬಹುದು.

Leave a Reply

Your email address will not be published. Required fields are marked *

Back To Top