Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಮಾತು ಕೃತಿಗಿಳಿಯಲಿ

Tuesday, 05.06.2018, 3:05 AM       No Comments

ನಿಗದಿತ ಕಾಲಸೂಚಿಯಂತೆ ಸಂಚರಿಸಬೇಕಾದ ರೈಲುಗಳ ಆಗಮನದಲ್ಲಿ ವಿಳಂಬವಾದರೆ, ಆಯಾ ರೈಲು ವಲಯಗಳ ಪ್ರಧಾನ ವ್ಯವಸ್ಥಾಪಕರ ಮುಂಬಡ್ತಿಗೆ ಸಂಚಕಾರ ಒದಗುತ್ತದೆ ಎಂಬ ಎಚ್ಚರಿಕೆ ರೈಲ್ವೆ ಸಚಿವರಿಂದ ಹೊಮ್ಮಿದೆ. ರೈಲಿಗಾಗಿ ಕಾದುಕಾದು ಪ್ರಯಾಣಿಕರು ಹೈರಾಣಾಗುವುದನ್ನು ತಪ್ಪಿಸುವ, ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಇದು ಉತ್ತಮ ಚಿಂತನೆ ಎನ್ನಲಡ್ಡಿಯಿಲ್ಲ. ಆದರೆ ಇದರ ಅನುಷ್ಠಾನ/ಕಾರ್ಯಸಾಧ್ಯತೆಯ ಆಚೀಚೆಯ ಮಗ್ಗುಲುಗಳನ್ನೂ ಅವಲೋಕಿಸುವ ಅಗತ್ಯವಿದೆ. ‘ಭಾರತೀಯ ರೈಲುಗಳೆಂದರೆ ಸಂಚಾರಿ ಶೌಚಗೃಹಗಳು’ ಎಂಬುದು ವಾಡಿಕೆಯ ಮಾತೇ ಆಗಿಬಿಟ್ಟಿದ್ದ ಕಾಲವೊಂದಿತ್ತು. ಆದರೆ ದಿನಗಳೆದಂತೆ ರೈಲ್ವೆ ಇಲಾಖೆಯಲ್ಲೂ ‘ವೃತ್ತಿಪರತೆ’ ಮೈಗೂಡಿತೆನ್ನಬೇಕು. ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಗೆ ಆಧುನಿಕತೆಯ ಸ್ಪರ್ಶ ನೀಡಿದ್ದರಿಂದ ಮೊದಲ್ಗೊಂಡು, ರೈಲು ಮತ್ತು ನಿಲ್ದಾಣಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ, ಜೈವಿಕ ಶೌಚಗೃಹಗಳ ಬಳಕೆ, ಲೆವೆಲ್ ಕ್ರಾಸಿಂಗ್​ಗಳಲ್ಲಿನ ಅಪಘಾತಗಳನ್ನು ತಪ್ಪಿಸಲೆಂದು ರೈಲು ಸಾಕಷ್ಟು ದೂರದಲ್ಲಿರುವಾಗಲೇ ಎಚ್ಚರಿಸುವ ಅಲಾರಂ ವ್ಯವಸ್ಥೆ, ಸಂದರ್ಭಾನುಸಾರ ವಿಶೇಷ ರೈಲುಗಳ ಆಯೋಜನೆ- ಹೀಗೆ ಬಗೆಬಗೆಯ ಸಜ್ಜಿಕೆಗಳವರೆಗೆ ಇಲಾಖೆ ಬದಲಾವಣೆಗೆ ಒಡ್ಡಿಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟೆಲ್ಲ ಇದ್ದೂ, ‘ಕಾಲ ನಿರ್ವಹಣೆ’ಯೇ ಅಸಮರ್ಪಕವಾಗಿಬಿಟ್ಟರೆ, ಎಲ್ಲ ಕಸರತ್ತುಗಳೂ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತಾಗುವುದಿಲ್ಲವೇ? ರೈಲ್ವೆ ಸಚಿವರಿಂದ ಈಗ ಹೊಮ್ಮಿರುವ ಚಿಂತನೆ, ಈ ಕೊರತೆಯ ಮೂಲೋತ್ಪಾಟನದ ಗುರಿಯನ್ನೇ ಒಳಗೊಂಡಿದೆ ಎಂದು ಭಾವಿಸೋಣ.

ಮೇಲ್ನೋಟಕ್ಕಿದು ಆದರ್ಶವಾಗಿ ಕಂಡರೂ, ಅನುಷ್ಠಾನ ಅಂದುಕೊಂಡಷ್ಟು ಸುಲಭವೇ ಎಂಬುದು ಇಂಥ ಎಲ್ಲ ಕಸರತ್ತುಗಳನ್ನೂ ಕಂಡವರ ಪ್ರಶ್ನೆ. ಕಾರಣ, ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವಂತಾಗುವವರೆಗೆ ಮಾತ್ರವೇ ಇಂಥ ಉಪಕ್ರಮಗಳ ವ್ಯಾಪ್ತಿಯಿರುತ್ತದೆಯೇ ಹೊರತು, ಅಧಿಕಾರದ ಉನ್ನತಸ್ತರದೊಂದಿಗೆ ಅಧಿಕಾರಿಶಾಹಿ ಮಾಡಿಕೊಳ್ಳುವ ಹೊಂದಾಣಿಕೆಯಿಂದಾಗಿ ‘ಮುಂಬಡ್ತಿಗೆ ತಡೆ’ ಎಂಬ ತೂಗುಕತ್ತಿ ಕುತ್ತಿಗೆಯವರೆಗೇನೂ ಬರುವುದಿಲ್ಲ ಎಂಬುದು ಜನಮಾನಸದಲ್ಲಿ ದಟ್ಟವಾಗಿರುವ ಗ್ರಹಿಕೆ. ಇದಕ್ಕೆ ಪುಷ್ಟಿ ನೀಡುವಂಥ ಸಂಗತಿಗಳೂ ಸಾಕಷ್ಟಿವೆಯೆನ್ನಿ. ಕರ್ತವ್ಯಲೋಪದ ಆರೋಪ ಹೊತ್ತವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಉನ್ನತಾಧಿಕಾರಿಗಳು ಅಥವಾ ಸಚಿವರು, ಸಭೆ ಸಂಪನ್ನಗೊಂಡ ತರುವಾಯ ‘ಇದೆಲ್ಲ ಇದ್ದದ್ದೇ, ಏನೂ ತೊಂದರೆಯಾಗದು, ಕೆಲಸ ಮುಂದುವರಿಸಿಕೊಂಡು ಹೋಗಿ’ ಎಂಬ ಧಾಟಿಯಲ್ಲಿ ಹೆಗಲು ಸವರುವ ಪರಿಪಾಠಗಳಿಗೇನೂ ಕಮ್ಮಿಯಿಲ್ಲ. ಇಂಥದೊಂದು ಅಪವಿತ್ರ ಹೊಂದಾಣಿಕೆಯಿಂದಾಗಿ ದೂರಗಾಮಿ ತೊಂದರೆ ಎದುರಿಸುವವರು ಪ್ರಯಾಣಿಕರೇ.

ಏರ್ ಇಂಡಿಯಾ ವಾಯುಯಾನ ಸಂಸ್ಥೆಯ ಉಲ್ಲೇಖವಿಲ್ಲಿ ಸೂಕ್ತ. ಅತಿಗಣ್ಯ ವ್ಯಕ್ತಿಗಳಿಗೆ, ಮಂತ್ರಿ-ಮಹೋದಯರಿಗೆ ಕಾಯಬೇಕಾಗಿ ಬರುತ್ತಿದ್ದ ಏರ್ ಇಂಡಿಯಾ ವಿಮಾನಗಳಿಂದಾಗಿ ಸಂಚಾರ ವೇಳೆಯಲ್ಲಿ ಅತಿರೇಕದ ವ್ಯತ್ಯಯವಾಗುತ್ತಿದ್ದುದು, ಅದರಿಂದ ಮಿಕ್ಕ ಪ್ರಯಾಣಿಕರಿಗೆ ಹಲವು ನೆಲೆಗಟ್ಟಿನಲ್ಲಿ ತೊಂದರೆಯಾಗುತ್ತಿದ್ದುದು ಒಂದು ಕಾಲಕ್ಕೆ ಮಾಮೂಲಾಗಿತ್ತು. ಆದರೆ ವಿಮಾನ ಪ್ರಯಾಣಿಕರಿಗೆ ಪರ್ಯಾಯ ಆಯ್ಕೆಗಳಿದ್ದುದರಿಂದ, ಪಥ ಬದಲಿಸಿದರು. ಪರಿಣಾಮ, ಏರ್ ಇಂಡಿಯಾ ಕಾರ್ಯಕ್ಷಮತೆ ಮಂಕಾಗುವಂತಾಯಿತು. ಆದರೆ ರೈಲು ಸಾರಿಗೆಯಲ್ಲಿ ಇಂಥ ಪರ್ಯಾಯಗಳಿಗೆ ಅವಕಾಶವಿಲ್ಲವಾದ್ದರಿಂದ, ವ್ಯವಸ್ಥೆಯಲ್ಲಿ ಏನೇ ಲೋಪವಾದರೂ ಬಲಿಪಶುಗಳಾಗುವುದು ಪ್ರಯಾಣಿಕರೇ. ಪ್ರಧಾನಿ ನರೇಂದ್ರ ಮೋದಿಯವರೂ ರೈಲ್ವೆ ಇಲಾಖೆ ಸುಧಾರಣೆಗೆ ಆಸಕ್ತರಾಗಿದ್ದಾರೆ. ಇದನ್ನು ಮನಗಂಡು, ರಾಜಿ ಅಥವಾ ಹೊಂದಾಣಿಕೆಗೆ ಆಸ್ಪದವಿಲ್ಲದ ರೀತಿಯಲ್ಲಿ ವ್ಯವಸ್ಥೆಯ ಉನ್ನತೀಕರಣಕ್ಕೆ ಸಚಿವರು ಕ್ರಮಕ್ಕೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

Back To Top