Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸದಾಶಯಕ್ಕೆ ಧಕ್ಕೆಯಾಗದಿರಲಿ

Monday, 04.06.2018, 3:03 AM       No Comments

ಸಂಪನ್ಮೂಲ ಕ್ರೋಡೀಕರಿಸುವ ಸದಾಶಯದ ಒಂದು ಭಾಗವಾಗಿ ಅನಗತ್ಯ ವೆಚ್ಚಗಳಿಗೆ ಲಗಾಮು ಹಾಕಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ತುರ್ತು ಸಂದರ್ಭ ಹೊರತುಪಡಿಸಿ ವಿಶೇಷ ವಿಮಾನ ಪ್ರಯಾಣಕ್ಕೆ ಮುಂದಾಗದಿರುವುದು, ಸಚಿವರು ಮತ್ತು ಶಾಸಕರ ಕೊಠಡಿ-ಕಚೇರಿ ನವೀಕರಣಕ್ಕೆ ತಡೆ, ಹೊಸಕಾರು ಖರೀದಿಗೆ ನಿರ್ಬಂಧ- ಹೀಗೆ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಉಪಕ್ರಮಗಳು ನಿಜಕ್ಕೂ ಶ್ಲಾಘನೀಯವೇ. ಮುಖ್ಯಮಂತ್ರಿಗಳ ಕಳಕಳಿಯನ್ನು ಸಂಶಯಿಸಬೇಕಾದ್ದಿಲ್ಲ. ಆದರೆ ‘ದೀಪದ ಕೆಳಗಿನ ಕತ್ತಲು’ ಢಾಳಾಗೇ ಇರುವ ಕಹಿವಾಸ್ತವಕ್ಕೆ ಏನನ್ನುವುದು?

ಈ ಅಭಿಪ್ರಾಯಕ್ಕೆ ಕಾರಣಗಳು ಇಲ್ಲದಿಲ್ಲ. ಒಂದೆಡೆ ವೆಚ್ಚ ಕಡಿತದ ತಹತಹ ಹೊಮ್ಮಿದ್ದರೆ, ಇನ್ನೊಂದೆಡೆ ನೂತನ ಸಚಿವರಿಗಾಗಿ ಈಗಾಗಲೇ 20 ಇನ್ನೋವಾ ಕಾರುಗಳ ಖರೀದಿಯಾಗಿರುವ, ವಿಧಾನಸೌಧದ ಸಾಕಷ್ಟು ಕೊಠಡಿಗಳ ಮತ್ತು ಸಚಿವರ ಅಧಿಕೃತ ನಿವಾಸಗಳ ನವೀಕರಣ ಈಗಾಗಲೇ ಮುಗಿದಿರುವ ಬೆಳವಣಿಗೆಯೂ ಕಂಡುಬಂದಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿರುವ ಸಿಬ್ಬಂದಿಗೆ ಗೇಟ್​ಪಾಸ್ ಕೊಡುವ ಚಿಂತನೆ ಒಂದೆಡೆ ಹೊಮ್ಮಿದ್ದರೆ, ಸಚಿವಾಲಯದಲ್ಲಿ 92 ಹುದ್ದೆಗೆ ಅರ್ಜಿ ಆಹ್ವಾನಿಸಿ 250ಕ್ಕೂ ಹೆಚ್ಚು ಗುಮಾಸ್ತರು ಹಾಗೂ ದಲಾಯತ್ ಹುದ್ದೆಗಳನ್ನು ಈಗಾಗಲೇ ಭರ್ತಿಮಾಡಲಾಗಿದೆ. ಇಷ್ಟು ಸಾಲದೆಂಬಂತೆ, ಈಗಾಗಲೇ ಹಿಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಮತ್ತು ಅಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿರುವ ಲೋಕೋಪಯೋಗಿ ಇಲಾಖೆಯ ಕೆಲ ಅಧಿಕಾರಿಗಳು ವಿಧಾನಸೌಧದಲ್ಲೇ ನೆಲೆಗೊಂಡು, ಬೇಕಾಬಿಟ್ಟಿಯಾಗಿ ಟೆಂಡರ್ ಕರೆದಿರುವಂಥ ಘಟನೆಯೂ ಜರುಗಿದೆ. ಈ ಎಲ್ಲ ಬೆಳವಣಿಗೆಗಳು ನಿಜಕ್ಕೂ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲವೇ? ಸಾರ್ವಜನಿಕರ ಕೆಲಸ ಕಾರ್ಯಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳು ಸುಲಲಿತವಾಗಿ ನಡೆಯಬೇಕೆಂದರೆ, ಅಧಿಕಾರಸ್ಥಾನದಲ್ಲಿ ಆಸೀನರಾಗಿರುವವರಿಗೆ ಒಂದಷ್ಟು ಹೆಚ್ಚುವರಿ ಸೌಲಭ್ಯ-ಸೌಕರ್ಯಗಳು ಬೇಕಾಗುತ್ತವೆ ಎಂಬುದೇನೋ ದಿಟ. ಆದರೆ ಅದಕ್ಕೊಂದು ಇತಿಮಿತಿ, ಮೇಲ್ಪಂಕ್ತಿ, ಶಿಸ್ತು ಮತ್ತು ಸ್ವಯಂ-ನಿಯಂತ್ರಣ ಇರಬೇಕಲ್ಲವೇ? ಇಂಥ ಯಾವುದೇ ದುಂದುವೆಚ್ಚಕ್ಕೆ ಬಳಕೆಯಾಗುವುದು ಸಾರ್ವಜನಿಕರ ತೆರಿಗೆ ಹಣ ಎಂಬ ವಾಸ್ತವದ ಅರಿವಿಲ್ಲದಾಗ ಮತ್ತು ತೆರಿಗೆದಾರರಿಗೆ ತಾವು ಉತ್ತರದಾಯಿಗಳಾಗಬೇಕು ಎಂಬ ಬದ್ಧತೆ ಜನಪ್ರತಿನಿಧಿಗಳಲ್ಲೂ ಅವರಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಉನ್ನತಾಧಿಕಾರಿಗಳಲ್ಲೂ ರೂಪುಗೊಳ್ಳದಿದ್ದಾಗ ಇಂಥ ಅಪಸವ್ಯಗಳು ಸಂಭವಿಸುತ್ತವೆ ಎನ್ನಲೇಬೇಕಾಗಿದೆ. ಹೀಗಾಗಿಯೇ ‘ಅಧಿಕಾರ ಇರುವುದು ಜನಸೇವೆಗೆ’ ಎಂಬ ಗ್ರಹಿಕೆಗೆ ಬದಲಾಗಿ ‘ಅಧಿಕಾರವಿರುವುದು ಅನುಭವಿಸುವುದಕ್ಕಾಗಿ’ ಎಂಬ ಠೇಂಕಾರ ಸಂಬಂಧಪಟ್ಟವರಲ್ಲಿ ಸ್ಪುರಿಸುವಂತಾಗಿದೆ.

ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಾಗಿರಬಹುದು; ಆದರೆ ‘ಶಕ್ತಿಕೇಂದ್ರ’ಕ್ಕೆ ಅವರು ಹೊಸಬರೇನಲ್ಲ. ಹೀಗಾಗಿ, ಆಯಕಟ್ಟಿನ ಜಾಗಗಳನ್ನು ಅವರು ಬಿಗಿಮಾಡಬೇಕಿದೆ. ವೆಚ್ಚಕಡಿತಕ್ಕೆಂದು ಮೇಲುಮೇಲಿನ ಕ್ರಮಗಳಿಗೆ ಮುಂದಾಗುವುದರ ಬದಲು, ಈಗಾಗಲೇ ಬಿಲ ತೋಡಿ ಆಶ್ರಯ ಕಂಡುಕೊಂಡಿರುವ ಹೆಗ್ಗಣಗಳನ್ನು ಹೆಡೆಮುರಿ ಕಟ್ಟಬೇಕಿದೆ. ಸರ್ಕಾರಿ ಬೊಕ್ಕಸಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹೊರೆಯಾಗಿ ಪರಿಣಮಿಸಿರುವ ವೈವಿಧ್ಯಮಯ ಬಾಬತ್ತುಗಳಿಗೆ ಮತ್ತು ಅದಕ್ಕೆ ಕಾರಣರಾಗಿರುವವರಿಗೆ ನಿಜಾರ್ಥದಲ್ಲಿ ಕಡಿವಾಣ ಹಾಕಬೇಕಿದೆ. ಹೇಳಿಕೇಳಿ ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ, ಮುಖ್ಯಮಂತ್ರಿಗಳ ಆದೇಶಕ್ಕೆ ಸರ್ಕಾರದ ಸಹಭಾಗಿಗಳಿಂದ ಯಾವ ಮಟ್ಟಿಗಿನ ಸ್ಪಂದನೆ ದೊರೆಯಲಿದೆ ಎಂಬುದನ್ನೂ ಕಾದು ನೋಡುವಂತಾಗಿದೆ. ಒಟ್ಟಾರೆ ಹೇಳುವುದಾದರೆ, ಮಿತವ್ಯಯದ ಸೂತ್ರ ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಬೇಕು; ಇಲ್ಲವಾದಲ್ಲಿ ಶ್ರೀಸಾಮಾನ್ಯರು ಅವರ ನಡೆಯನ್ನೇ ಸಂಶಯದ ಕಣ್ಣುಗಳಿಂದ ನೋಡುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

Back To Top