More

    ಸಂಪಾದಕೀಯ: ಸಹಕಾರ ಸಮನ್ವಯ ಅಗತ್ಯ, ರಾಜ್ಯಗಳ ಗೃಹ ಸಚಿವರ ಸಮ್ಮೇಳನದತ್ತ ನಿರೀಕ್ಷೆ

    ಹರಿಯಾಣದ ಸೂರಜ್​ಕುಂಡ್​ನಲ್ಲಿ ಅ. 27 ಮತ್ತು 28ರಂದು ನಡೆಯಲಿರುವ ದೇಶದ ಎಲ್ಲ ರಾಜ್ಯಗಳ ಗೃಹ ಸಚಿವರ ಸಮ್ಮೇಳನದಲ್ಲಿ ಆಂತರಿಕ ಭದ್ರತೆ, ಸೈಬರ್ ಅಪರಾಧ ನಿಯಂತ್ರಣ ಮೊದಲಾದ ವಿಷಯಗಳ ಬಗೆಗೆ ಗಹನವಾದ ಚರ್ಚೆಗಳು ನಡೆಯಲಿವೆ. ಅಪರಾಧ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಪರಸ್ಪರ ಹೊಂದಾಣಿಕೆಯ ಅಗತ್ಯ ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಸಭೆಯನ್ನು ಆಯೋಜಿಸಿರುವುದು ಮಹತ್ವಪೂರ್ಣವಾಗಿದೆ. ಒಕ್ಕೂಟ ವ್ಯವಸ್ಥೆ ಒಳಗೊಂಡಿರುವ ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಜವಾಬ್ದಾರಿ ಮತ್ತು ಅಧಿಕಾರ ಹಂಚಿಕೆ ಮಾಡಲಾಗಿದೆ.

    ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ವಿಷಯವು ರಾಜ್ಯಪಟ್ಟಿಯಲ್ಲಿದ್ದು, ಇದರನುಸಾರವಾಗಿ ಅಪರಾಧ ಪತ್ತೆ, ತಡೆ, ಶಿಕ್ಷೆ, ಕಾನೂನು-ಸುವ್ಯವಸ್ಥೆಯನ್ನು ಆಯಾ ರಾಜ್ಯಗಳೇ ನೋಡಿಕೊಳ್ಳಬೇಕಾಗಿದೆ. ಆದರೆ, ಅಪರಾಧಿಗಳಿಗೆ ಯಾವುದೇ ರಾಜ್ಯದ ಸೀಮೆ ಎಂಬುದು ಇರುವುದಿಲ್ಲ. ಅಂತಾರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಕಳ್ಳರು, ದರೋಡೆಕೋರರು, ಅಪರಾಧಿಗಳು ಮೊದಲಿನಿಂದಲೂ ಇದ್ದು, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕರು ಮತ್ತು ಸೈಬರ್ ಕ್ರೖೆಂ ವಂಚಕರು ಇದಕ್ಕೆ ಸೇರ್ಪಡೆಯಾಗಿದ್ದಾರೆ. ಭಯೋತ್ಪಾದನೆ ಪಿಡುಗು ಜಾಗತಿಕವಾಗಿಯೂ ಪಸರಿಸಿದೆ. ಮಾಹಿತಿ ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಅಂತರ್ಜಾಲ, ಮೊಬೈಲ್​ಫೋನ್ ಬಳಕೆಯೊಂದಿಗೆ ಹಣಕಾಸು ವಹಿವಾಟು ಹೆಚ್ಚಾದಂತೆಯೇ ಸೈಬರ್ ಕ್ರೖೆಂ ಪ್ರಮಾಣ ಕೂಡ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕೇಂದ್ರ ಸರ್ಕಾರದ ಕಂಪ್ಯೂಟರ್ ಸುರಕ್ಷತಾ ಸಮಿತಿಯಾದ ‘ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಸೈಬರ್ ಕ್ರೖೆಂ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ 5 ಪಟ್ಟು ಹೆಚ್ಚಳ ಕಂಡಿದೆ. 2018ರಲ್ಲಿ 2,08,456 ಸೈಬರ್ ಅಪರಾಧಗಳು ವರದಿಯಾಗಿದ್ದರೆ, 2021ರಲ್ಲಿ ಈ ಸಂಖ್ಯೆ 14,02,809ಕ್ಕೆ ತಲುಪಿದೆ. 2022ನೇ ಇಸ್ವಿಯ ಮೊದಲೆರಡು ತಿಂಗಳಲ್ಲಿಯೇ 2,12,485 ಸೈಬರ್ ಕ್ರೖೆಂ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಶೇ. 35 ಮಾತ್ರ ಇತ್ಯರ್ಥಗೊಳ್ಳುತ್ತಿವೆ.

    ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸೈಬರ್ ಕ್ರೖೆಂ ಮೂಲಕ 221 ಕೋಟಿ ರೂಪಾಯಿ ದೋಚಲಾಗಿದ್ದು, ಈ ಪೈಕಿ 47 ಕೋಟಿ ರೂಪಾಯಿಗಳನ್ನು ಮಾತ್ರ ಅಪರಾಧಿಗಳಿಂದ ವಶಪಡಿಸಿಕೊಳ್ಳಲಾಗಿದೆ. 2019-2022ರ ನಡುವೆ ರಾಜ್ಯದಲ್ಲಿ 32,286 ಪ್ರಕರಣಗಳು ದಾಖಲಾಗಿದ್ದು 7836 ಪ್ರಕರಣಗಳನ್ನು ಭೇದಿಸಲಾಗಿದೆ. ಸೈಬರ್ ಕ್ರೖೆಂ ಕಳ್ಳರು ಜಾರ್ಖಂಡ್, ರಾಜಸ್ತಾನ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ ಮುಂತಾದ ದೂರದ ರಾಜ್ಯಗಳಿಂದ ಕಾರ್ಯನಿರ್ವಹಿಸುವುದರಿಂದ ಹಾಗೂ ಮೇಲಿಂದ ಮೇಲೆ ಸ್ಥಳ ಬದಲಾವಣೆ ಮಾಡುವುದರಿಂದ ಅವರನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ. ಕೆಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಸೈಬರ್ ವಂಚನೆ ಹೇಗೆ ಮಾಡಬೇಕೆಂಬ ಕುರಿತಂತೆ ತರಬೇತಿ ನೀಡುತ್ತಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಸೈಬರ್ ಅಪರಾಧ ನಿಯಂತ್ರಿಸಲು ರಾಜ್ಯಗಳ ನಡುವೆ ಪರಸ್ಪರ ಮಾಹಿತಿ ವಿನಿಮಯ, ತನಿಖೆಗೆ ಸಹಕಾರ ಅಗತ್ಯ. ಅಪರಾಧಿಗಳು ಹೊಸ ತಂತ್ರ- ಮಾರ್ಗಗಳನ್ನು ಅನುಸರಿಸುತ್ತಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಸವಾಲಿನ ಸಂಗತಿಯಾಗಿದೆ. ಅಪರಾಧ ತಡೆಗೆ ಪರಸ್ಪರ ಸಹಕಾರ ವ್ಯವಸ್ಥೆ ರೂಪಿಸಲು ಹಾಗೂ ತಮ್ಮಲ್ಲಿರುವ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಈ ಸಮ್ಮೇಳನವು ಸೂಕ್ತ ವೇದಿಕೆಯಾಗಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts