ಗೀಳು ಗೋಳಾಗದಿರಲಿ

ಅಂತರ್ಜಾಲ ಬಳಕೆ ಆಧುನಿಕ ಜಗತ್ತಿನ ಅವಿಭಾಜ್ಯ ಅಂಗವಾಗಿರುವುದು ಗೊತ್ತಿರುವಂಥದ್ದೇ. ಮಾಹಿತಿಯ ಮಹಾಭಂಡಾರವನ್ನೇ ಒಳಗೊಂಡಿರುವ ಈ ವ್ಯವಸ್ಥೆಯ ಆಳ-ಅಗಲ ಒಂದೇ ಗುಕ್ಕಿಗೆ ದಕ್ಕುವಂಥದ್ದಲ್ಲ. ಆದರೆ ಅಂತರ್ಜಾಲ ಬಳಕೆಯ ಚಟುವಟಿಕೆ ವ್ಯಸನವಾಗಿ ಪರಿಣಮಿಸಿದಲ್ಲಿ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳೇನು ಎಂಬುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಸಮೀಕ್ಷೆಯಲ್ಲಿ ಅನಾವರಣಗೊಂಡಿದೆ. ನಿದ್ರೆ ಮತ್ತು ಆಹಾರ ಪದ್ಧತಿ ಸೇರಿದಂತೆ ಜೀವನಶೈಲಿಯಲ್ಲೇ ಏರಿಳಿತವಾಗಬಹುದಾದ ಮತ್ತು ಬೌದ್ಧಿಕ-ಭಾವನಾತ್ಮಕ ಸಮಸ್ಯೆಗಳು ತಲೆದೋರಬಹುದಾದ ಸಾಧ್ಯತೆಯಿದೆ ಎಂಬ ಎಚ್ಚರಿಕೆಯ ದನಿ ಇಲ್ಲಿ ಹೊಮ್ಮಿದೆ.

ಮತ್ತೊಂದೆಡೆ, ಸ್ಮಾರ್ಟ್​ಫೋನ್​ಗಳ ಅತಿಬಳಕೆಯ ಗೀಳು ಮತ್ತು ಅದರ ಅಪಾಯಗಳ ಕುರಿತಾಗಿ ಅಲಿಘಡ ವಿಶ್ವವಿದ್ಯಾಲಯದ ವತಿಯಿಂದ ಕೈಗೊಳ್ಳಲಾದ ಪ್ರಾಥಮಿಕ ಸಂಶೋಧನೆಯೂ ಬಹುತೇಕ ಇಂಥದೇ ಎಚ್ಚರಿಕೆಗಳನ್ನು ನೀಡಿದೆ. ತಲ್ಲಣದ ಬಲಿಪಶುವಾಗಿರುವ ಹಾಗೂ ಓದಿದ ಮಾಹಿತಿ ಮರೆತುಹೋಗಬಹುದೆಂಬ ಭಯಕ್ಕೆ ಸಿಲುಕಿರುವ ಭಾರತೀಯ ಕಾಲೇಜು ವಿದ್ಯಾರ್ಥಿಗಳು ದಿನವೊಂದರಲ್ಲಿ ಸರಾಸರಿ 150 ಬಾರಿ ಹಾಗೂ 4-7 ಗಂಟೆಗಳಷ್ಟು ಕಾಲ ಸ್ಮಾರ್ಟ್​ಫೋನ್​ಗಳಲ್ಲೇ ಮುಳುಗಿರುತ್ತಾರೆಂಬ ಆಘಾತಕಾರಿ ಸತ್ಯವನ್ನು ಹೊರಹಾಕಿರುವ ಈ ಸಂಶೋಧನೆ, ಇಂಥ ಪರಿಪಾಠದಿಂದಾಗಿ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ದೀರ್ಘಕಾಲಿಕವಾದ ಗಂಭೀರ ಸ್ವರೂಪದ ಪರಿಣಾಮಗಳಾಗಬಹುದು ಎಂದೂ ಎಚ್ಚರಿಸಿದೆ. ‘ಒಲೆ ಹೊತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ?’, ‘ಅತಿಯಾದರೆ ಅಮೃತವೂ ವಿಷ’ ಎಂಬ ಅರಿವಿನ ನುಡಿಗಳನ್ನು ಜಗಕ್ಕೆ ನೀಡಿದ ದೇಶ ಮತ್ತು ಪರಂಪರೆ ನಮ್ಮದು. ನಿಜಾರ್ಥದ ಸಂಪನ್ಮೂಲ ವ್ಯಕ್ತಿಗಳಾಗುವಲ್ಲಿ ಯುವಸಮೂಹದ ‘ಕೈಹಿಡಿದು ನಡೆಸುವ ಕರುಣಾಳು ಬೆಳಕು’ ಆಗಬೇಕಿದ್ದ ಅಂತರ್ಜಾಲ ಮತ್ತು ಸ್ಮಾರ್ಟ್​ಫೋನ್​ನಂಥ ವ್ಯವಸ್ಥೆಗಳು, ಬಳಕೆಯು ಅತಿರೇಕ-ಅಸಹಜ ಆಯಾಮ ಪಡೆದು ಗೀಳಿನ ಹಂತಕ್ಕೆ ಮುಟ್ಟಿದ ಕಾರಣದಿಂದಾಗಿ ಸುಡುವ ಜ್ವಾಲೆಯಾಗಿ ಪರಿಣಮಿಸುವುದು ಆಘಾತಕಾರಿ ಬೆಳವಣಿಗೆಯಲ್ಲದೆ ಮತ್ತೇನು? ಇಂಟರ್​ನೆಟ್ ಅಗ್ಗವಾಗಿರುವುದು ಸಹ ಅನಗತ್ಯ ಬಳಕೆಗೆ ದಾರಿ ಮಾಡಿದೆ.

ಮೌಖಿಕ ಭೇಟಿ, ಚರ್ಚೆ-ಸಮಾಲೋಚನೆಯ ಅಗತ್ಯವಿರುವಾಗಲೂ ಅಂತರ್ಜಾಲ ವ್ಯವಸ್ಥೆ ಮತ್ತು ಸ್ಮಾರ್ಟ್​ಫೋನ್​ನಂಥ ತಂತ್ರಜ್ಞಾನದ (ಅತಿರೇಕದ) ಬಳಕೆ ಆಗುತ್ತಿರುವುದರಿಂದಾಗಿ ವ್ಯಕ್ತಿ-ವ್ಯಕ್ತಿಗಳ ನಡುವಿನ ಬಾಂಧವ್ಯತಂತು ಕಡಿದು ಹೋಗುತ್ತಿರುವುದು ಒಂದೆಡೆಯಾದರೆ, ಜೀವನದ ಸಹಜ ಸವಾಲು ಮತ್ತು ಹೊಣೆಗಾರಿಕೆಗಳನ್ನು ಎದುರಿಸಲಾಗದಂಥ ಅಸಹಾಯಕ ಸ್ಥಿತಿಗೆ ಕೆಲವರು ಬಲಿಪಶುಗಳಾಗುತ್ತಿರುವುದೀಗ ಬಹಿರಂಗ ಗುಟ್ಟು. ತಂತ್ರಜ್ಞಾನ ಎಂಬುದು ಚಾಕುವಿದ್ದಂತೆ. ವಿವೇಚನೆ ಇದ್ದವರ ಕೈಗೆ ಸಿಕ್ಕಿದರೆ ಹಣ್ಣು ಕತ್ತರಿಸುವುದಕ್ಕೆ, ಅವಿವೇಕಿಗೆ ಆಯುಧವಾದರೆ ಹಿಂಸಾಕೃತ್ಯಕ್ಕೆ ಅದು ಬಳಕೆಯಾಗಬಲ್ಲದು. ಹಾಗೆಂದ ಮಾತ್ರಕ್ಕೆ ಅದು ತಂತ್ರಜ್ಞಾನದ ತಪ್ಪಲ್ಲ, ಅದರ ಬಳಕೆಯ ಹಿಂದಿರುವ ಚಿತ್ತಸ್ಥಿತಿಯ ತಪು್ಪ. ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಸಂಖ್ಯೆ 50 ಕೋಟಿಗೂ ಹೆಚ್ಚಿದ್ದು, ಇದರಲ್ಲಿ ಯುವಸಮುದಾಯದ್ದೇ ಸಿಂಹಪಾಲು ಎನ್ನುತ್ತದೆ ಅಂಕಿ-ಅಂಶವೊಂದು. ಇದು ಸ್ಮಾರ್ಟ್​ಫೋನ್ ಬಳಕೆಗೂ ಬಹುತೇಕ ಒಪು್ಪವಂಥ ಮಾತು. ಇಂಥ ಗೀಳಿನ ಬಲಿಪಶುಗಳನ್ನು ಆ ಕೂಪದಿಂದ ಹೊರಸೆಳೆಯಬೇಕಿದೆ. ಎಲ್ಲ ಅಪಸವ್ಯಗಳಿಗೂ ಕಾನೂನಿನ ಮೂಲಕವೇ ಮದ್ದನ್ನು ಅರೆಯಲಾಗದು. ಗೀಳಿಗೆ ಬಲಿಯಾದವರು ಸಂಯಮ, ಸ್ವನಿಯಂತ್ರಣ, ಇಚ್ಛಾಶಕ್ತಿಯನ್ನು ಮೆರೆದಲ್ಲಿ ಇದು ನೆರವೇರದ ಕಸರತ್ತೇನಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಚಿಗುರೊಡೆದ ಇಂಥ ಯಾವುದೇ ವ್ಯಸನ, ಕೌಟುಂಬಿಕ-ಸಾಮಾಜಿಕ ಮಟ್ಟದವರೆಗೂ ಕಬಂಧಬಾಹುವನ್ನು ಚಾಚಿ ದೇಶವನ್ನೇ ಆಪೋಶನ ತೆಗೆದುಕೊಳ್ಳುವುದಕ್ಕೂ ಮುಂದೆ ಸಂಬಂಧಪಟ್ಟ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *