More

    ಭಾರತದ ನಿಲುವಿಗೆ ಬಲ

    ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಪಾಕಿಸ್ತಾನ ಲಾಗಾಯ್ತಿನಿಂದಲೂ ಪ್ರಯತ್ನಿಸುತ್ತಲೇ ಇದೆ. ಈಚಿನ ವರ್ಷಗಳಲ್ಲಿ ಈ ಯತ್ನಕ್ಕೆ ಚೀನಾದ ಸಾಥ್ ಬೇರೆ ದೊರಕುತ್ತಿದೆ. ಇವೆರಡೂ ಆಪ್ತ ದೇಶಗಳಾಗಿದ್ದು, ಬೇರೆ ಬೇರೆ ಕಾರಣಕ್ಕೆ ಭಾರತದ ಬಗ್ಗೆ ಮುನಿಸು ಹೊಂದಿವೆ. ಮೊನ್ನೆಯಷ್ಟೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಈ ವಿಷಯದ ಪ್ರಸ್ತಾವನೆ ಮಾಡಿತ್ತು. ಆದರೆ ಕಾಶ್ಮೀರ ವಿಷಯ ಚರ್ಚೆಗೆ ಇದು ಸೂಕ್ತ ವೇದಿಕೆಯಲ್ಲ ಎಂದು ಭದ್ರತಾ ಮಂಡಳಿಯ ಬಹುತೇಕ ದೇಶಗಳು ಅಭಿಪ್ರಾಯಪಟ್ಟಿದ್ದರಿಂದ ಪ್ರಸ್ತಾವನೆ ಚರ್ಚೆಗೇ ಬರಲಿಲ್ಲ. ಹೀಗಾಗಿ ಪಾಕಿಸ್ತಾನದ ಜತೆಗೆ ವಿಷಯ ಮಂಡಿಸಿದ ಚೀನಾಗೂ ಹಿನ್ನಡೆ ಉಂಟಾಗಿದೆ. ‘ಇದು ಸಂಪೂರ್ಣವಾಗಿ ಆಂತರಿಕ ವಿಚಾರ. ಏನಾದರೂ ತಕರಾರು, ಭಿನ್ನಾಭಿಪ್ರಾಯ ಇದ್ದರೆ ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು’ಎನ್ನುವ ಮೂಲಕ, ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶಗಳಲ್ಲಿ ಒಂದಾದ ಫ್ರಾನ್ಸ್ ಸ್ಪಷ್ಟವಾಗಿ ಭಾರತದ ಬೆಂಬಲಕ್ಕೆ ನಿಂತಿತು. ಪಾಕಿಸ್ತಾನವಂತೂ ಸಂದರ್ಭ ಸಿಕ್ಕಾಗಲೆಲ್ಲ ಕಾಶ್ಮೀರ ಸಮಸ್ಯೆಯನ್ನು ದೊಡ್ಡ ವೇದಿಕೆಗಳಲ್ಲಿ ಎತ್ತುಗಡೆ ಮಾಡಿ ಭಾರತಕ್ಕೆ ಮುಜುಗರ ತರಲು ಕಾಯುತ್ತಲೇ ಇರುತ್ತದೆ. ಮೊದಮೊದಲು ಈ ಯತ್ನಕ್ಕೆ ಸ್ಪಂದನೆ ಸಿಗುತ್ತಿತ್ತಾದರೂ ಈಚಿನ ವರ್ಷಗಳಲ್ಲಿ ಪಾಕಿಸ್ತಾನದ ‘ಭಯೋತ್ಪಾದನೆಪ್ರೀತಿ ನೀತಿ’ ಜಾಗತಿಕ ದೇಶಗಳಿಗೆ ಮನದಟ್ಟಾಗಿದೆ. ಹೀಗಾಗಿ ಜಾಗತಿಕವಾಗಿ ಅದಕ್ಕೆ ಬೆಂಬಲ ತಗ್ಗಿಹೋಗಿದೆ. ಆಗಸ್ಟ್ ತಿಂಗಳಲ್ಲಿ ಭಾರತ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಿದಾಗಲೂ ಪಾಕಿಸ್ತಾನ ದೊಡ್ಡ ಗಂಟಲಿನಲ್ಲಿ ಬೊಬ್ಬೆಹೊಡೆದಿತ್ತು. ಆದರೆ ಭಾರತ ಸರ್ಕಾರ ಬಹಳ ವ್ಯವಸ್ಥಿತವಾಗಿ ಪೂರ್ವಯೋಜಿತವಾಗಿ ಈ ಕ್ರಮ ಕೈಗೊಂಡಿದ್ದರಿಂದ ಪಾಕ್ ಯತ್ನಗಳಿಗೆ ಯಾರೂ ಸೊಪು್ಪಹಾಕಲಿಲ್ಲ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ನಮ್ಮ ಅಚಲ ನಿಲುವು. ಇದಲ್ಲದೆ ಕಾಶ್ಮೀರ ಸಮಸ್ಯೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಈ ವಿಚಾರದಲ್ಲಿ ಮೂರನೆಯ ದೇಶದ ಹಸ್ತಕ್ಷೇಪ ಅಥವಾ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂಬ ನಿರ್ಣಯವನ್ನು ಭಾರತ ತಳೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈಚೆಗೆ ಕಾಶ್ಮೀರ ಮಧ್ಯಸ್ಥಿಕೆ ವಿಚಾರವನ್ನು ಪ್ರಸ್ತಾಪಿಸಿದಾಗ ಭಾರತ ನಯವಾಗಿಯೇ ಆ ಸಾಧ್ಯತೆಯನ್ನು ತಳ್ಳಿಹಾಕಿದೆ. ಚೀನಾ ಭಾರತದೊಂದಿಗೆ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ಹೊಂದಿದ್ದರೂ ಭೂ-ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಕಾರಣಗಳಿಗೆ ಪಾಕಿಸ್ತಾನದ ಆಪ್ತ ದೇಶವಾಗಿದ್ದು, ಸಾಧ್ಯವಿದ್ದಲ್ಲೆಲ್ಲ ಆ ದೇಶದ ಪರವಾಗಿ ವಕಾಲತು ವಹಿಸುತ್ತಿದೆ. ಭಯೋತ್ಪಾದಕ ಮಸೂದ್ ಅಜರ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಲ್ಲಿ ವಿಶ್ವಸಂಸ್ಥೆಯಲ್ಲಿ ಅಡ್ಡಿಯಾಗಿರುವುದು ಚೀನಾದ ನಿಲುವೇ. ಈಗಂತೂ ಜಮ್ಮು-ಕಾಶ್ಮೀರ ಪುನರ್​ವಿಂಗಡಣೆಯಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿದೆ; ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಾಗಿ ಪಾಕಿಸ್ತಾನ ಇನ್ನೂ ಹಳೇ ರಾಗ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಮತ್ತು ಅದನ್ನು ಕೇಳುವವರೂ ಇಲ್ಲ. ಆದರೆ, ಉಗ್ರರಿಗೆ ಉತ್ತೇಜನ ನೀಡುವ ಆ ದೇಶದ ನೀತಿ ಸದ್ಯಕ್ಕಂತೂ ನಿಲ್ಲುವ ಲಕ್ಷಣವಿಲ್ಲ. ಹೀಗಾಗಿ ರಾಜತಾಂತ್ರಿಕ ಮತ್ತು ಸೇನಾ ಕಾರ್ಯತಂತ್ರಗಳ ಮೂಲಕ ಅಂಥ ಕುಟಿಲೋಪಾಯಗಳನ್ನು ಎದುರಿಸುವುದು ಭಾರತಕ್ಕೆ ಅನಿವಾರ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts