More

    ಸಮತೋಲಿತ ಮಾರ್ಗವಿರಲಿ

    ಜಾಗತಿಕ ಆರ್ಥಿಕ ಹಿಂಜರಿತದ ಸುಂಟರಗಾಳಿಗೆ ಭಾರತವೂ ತತ್ತರಿಸಿದೆ. ಹಣದುಬ್ಬರ ಏರಿಕೆಯಾಗಿದ್ದರೆ, ಜಿಡಿಪಿ ಕುಸಿಯುತ್ತಲೇ ಸಾಗಿದೆ. ಉದ್ಯಮ ವಲಯ ನಷ್ಟದಲ್ಲಿದೆ. ಉತ್ಪಾದನಾ ರಂಗ ಹಿನ್ನಡೆ ಅನುಭವಿಸಿದೆ. ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಇರುವ ಉದ್ಯೋಗಗಳಲ್ಲೂ ಕಡಿತ ಮಾಡಲಾಗುತ್ತಿದೆ. ಹೂಡಿಕೆದಾರರಲ್ಲಿ ನಿರುತ್ಸಾಹ ಮನೆ ಮಾಡಿದೆ. ನವೋದ್ಯಮಗಳು ಬಂಡವಾಳವಿಲ್ಲದೆ ಸೊರಗಿವೆ. ಈ ಸಂಕಟಗಳಿಂದ ಹೊರಬರಲು ಇರುವ ಮಾಗೋಪಾಯಗಳೇನು ಎಂಬ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ್ದಾರೆ, ಬಜೆಟ್ ದೃಷ್ಟಿಯಿಂದಲೂ ಸಲಹೆ ಪಡೆದುಕೊಂಡಿದ್ದಾರೆ. ಹೀಗಿರುವಾಗ, ವಿದೇಶಿ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಅದನ್ನು ಸುರಕ್ಷಿತವಾಗಿಸುವುದು ಹೇಗೆ ಎಂಬ ಚಿಂತೆ ಈಗ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ.

    ಮಹತ್ವದ ಯೋಜನೆ, ಹೊಸ ಆವಿಷ್ಕಾರಗಳಿಗೆ ಸಂಬಂಧಿಸಿ ಭಾರತ ಬೇರೆ- ಬೇರೆ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆ ರಾಷ್ಟ್ರಗಳು ಭಾರತದಲ್ಲಿ ಬಂಡವಾಳ ಹೂಡಲು ಉತ್ಸಾಹ ತೋರಿದ್ದು ನಿಜವೇ. ಆದರೆ, ನಮ್ಮಲ್ಲಿನ ಅನಾರೋಗ್ಯಕರ ರಾಜಕೀಯ ಸ್ಪರ್ಧೆ ಇಲ್ಲದ ಅಧ್ವಾನಗಳನ್ನು ಸೃಷ್ಟಿಸುತ್ತದೆ.

    ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ಸಂಬಂಧ ಜಪಾನ್ ಜತೆ ಒಡಂಬಡಿಕೆಯಾಗಿದ್ದು, ಈ ವರ್ಷದ ಏಪ್ರಿಲ್​ನಲ್ಲಿ ಕಾಮಗಾರಿ ಆರಂಭವಾಗಬೇಕಿದೆ. 2023ರ ಡಿಸೆಂಬರ್ ಹೊತ್ತಿಗೆ ಬುಲೆಟ್ ರೈಲು ಹಳಿಯಲ್ಲಿ ಸಂಚರಿಸಬೇಕಿದೆ. ಆದರೆ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಹೈಡ್ರಾಮಾದ ಬಳಿಕ ಅಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬುಲೆಟ್ ರೈಲು ಯೋಜನೆಯ ಬಗ್ಗೆ ಮರುಸಮೀಕ್ಷೆ ನಡೆಸುವುದಾಗಿ ಅದು ಹೇಳಿಕೊಂಡಿದೆ. ಅಲ್ಲದೆ, ಇತರೆ ಕೆಲ ಬಿಜೆಪಿಯೇತರ ರಾಜ್ಯಗಳು ಕೂಡ ಇದೇ ಬಗೆಯ ಅಪಸ್ವರ ಎತ್ತಿವೆ. ಪರಿಣಾಮ, ವಿದೇಶಿ ಹೂಡಿಕೆದಾರರಲ್ಲಿ ಭಯದ ಸ್ಥಿತಿ ನಿರ್ವಣವಾಗಿದ್ದು, ಭಾರತದಲ್ಲಿ ಹೂಡಿಕೆ ಮಾಡಬೇಕೋ, ಬೇಡವೋ ಎಂಬ ಗೊಂದಲಕ್ಕೆ ಸಿಲುಕುವ ಸಾಧ್ಯತೆಯಿದೆ. ಹಾಗಾಗಿಯೇ, ಕೇಂದ್ರ ಸರ್ಕಾರ ವಿದೇಶಿ ಹೂಡಿಕೆ ರಕ್ಷಣೆ ಸಂಬಂಧ ಹೊಸ ಕಾನೂನನ್ನೇ ತರಲು ಚಿಂತನೆ ನಡೆಸಿದೆ. ಹೂಡಿಕೆ ಒಪ್ಪಂದದಲ್ಲಿನ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಮೂಲಕ ಹೊರದೇಶಗಳಿಂದ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ 40 ಪುಟಗಳ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನ ಬಗ್ಗೆ ವಿವಿಧ ಸಚಿವಾಲಯಗಳ ಅಭಿಪ್ರಾಯ ಪಡೆದುಕೊಂಡು ನಂತರ ಅಗತ್ಯ ಟಿಪ್ಪಣಿಯೊಂದಿಗೆ ಮಸೂದೆ ತಯಾರಿಸಲಿದೆ. ಆಶಯವೇನೋ ಉತ್ತಮವೇ. ವಿದೇಶಿ ಹೂಡಿಕೆದಾರರಲ್ಲಿ ಅವಿಶ್ವಾಸ ಅಥವಾ ಭೀತಿಯ ಭಾವ ಸೃಷ್ಟಿಯಾದರೆ ಅದರಿಂದ ದೊಡ್ಡ ನಷ್ಟವೇ. ಈಗಿನ ಸ್ಥಿತಿಯಲ್ಲಿ ವಿವಿಧ ರಂಗಗಳ ಅಭಿವೃದ್ಧಿಗೆ ವಿದೇಶಿ ಬಂಡವಾಳ ಹೂಡಿಕೆ ಅನಿವಾರ್ಯ ಎಂಬಂತಾಗಿದೆ. ವಿದೇಶಿ ಹೂಡಿಕೆಯ ರಕ್ಷಣೆಗೆ ಸರ್ಕಾರ ಬಲವಾದ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವೇ. ಆದರೆ, ಇದೇ ಹೊತ್ತಿನಲ್ಲಿ ಭಾರತದ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ, ನಮ್ಮ ಆರ್ಥಿಕ ಹಿತಗಳು ಬೇರೆ ಯಾವುದೋ ಕಂಪನಿಗಳ, ರಾಷ್ಟ್ರಗಳ ಪಾಲಾಗದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸಮತೋಲಿತ ಮಾರ್ಗ ಅನುಸರಿಸುವುದು ಕೇಂದ್ರ ಸರ್ಕಾರದ ಮುಂದಿನ ಉತ್ತಮ ಆಯ್ಕೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts