More

    ಎಚ್ಚರಿಕೆಯ ಗಂಟೆ

    ಜಾಗತಿಕ ತಾಪಮಾನ ಏರಿಕೆ ಗಂಭೀರ ಕಳವಳಕ್ಕೆ ಕಾರಣವಾಗಿರುವುದು ಗೊತ್ತಿರುವಂಥದ್ದೇ. ಪರಿಸರದ ಜತೆಗೆ ಸಾಮರಸ್ಯದಿಂದ ಬಾಳಬೇಕು, ಪ್ರಕೃತಿ ಇದ್ದರೆ ನಾವು ಎಂಬ ಅರಿವು ಕ್ಷೀಣಿಸುತ್ತಿದ್ದೆಯೇ ಎಂಬ ಆತಂಕವೂ ಕಾಡುತ್ತಿದೆ. ಮುಂಚೆಯಿಂದಲೂ ನಿಸರ್ಗಕ್ಕೆ ಪೂರಕವಾಗಿ ಬದುಕುವ ಸಂಸ್ಕೃತಿಯೇ ಶ್ರೇಷ್ಠ ಜೀವನಪದ್ಧತಿ ಎನಿಸಿಕೊಂಡಿದೆ. ಮನುಷ್ಯರಿಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಎಷ್ಟಿದೆಯೋ, ಅಷ್ಟೇ ಹಕ್ಕು ಇತರ ಪ್ರಾಣಿ-ಪಕ್ಷಿ ಸಂಕುಲ, ಜೀವವೈವಿಧ್ಯಕ್ಕೂ ಇದೆ. ನಿಸರ್ಗದಲ್ಲಿ ಎಲ್ಲವೂ ಸಮತೋಲಿತವಾಗಿದ್ದರೆ ಮಾತ್ರ ಸರಾಗ. ಇಲ್ಲದಿದ್ದಲ್ಲಿ ಅನಾಹುತಗಳಿಗೆ ಆಹ್ವಾನ ನೀಡಿದಂತೆ. ಇತ್ತೀಚಿನ ಪ್ರಾಕೃತಿಕ ದುರಂತಗಳನ್ನು ಅವಲೋಕಿಸಿದಾಗಲೂ, ಅವುಗಳಿಗೆ ಕಾರಣ ಮಾನವನಿರ್ವಿುತವೇ ಎಂಬುದು ಸ್ಪಷ್ಟ. ಪ್ರಕೃತಿಯ ವಿಷಯದಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚಿದಷ್ಟು, ಸಮಸ್ಯೆಗಳು ಹೆಚ್ಚಾಗುತ್ತವೆ. ಕಳೆದ ಹಲವು ದಶಕಗಳಿಂದಲಂತೂ ‘ಆರ್ಥಿಕ ಕೇಂದ್ರಿತ ವಿಕಾಸ’ವೇ ಹೆಚ್ಚು ಶ್ರೇಷ್ಠ ಎಂಬ ಭ್ರಮೆ ಆವರಿಸಿಕೊಂಡಿದೆ. ಈ ಅನಾರೋಗ್ಯಕರ ಸ್ಪರ್ಧೆಯಲ್ಲಿ ನಿಸರ್ಗಕ್ಕೆ ಮತ್ತು ಅದಕ್ಕೆ ಜೋಡಿಸಿಕೊಂಡಿರುವ ಸೂತ್ರಗಳಿಗೆ ಎಷ್ಟೆಲ್ಲ ಹಾನಿಯಾಗುತ್ತಿದೆ, ಇದೇ ಪರಿಸ್ಥಿತಿ ಮುಂದುವರಿದರೆ ಬದುಕುವುದೆಂತು ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ. ಅಲ್ಲದೆ, ಪರಿಸರ ರಕ್ಷಣೆಯ ಸಾಮೂಹಿಕ ಬದ್ಧತೆಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ದೂರವಾಗುತ್ತಿರುವುದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ಸಾಗರ ಉಷ್ಣಾಂಶ ಹೆಚ್ಚುತ್ತಿರುವ ಬಗ್ಗೆ ಈ ಹಿಂದೆಯೇ ವಿಜ್ಞಾನಿಗಳು ಎಚ್ಚರಿಸಿದ್ದುಂಟು. ಆದರೆ, ಪರಿಸ್ಥಿತಿ ಈಗ ಮತ್ತಷ್ಟು ಜಟಿಲವಾಗುತ್ತಿದೆ. 2019ರಲ್ಲಿ ಸಾಗರಗಳ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, ಭೂಮಿಯ ಹವಾಮಾನದ ಮೇಲೆ ಹಾನಿಕಾರ ಪರಿಣಾಮ ಬೀರಲಿದೆ ಎಂದು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ. 1981-2010ರ ನಡುವಿನ ಸರಾಸರಿಗಿಂತ ಕಳೆದ ವರ್ಷ ಸಾಗರಗಳು 0.075 ಸೆಲ್ಸಿಯಸ್ ಹೆಚ್ಚು ಬಿಸಿಯಾಗಿದ್ದವು. ಕಳೆದ 25 ವರ್ಷಗಳಲ್ಲಿ ಮಾನವರು ಸಮುದ್ರಕ್ಕೆ ಹಾಕಿದ ಶಾಖದ ಪ್ರಮಾಣ ಹಿರೋಷಿಮಾ ಪರಮಾಣು ಬಾಂಬ್​ನ 3.60 ಬಿಲಿಯನ್ ಸ್ಪೋಟಗಳಿಗೆ ಸಮನಾಗಿರುತ್ತದೆ ಎಂದು ಚೀನಾದ ಇನ್​ಸ್ಟಿಟ್ಯೂಟ್ ಆಫ್ ಅಟ್ಯಾಸ್ಪಿಯರಿಕ್ ಫಿನಿಕ್ಸ್ (ಐಎಪಿ) ಅಧ್ಯಯನದಲ್ಲಿ ವಿವರಿಸಿದೆ. ಸಾಗರ ಉಷ್ಣಾಂಶ ಹೆಚ್ಚಳದ ಪರಿಣಾಮದಿಂದ ಭೂ ಹವಾಮಾನದಲ್ಲಿ ವಿಪರೀತ ಏರುಪೇರುಗಳಾಗಿದ್ದು, ಸಮುದ್ರಜೀವಿಗಳು ಸಾವನ್ನಪು್ಪತ್ತಿವೆ. ಸಮುದ್ರದ ಮಟ್ಟವೂ ಏರಿಕೆಯಾಗುತ್ತಿದೆ.

    ಸಾಗರ ಉಷ್ಣಾಂಶ ಸೇರಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗಟ್ಟಲು ಎಲ್ಲ ದೇಶಗಳು ಸಾಮೂಹಿಕ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬದ್ಧತೆ ಮೆರೆಯಬೇಕಿದೆ. ಪ್ಯಾರಿಸ್ ಒಪ್ಪಂದದ ಪ್ರಕಾರ ಜಾಗತಿಕವಾಗಿ ತಾಪಮಾನ ಪ್ರತಿ ವರ್ಷ 2 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಾಗಬಾರದು ಎಂದು ಹೇಳಲಾಗಿದೆ. ಆದರೆ, ಇದನ್ನು ಪಾಲಿಸಲು, ಈಗಿನ ಸ್ಥಿತಿಯನ್ನು ಸುಧಾರಿಸಲು ಎಷ್ಟು ರಾಷ್ಟ್ರಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ? ಅಮೆರಿಕವಂತೂ ಪ್ಯಾರಿಸ್ ಒಪ್ಪಂದದಿಂದ ಹೊರ ಬಂದು, ಸಾಕಷ್ಟು ವಿರೋಧವನ್ನು ಎದುರಿಸಿದೆ. ಹಾಗಂತ, ಉಳಿದ ರಾಷ್ಟ್ರಗಳು ಕೈಕಟ್ಟಿ ಕೂಡುವಂತಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪರಿಸರದ ಹಿತ ಕಾಯುವುದನ್ನು ಮುಖ್ಯ ಆದ್ಯತೆ ಆಗಿಸಬೇಕಿದೆ. ಇಲ್ಲದಿದ್ದಲ್ಲಿ ಭೌತಿಕ ಅಭಿವೃದ್ಧಿಗೆ ಯಾವುದೇ ಅರ್ಥ ಇಲ್ಲದಂತಾಗಿ, ಜನಸಮೂಹ ಸಮಸ್ಯೆಗಳಿಂದ ತತ್ತರಿಸುವ ಪರಿಸ್ಥಿತಿ ತಲೆದೋರಬಹುದು. ಹಾಗಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು. ಆ ಬದ್ಧತೆಯನ್ನು ಎಲ್ಲರೂ ತೋರುವಂತಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts