More

    ಸುಪ್ರೀಂ ಕೋರ್ಟ್​ ನಿಲುವು ಗೌರವಿಸಿ

    ಪೌರತ್ವ ತಿದ್ದುಪಡಿ ಕಾನೂನಿನ ಪರ-ವಿರೋಧ ಪ್ರತಿಭಟನೆ ದೇಶದಲ್ಲಿ ತಾರಕಕ್ಕೇರಿದೆ. ಕಾನೂನನ್ನು ವಿರೋಧಿಸಿ ನಡೆದ ಹೋರಾಟ ಹಿಂಸಾಚಾರಕ್ಕೆ ತಿರುಗಿ, ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಪ್ರಾಣಹಾನಿಯೂ ಸಂಭವಿಸಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹೊತ್ತಲ್ಲಿ ನಡೆದ ಹಿಂಸೆಯಿಂದ ಭಾರಿ ಹಾನಿಯಾಗಿದೆ. ಕರ್ನಾಟಕದ ಮಂಗಳೂರಿನಲ್ಲಿ ಗೋಲಿಬಾರ್​ಗೆ ಇಬ್ಬರು ಬಲಿಯಾಗಿದ್ದಾರೆ. ಈ ಪ್ರತಿಭಟನೆಯ ಕಿಚ್ಚು ಹೊತ್ತಿ ಹಲವು ದಿನಗಳು ಕಳೆದರೂ ಇನ್ನೂ ಆರುವ ಲಕ್ಷಣಗಳಂತೂ ಗೋಚರಿಸುತ್ತಿಲ್ಲ. ಅಷ್ಟಕ್ಕೂ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ವಾಕ್ ಸ್ವಾತಂತ್ರ್ಯವಿದೆ. ವಿರೋಧಿಸುವ, ಪ್ರತಿಭಟಿಸುವ ಹಕ್ಕು ಇದೆ. ಈ ಪ್ರತಿಭಟನೆಗಳೆಲ್ಲ ಶಾಂತಿಯುತ ರೀತಿಯಲ್ಲಿದ್ದರೆ ಅವು ಜನರ ಮತ್ತು ಪ್ರಭುತ್ವದ ಗಮನ ಸೆಳೆಯಲು ಸಾಧ್ಯ. ಮಾತ್ರವಲ್ಲದೆ, ವಿರೋಧವನ್ನು ವ್ಯಕ್ತಪಡಿಸುವ ಸರಿಯಾದ ರೀತಿಯೂ ಅದುವೇ. ಅದನ್ನು ಬಿಟ್ಟು ವಾಹನಗಳಿಗೆ, ಅಂಗಡಿಮುಂಗಟ್ಟುಗಳಿಗೆ ಬೆಂಕಿ ಇಡುವುದು, ಪೊಲೀಸರ ಮೇಲೇ ಕಲ್ಲು ತೂರುವಂಥ ಧಾಷ್ಟರ್್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದನ್ನು ಪ್ರತಿಭಟನಾಕಾರರು ಅರ್ಥಮಾಡಿಕೊಳ್ಳಬೇಕು.

    ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್ ಪೌರತ್ವ ತಿದ್ದುಪಡಿ ಕಾನೂನು ಕುರಿತ ಅರ್ಜಿಯ ತುರ್ತು ವಿಚಾರಣೆಗೆ ಗುರುವಾರ ಸ್ಪಷ್ಟವಾಗಿ ನಿರಾಕರಿಸಿದೆ, ಹಿಂಸೆ ನಿಲ್ಲುವವರೆಗೂ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ ಎಂದಿದೆ. ‘ದೇಶ ಸಂಕಷ್ಟದ ಸಮಯದಲ್ಲಿದ್ದು ಇಂಥ ಅರ್ಜಿಗಳಿಂದ ಏನೂ ಸಹಾಯವಾಗದು. ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಯಬೇಕು. ಹಿಂಸಾಚಾರ ನಿಂತ ಬಳಿಕ ಅರ್ಜಿಯನ್ನು ಪರಿಶೀಲಿಸಬಹುದಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದ್ದಾರೆ. ಈ ಹೊಸ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ 60 ಅರ್ಜಿಗಳು ಸಲ್ಲಿಕೆಯಾಗಿವೆ ಎಂಬುದು ಗಮನಾರ್ಹ.

    ಸುಪ್ರೀಂ ಕೋರ್ಟ್ ತಳೆದಿರುವ ನಿಲುವನ್ನು, ಅದು ವ್ಯಕ್ತಪಡಿಸಿರುವ ಸ್ಪಷ್ಟ ಅಭಿಪ್ರಾಯವನ್ನು ಎಲ್ಲ ಪ್ರತಿಭಟನಾಕಾರರು ಗಂಭೀರವಾಗಿ ಪರಿಗಣಿಸಬೇಕು. ಶಾಂತಿಗೆ ಧಕ್ಕೆ ಒದಗಿ, ಜನರು ಆತಂಕದ ಸ್ಥಿತಿಯಲ್ಲಿರುವಾಗ ಅಂಥ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಬೇಕೆ ಹೊರತು ಪ್ರತಿಭಟನಾಕಾರರು ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಬಾರದು. ಉತ್ತರಪ್ರದೇಶ ಸರ್ಕಾರವಂತೂ ಜನರ ಆಸ್ತಿಪಾಸ್ತಿಗೆ ಹಾನಿ ಮಾಡಿದವರಿಂದಲೇ ದಂಡ ವಸೂಲಿ ಮಾಡಲು ಮುಂದಾಗಿದ್ದು, ನಷ್ಟ ಕಟ್ಟಿಕೊಡದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದೆ. ಈ ಸಂಬಂಧ ನೋಟಿಸ್​ಗಳನ್ನು ಕೂಡ ಜಾರಿ ಮಾಡಿದೆ. ಕರ್ನಾಟಕ ಸರ್ಕಾರವೂ ಇದೇ ಮಾದರಿಯ ನಿಯಮ ಜಾರಿಗೆ ತರಲು ಚಿಂತನೆ ನಡೆಸುತ್ತಿದೆಯಾದರೂ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇಂಥ ಉದ್ವಿಗ್ನತೆಯ ಸ್ಥಿತಿಯಲ್ಲಿ ಅರ್ಜಿಯ ವಿಚಾರಣೆ ನಡೆಸಿದಲ್ಲಿ ಅದರ ಪರಿಣಾಮಗಳು ಅಹಿತಕರವಾಗಬಹುದು ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ತಾಳ್ಮೆಯ ನಿಲುವು ತಳೆದಿದೆ.

    ಪೌರತ್ವ ತಿದ್ದುಪಡಿ ಕಾನೂನು ಸರಿಯೋ, ತಪ್ಪೋ ಅದನ್ನು ರ್ಚಚಿಸಲು, ವಿಮಶಿಸಲು ಸಮಯಾವಕಾಶ ಇದೆ. ಆದರೆ, ಇದನ್ನೇ ನಿಮಿತ್ತವಾಗಿಟ್ಟುಕೊಂಡು ಶಾಂತಿ ಕದಡುವ ಶಕ್ತಿಗಳನ್ನು ಸಹಿಸಲಾಗದು. ಮೊದಲಿಗೆ ಇಡೀ ದೇಶದಲ್ಲಿ ಶಾಂತಿಯ ವಾತಾವರಣ ನೆಲೆಗೊಳ್ಳಲಿ. ಆ ನಿಟ್ಟಿನಲ್ಲಿ ಕಾನೂನಿಗೆ ಪರ ಮತ್ತು ವಿರೋಧವಾಗಿ ಪ್ರತಿಭಟನೆ ಮಾಡುತ್ತಿರುವವರು ಸಹಕರಿಸಲಿ. ಸುಪ್ರೀಂ ಕೋರ್ಟ್​ನ ನಿಲುವನ್ನು ಗೌರವಿಸಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts