More

    ಬಾಹ್ಯಾಕಾಶದಲ್ಲಿ ಭಾರತ

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯು ಮತ್ತಷ್ಟು ಹೊಸ ಸಾಹಸಗಳಿಗೆ ಸಜ್ಜಾಗಿದೆ. ಮೊದಲ ಬಾರಿ ಇಸ್ರೋ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಯೋಜನೆ ರೂಪಿಸಿದ್ದು, 2022ಕ್ಕೆ ಇದು ಅನುಷ್ಠಾನಕ್ಕೆ ಬರಲಿದೆ. ಗಗನಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರನ್ನು ಆರಿಸಲಾಗಿದ್ದು, ಅವರಿಗೆ ರಷ್ಯಾದಲ್ಲಿ ತರಬೇತಿ ನಡೆಯಲಿದೆ. ಆ ಪೈಕಿ ಒಬ್ಬರನ್ನು ಅಂತಿಮಯಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಇದರ ಜತೆಗೆ, ಚಂದ್ರಯಾನ-3 ಯೋಜನೆಗೂ ಇಸ್ರೋ ಯೋಜನೆ ಮಾಡಿಕೊಂಡಿದ್ದು, 2021ರಲ್ಲಿ ಇದು ಸಾಕಾರವಾಗುವ ನಿರೀಕ್ಷೆ ಇದೆ. ಹಾಗೆನೋಡಿದರೆ ಇಸ್ರೋದ ಬಾಹ್ಯಾಕಾಶ ಸಾಹಸ ಹೊಸದೇನಲ್ಲ. ಆರಂಭದ ವರ್ಷಗಳಲ್ಲಿ ವೈಫಲ್ಯಗಳಿಂದ ಪಾಠ ಕಲಿತ ಸಂಸ್ಥೆ, ಕ್ರಮೇಣ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿತು. ಈಗ ಎಷ್ಟರಮಟ್ಟಿಗೆ ಎಂದರೆ, ಹಲವು ದೇಶಗಳು ಉಪಗ್ರಹ ಉಡಾವಣೆಗೆ ಭಾರತವನ್ನೇ ನೆಚ್ಚುತ್ತವೆ. ಇತರ ದೇಶಗಳಿಗೆ ಹೋಲಿಕೆಯಲ್ಲಿ ಭಾರತದಲ್ಲಿ ಉಡಾವಣಾ ವೆಚ್ಚ ಸಹ ಕಮ್ಮಿಯಾಗುತ್ತದೆ. ನಮ್ಮಲ್ಲಿ ಶುರುವಿನಲ್ಲಿ ಉಪಗ್ರಹ ಉಡಾವಣೆಯ ಪ್ರಯೋಜನಗಳ ಬಗ್ಗೆ ಅನುಮಾನವಿತ್ತಾದರೂ, ಈಗ ಕೃಷಿ, ದೂರಸಂಪರ್ಕ, ಟಿವಿ, ಹವಾಮಾನ, ಇತರ ದೇಶಗಳ ಮೇಲೆ ಆಗಸದಿಂದಲೇ ಕಣ್ಗಾವಲು…. ಹೀಗೆ ಉಪಗ್ರಹದ ನೆರವು ಪಡೆಯದ ರಂಗವೇ ಇಲ್ಲ ಎನ್ನಬಹುದು. ಈವರೆಗೆ, ಅಮೆರಿಕ ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಕಳಿಸುವಲ್ಲಿ ಯಶಸ್ವಿಯಾಗಿವೆ. ಭಾರತ ಈ ಯೋಜನೆಯಲ್ಲಿ ಯಶಸ್ಸು ಪಡೆದರೆ, ಇಂಥ ಹೆಗ್ಗಳಿಕೆಯ ನಾಲ್ಕನೇ ದೇಶವಾಗುತ್ತದೆ. ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ 2020ರ ಅಂತ್ಯದಲ್ಲಿ ಅಥವಾ 2021ರ ಆರಂಭದಲ್ಲಿ ಪ್ರಾಯೋಗಿಕವಾಗಿ ಹ್ಯೂಮನಾಯ್್ಡ (ರೋಬಾಟ್) ರವಾನಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕಳೆದ ವರ್ಷ ಭಾರತ ಚಂದ್ರಯಾನ-2 ಯೋಜನೆಯನ್ನು ಕೈಗೊಂಡಿತ್ತು. ಎಲ್ಲ ಹಂತಗಳು ಯಶಸ್ವಿಯಾಗಿ ನಡೆದವು. ಆದರೆ ಅಂತಿಮ ಘಟ್ಟದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿಯುವಲ್ಲಿ ಸ್ವಲ್ಪ ವ್ಯತ್ಯಾಸವಾಯಿತು. ಅಂದಾಕ್ಷಣ ಯೋಜನೆ ವಿಫಲ ಅಂತಲ್ಲ. ಯೋಜನೆ ಬಹುತೇಕ ಯಶಸ್ವಿಯಾಗಿದೆ. ಆಗ ಕಳಿಸಿದ ಆರ್ಬಿಟರ್ ಉತ್ತಮ ಸ್ಥಿತಿಯಲ್ಲಿದ್ದು, ಇನ್ನೂ ಏಳು ವರ್ಷ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆಯೆಂಬುದು ಗಮನಾರ್ಹ. ಈ ಅನುಭವ ಚಂದ್ರಯಾನ-3ರಲ್ಲಿ ಪ್ರಯೋಜನಕ್ಕೆ ಬರಬಹುದು. ಚಂದ್ರಯಾನ-2 ಯೋಜನೆಯಲ್ಲಿ ಕೊನೇ ಹಂತದಲ್ಲಿ ಸಮಸ್ಯೆ ಎದುರಾದಾಗ ಇಡೀ ದೇಶ ಇಸ್ರೋ ಬೆಂಬಲಕ್ಕೆ ನಿಂತಿತ್ತು. ಇದು ಇಸ್ರೋ ವಿಶ್ವಾಸಾರ್ಹತೆಗೆ ಸಾಕ್ಷಿ. ಇಸ್ರೋ ಈಗ ವಾಣಿಜ್ಯಿಕವಾಗಿಯೂ ಯಶಸ್ವಿಯಾಗುತ್ತಿದೆ. ಅಂದರೆ, ವಿದೇಶಿ ಉಪಗ್ರಹ ಉಡಾವಣೆ ಮತ್ತಿತರ ಕಾರ್ಯಗಳಿಂದ ಆದಾಯವನ್ನೂ ಗಳಿಸುತ್ತಿದೆ. ಇದಲ್ಲದೆ, ಸ್ವಾವಲಂಬನೆ ನಿಟ್ಟಿನಲ್ಲಿಯೂ ಸಾಕಷ್ಟು ಮುಂದುವರಿದಿದೆ. ಚಂದ್ರಯಾನ-2 ಯೋಜನೆಯ ಬಹುತೇಕ ಉಪಕರಣಗಳನ್ನು ದೇಶೀಯವಾಗಿಯೇ ತಯಾರಿಸಿದ್ದು ಉಲ್ಲೇಖನೀಯ. ಇಸ್ರೋದ ಈವರೆಗಿನ ಸಾಧನೆ ಗಮನಿಸಿದರೆ, ಅದರ ಯೋಜನೆಗಳು ಯಶಸ್ಸು ಪಡೆಯುತ್ತವೆಂದು ಭಾವಿಸಲು ಸಾಕಷ್ಟು ಆಧಾರಗಳು ಸಿಗುತ್ತವೆ ಮತ್ತು ಯಶಸ್ಸು ಸಾಧಿಸಲಿ; ಬಾಹ್ಯಾಕಾಶದಲ್ಲಿ ಭಾರತ ಮತ್ತಷ್ಟು ಪ್ರಕಾಶಮಾನವಾಗಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts