ಹೆಚ್ಚಿದ ಘನತೆ

ಚುನಾವಣೆಯನ್ನು ಪ್ರಜಾತಂತ್ರದ ಮಹಾಪರ್ವ ಎಂದೇ ಬಣ್ಣಿಸಲಾಗಿದೆ. ಆದರೆ, ಭಾರತದಂಥ ಬೃಹತ್ ರಾಷ್ಟ್ರದಲ್ಲಿ, 90 ಕೋಟಿಗೂ ಅಧಿಕ ಮತದಾರರಿರುವ ಈ ದೇಶದಲ್ಲಿ ಚುನಾವಣೆಯನ್ನು ನಿರ್ವಿಘ್ನವಾಗಿ ನಡೆಸುವುದು ಸುಲಭದ ಮಾತಲ್ಲ. 17ನೇ ಲೋಕಸಭೆಗೆ ಏಳು ಹಂತದ ಮತದಾನ ಮೇ 19ರಂದು ಪೂರ್ಣಗೊಂಡಿದ್ದು, ಫಲಿತಾಂಶಕ್ಕೆ ಕೇವಲ 24 ಗಂಟೆಗಳಷ್ಟೇ ಬಾಕಿ. ಬಿಸಿಲಿನ ತಾಪ, ವಿದ್ಯಾರ್ಥಿಗಳ ಪರೀಕ್ಷೆ, ರಮ್ಜಾನ್ ಹಬ್ಬ ಇವುಗಳೆಲ್ಲದರ ಮಧ್ಯೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಮತ್ತು ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರದ ಕೆಲ ಭಾಗ ಹೊರತುಪಡಿಸಿದರೆ ದೇಶಾದ್ಯಂತ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದ್ದು, ಇದರ ಶ್ರೇಯ ಖಂಡಿತವಾಗಿಯೂ ಚುನಾವಣಾ ಆಯೋಗಕ್ಕೆ ಸಲ್ಲುತ್ತದೆ. ಹಾಗಾಗಿ, ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಘನತೆ ಮತ್ತಷ್ಟು ಹೆಚ್ಚಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು, ಅದರ ಮೌಲ್ಯಗಳನ್ನು ಮತ್ತಷ್ಟು ಶಕ್ತಿಯುತವಾಗಿಸಲು ಹಿಂದಿನಿಂದಲೂ ಚುನಾವಣಾ ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬಾರಿಯೂ ಅದೇ ಆಶಯದಿಂದ ಕೆಲಸ ಮಾಡಿದೆ. ಆದರೆ, ಪ್ರತಿಪಕ್ಷಗಳು ಮತದಾನೋತ್ತರ ಸಮೀಕ್ಷೆಗಳು ಬಹಿರಂಗಗೊಂಡ ಬೆನ್ನಲ್ಲೇ ಚುನಾವಣಾ ಆಯೋಗವನ್ನು ದೂಷಿಸುತ್ತಿರುವುದು, ಅದು ಪಕ್ಷಪಾತಿಯಾಗಿ ನಡೆದುಕೊಂಡಿದೆ ಎಂದು ಸುಖಾಸುಮ್ಮನೆ ಆರೋಪಿಸುತ್ತಿರುವುದು ಕಳವಳದ ಸಂಗತಿ. ಅಕ್ರಮಗಳಿಗೆ ಕಡಿವಾಣ ಹಾಕಿ ದಾಖಲೆ ಪ್ರಮಾಣದ ಮೊತ್ತವನ್ನು ವಶಪಡಿಸಿಕೊಂಡಿದ್ದಲ್ಲದೆ, ನಾಲಿಗೆ ತಪ್ಪಿ ಮಾತನಾಡಿದ ರಾಜಕೀಯ ನಾಯಕರುಗಳ ಪ್ರಚಾರಕ್ಕೆ ಕೆಲ ದಿನಗಳ ನಿಷೇಧವನ್ನೂ ಆಯೋಗ ಹೇರಿತ್ತು ಎಂಬುದು ಗಮನಾರ್ಹ. ಆದರೂ, ಸೋಲಿನ ಭೀತಿ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಆಯೋಗದ ವಿರುದ್ಧವೇ ದೂರುತ್ತಿರುವುದು, ಮತ್ತೆ ಇವಿಎಂಗಳನ್ನು ದೂಷಿಸುತ್ತಿರುವುದು ತೀರಾ ಅಪ್ರಬುದ್ಧ ಹಾಗೂ ಅಸಂಬದ್ಧ ನಡೆ ಎನ್ನದೆ ವಿಧಿಯಿಲ್ಲ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳಲಿ. ಆದರೆ, ಇದರಲ್ಲಿ ಯಾವುದೇ ಕಾರಣಕ್ಕೂ ಸಾಂವಿಧಾನಿಕ ಸಂಸ್ಥೆಗಳನ್ನು ಎಳೆದು ತರಬಾರದು. ಗೆದ್ದಾಗ ಸುಮ್ಮನಿದ್ದು, ಸೋಲಿನ ಭಯ ಆವರಿಸಿದಾಗ ಇಂಥ ಸಾಂವಿಧಾನಿಕ ಸಂಸ್ಥೆಗಳನ್ನೇ ಹಳಿಯುವ ಚಾಳಿ ಪ್ರಜಾತಂತ್ರದ ಸ್ವಾಸ್ಥ್ಯಕ್ಕೆ ಮಾರಕ ಎಂಬುದನ್ನು ಮರೆಯಬಾರದು.

ಸೋಮವಾರ ದೆಹಲಿಯಲ್ಲಿ ಪುಸ್ತಕ ಲೋಕಾರ್ಪಣೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಅಭಿನಂದಿಸಿದ್ದಾರೆ. ಅಲ್ಲದೆ, ‘ಮೊದಲ ಚುನಾವಣಾ ಆಯುಕ್ತರಿಂದ ಹಿಡಿದು ಈಗಿನ ಆಯುಕ್ತ (ಸುನೀಲ್ ಅರೋಡಾ)ರವರೆಗಿನ ಕಾರ್ಯಾವಧಿಯಲ್ಲಿ ಆಯೋಗ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಪ್ರಜಾಪ್ರಭುತ್ವ ಮುಂದುವರಿದಿದೆ ಎಂದರೆ ಅದರ ಶ್ರೇಯ ಚುನಾವಣಾ ಆಯುಕ್ತರಿಗೆ ಸಲ್ಲುತ್ತದೆ’ ಎಂದು ಹೇಳಿದ್ದು, ಈ ಸಮಯದಲ್ಲಿ ಮಹತ್ವಪೂರ್ಣ ಮತ್ತು ಸೂಕ್ತ ಸಂದೇಶವೇ ಆಗಿದೆ ಎನ್ನಬಹದು. ‘ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಎದುರು ಶರಣಾಗಿದೆ. ಈಗ ಆಯೋಗಕ್ಕೆ ಯಾರೂ ಹೆದರುವುದಿಲ್ಲ, ಯಾರೂ ಗೌರವಿಸುವುದಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಹರಿಹಾಯ್ದಿದ್ದರು. ಇಂಥ ಹೇಳಿಕೆಗಳು ರಾಜಕೀಯ ಮುಖಂಡರ ಹತಾಶೆ, ಅಸಹಾಯಕತೆಯನ್ನು ಪ್ರದರ್ಶಿಸುವ ಜತೆಗೆ ಜನರಿಗೆ ತಪು್ಪ ಸಂದೇಶ ರವಾನಿಸುತ್ತವೆ. ಹಾಗಾಗಿ, ಸಾಂವಿಧಾನಿಕ ಸಂಸ್ಥೆಗಳನ್ನು ಅವುಗಳ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಬಿಟ್ಟು, ವಿವೇಚನೆ ಮೆರೆದರೆ ಸಾಕು.

Leave a Reply

Your email address will not be published. Required fields are marked *