ಶಿಸ್ತುಕ್ರಮದ ಚಾಟಿ

ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅದೆಷ್ಟೋ ಆಶಯಗಳನ್ನು ನಮ್ಮಲ್ಲಿ ಹೆಣೆಯಲಾಗಿದೆ. ಈ ನಿಟ್ಟಿನಲ್ಲಿ ಹೊಸ ಚಿಂತನೆಗಳ ಅನುಷ್ಠಾನಕ್ಕೂ ಒತ್ತು ನೀಡಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಸಮರ್ಥವಾಗಿ ಸಾಕಾರಗೊಳ್ಳಬೇಕಾದರೆ ಗ್ರಾಮಮಟ್ಟದಿಂದಲೇ ಬದಲಾವಣೆ ಆಗಬೇಕು, ಅಲ್ಲಿನ ಜನಪ್ರತಿನಿಧಿಗಳು ನಿಜಾರ್ಥದಲ್ಲಿ ಜನಮುಖಿಗಳಾಗಬೇಕು ಎಂಬ ನಿರೀಕ್ಷೆಗಳು ಸಹಜವೇ. ಆದರೆ, ರಾಜ್ಯದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರ, ಸ್ವಜನಪಕ್ಷಪಾತ ಇದೆಲ್ಲವನ್ನೂ ನೋಡುತ್ತಿದ್ದರೆ ಗಾಬರಿ, ಆತಂಕ ಒಟ್ಟೊಟ್ಟಿಗೆ ಆಗುತ್ತದೆ. ಪಂಚಾಯಿತಿ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದ ತಳಪಾಯವೆಂದೇ ಬಣ್ಣಿಸಲಾಗಿದೆ. ಈ ತಳಪಾಯವೇ ಅಲುಗಾಡಿಬಿಟ್ಟರೆ, ಇದರ ಮೇಲೆ ನಿಲ್ಲುವ ಸೌಧ ಸುರಕ್ಷಿತವಾಗಿ ಇರಲು ಹೇಗೆ ಸಾಧ್ಯ? ಬೇರು ಕೊಳೆತು ಹೋದರೆ ಇಡೀ ವೃಕ್ಷವೇ ಅವಸಾನವಾಗುತ್ತದೆ. ಗ್ರಾಮಮಟ್ಟದಲ್ಲಿ ಸಂಘಟಿತರಾಗಿ, ಜನರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಸಾಧಿಸುವುದು ಸುಲಭ ಎಂಬ ಚಿಂತನೆ ಹಿನ್ನೆಲೆಯಲ್ಲಿಯೇ ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂತು. ಈಗ ನಡೆಯುತ್ತಿರುವ ಬೆಳವಣಿಗೆಗಳು ಅಂಥ ನಂಬಿಕೆಯನ್ನೇ ಅಲುಗಾಡಿಸುವಂತಾಗಿರುವುದು ವಿಪರ್ಯಾಸಕರ.

ದುರ್ನಡತೆ, ಅಕ್ರಮ, ಅವ್ಯವಹಾರ ಮತ್ತು ಗ್ರಾಮ ಪಂಚಾಯತ್ ಸಭೆಗೆ ನಿರಂತರ ಗೈರುಹಾಜರಾದ ಕಾರಣ ರಾಜ್ಯ ಸರ್ಕಾರ ಶಿಸ್ತುಕ್ರಮದ ಚಾಟಿ ಬೀಸಿದ್ದು, 53 ಗ್ರಾ.ಪಂ. ಸದಸ್ಯರನ್ನು ವಜಾಗೊಳಿಸಿದೆ. ಕಳೆದೊಂದು ತಿಂಗಳ ಅವಧಿಯಲ್ಲೇ 23 ಜನರ ಮೇಲೆ ಕ್ರಮ ಕೈಗೊಂಡಿರುವುದು ವಿಶೇಷ. ‘ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಪ್ರಕರಣಗಳ ವಿಚಾರಣೆ ನಡೆಸಿ ಅಕ್ರಮ, ದುರ್ನಡತೆ ಸಾಬೀತಾದ ಬಳಿಕ 53 ಮಂದಿಯ ಸದಸ್ಯತ್ವ ರದ್ದುಗೊಳಿಸಲಾಗಿದೆ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೆಲವೊಬ್ಬರು ಮಾತ್ರ ಮಾನವೀಯತೆ ತೋರಲು ಹೋಗಿ ಅಂದರೆ ಕೂಲಿಕಾರರಿಗೆ ಕೆಲಸ ಮಾಡಿದ ದಿನದಂದೇ ಹಣ ನೀಡಲು ಹಾಗೂ ಊಟದ ವ್ಯವಸ್ಥೆ ಮಾಡಲು ಹೋಗಿ ಸ್ಥಾನಕ್ಕೆ ಚ್ಯುತಿ ತಂದುಕೊಂಡಿದ್ದಾರೆ. ಇಂಥ ಸದಸ್ಯರಿಗೆ ನಿಯಮಗಳ ಬಗ್ಗೆ ಸೂಕ್ತ ತಿಳಿವಳಿಕೆ ಮೂಡಿಸಿ, ಒಂದು ಅವಕಾಶ ಕೊಡಬಹುದಿತ್ತೇನೋ. ಆದರೆ, ಉಳಿದ ಪ್ರಕರಣಗಳು ಹಾಗಲ್ಲ, ಅಲ್ಲೆಲ್ಲ ಅವ್ಯವಹಾರ, ಭ್ರಷ್ಟಾಚಾರದ ವಾಸನೆ ಢಾಳಾಗಿದೆ. ಬಡವರಿಗೆ ಮನೆ ಹಂಚಲು 10 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರ ಪತಿಯ ತಪ್ಪಿಗಾಗಿ ಪತ್ನಿ ಅಧ್ಯಕ್ಷ ಸ್ಥಾನದ ಜತೆ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ. ಗ್ರಾಮ ಮಟ್ಟದಲ್ಲೇ ಈ ಪರಿಯ ಭ್ರಷ್ಟಾಚಾರ ಬೇರೂರಿರುವುದು ಮತ್ತು ಪಂಚಾಯತ್ ವ್ಯವಸ್ಥೆಯವರೇ ಅದಕ್ಕೆ ನೀರು-ಗೊಬ್ಬರ ಹಾಕುತ್ತಿರುವುದು ಲಜ್ಜೆಗೇಡಿ ಕೃತ್ಯ ಎಂದೇ ಹೇಳಬೇಕಾಗುತ್ತದೆ. ಈ ರೀತಿ ಕೆಲವೊಬ್ಬರು ಅಧಿಕಾರ ದುರ್ಬಳಕೆ ಮಾಡಿಕೊಂಡರೂ ಜನರಿಗೆ ವ್ಯವಸ್ಥೆ ಮೇಲಿನ ನಂಬಿಕೆ ನಶಿಸುತ್ತ ಹೋಗುತ್ತದೆ. ಹಾಗಾಗಬಾರದು, ಪಂಚಾಯಿತಿ ವ್ಯವಸ್ಥೆ ಸದೃಢ, ಪಾರದರ್ಶಕ ಮತ್ತು ದಕ್ಷವಾಗಬೇಕು. ಈ ನಿಟ್ಟಿನಲ್ಲಿ ಇಂಥ ಶಿಸ್ತುಕ್ರಮದ ಹೆಜ್ಜೆಗಳು ಪೂರಕವೇ. ಆದರೆ, ಪಂಚಾಯಿತಿ ವ್ಯವಸ್ಥೆಗೆ ಸೇರಿದವರೇ ಈ ಬಗ್ಗೆ ಅವಲೋಕನ ನಡೆಸಿ, ತಮ್ಮ ಜವಾಬ್ದಾರಿ ಅರಿತುಕೊಂಡು, ನೈತಿಕತೆಗೆ ಪೂರಕವಾಗಿ ನಡೆದುಕೊಂಡರೆ ಸುಧಾರಣೆ ಅಸಾಧ್ಯದ ಸಂಗತಿಯೇನಲ್ಲ ಎಂಬುದನ್ನು ಅರಿಯಬೇಕು. ಒಟ್ಟಿನಲ್ಲಿ, ಸಾಮೂಹಿಕ ಕ್ರಮದಿಂದ ಈ ಅವ್ಯವಸ್ಥೆಯ ದರ್ಬಾರ್ ಕೊನೆಗೊಳ್ಳುವಂತಾಗಲಿ.