ಆನ್​ಲೈನ್ ಗೀಳು ಬೇಡ

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಏನೇ ಮಾಹಿತಿ ಬೇಕಾದರೂ ಇಂಟರ್​ನೆಟ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅಡುಗೆಯ ಹೊಸ ಪದಾರ್ಥ ಕಲಿಯುವುದರಿಂದ ಹಿಡಿದು, ಊರ ಸಮೀಪದ ಪ್ರೇಕ್ಷಣೀಯ ಸ್ಥಳ ಹುಡುಕುವವರೆಗೆ ಎಲ್ಲದಕ್ಕೂ ಅಂತರ್ಜಾಲವೇ ಮಾರ್ಗದರ್ಶಿಯಂತಾಗಿದೆ. ಮಾಹಿತಿ-ತಂತ್ರಜ್ಞಾನದ ಲಾಭವನ್ನು ಸದುದ್ದೇಶಕ್ಕಾಗಿ ಬಳಸಿಕೊಂಡು, ಕೆಲಸವನ್ನು ಹಗುರ ಮಾಡಿಕೊಂಡರೆ ತಪ್ಪೇನಿಲ್ಲ. ಆದರೆ, ಎಲ್ಲದಕ್ಕೂ ಇದನ್ನೇ ನಂಬುವ ಪ್ರವೃತ್ತಿ ಅಪಾಯಕಾರಿಯಾದದ್ದು. ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಬದಲು ಆನ್​ಲೈನ್ ವೈದ್ಯಕೀಯ ಸೇವೆಯ ಮೊರೆ ಹೋಗುತ್ತಿರುವ ಅದೆಷ್ಟೋ ಜನರು ಹಣ ಮತ್ತು ಸಮಯ ಉಳಿಸುವ ನೆಪದಲ್ಲಿ ಆರೋಗ್ಯಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ.

ಆರೋಗ್ಯ ಎಂಬುದು ತುಂಬ ಸೂಕ್ಷ್ಮವಾದ ವಿಷಯ. ಈ ಬಗ್ಗೆ ಅಪಾಯ ತಂದುಕೊಳ್ಳುವುದು ಖಂಡಿತ ಸೂಕ್ತವಲ್ಲ. ಆನ್​ಲೈನ್ ಸಮಾಲೋಚನೆಯಿಂದ ಅನುಕೂಲಕ್ಕಿಂತ ರೋಗಿಯ ಜೀವಕ್ಕೆ ಆಪತ್ತೇ ಹೆಚ್ಚೆಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆಎಂಸಿ) ಎಚ್ಚರಿಕೆ ಕೊಟ್ಟಿರುವುದನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮಾನದಂಡಗಳಿಗೆ ಒಳಪಟ್ಟು ಆನ್​ಲೈನ್ ಮೂಲಕ ಸೇವೆ ಒದಗಿಸಲು ಅವಕಾಶವಿದೆಯೇ ಎಂದು ಬೆಂಗಳೂರು ಚರ್ಮವೈದ್ಯರ ಸಂಘ (ಬಿಡಿಎಸ್) ಕೇಳಿದ ಮಾಹಿತಿಗೆ ಪ್ರತಿಕ್ರಿಯಿಸಿರುವ ಕೆಎಂಸಿ, ಅದರಿಂದಾಗುವ ಅಪಾಯಗಳನ್ನೂ ವಿವರಿಸಿದೆ.

ರೋಗ, ಕಾಯಿಲೆಗಳ ಬಗ್ಗೆಯಂತೂ ಕೆಲ ವೆಬ್​ಸೈಟ್​ಗಳು ಫೇಕ್ ಐಡಿಗಳಿಂದ ಸುಳ್ಳು ಮಾಹಿತಿ ಹರಿಬಿಡುತ್ತಿದ್ದು, ಇನ್ನೂ ಕೆಲವಡೆ ಅರ್ಧಂಬರ್ಧ ಮಾಹಿತಿ ನೀಡಿ ರೋಗಿಗಳಲ್ಲಿ ಗೊಂದಲ, ಆತಂಕ ಹೆಚ್ಚಿಸಲಾಗುತ್ತಿದೆ. ಹಾಗಾಗಿ, ಸಣ್ಣಪುಟ್ಟ ಸಮಸ್ಯೆಯನ್ನೂ ದೊಡ್ಡರೋಗವೆಂದು ತಪ್ಪಾಗಿ ತಿಳಿದು ವ್ಯಥೆಪಡುವ ರೋಗಿಗಳು ತಪ್ಪುನಿರ್ಧಾರಗಳಿಗೆ ಬಂದು ಬಿಡುತ್ತಾರೆ. ಮಾತ್ರವಲ್ಲ, ಇಂಥ ಪ್ರವೃತ್ತಿ ಜೀವವನ್ನೇ ಕಸಿದಿರುವ ಉದಾಹರಣೆಗಳಿವೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲೇ ಗರ್ಭಿಣಿಯೊಬ್ಬರು ಯೂಟ್ಯೂಬ್ ನೋಡಿ ತಾವೇ ಹೆರಿಗೆ ಮಾಡಿಕೊಳ್ಳಲು ಹೋಗಿದ್ದು, ಈ ಹುಚ್ಚುಸಾಹಸದಲ್ಲಿ ತಾಯಿ, ಮಗು ಇಬ್ಬರೂ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ಏನೆನ್ನುವುದು? ನಾವೇ ಮಾಡುವ ತಪ್ಪುಗಳಿಂದ ಸುಖಾಸುಮ್ಮನೆ ಜೀವ ಕಳೆದುಕೊಳ್ಳುವ ಹುಚ್ಚಾಟ ಏಕೆ? ಕೆಲವೊಮ್ಮೆ ಎದುರಿಗೇ ಕಾಣುವ ವೈದ್ಯರ ಲೋಪ ಅಥವಾ ನಿರ್ಲಕ್ಷ್ಯದ ಬಗ್ಗೆ ರೋಗಿಗಳು ದೂರುವುದುಂಟು. ಹೀಗಿರುವಾಗ ಕಣ್ಣಿಗೆ ಕಾಣದಿರುವ, ದೂರದಲ್ಲಿ ಎಲ್ಲೋ ಕುಳಿತು ಸಲಹೆ ನೀಡುವ ಆನ್​ಲೈನ್ ವೈದ್ಯರನ್ನು ನಂಬುವುದು ಹೇಗೆ? ಪ್ರಸಕ್ತ ದಿನಗಳಲ್ಲಿ ಆರೋಗ್ಯ ಸೇವೆಗಳಿಗಾಗಲಿ, ಆಸ್ಪತ್ರೆಗಳಿಗಾಗಲಿ ಕೊರತೆಯಿಲ್ಲ. ಆದರೆ, ಸಮಯವಿಲ್ಲ ಎಂಬ ಸಬೂಬು ಹೇಳಿ ಇಂಟರ್​ನೆಟ್​ನಲ್ಲಿ ತಪ್ಪು ಇಲ್ಲವೆ ಅರೆಬರೆ ಮಾಹಿತಿ ಪಡೆದು ಅಪಾಯ ಆಹ್ವಾನಿಸಿಕೊಳ್ಳುವುದು ಸರಿಯಲ್ಲ. ಅಲ್ಲದೆ, ಆನ್​ಲೈನ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದನ್ನು ಅರಿಯಬೇಕು. ದೊಡ್ಡ ಆಸ್ಪತ್ರೆಗಳು ಟೆಲಿ ಮೆಡಿಸಿನ್ ಸೇರಿದಂತೆ ಕೆಲ ಆಧುನಿಕ ಸೌಲಭ್ಯಗಳನ್ನು ಅನುಸರಿಸಿ ಚಿಕಿತ್ಸೆ ನೀಡುತ್ತಿವೆಯಾದರೂ, ಅದಕ್ಕೆ ಅವುಗಳದ್ದೇ ಆದ ವ್ಯವಸ್ಥೆ, ತಜ್ಞರ ತಂಡಗಳನ್ನು ಒಳಗೊಂಡಿರುತ್ತವೆ. ಆದರೆ, ಜನಸಾಮಾನ್ಯರು ಯಾವುದೇ ವೈದ್ಯಕೀಯ ಮಾಹಿತಿ ಇಲ್ಲದೆ ಆನ್​ಲೈನ್ ಗೀಳಿಗೆ ಬಿದ್ದು ಆರೋಗ್ಯದ ಜತೆ ಚೆಲ್ಲಾಟವಾಡದಿರಲಿ.

Leave a Reply

Your email address will not be published. Required fields are marked *