ಕಳವಳಕಾರಿ ಕ್ರಮ

ಚೀನಾ ಜತೆಗಿನ ಕಾರಿಡಾರ್ ಯೋಜನೆ ಸೇರಿದಂತೆ ತನ್ನದೇ ಪ್ರಮಾದಗಳಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನ ಆರ್ಥಿಕವಾಗಿ ಭಾರಿ ಬಿಕ್ಕಟ್ಟಿಗೆ ಸಿಲುಕಿರುವುದು ಗೊತ್ತಿರುವಂಥಧ್ದೇ. ಆ ದೇಶದ ಮನವಿಯ ಮೇರೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮೂರು ವರ್ಷಗಳಲ್ಲಿ 42 ಸಾವಿರ ಕೋಟಿ ರೂಪಾಯಿ ನೆರವು ನೀಡಲು ಒಪ್ಪಿಗೆ ಸೂಚಿಸಿದ್ದು, ಅಧಿಕೃತ ಘೋಷಣೆ ಕೆಲ ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುವ ರಾಷ್ಟ್ರಗಳಿಗೆ ಐಎಂಎಫ್ ನೆರವಾಗುವುದು ಹೊಸತೇನಲ್ಲ. ಆದರೆ, ಅದು ಈ ಬಾರಿ ನೆರವು ನೀಡುತ್ತಿರುವುದು ಪಾಕಿಸ್ತಾನಕ್ಕೆ! ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವ ಆ ದೇಶ, ತನ್ನಲ್ಲೇ ಉಗ್ರರ ಅಡಗುದಾಣಗಳನ್ನು ಹೊಂದಿದೆ ಎಂಬುದು ಜಗತ್ತಿಗೆ ತಿಳಿದಿರುವ ವಿಚಾರ. ಹೀಗಿರುವಾಗ, ಐಎಂಎಫ್ ನೆರವನ್ನು ಪಾಕ್ ತನ್ನ ಆರ್ಥಿಕತೆಯನ್ನು ಬಲಪಡಿಸಲು ಮಾತ್ರ ಉಪಯೋಗಿಸಲಿದೆ ಎಂದು ಹೇಗೆ ನಂಬಲು ಸಾಧ್ಯ?

ಈ ಹಿಂದೆ ಅಮೆರಿಕ ಕೂಡ ಪಾಕಿಸ್ತಾನವನ್ನು ಕಣ್ಮುಚ್ಚಿ ನಂಬಿಕೊಂಡಿತ್ತು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಧನಸಹಾಯವನ್ನು ಅದು ಹಲವು ವರ್ಷಗಳವರೆಗೆ ನೀಡಿತು. ಆದರೆ, ಶಸ್ತ್ರಾಸ್ತ್ರ ಮತ್ತು ಹಣ ಎರಡೂ ಉಗ್ರರ ಕೈಗೆ ಸೇರುತ್ತಿರುವುದು ಈ ಮೂಲಕ ಪಾಕ್ ಮೋಸ ಮಾಡುತ್ತಿರುವುದು ಸ್ಪಷ್ಟವಾದಾಗ ಎಚ್ಚೆತ್ತುಕೊಂಡ ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ನೆರವಿನ ಪ್ರಮಾಣದಲ್ಲಿ ಭಾರಿ ಕಡಿತ ಮಾಡಿದೆ. ಪಾಕ್ ವಿರುದ್ಧ ಟ್ರಂಪ್ ಆಡಳಿತ ಅಳೆದುತೂಗಿಯೇ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್​ನನ್ನು ಭಾರತದ ದಶಕಗಳ ಪ್ರಯತ್ನದ ಬಳಿಕ ವಿಶ್ವಸಂಸ್ಥೆ ಇತ್ತೀಚೆಗಷ್ಟೇ ಜಾಗತಿಕ ಉಗ್ರ ಎಂದು ಘೋಷಿಸಿದೆ. ಅಜರ್​ಗೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ವಶಕ್ಕೆ ಪಡೆಯಲು ಸೂಚಿಸಿದೆ. ಹೀಗೆ ಪಾಕಿಸ್ತಾನದಲ್ಲಿ ಇಂದಿಗೂ ಭಯೋತ್ಪಾದನೆಯ ಬೆಳೆ ಹುಲುಸಾಗಿದ್ದು, ಅಲ್ಲಿಂದ ಕಳಿಸಲ್ಪಡುವ ಭಯೋತ್ಪಾದಕರು ರಕ್ತದೋಕುಳಿಯನ್ನೇ ಹರಿಸುತ್ತಿದ್ದಾರೆ. ಹೀಗಿರುವಾಗ ಐಎಂಎಫ್ ದೊಡ್ಡಪ್ರಮಾಣದಲ್ಲಿ ಪಾಕ್​ಗೆ ಆರ್ಥಿಕ ನೆರವು ನೀಡಲು ಹೊರಟಿರುವುದು ಕಳವಳ ಮೂಡಿಸಿದೆ. ಪಾಕ್​ನ ಹದಗೆಟ್ಟ ಆಂತರಿಕ ಸ್ಥಿತಿಯಿಂದ ಐಎಂಎಫ್ ಈ ನಿರ್ಧಾರಕ್ಕೆ ಬಂದಿರಬಹುದಾದರೂ, ಈ ಅಪಾರ ಮೊತ್ತ ದುರ್ಬಳಕೆಯಾದರೆ, ಮತ್ತೆ ಭಯೋತ್ಪಾದನೆ ಸಂಬಂಧಿ ಚಟುವಟಿಕೆಗಳಿಗೆ ಬಳಕೆಯಾದರೆ ಅದರಿಂದ ಐಎಂಎಫ್​ನ ಪ್ರತಿಷ್ಠೆಗೇ ಪೆಟ್ಟು ಬೀಳುತ್ತದೆ.

ಕೆಲವು ಕಠಿಣ ನಿಬಂಧನೆಗಳನ್ನು ಇರಿಸಿ ಪಾಕ್​ಗೆ ಈ ನೆರವು ಮಂಜೂರು ಮಾಡಲಾಗಿದೆ ಎಂದು ಹೇಳಲಾಗಿದೆಯಾದರೂ, ಆ ನಿಯಮಗಳು ಬಹಿರಂಗಗೊಂಡಿಲ್ಲ. ಅಂತಾರಾಷ್ಟ್ರೀಯ ವಲಯ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತದ ಕಳವಳವನ್ನು ಐಎಂಎಫ್ ಅರ್ಥ ಮಾಡಿಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಈ ಆರ್ಥಿಕ ನೆರವು ಉಗ್ರರಿಗೆ ಬಳಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಅಲ್ಲದೆ, ವಿಶ್ವದ ಪ್ರಮುಖ ರಾಷ್ಟ್ರಗಳೇ ಪಾಕ್​ಗೆ ನೆರವನ್ನು ತೀವ್ರವಾಗಿ ಕಡಿತಗೊಳಿಸುತ್ತಿರುವ ಸಂದರ್ಭದಲ್ಲಿ ಐಎಂಎಫ್ ತನ್ನ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಿದಲ್ಲಿ ತಪ್ಪೇನಿಲ್ಲ.