More

    ಸಂಪಾದಕೀಯ| ಬಿಕ್ಕಟ್ಟು ಅಂತ್ಯವಾಗಲಿ

    ಸಂಪಾದಕೀಯ| ಬಿಕ್ಕಟ್ಟು ಅಂತ್ಯವಾಗಲಿಸಾರಿಗೆ ನೌಕರರ ಮುಷ್ಕರದಿಂದ ರಾಜ್ಯಾದ್ಯಂತ ಬಸ್​ಗಳು ರಸ್ತೆಗಿಳಿಯದೆ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. ಹಲವು ಬಾರಿ ಬೇಡಿಕೆ ಮುಂದಿಟ್ಟರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿತು ಎಂದು ಆರೋಪಿಸಿ ಸಾರಿಗೆ ನೌಕರರು ದಿಢೀರನೆ ಮುಷ್ಕರಕ್ಕೆ ಇಳಿದಿದ್ದಾರೆ. ಕೊನೆಗೂ, ಮಾತುಕತೆ, ಸಂಧಾನ, ಸರ್ಕಾರದ ಸ್ಪಷ್ಟ ಭರವಸೆ ಬಳಿಕ ಭಾನುವಾರ ಸಂಜೆ ಮುಷ್ಕರ ಕೊನೆಗೊಂಡು, ಬಸ್​ಗಳ ಸಂಚಾರ ಪುನರಾರಂಭ ಆಗುತ್ತದೆ ಎಂಬ ಹಂತದಲ್ಲಿ ಮತ್ತೆ ಮುಷ್ಕರ ಮುಂದುವರಿಯುಂತಾಗಿರುವುದು ದುರದೃಷ್ಟಕರ. 6ನೇ ವೇತನ ಆಯೋಗ ಜಾರಿ, ಆರೋಗ್ಯ ವಿಮೆ ಸೌಲಭ್ಯ, ತರಬೇತಿ ಅವಧಿ ಕಡಿತ, ಭತ್ಯೆ ಪುನರಾರಂಭ, ಕೋವಿಡ್​ನಿಂದ ಮೃತರಾದ ನೌಕರರ ಕುಟುಂಬಗಳಿಗೆ -ಠಿ; 30 ಲಕ್ಷ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ಬೇಡಿಕೆಯ ಈಡೇರಿಕೆ ಸದ್ಯದ ಸ್ಥಿತಿಯಲ್ಲಂತೂ ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

    ಇಲಾಖೆಯಲ್ಲಿನ ಸಮಸ್ಯೆಗಳು, ನೌಕರರ ಬವಣೆಯ ಬಗ್ಗೆ ಗಮನ ಹರಿಸಿ, ಶೀಘ್ರ ಸ್ಪಂದಿಸುವಿಕೆಯ ವ್ಯವಸ್ಥೆ ರೂಪಿಸಿದರೆ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುವುದಿಲ್ಲ. ಇಲಾಖೆಯ ಕೆಳಹಂತದಲ್ಲಿ ಹಲವು ಸಮಸ್ಯೆಗಳಿರುವುದು, ನೌಕರರು ಕಿರುಕುಳ ಅನುಭವಿಸುತ್ತಿರುವುದು ವಾಸ್ತವವೇ ಹೌದು. ಮಾರ್ಗ ಹಾಕಿಸಿಕೊಳ್ಳುವುದು, ಬಸ್​ಗಳ ರಿಪೇರಿ, ರಜೆ ಮಂಜೂರಾತಿ ಸೇರಿ ಹಲವು ವಿಷಯಗಳಿಗೆ ಪರದಾಡುವ ನೌಕರರು, ಕಿರುಕುಳದಿಂದ ಬೇಸತ್ತಿದ್ದಾರೆ. ಇದು ಎಷ್ಟು ತೀವ್ರ ಸ್ವರೂಪಕ್ಕೆ ಹೋಗಿದೆಯೆಂದರೆ ಕೆಲ ನೌಕರರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದುಂಟು. ಸಂಬಂಧಿತ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಸಕಾಲದಲ್ಲಿ ಮಧ್ಯಪ್ರವೇಶಿಸಿ ನೌಕರರ ಹಿತರಕ್ಷಣೆ ಮಾಡಿದ್ದಲ್ಲಿ, ಆಕ್ರೋಶ ಆಗಲೇ ತಣ್ಣಗಾಗುತ್ತಿತ್ತು. ಒಟ್ಟಿನಲ್ಲಿ, ಈ ಮುಷ್ಕರದ ಪ್ರಸಂಗ ಸಾಕಷ್ಟು ಪಾಠಗಳನ್ನು ಕಲಿಸಿರುವುದಂತೂ ಹೌದು. ಯಾವುದೇ ಪರಿಸ್ಥಿತಿ ಬಿಗಡಾಯಿಸುವವರೆಗೆ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು, ಹಾಗಂತ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅಥವಾ ಪ್ರತಿಭಟನೆಯೊಂದೇ ದಾರಿಯಲ್ಲ. ಅದರಲ್ಲೂ ದಿಢೀರ್ ಪ್ರತಿಭಟನೆಯಿಂದ ಎಲ್ಲರಿಗೂ ತೊಂದರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತುಕತೆ, ಸಂವಾದದ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ನೌಕರರ ಸಮಸ್ಯೆಗಳ ನಿವಾರಣೆಗೆ ಸೂಕ್ತ ವ್ಯವಸ್ಥೆ ರೂಪಿಸಿ, ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಅಗತ್ಯ. ಹಠದಿಂದ ಸಮಸ್ಯೆ ಬಗೆಹರಿಯದು. ಸೌಹಾರ್ದಯುತವಾಗಿ ಈ ಬಿಕ್ಕಟ್ಟು ಕೂಡಲೇ ಅಂತ್ಯವಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts