ಜಲಸಾರಿಗೆಯ ಹೊಸ ಸಾಧ್ಯತೆಗಳು

ಗಂಗಾನದಿ ಪ್ರದೇಶದಲ್ಲಿ ನಿರ್ವಣಗೊಂಡಿರುವ ದೇಶದ ಮೊದಲ ಒಳನಾಡು ಜಲಸಾರಿಗೆ ಬಂದರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸೋಮವಾರ ಉದ್ಘಾಟನೆಗೊಂಡಿದೆ. ವಿಶ್ವಬ್ಯಾಂಕ್ ಸಹಯೋಗದಲ್ಲಿ ನಿರ್ವಣಗೊಳ್ಳುತ್ತಿರುವ ಇಂಥ ನಾಲ್ಕು ಬಹುಮಾದರಿ ಬಂದರುಗಳ ಪೈಕಿ ಇದು ಮೊದಲನೆಯದು ಎಂಬುದು ಗಮನಾರ್ಹ.

ದೇಶದ ಭೌಗೋಳಿಕ ವಿನ್ಯಾಸವನ್ನು ಗಮನಿಸಿದಾಗ, ಕರಾವಳಿ ಪ್ರದೇಶ ಮತ್ತು ಅದಕ್ಕಿರುವ ಸಾಧ್ಯತೆಗಳು ವೈವಿಧ್ಯಮಯವೂ ವ್ಯಾಪಕವೂ ಆಗಿರುವುದು ಅರಿವಿಗೆ ಬರುತ್ತದೆ. ಜಲಸಾರಿಗೆ ಅನುಷ್ಠಾನದ ಸಾಧ್ಯತೆ ಇವುಗಳಲ್ಲೊಂದು ಎನ್ನಲಡ್ಡಿಯಿಲ್ಲ. ಆದರೆ, ಈ ವಿಷಯದ ಕುರಿತಾಗಿ ಹಿಂದೆ ಅಷ್ಟೊಂದು ಗಮನ ಅಥವಾ ಆದ್ಯತೆಯನ್ನು ನೀಡಿರಲಿಲ್ಲ. ತೀರಪ್ರದೇಶದ ಸಮುದ್ರಜಲ ಮತ್ತು ಪ್ರಧಾನ ಭೂಭಾಗದಲ್ಲಿ ವ್ಯಾಪಿಸಿರುವ ಹಲವು ನದಿಗಳ ನೀರನ್ನು ಸಂಚಾರಮಾಧ್ಯಮವಾಗಿ ಪರಿಗಣಿಸುವ ಕುರಿತಾಗಿ 1986ರಲ್ಲೇ ಚಿಂತನೆ ಹೊಮ್ಮಿತ್ತಾದರೂ, ಅದಕ್ಕೊಂದು ಸ್ಪಷ್ಟರೂಪ ಬಂದಿದ್ದು ಇತ್ತೀಚಿನ ವರ್ಷಗಳಲ್ಲಿ ಎನ್ನಬೇಕು. ಪ್ರಸ್ತುತ ಉದ್ಘಾಟನೆಗೊಂಡಿರುವ ಜಲಮಾರ್ಗವು ಪಶ್ಚಿಮಬಂಗಾಳದ ಹಲ್ದಿಯಾ ಮತ್ತು ಉತ್ತರಪ್ರದೇಶದ ವಾರಾಣಸಿಯನ್ನು ಸಂರ್ಪಸುತ್ತದೆ, ಈ ವರ್ಷ ಬರೋಬ್ಬರಿ 80 ಲಕ್ಷ ಟನ್​ನಷ್ಟು ಸರಕು ಸಾಗಣೆಯಾಗಲು ಅದು ಅನುವುಮಾಡಿಕೊಡಲಿದೆ ಎಂಬುದು ವಿಶೇಷ. ಇದೇ ರೀತಿಯಲ್ಲಿ ಮಿಕ್ಕ ಜಲಮಾರ್ಗಗಳೂ ಕ್ಷಿಪ್ರವಾಗಿ ಅನುಷ್ಠಾನಗೊಳ್ಳುವಂತಾದಲ್ಲಿ, ಅದು ದೇಶದ ಸರಕುಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ.

ಇಂಥದೊಂದು ನಿರೀಕ್ಷೆಗೂ ಕಾರಣವಿದೆ. ನಮ್ಮ ಸಾರಿಗೆ ವ್ಯವಸ್ಥೆ ನೆಚ್ಚಿರುವುದು ಹೊರದೇಶದಿಂದ ಆಮದಾಗುವ ತೈಲೋತ್ಪನ್ನಗಳನ್ನು; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಹಠಾತ್ ಏರಿಕೆಯಾಗುವ, ವಿಭಿನ್ನ ಕಸರತ್ತುಗಳ ನಂತರ ಅದು ಸಮಾಧಾನಕರ ಮಟ್ಟಕ್ಕೆ ಇಳಿಯುವಂಥ ವಿದ್ಯಮಾನಗಳನ್ನು ಕಾಲಾನುಕಾಲಕ್ಕೆ ಕಾಣುತ್ತಲೇ ಇದ್ದೇವೆ. ಇಂಥ ಯಾವುದೇ ಬೆಳವಣಿಗೆಗಳಿಂದ ಅಥವಾ ಅನಿಶ್ಚಿತತೆಯಿಂದಾಗಿ ಸಾಗಣೆ ವೆಚ್ಚಗಳು ಗಗನಕ್ಕೇರಿ, ಅದು ಸಾರಿಗೆ ಕ್ಷೇತ್ರದ ಒಟ್ಟಾರೆ ನಿರ್ವಹಣೆಯ ಮೇಲೆ ಅಗಾಧ ವ್ಯತಿರಿಕ್ತ ಪರಿಣಾಮ ಬೀರುವುದೂ ದಿಟವೇ.

ಆದ್ದರಿಂದ, ಜಲಮಾರ್ಗದಂಥ ಹೊಸ ಸಾಧ್ಯತೆಗಳ ಕುರಿತು ಗಮನ ಹರಿಸಿ ಅನುಷ್ಠಾನಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ ಎನ್ನಲಡ್ಡಿಯಿಲ್ಲ. ಏಕೆಂದರೆ, ರಸ್ತೆಮಾರ್ಗ ಹಾಗೂ ರೈಲುಮಾರ್ಗದಲ್ಲಿ ಸರಕು ಸಾಗಣೆಗೆ ಪ್ರತಿ ಕಿ.ಮೀ.ಗೆ ಕ್ರಮವಾಗಿ 10 ರೂ. ಮತ್ತು 6 ರೂ. ವೆಚ್ಚವಾದರೆ, ಜಲಮಾರ್ಗದಲ್ಲಿ ವೆಚ್ಚವಾಗುವುದು 1 ರೂ. ಮಾತ್ರ. ಈ ಸಾಧ್ಯತೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಸರಕು ಸಾಗಣೆಯನ್ನೇ ನೆಚ್ಚಿರುವ ವೈವಿಧ್ಯಮಯ ಉದ್ಯಮಗಳಿಗೂ ಮತ್ತು ಅಂತಿಮ ಫಲಾನುಭವಿಗಳಾದ ಗ್ರಾಹಕರಿಗೂ ಹೆಚ್ಚಿನ ಪ್ರಯೋಜನವಾಗುವುದಂತೂ ಖಂಡಿತ. ಜತೆಗೆ, ರಸ್ತೆ ಮತ್ತು ರೈಲುಮಾರ್ಗಗಳಿಗೆ ಹೋಲಿಸಿದಾಗ, ಜಲಮಾರ್ಗದ ಅವಲಂಬನೆಯಲ್ಲಿ ಪರಿಸರ ಮಾಲಿನ್ಯದ ಪ್ರಮಾಣವೂ ತೀರಾ ಕಮ್ಮಿ. ಹೀಗಾಗಿ, ವೆಚ್ಚವನ್ನು ಮಾತ್ರವಲ್ಲದೆ ಪರಿಸರ ಮಾಲಿನ್ಯವನ್ನೂ ತಗ್ಗಿಸುವ ದೃಷ್ಟಿಯಿಂದ ಜಲಮಾರ್ಗದ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಒತ್ತುನೀಡಬೇಕಾದ ಅಗತ್ಯವಿದೆ. ಬೇಸಿಗೆಯಲ್ಲೂ ತುಂಬಿ ಹರಿಯುವ ದೇಶದ ಸಾರ್ವಕಾಲಿಕ ನದಿಗಳಲ್ಲಿ ನಿರಂತರವಾಗಿ ಹಾಗೂ ಮಳೆಗಾಲ/ಚಳಿಗಾಲದಲ್ಲಿ ಮಾತ್ರವೇ ತುಂಬಿಹರಿಯುವ ನದಿಗಳಲ್ಲಿ ಆಯಾ ಋತುಮಾನದಲ್ಲಿ ಸರಕು ಸಾಗಣೆಗೆ ಒತ್ತುನೀಡುವ ಕ್ರಮಗಳು ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಚಿಂತನೆಗಳಾಗಲಿ.