ಭಾರತ ಕಟ್ಟೆಚ್ಚರ ವಹಿಸಲಿ

ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇತ್ತೀಚೆಗಷ್ಟೇ ಚೀನಾ ಪ್ರವಾಸ ಕೈಗೊಂಡಿದ್ದು, ಇದು ಪಾಕ್​ನಲ್ಲಿ ಹೊಸ ಸರ್ಕಾರ ಬಂದ ನಂತರದ ‘ಮೊದಲಭೇಟಿ’ ಆಗಿದ್ದುದು ಗೊತ್ತಿರುವ ಸಂಗತಿಯೇ. ದೇಶವೊಂದರ ಆಯಕಟ್ಟಿನ ಹುದ್ದೆ ಅಲಂಕರಿಸಿದವರು ನೆರೆರಾಷ್ಟ್ರಗಳೊಂದಿಗಿನ ಹಲವು ನೆಲೆಗಟ್ಟಿನ ಬಾಂಧವ್ಯ ವರ್ಧನೆಗೆ ಹೀಗೆ ಪ್ರವಾಸ ತೆರಳುವುದು, ದ್ವಿಪಕ್ಷೀಯ ಮಾತುಕತೆ ನಡೆಸುವುದು ಹೊಸದೇನಲ್ಲವಾದರೂ, ಭಾರತ ಈ ಬೆಳವಣಿಗೆಯನ್ನು ‘ವಾಡಿಕೆಯ ವಿದ್ಯಮಾನ’ ಎಂದು ಹಗುರವಾಗಿ ಪರಿಭಾವಿಸುವಂತಿಲ್ಲ.

ಇಮ್ರಾನ್ ಅವರ ಈ ಪ್ರವಾಸಕ್ಕೂ ಮುನ್ನ, ಪಾಕ್-ಚೀನಾ ನಡುವೆ ವೈವಿಧ್ಯಮಯ ನೆಲೆಗಟ್ಟಿನಲ್ಲಿ ‘ಕೊಡು-ಕೊಳ್ಳುವ’ ಸಂಪ್ರದಾಯ ನಡೆದಿದೆ ಹಾಗೂ ಇದಕ್ಕೆ ವರ್ಷಗಳ ಇತಿಹಾಸವಿದೆ. ಪಾಕಿಸ್ತಾನದ ಗ್ವಾದಾರ್ ಬಂದರಿನಲ್ಲಿ ಸ್ಥಾಪನೆಯಾಗಿರುವ ಚೀನಾದ ನೌಕಾನೆಲೆ, ‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ ಇಂಥ ದ್ವಿಪಕ್ಷೀಯ ಬಾಂಧವ್ಯದ ಫಲಶ್ರುತಿಗಳೇ. ಆದರೆ ಈಗಿನ ಇಮ್ರಾನ್ ಭೇಟಿಯ ವೇಳೆ ಏರ್ಪಟ್ಟಿರುವ ದ್ವಿಪಕ್ಷೀಯ ಒಪ್ಪಂದಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಇದು ಸ್ನೇಹವರ್ಧನೆಯ ಸಂಕೇತ’ ಎಂದು ಮಾಧ್ಯಮಗಳು ವರ್ಣಿಸಿರುವುದನ್ನು ಭಾರತ ಕೇವಲ ಒಂದು ವಿವರಣೆಯಾಗಷ್ಟೇ ಗ್ರಹಿಸದೆ ಅದರ ಹಿಂದಿರಬಹುದಾದ ಸೂಚ್ಯರ್ಥಗಳನ್ನು ಅರಿತು ಪ್ರತಿಯಾಗಿ ಸೂಕ್ತ ಕಾರ್ಯತಂತ್ರಗಳನ್ನು ಹೆಣೆಯಬೇಕಿದೆ. ಏಕೆಂದರೆ, ಗಡಿ ಅತಿಕ್ರಮಣದ ವಿಷಯವಿರಬಹುದು, ಸಾಮರಿಕ ಆಯಾಮದಲ್ಲೇ ಇರಬಹುದು, ಭಾರತಕ್ಕೆ ಪಾಕಿಸ್ತಾನ ಹಾಗೂ ಚೀನಾಗಳಿಂದ ಸಮಾನ ಬೆದರಿಕೆಗಳಿವೆ. ಹೀಗಿರುವಾಗ, ಈ ಎರಡು ‘ಮಗ್ಗುಲುಮುಳ್ಳು’ ರಾಷ್ಟ್ರಗಳ ನಡುವೆ ರೂಪುಗೊಳ್ಳುವ ಒಡಂಬಡಿಕೆಗಳು, ಜರುಗುವ ವಿದ್ಯಮಾನಗಳನ್ನು ಭಾರತ ಕಟ್ಟೆಚ್ಚರದಿಂದ ಗಮನಿಸಬೇಕಾದ ಅಗತ್ಯವಿದೆ.

ಪ್ರಸಕ್ತ ಭೇಟಿಯ ವೇಳೆ, ಕೃಷಿ, ಕೈಗಾರಿಕೆ, ಆರ್ಥಿಕತೆ, ಅರಣ್ಯ, ಭೂವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಂಥ ಕ್ಷೇತ್ರಗಳಲ್ಲಿನ ಬಾಂಧವ್ಯ ವರ್ಧನೆ ಮಾತ್ರವಲ್ಲದೆ, ಪೊಲೀಸ್ ಬಲದ ಪರಸ್ಪರ ಸಹಕಾರಕ್ಕೂ ಸಂಬಂಧಿಸಿ ಉಭಯ ದೇಶಗಳು ಒಪ್ಪಂದಕ್ಕೆ ಸಹಿಹಾಕಿವೆ ಹಾಗೂ ಪಾಕಿಸ್ತಾನದಲ್ಲಿ ತಾಂಡವವಾಡುತ್ತಿರುವ ಬಡತನ ನಿಮೂಲನದ ಆಶಯದ ಒಡಂಬಡಿಕೆಗೂ ಚೀನಾ ಹಸಿರುನಿಶಾನೆ ತೋರಿದೆ ಎನ್ನಲಾಗಿದೆ. ಆದರೆ, ಭಾರತದ ಮೇಲೆ ಮುರಕೊಂಡು ಬೀಳುವ ನಿಟ್ಟಿನಲ್ಲಿ ಹೊಂಚುಹಾಕುತ್ತಲೇ ಇರುವ ಪಾಕಿಸ್ತಾನ ಮತ್ತು ಚೀನಾ, ಕೇವಲ ದ್ವಿಪಕ್ಷೀಯ ಬಾಂಧವ್ಯ ವರ್ಧನೆಗಷ್ಟೇ ತಮ್ಮ ಮಾತುಕತೆ-ಒಡಂಬಡಿಕೆಗಳನ್ನು ಸೀಮಿತಗೊಳಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗದು. ಕಾಶ್ಮೀರ ವಿವಾದವನ್ನು ಮುಂದಿಟ್ಟುಕೊಂಡು ಭಾರತದೊಂದಿಗೆ ಒಂದಿಲ್ಲೊಂದು ತಿಕ್ಕಾಟಕ್ಕೆ ಮುಂದಾಗುವ, ಉಗ್ರರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುವಂತಾಗುವುದಕ್ಕೆ ಚಿತಾವಣೆ ನೀಡುವ, ತನ್ಮೂಲಕ ಭಾರತದ ಶಾಂತಿ-ನೆಮ್ಮದಿಗೆ ಧಕ್ಕೆ ತರುತ್ತಲೇ ಇರುವ ಪಾಕಿಸ್ತಾನಕ್ಕೆ, ತನ್ನ ಈ ಕುಕೃತ್ಯಗಳ ಮುಂದುವರಿಕೆಗಾಗಿ ಚೀನಾದಂಥ ‘ಸಮಾನ-ಮನಸ್ಕ’ ರಾಷ್ಟ್ರವೊಂದರ ಅಗತ್ಯವಂತೂ ಇದ್ದೇ ಇದೆ! ಇನ್ನು, ಏಷ್ಯಾವಲಯದಲ್ಲಿ ವಾಣಿಜ್ಯಿಕವಾಗಿ, ಸಾಮರಿಕವಾಗಿ ಪಾರಮ್ಯ ಸಾಧಿಸಲು ಹವಣಿಸುತ್ತಿರುವ ಚೀನಾಕ್ಕೆ, ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಕಂಡು ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಭಾರತವನ್ನು ಹಣಿಯಬೇಕೆಂಬ ಹಪಹಪಿಯಲ್ಲಿರುವ ಅದಕ್ಕೆ ಪಾಕಿಸ್ತಾನದ ಗೆಳೆತನ ಆಪ್ಯಾಯಮಾನವಾಗಿ ಕಂಡಿದ್ದಲ್ಲಿ ಅದೇನೂ ಅಚ್ಚರಿಯಲ್ಲ. ಹೀಗೆ ‘ಶತ್ರುವಿನ ಶತ್ರು ಮಿತ್ರ’ ಎಂಬ ಗ್ರಹಿಕೆಯಲ್ಲೇ ಒಂದಾಗಿರುವ ಈ ರಾಷ್ಟ್ರಗಳು ಭಾರತದ ಭದ್ರತೆ-ಸಮಗ್ರತೆ-ಸುರಕ್ಷತೆ-ಸೌರ್ವಭೌಮತೆಗೆ ಸಂಚಕಾರ ತರುವಂಥ ಯಾವುದೇ ಕುತ್ಸಿತ ಚಿಂತನೆಯನ್ನು ಕಾರ್ಯರೂಪಕ್ಕೆ ಇಳಿಸುವ ಮುನ್ನವೇ ಭಾರತ ಎಚ್ಚರಗೊಳ್ಳಬೇಕಿದೆ.