ಆಡಳಿತಾತ್ಮಕ ಶಿಸ್ತು ಅಗತ್ಯ

ಸರ್ಕಾರಿ ಇಲಾಖೆಗಳ ಕಾರ್ಯಚಟುವಟಿಕೆಗಳು ಅಬಾಧಿತವಾಗಿ ನಡೆಯುವಂತಾಗಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ನಿಯತ ಕಾಲಘಟ್ಟಗಳಲ್ಲಿ ಸಿಬ್ಬಂದಿ ನೇಮಕಾತಿ, ತರಬೇತಿ, ವರ್ಗಾವಣೆ ಇತ್ಯಾದಿಗಳನ್ನು ನಡೆಸುವುದು ಆನೂಚಾನವಾಗಿ ಬೆಳೆದುಕೊಂಡು ಬಂದಿರುವ ಸಂಪ್ರದಾಯ. ಇಂಥ ನಡೆಗಳ ಹಿಂದೆ ಸಾರ್ವಜನಿಕರ, ವಿವಿಧ ಕಾರ್ಯಕ್ಷೇತ್ರಗಳ ಮತ್ತು ತನ್ಮೂಲಕ ಒಟ್ಟಾರೆ ಸಮಾಜದ ಹಿತಕಾಯುವ ಆಶಯವಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಈ ಪ್ರಕ್ರಿಯೆಗಳ ಪೈಕಿ ಯಾವುದೇ ಒಂದರ ಅನುಸರಣೆಯಲ್ಲಿ ಕರ್ತವ್ಯಲೋಪ, ಅತಿರೇಕದ ನಿರ್ಲಕ್ಷ್ಯ, ನಿಯಮೋಲ್ಲಂಘನೆ ಕಂಡುಬಂದಲ್ಲಿ, ಅದು ಮೂಲ ಆಶಯಕ್ಕೆ ಒದಗಿದ ದಿಕ್ಚ್ಯುತಿಯಾಗುತ್ತದೆಯಷ್ಟೇ.

ವರ್ಗಾವಣೆ ಸಂಬಂಧವಾಗಿ ರೂಪಿಸಲಾಗಿರುವ ಮಾರ್ಗಸೂಚಿಗಳ ಅನುಸಾರ, ವರ್ಗಾವಣೆ ಪ್ರಮಾಣವು ನಿರ್ದಿಷ್ಟ ಇಲಾಖೆಯೊಂದರಲ್ಲಿರುವ ನೌಕರರ ಸಂಖ್ಯೆಯ ಶೇ. 4ರಷ್ಟು ಮಿತಿಯನ್ನು ಮೀರುವಂತಿಲ್ಲ ಹಾಗೂ ಸಾರ್ವತ್ರಿಕ ವರ್ಗಾವಣೆಗಳು ಆಯಾ ವರ್ಷದ ಮೇ-ಜೂನ್ ಒಳಗೆ ಸಂಪನ್ನಗೊಳ್ಳಬೇಕಿರುತ್ತದೆ. ಒಂದು ವೇಳೆ, ಆಡಳಿತಾತ್ಮಕ ಮತ್ತು ಇತರ ಕಾರಣಗಳಿಂದಾಗಿ ನಿಗದಿತ ಕಾಲಾವಧಿಯ ನಂತರವೂ ವರ್ಗಾವಣೆ ನಡೆಯಬೇಕೆಂದಾದಲ್ಲಿ, ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ. ಅಷ್ಟೇಕೆ, ವರ್ಗಾವಣೆಗೊಳ್ಳಬೇಕಾದರೆ ‘ಎ’ ಮತ್ತು ‘ಬಿ’ ಗುಂಪಿಗೆ ಸೇರಿದ ನೌಕರರು ಒಂದೇ ಹುದ್ದೆಯಲ್ಲಿ 3 ವರ್ಷ, ‘ಸಿ’ ಗುಂಪಿನವರು 4 ವರ್ಷ ಹಾಗೂ ‘ಡಿ’ ಗುಂಪಿನವರು 7 ವರ್ಷ ಕಾರ್ಯನಿರ್ವಹಿಸಿರಬೇಕು, ಅದಕ್ಕಿಂತ ಕಡಿಮೆ ಕಾರ್ಯನಿರ್ವಹಣೆಯವರ ವರ್ಗಾವಣೆಯಾಗಬೇಕೆಂದಾದಲ್ಲಿ ನಿಗದಿತ ಮಾನದಂಡಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಇಂಥ ನಿಯಮಗಳ ಸಮರ್ಪಕ ಪರಿಪಾಲನೆಯಾಗುತ್ತಿಲ್ಲ ಎಂಬುದಕ್ಕೆ, ನವೆಂಬರ್ ತಿಂಗಳು ಬಂದರೂ ವರ್ಗಾವಣೆ ಪ್ರಕ್ರಿಯೆ ಇನ್ನೂ ನಡೆಯುತ್ತಿರುವುದೇ ಸಾಕ್ಷಿ. ಇನ್ನು, ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ‘ದಂಧೆ’ಯ ಸ್ವರೂಪವೇ ದಕ್ಕಿಬಿಟ್ಟಿರುವುದಕ್ಕೆ ಖುದ್ದು ಉಚ್ಚ ನ್ಯಾಯಾಲಯವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜತೆಗೆ ಸರ್ಕಾರಕ್ಕೆ ಹೇಳುವವರು-ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೂ ಆಗಿದೆ. ಆದರೆ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಇನ್ನೂ ಮೈಕೊಡವಿಕೊಂಡು ಏಳದಿರುವುದು, ಲೋಪಕ್ಕೆ ಕಡಿವಾಣ ಹಾಕದಿರುವುದು ವಿಷಾದನೀಯ.

ಅಕಾಲದಲ್ಲಿ ವರ್ಗಾವಣೆಗಳು ನಡೆದರೆ, ಸಂಬಂಧಿತ ಅಧಿಕಾರಿಗಳಿಗೂ, ವಿವಿಧ ಕೆಲಸ-ಕಾರ್ಯಗಳಿಗೆಂದು ಸರ್ಕಾರಿ ಕಚೇರಿಗಳಿಗೆ ಎಡತಾಕುವ ಸಾರ್ವಜನಿಕರಿಗೂ ವಿಭಿನ್ನ ನೆಲೆಗಟ್ಟಿನಲ್ಲಿ ತೊಂದರೆಗಳಾಗುತ್ತವೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಸರ್ಕಾರಿ ನೌಕರಶಾಹಿಯ ಲಗಾಮನ್ನು ಕೈಯಲ್ಲಿ ಹಿಡಿದುಕೊಂಡಿರುವವರಿಗೆ ಅದಿನ್ನೂ ಅರ್ಥವಾಗಿಲ್ಲವೆಂಬುದು ಅಷ್ಟೇ ಸತ್ಯ. ಜನಕಲ್ಯಾಣಕ್ಕೆ ಸಂಬಂಧಿಸಿದ ಅದೆಂಥದೇ ಮಹತ್ತರ ಯೋಜನೆಗಳನ್ನು ಸರ್ಕಾರ ರೂಪಿಸಿದರೂ, ಅಂತಿಮ ಫಲಾನುಭವಿಗಳಿಗೆ ಅದು ಸಕಾಲಕ್ಕೆ ಮತ್ತು ಸಮರ್ಪಕವಾಗಿ ತಲುಪಿ ಫಲಕಾರಿಯಾಗಬೇಕೆಂದರೆ, ಸರ್ಕಾರಿ ಚಟುವಟಿಕೆಯ ಅಂಗಗಳೇ ಆಗಿರುವ ವಿವಿಧ ಸ್ತರದ ನೌಕರವೃಂದ ಸಮರ್ಥವಾಗಿ ಸಜ್ಜಾಗಿರಬೇಕಾಗುತ್ತದೆ. ಆದರೆ ಈ ಪರಿಪಾಠ ಎಡವುತ್ತಿರುವ ಕಾರಣದಿಂದಾಗಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಗಗನಕುಸುಮವಾಗೇ ಉಳಿದು, ಯೋಜನೆಗಳು ಕಡತಗಳಲ್ಲಷ್ಟೇ ಸಾರ್ಥಕ್ಯ ಕಾಣುವಂತಾಗಿದೆ. ಈ ಎಲ್ಲದರ ಪರಿಣಾಮವಾಗಿ ಸರ್ಕಾರಿ ಬೊಕ್ಕಸ ಬರಿದಾಗುತ್ತದೆಯೇ ವಿನಾ, ಪುರುಷಾರ್ಥ ಸಾಧನೆ ಆಗದು. ಆದ್ದರಿಂದ, ಇಲಾಖಾ ಉನ್ನತಾಧಿಕಾರಿಗಳು ಮತ್ತು ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆತ್ಮಾವಲೋಕನಕ್ಕೆ ಮುಂದಾಗಬೇಕಿದೆ. ಅಡಳಿತ ವ್ಯವಸ್ಥೆಯಲ್ಲಿ ಶಿಸ್ತು ಮೂಡಿ, ಶಿಷ್ಟಾಚಾರದ ಅನುಸರಣೆ ಸಾಕಾರಗೊಂಡು ರಾಜ್ಯ ಪ್ರಗತಿಪಥದಲ್ಲಿ ಹೆಜ್ಜೆಹಾಕಬೇಕೆಂದರೆ ಇದು ಅನಿವಾರ್ಯ.