More

    ಜಾತ್ರೆಯಲ್ಲೊಂದು ಸುತ್ತು, ಅದರಲ್ಲೊಂದು ಜಗತ್ತು!

    ನಮ್ಮ ಜಾತ್ರೆಗಳು ಸಹಬಾಳ್ವೆ ಮತ್ತು ಸಾಮೂಹಿಕ ಜವಾಬ್ದಾರಿಯ ಅಂಶಗಳನ್ನು ತಮ್ಮ ಒಡಲಲ್ಲೇ ಇಟ್ಟುಕೊಂಡಿರುತ್ತವೆ. ಒಗ್ಗಟ್ಟಿನ ಆದರ್ಶ ಇಲ್ಲಿ ತಾನೇತಾನಾಗಿ ಮೈದಳೆಯುತ್ತದೆ. ಜಾತ್ರೆ ಎಂದರೆ ಕೇವಲ ಮನರಂಜನೆಯ ವೇದಿಕೆಯಲ್ಲ, ಜನಜಂಗುಳಿ ಸೇರುವ ಜಾಗವಲ್ಲ. ಅದಕ್ಕೂ ಮಿಗಿಲಾದ ಜೀವನಸಂದೇಶ ಇದರಲ್ಲಿದೆ.

    ಮಕ್ಕಳು ಜಾತ್ರೆಗೆ ಬರುವುದಿಲ್ಲ ಎಂದು ಹೇಳುವುದುಂಟಾ?

    ಜಾತ್ರೆಗೆ ಬಂದರೂ ಐಸ್ ಕ್ರೀಂ, ಚಾಟ್ಸ್ ತಿನ್ನುವುದಿಲ್ಲ ಎಂದು ಹೇಳುವುದಂಟಾ?

    ಜಾತ್ರೆಯಲ್ಲಿನ ಆಟಿಕೆ ಬೇಡ ಎಂದು ನಿರಾಕರಿಸುವುದುಂಟಾ?

    ಜಾತ್ರೆಯಲ್ಲೊಂದು ಸುತ್ತು, ಅದರಲ್ಲೊಂದು ಜಗತ್ತು!ಇದೆಲ್ಲದಕ್ಕೂ ಒಂದೇ ಉತ್ತರ-ಹೌದು. ಇದು ನಂಬಲು ಸ್ವಲ್ಪ ಕಷ್ಟ ಎನಿಸಬಹುದು. ಆದರೆ ಇದೆಲ್ಲ ಕಂಡಿದ್ದು ಈ ಸಲದ ಶಿರಸಿ ಜಾತ್ರೆಯಲ್ಲಿ. ಕಾರಣ-ಕರೊನಾ! ನನ್ನ ಪರಿಚಯದವರ ಮಗ ಎರಡನೇ ತರಗತಿಯಲ್ಲಿ ಓದುತ್ತಿರುವವ. ಕೆಲ ದಿನಗಳ ಹಿಂದಷ್ಟೆ ರಿಮೋಟ್ ಕಾರ್ ಕೊಂಡುಕೊಂಡಿದ್ದ. ಅದು ಎರಡೇ ದಿನಕ್ಕೆ ಫಿನಿಷ್! ಶಿರಸಿ ಜಾತ್ರೆಗೆ ಬಂದಾಗ ಮತ್ತೆ ರಿಮೋಟ್ ಕಾರ್ ಬೇಕೆಂದು ಗಂಟುಬಿದ್ದ. ಅದಕ್ಕೇನು ಕಡಿಮೆ ದುಡ್ಡಾ? ಏಳೆಂಟು ನೂರು ರೂಪಾಯಿ. ಆಗ ಅವನ ಅಪ್ಪ ಒಂದು ಉಪಾಯ ಮಾಡಿದ. ‘ಆಟಿಕೆಗಳೆಲ್ಲ ಚೀನಾದಿಂದ ಬರುತ್ತವೆ. ಅದರಲ್ಲಿ ಕರೊನಾ ವೈರಸ್ ಇರುತ್ತದೆ. ಏನು ಮಾಡೋದು? ನಿನಗೆ ಬೇಕಾ?’ ಎಂದು ಕೇಳಿದಾಗ ಹುಡುಗ ಮರುಮಾತಾಡಿದರೆ ಕೇಳಿ. ಯಾವಾಗಲೂ ಪರೀಕ್ಷೆ ನಡೆಯುತ್ತಿದ್ದರು ಸಹ ಒಂದು ಸಲವಾದರೂ ಶಿರಸಿ ಜಾತ್ರೆಗೆ ಹೋಗದಿದ್ದರೆ ಸಮಾಧಾನ ಇಲ್ಲ. ಆದರೆ ಈಗ ಕರೊನಾ ಭಯ ಎಷ್ಟರಮಟ್ಟಿಗೆ ಆವರಿಸಿದೆ ಎಂದರೆ ಎಷ್ಟೋ ಮಕ್ಕಳೇ ಹೋಗಲ್ಲ ಎಂದುಬಿಟ್ಟರು. ಇಷ್ಟಿದ್ದರೂ, ಈ ಸಲದ ಜಾತ್ರೆಗೆ ಜನರ ಪ್ರಮಾಣ ಹೇಳುವಷ್ಟೇನೂ ಕಡಿಮೆಯಾಗಲಿಲ್ಲ ಎಂಬುದು ಕೆಲವರ ಅಭಿಮತವಾದರೆ, ಇನ್ನು ಹಲವರ ಪ್ರಕಾರ, ಯಥಾಪ್ರಕಾರ ಜನ ಬಂದಿದ್ದರು. ಅದು ಜಾತ್ರೆಯ ಶಕ್ತಿ.

    ಈ ಭಯವೇ ಹಾಗೆ. ಇದರಿಂದ ಅನೇಕ ತೊಂದರೆಗಳಾಗುತ್ತವೆ ಎಂಬುದು ನಿಜ. ಆದರೆ ಅದೇ ಸಂದರ್ಭಕ್ಕೆ ಒಂದಷ್ಟು ಮುನ್ನೆಚ್ಚರಿಕೆ ವಹಿಸಲಿಕ್ಕೂ ಇದು ನೆಪವಾಗುತ್ತದೆ ಎಂಬುದನ್ನು ನಿರಾಕರಿಸಲಾಗದು. ಭಯೋತ್ಪಾದನೆಯೂ ಹಾಗೆ ಅಲ್ಲವೆ? ಅದರಿಂದಾಗಿ ನಮ್ಮ ಸುರಕ್ಷತಾ ವ್ಯವಸ್ಥೆಯಲ್ಲಿ ಎಷ್ಟೋ ಬದಲಾವಣೆಗಳಾದವು, ಸುಧಾರಣೆಗಳಾದವು. ಭಯೋತ್ಪಾದನೆ ನಡೆಯದಿದ್ದರೆ, ಉಗ್ರರ ಹಾವಳಿ ಇಲ್ಲವಾದರೆ ಬಹು ಉತ್ತಮ. ಆದರೆ ನಡೆದ ಮೇಲೆ ಅಥವಾ ನಡೆಯುತ್ತದೆ ಎಂಬ ಸುಳಿವು ಇರುವಾಗ ಏನಾದರೂ ಕ್ರಮ ಕೈಗೊಳ್ಳಲೇ ಬೇಕಲ್ಲ. ಈ ಕರೊನಾ ಪ್ರಸಂಗವೂ ಹೀಗೇ. ಕೆಲಮಟ್ಟಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಅಪಾಯ ನಮ್ಮ ಮನೆಬಾಗಿಲಿಗೇ ಬಂದರೂ ಅಚ್ಚರಿಯಿಲ್ಲ.

    ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಶಿರಸಿ ಜಾತ್ರೆಯೂ ಒಂದು. ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೋತ್ಸವದಲ್ಲಿ ಲಕ್ಷಾಂತರ ಭಕ್ತ್ತಾದಿಗಳು ಭಾಗವಹಿಸುತ್ತಾರೆ. ಉದ್ಯೋಗನಿಮಿತ್ತ ಪರವೂರುಗಳಲ್ಲಿ ನೆಲೆಸಿರುವವರಿಗೆ, ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಜಾತ್ರೆ ಬಂತೆಂದರೆ ಏನೋ ಸಡಗರ, ಸಂಭ್ರಮ. ಊರಿಗೆ ಮರಳುವ, ದೇವಿಗೆ ಪೂಜೆ ಸಲ್ಲಿಸಿ ಆ ದಿವ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳುವ ಉತ್ಸಾಹ. ಅಲ್ಲವೆ ಮತ್ತೆ? ಮಾರಿಕಾಂಬೆ ಮೂರ್ತಿಯೇ ಭವ್ಯ, ದಿವ್ಯ. ರಕ್ತಚಂದನದ ಕಟ್ಟಿಗೆಯಿಂದ ಮಾಡಿದ ಏಳಡಿ ಎತ್ತರದ ವಿಗ್ರಹ ಅದು. ಎಂಟು ಕೈಗಳಲ್ಲಿಯೂ ಬಗೆ ಬಗೆ ಆಯುಧಸಹಿತವಾದ ದೇವಿ ದರ್ಶನವೇ ಪುನೀತಭಾವ ತರುತ್ತದೆ. ದೇವಸ್ಥಾನದ ಮೂಲ ಮೂರ್ತಿಯನ್ನು ಸನಿಹದ ಬಿಡಕಿಬಯಲಿಗೆ ತಂದು ಅಲ್ಲಿ ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷ. ಅಲ್ಲಿ ಒಂಬತ್ತು ದಿನಗಳ ಕಾಲ ಪೂಜೆಪುನಸ್ಕಾರ ನಡೆದ ಮೇಲೆ ಮರಳಿ ದೇಗುಲಕ್ಕೆ ತೆರಳುತ್ತಾಳೆ ದೇವಿ. ಅಲ್ಲಿಂದ ಯುಗಾದಿವರೆಗೆ ದೇವಿ ದರ್ಶನ ಇರುವುದಿಲ್ಲ. ಅಂದಹಾಗೆ, ಈ ಬಿಡಕಿ ಬಯಲು ಸಹ ಐತಿಹಾಸಿಕ ಮಹತ್ವ ಹೊಂದಿದೆ. ಹಿಂದೆ ಸ್ವಾತಂತ್ರ್ಯಹೋರಾಟ ಸಂದರ್ಭದಲ್ಲಿ ಜನಸಮಾವೇಶದ ಸ್ಥಳವಾಗಿತ್ತು ಇದು. ಈಗ ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಇದು ಸಂತೆಸ್ಥಳ. ಸುತ್ತಮುತ್ತಲ ಅಂಗಡಿಮುಂಗಟ್ಟುಗಳನ್ನು ಕೂಡ ಜಾತ್ರಾವಧಿಯಲ್ಲಿ ಸ್ಥಳಾಂತರಿಸಲಾಗುತ್ತದೆ.

    ಹಿಂದೆ ಮಾರಿಜಾತ್ರೆ ಸಂದರ್ಭದಲ್ಲಿ ಕೋಣಬಲಿ ನಡೆಯುತ್ತಿತ್ತು. 1933ರಲ್ಲಿ ಗಾಂಧಿಯವರು ಶಿರಸಿಗೆ ಬಂದಿದ್ದಾಗ ಮಾರಿಕಾಂಬೆ ದೇಗುಲಕ್ಕೆ ಬರುವಂತೆ ಅವರನ್ನು ಆಹ್ವಾನಿಸಲಾಯಿತು. ಆಗ ಅವರು, ಅಲ್ಲಿ ಕೋಣನಬಲಿ ನಡೆಯುತ್ತದೆ. ಹಾಗಾಗಿ ತಾನು ಬರುವುದಿಲ್ಲ ಎಂದರಂತೆ. ಇದು ನಿಮಿತ್ತವಾಗಿ ನಂತರದಲ್ಲಿ ಕೋಣನಬಲಿ ನಿಲ್ಲಿಸಲಾಯಿತು. ಈಗಲೂ ಮಾರಿಕೋಣವನ್ನು ದೇವಸ್ಥಾನದಲ್ಲಿ ಸಾಕುವ ಪರಿಪಾಠ ಮುಂದುವರಿದಿದೆ. ಜಾತ್ರೆ ಆರಂಭದ ದಿನ, ಜಾತ್ರೆಗೆ ಸಂಬಂಧಿಸಿದ ಸ್ಥಳಗಳಿಗೆ ಕೋಣವನ್ನೂ ಕರೆದೊಯ್ಯಲಾಗುತ್ತದೆ.

    ಮೂರು ಶತಮಾನಕ್ಕಿಂತ ಅಧಿಕ ಇತಿಹಾಸ ಹೊಂದಿರುವ ಮಾರಿಕಾಂಬಾ ದೇಗುಲದ ವಾಸ್ತುಶಿಲ್ಪವೂ ಮನಮೋಹಕ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಕಾವಿ ಕಲೆ. ದೇಗುಲದ ಗೋಡೆಗಳ ಮೇಲೆ ಹಲವು ಕಾವಿ ಕಲೆ ಚಿತ್ರಗಳಿದ್ದು, ಇದು ನಮ್ಮ ದೇಸಿ ಪರಂಪರೆ ಮತ್ತು ಜ್ಞಾನದ ವೈಭವದ ಪ್ರತೀಕ. ಸುಣ್ಣ ಮತ್ತು ಬೆಲ್ಲದ ಮಿಶ್ರಣವನ್ನು ಗೋಡೆ ಮೇಲಿನ ಅಚ್ಚಿಗೆ ಸೇರಿಸಿ ಮೂಡಿಸುವ ಈ ಕಲೆ ಅತ್ಯಾಕರ್ಷಕ. ಶತಮಾನ ಕಳೆದರೂ ಇದು ಹಾಳಾಗದು. ಇದರ ಬಣ್ಣ ಪೂರ್ತಿ ಕೆಂಪಲ್ಲ. ಉರಿಮುಂಜಿ ಎಂದೂ ಹೇಳುತ್ತಾರೆ.

    ಶಿರಸಿ ಮಾತ್ರವಲ್ಲ, ನಮ್ಮಲ್ಲಿನ ಎಲ್ಲ ಜಾತ್ರೋತ್ಸವಗಳೂ ಹಾಗೆಯೇ. ಅವು ಭಕ್ತಿ, ಸಹಬಾಳ್ವೆ, ವೈವಿಧ್ಯತೆಯಲ್ಲಿ ಏಕತೆ ಸಾರುವ ಆದರ್ಶಗಳನ್ನು ಹೊಂದಿರುತ್ತವೆ. ಇದರ ಜತೆಗೆ, ವಾಣಿಜ್ಯ ಆಯಾಮವೂ ಇರುತ್ತದೆ. ಒಂದು ಕಡೆ ಜಾತ್ರೆ ನಡೆಯಿತು ಎಂದರೆ, ಆ ಪ್ರದೇಶದ ಸುತ್ತಮುತ್ತಲ ಊರುಗಳ ಜನರು ಸೇರುತ್ತಾರೆ. ಕೆಲ ಕಡೆಗಳಲ್ಲಂತೂ ಹೊರರಾಜ್ಯಗಳ ಜನರೂ ಬರುತ್ತಾರೆ. ಆಗ ಸಹಜವಾಗಿಯೇ ಧಾರ್ವಿುಕ ಚಟುವಟಿಕೆಗಳ ಜತೆಗೆ, ಮನರಂಜನಾ ವೈವಿಧ್ಯಗಳೂ ಇರುತ್ತವೆ. ನಾಟಕ, ಯಕ್ಷಗಾನ ಹೀಗೆ ಆಯಾ ಪ್ರದೇಶದ ಕಲೆಗಳು ಜಾತ್ರಾವಧಿಯಲ್ಲಿ ಮೈದಳೆಯುತ್ತವೆ. ಜಾತ್ರೆಯಲ್ಲಿ ನೋಡಿದ ಯಕ್ಷಗಾನದ ಚಂಡೆಯ ಸದ್ದು ಹಲವು ವರ್ಷ ಕಳೆದರೂ ಕಿವಿಯಲ್ಲಿ ಗುಂಯ್ಗುಡುತ್ತಿರುತ್ತದೆ; ನಾಟಕವೊಂದರ ದೃಶ್ಯ ನೆನಪಿನಲ್ಲಿರುತ್ತದೆ. ಅದು ಕಲೆಯ ಶಕ್ತಿ. ಇನ್ನು, ಜಾತ್ರೆಯಲ್ಲಿ ಜಾದೂ, ಸರ್ಕಸ್, ತೊಟ್ಟಿಲು, ಬಾವಿಯಲ್ಲಿ ಬೈಕ್ ಮತ್ತು ಕಾರ್ ಓಡಿಸುವುದು… ಇಂಥ ಚಟುವಟಿಕೆಗಳಿಗಂತೂ ಲೆಕ್ಕವಿಲ್ಲ. ಅಂದಹಾಗೆ ಹೀಗೆ ಅಂಗಡಿ ಇತ್ಯಾದಿ ಹಾಕುವವರು ಆ ಪ್ರದೇಶದವರು ಮಾತ್ರವಲ್ಲ. ಯಾವ್ಯಾವುದೋ ಊರು, ರಾಜ್ಯಗಳಿಂದಲೂ ಬರುತ್ತಾರೆ. ಒಂದು ಉದಾಹರಣೆ ನೀಡುವುದಾದರೆ-ಶಿರಸಿ ಜಾತ್ರೆಯಲ್ಲಿ ಸರ್ಕಸ್, ತೊಟ್ಟಿಲು ಇತ್ಯಾದಿ ಹಾಕುವವರು ಉತ್ತರದ ಕಡೆಯವರು. ಕೆಲ ವ್ಯಾಪಾರಿಗಳು ಸರದಿಯಾಗಿ ಜಾತ್ರೆಗೆ ತೆರಳುತ್ತಾರೆ. ಸಾಗರ ಜಾತ್ರೆ ಆದಮೇಲೆ ಶಿರಸಿ…ಹೀಗೆ. ಇನ್ನು, ಮಕ್ಕಳು ಮತ್ತು ಮಹಿಳೆಯರಿಗಂತೂ ಸಂಭ್ರಮವೋ ಸಂಭ್ರಮ. ಎಷ್ಟು ಅಂಗಡಿ ತಿರುಗಿದರೂ ಕಾಲು ಸೋತಿತೆಂಬುದಿಲ್ಲ. ಶಿರಸಿ ಜಾತ್ರೆಯಂತಹ ದೊಡ್ಡ ಜಾತ್ರೆಗಳಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಲೆಕ್ಕವಿಟ್ಟವರಾರು?

    ನಮ್ಮ ಜಾತ್ರೆಗಳು ಸಹಬಾಳ್ವೆ ಮತ್ತು ಸಾಮೂಹಿಕ ಜವಾಬ್ದಾರಿಯ ಅಂಶಗಳನ್ನು ತಮ್ಮ ಒಡಲಲ್ಲೇ ಇಟ್ಟುಕೊಂಡಿರುತ್ತವೆ. ಉದಾಹರಣೆಗೆ- ಒಂದು ರಥವನ್ನು ಕಟ್ಟುವುದೆಂದರೆ ಅದು ಯಾರೋ ಒಂದಿಬ್ಬರ ಕೆಲಸವಲ್ಲ. ಆ ಪ್ರದೇಶದ ಬಹುತೇಕ ಎಲ್ಲ ಸಮುದಾಯಗಳ ಜನರಿಗೂ ಈ ಕೆಲಸದಲ್ಲಿ ಅವರದೇ ಆದ ಹೊಣೆಗಾರಿಕೆ ಇರುತ್ತದೆ. ರಥಕ್ಕೆ ಮರ ತರುವವರು ಒಬ್ಬರಾದರೆ, ಧ್ವಜ ಇತ್ಯಾದಿ ಮಾಡುವವರು ಮತ್ತೊಬ್ಬರು. ಅಲಂಕಾರ ಮಾಡುವವರು ಬೇರೊಬ್ಬರು ಹೀಗೆ. ನಂತರದಲ್ಲಿ ರಥ ಎಳೆಯುವಾಗ ಆ ಮಿಣಿಗೆ (ಹಗ್ಗ) ಎಲ್ಲರೂ ಕೈಜೋಡಿಸುತ್ತಾರೆ. ಒಗ್ಗಟ್ಟಿನ ಆದರ್ಶ ಇಲ್ಲಿ ತಾನೇತಾನಾಗಿ ಮೈದಳೆಯುತ್ತದೆ; ರಥ ನಿಧಾನವಾಗಿ ಚಲಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಅಂಶ ಸಾಕಾರವಾಗುತ್ತದೆ.

    ಕೊಪ್ಪಳದ ಗವಿಮಠದ ಜಾತ್ರೆ ದಿನದಂದು ಆರೇಳು ಲಕ್ಷ ಜನರು ಒಂದೆಡೆ ಸೇರುವ ಪರಿ ಇನ್ನೆಲ್ಲಿ ನೋಡಲು ಸಾಧ್ಯ! ಅದು ಅಕ್ಷರಶಃ ಜನಜಾತ್ರೆಯೇ ಸರಿ. ಬಾದಾಮಿ ಬನಶಂಕರಿ, ಸವದತ್ತಿ ಯಲ್ಲಮ್ಮ… ಹೀಗೆ ಲಕ್ಷಾಂತರ ಜನರು ಸೇರುವ ಜಾತ್ರೆಗಳು ನಮ್ಮಲ್ಲಿ ಅದೆಷ್ಟೋ. ಇನ್ನು ಕೆಲವು ಜಾತ್ರೆಗಳು ಧಾರ್ವಿುಕದ ಜತೆಗೆ ವಿಶೇಷ ಕಾರಣಕ್ಕಾಗಿಯೂ ಪ್ರಸಿದ್ಧಿ ಪಡೆದಿವೆ. ತುಮಕೂರಿನ ಸಿದ್ಧಗಂಗಾ ಜಾತ್ರೆಯಲ್ಲಿ ಕೃಷಿ ಮತ್ತು ವಸ್ತುಪ್ರದರ್ಶನ ಬಹು ಪ್ರಸಿದ್ಧ, ಇಲ್ಲಿಯೇ ಜಾನುವಾರು ಜಾತ್ರೆ ಕೂಡ ನಡೆಯುತ್ತದೆ.

    ಈಗ ಕರೊನಾ ಮಾರಿಯ ಭಯ ಜೋರಾಗಿದೆ. ಕೆಲ ದಿನಗಳ ಮಟ್ಟಿಗೆ ಜಾತ್ರೆ ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಇದು ತಾತ್ಕಾಲಿಕ ಎಂದು ಆಶಿಸೋಣ. ಜಾತ್ರೋತ್ಸವಗಳು ತಮ್ಮ ಎಂದಿನ ಪರಂಪರೆ, ವೈಭವಗಳೊಂದಿಗೆ ನಡೆಯುತ್ತಿರಬೇಕು, ಜನರೂ ಭಾಗವಹಿಸುತ್ತಿರಬೇಕು, ಮಕ್ಕಳು-ಮಹಿಳೆಯರ ಸಡಗರ ಅಲ್ಲಿ ನಿನದಿಸಬೇಕು, ವಿವಿಧ ಚಟುವಟಿಕೆಗಳು ಅಲ್ಲಿ ಮೇಳೈಸಬೇಕು-ಆಗಲೇ ಜೀವನಕ್ಕೊಂದು ಕಳೆ. ಜಾತ್ರೆ ಎಂದರೆ ಬರಿ ಗದ್ದಲವಲ್ಲ, ಜನಜಂಗುಳಿ ಸೇರುವುದಲ್ಲ. ಸೂಕ್ಷ್ಮವಾಗಿ ನೋಡಿದರೆ ಅದು ಜನಜೀವನದ ಪ್ರತಿಬಿಂಬ. ಅಲ್ಲವೆ?

    ಕೊನೇ ಮಾತು: ನಮ್ಮ ಜೀವನವೂ ಒಂಥರಾ ಜಾತ್ರ್ರೆಯೇ. ಅಲ್ಲಿ ಸದ್ದುಗದ್ದಲ, ಸಂಭ್ರಮ ಎಲ್ಲವೂ ತುಂಬಿಕೊಂಡಿರುತ್ತದೆ. ಜೀವನರಥ ಒಮ್ಮೊಮ್ಮೆ ಚಲಿಸಲಾರೆನೆಂದು ನಿಂತುಬಿಡುವುದೂ ಉಂಟು. ತೊಂದರೆತೊಡಕು ನಿವಾರಿಸಿಕೊಂಡು ರಥ ಮುನ್ನಡೆಸುವ ಕಲೆಯನ್ನು ಕಲಿಯಬೇಕಷ್ಟೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಂಯೋಜಿತ ಎಚ್​ಐವಿ ಔಷಧ ಬಳಸಿ ಕರೊನಾ​ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿದ ಭಾರತೀಯ ವೈದ್ಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts